CONNECT WITH US  

ಬಾಪೂಜಿ ಸೇವಾ ಕೇಂದ್ರದಲ್ಲೇ ಪಹಣಿ ವಿತರಿಸಿ

ಚಿತ್ರದುರ್ಗ: ಗ್ರಾಮ ಪಂಚಾಯತ್‌ಗಳಲ್ಲಿ ತೆರೆಯಲಾಗಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ರೈತರಿಗೆ ಪಹಣಿ ವಿತರಣೆ ಮಾಡಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸರ್ಕಾರದ 100 ಸೇವೆಗಳನ್ನು ಜನರಿಗೆ ನೀಡಲಾಗುತ್ತಿದ್ದು ಇದರಲ್ಲಿ ಪಹಣಿ ವಿತರಣೆಯೂ ಒಂದು. ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿಯೇ ರೈತರಿಗೆ ಬೇಕಾದ ಪಹಣಿ ವಿತರಣೆ ಮಾಡುವುದರಿಂದ ಹೋಬಳಿ ಕೇಂದ್ರಗಳಲ್ಲಿನ ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಜನರಿಗೆ ವಿಳಂಬವಾಗದೆ ದಾಖಲೆಗಳು ಸಿಗಲಿವೆ. ಗ್ರಾಮ ಪಂಚಾಯತ್‌ಗಳಲ್ಲಿ ಪಹಣಿ ವಿತರಣೆ ಮಾಡುವುದರಿಂದ ಪಂಚಾಯತ್‌ದ ಆದಾಯವೂ ಹೆಚ್ಚಲಿದೆ ಎಂದರು. ಪೋಡಿ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕಾಗಿದ್ದು, ಕೆಲವು ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ಹಾಗೂ ದಾಖಲೆಗಳು ತಾಳೆಯಾಗದಿರುವುದರಿಂದ ವಿಳಂಬವಾಗಿದೆ.

ಆದರೆ ಎಲ್ಲ ಅರ್ಜಿಗಳನ್ನು ವಿದ್ಯುನ್ಮಾನದ ಮೂಲಕ ನಿರ್ವಹಣೆ ಮಾಡಬೇಕಾಗಿದ್ದು, ಮೇಲಿನ ಅರ್ಜಿಗಳು ಇತ್ಯರ್ಥವಾದಲ್ಲಿ ಮಾತ್ರ ಬಾಕಿ ಅರ್ಜಿಗಳ ವಿಲೆ ಆಗುತ್ತದೆ. ಭೂಮಾಪನ ಇಲಾಖೆಯಲ್ಲಿನ ಎಡಿಎಲ್‌ ಆರ್‌ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಆಯುಕ್ತರೊಂದಿಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಸರ್ವೆ ಹಾಗೂ ಭೂಸ್ವಾಧೀನ ನಡೆಯುತ್ತಿದೆ. ಆದರೆ ಜಿಲ್ಲೆಗೆ ಒಂದೇ ಉಪವಿಭಾಗಾಧಿಕಾರಿಗಳ ಕಚೇರಿ ಇರುವುದರಿಂದ ಕೆಲಸ ಒತ್ತಡ ಹೆಚ್ಚಾಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಹಾಸ್ಟೆಲ್‌ ಸೇರಿದಂತೆ ವಸತಿ ಯೋಜನೆಗಳಿಗೆ, ಸಾರ್ವಜನಿಕವಾಗಿ ಬೇಕಾದ ಸ್ಮಶಾನ ಭೂಮಿ ಒದಗಿಸಬೇಕು. ನಾಗರಿಕ ಉದ್ದೇಶಗಳಿಗಾಗಿ ಬೇಕಾಗಿರುವ ಸರ್ಕಾರಿ ಭೂಮಿ ಹುಡುಕಿ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ನೀರಾವರಿ ಸೌಲಭ್ಯ ಇಲ್ಲ. ಈ ವರ್ಷ ಮುಂಗಾರು ಆರಂಭದಲ್ಲಿ ಚೆನ್ನಾಗಿದ್ದರೂ ಬೆಳೆಗಳ ಬೆಳವಣಿಗೆ ಹಂತದಲ್ಲಿ ಸ್ವಲ್ಪ ಕೊರತೆಯಾಗಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕೆಂದರು. ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ತಾಲೂಕುಗಳ 16 ಗ್ರಾಮಗಳಿಗೆ ಕಳೆದ ಸೆಪ್ಟೆಂಬರ್‌ ನಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಈ ಗ್ರಾಮಗಳಿಗೆ ಕಾಯಂ ಆಗಿ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಯೋಜನೆ ರೂಪಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲೆಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜಿಲ್ಲಾಡಳಿತ ಭವನ ಸೇರಿದಂತೆ ಮಳೆ, ಬೆಳೆಗಳ ಸ್ಥಿತಿಗತಿ ಹಾಗೂ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ವಿವರ ನೀಡಿದರು. 

ಜಿಪಂ ಸಿಇಒ ಪಿ.ಎನ್‌. ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಶೇ. 91 ರಷ್ಟು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಉಳಿದ ಶೇ. 9 ರಷ್ಟು ಸಾಧನೆ ಮಾಡುವ ಮೂಲಕ ಶೀಘ್ರದಲ್ಲಿ ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ಡಿಡಿಎಲ್‌ ಆರ್‌ ಪ್ರಕಾಶ್‌, ತಹಶೀಲ್ದಾರ್‌ ಮಲ್ಲಿಕಾರ್ಜುನ್‌ ಭಾಗವಹಿಸಿದ್ದರು. ಕಂದಾಯ ಇಲಾಖೆಯಲ್ಲಿ ಸಕಾಲದಡಿ ಪ್ರಕರಣಗಳನ್ನು
ವಿಲೇವಾರಿ ಮಾಡಿದ್ದರಲ್ಲಿ ಚಿತ್ರದುರ್ಗ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಭೂಮಾಪನ ಇಲಾಖೆಯಲ್ಲಿ ಎಡಿಎಲ್‌ಆರ್‌ ಹುದ್ದೆಗಳು ಖಾಲಿ ಇರುವುದರಿಂದ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಹುದ್ದೆ ಭರ್ತಿ ಸಂಬಂಧ ಸಂಬಂಧಿಸಿದ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು.  
 ಶಿವಯೋಗಿ ಕಳಸದ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ


Trending videos

Back to Top