CONNECT WITH US  

ದೇಶದ ಅಭಿವೃದ್ಧಿಗೆ ಶ್ರಮಿಸುವ ಮನೋಭಾವ ಅಗತ್ಯ

ಚಳ್ಳಕೆರೆ: ವಿಶ್ವದಲ್ಲೇ ಅಹಿಂಸಾ ತತ್ವದ ಮೂಲಕ ಸ್ವಾತಂತ್ರ್ಯಾ ಪಡೆದ ಏಕೈಕ ರಾಷ್ಟ್ರ ನಮ್ಮದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ಇಲ್ಲಿನ ಬಿ.ಎಂ. ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 72ನೇ ಸ್ವಾತಂತ್ರ್ಯಾದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ರಿಟೀಷರ ಆಡಳಿತದಲ್ಲಿ ಹೀನಾಯವಾಗಿ ಬದುಕುತ್ತಿದ್ದ ಭಾರತೀಯರಿಗೆ ಮಹಾತ್ಮ ಗಾಂಧೀಜಿ, ಸುಭಾಷ್‌ಚಂದ್ರ ಬೋಸ್‌, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌, ಭಗತ್‌ ಸಿಂಗ್‌, ಚಂದ್ರಶೇಖರ್‌ ಆಜಾದ್‌, ನೆಹರೂ, ಬಾಲಗಂಗಾಧರ ತಿಲಕ್‌, ಲಾಲಾ ರಜಪತ್‌ರಾಯ್‌, ಗೋಪಾಲಕೃಷ್ಣ ಗೋಖಲೆ ಅವರಂಥಹ ಮಹನೀಯರು ಸ್ವಾತಂತ್ರ್ಯಾ ದೊರಕಿಸಿಕೊಟ್ಟರು. ಸ್ವಾತಂತ್ರ್ಯಾದ ಮೌಲ್ಯವನ್ನು
ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದರು.

 ಪ್ರತಿ ಹಂತದಲ್ಲೂ ರಾಷ್ಟ್ರದಿಂದ ಹಲವಾರು ಸೌಲಭ್ಯಗಳನ್ನು ನಿರೀಕ್ಷೆ ಮಾಡುತ್ತೇವೆ. ಆದರೆ ನಾವು ರಾಷ್ಟ್ರಕ್ಕೆ ನೀಡುವ ಕೊಡುಗೆ ಏನು ಎಂಬ ಬಗ್ಗೆ ಚಿಂತನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ದೇಶದ ಬಡವರಿಗೆ ಮತ್ತು ಕೂಲಿಕಾರರಿಗೆ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಧ್ವಜರೋಹಣ ನೆರವೇರಿಸಿದ ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌ ಮಾತನಾಡಿ, ಭಾರತ ದೇಶ ವಿಶ್ವದಲ್ಲೇ ವಿಶೇಷ ಮನ್ನಣೆ ಗಳಿಸಿದೆ. ನಮ್ಮಲ್ಲಿರುವ ಅನೇಕ ಸಾಂಪ್ರದಾಯಿಕ, ಧಾರ್ಮಿಕ ಪದ್ಧತಿಗಳು ಎಲ್ಲಾ ಸಮುದಾಯವನ್ನು ಒಗ್ಗೂಡಿಸಿವೆ. ಯಾವುದೇ ಜಾತಿ, ಧರ್ಮ, ಭಾಷೆ ಇರಲಿ ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಸದಾಕಾಲ ನೆಲೆಯೂರಿದೆ. ಇದರಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಿದೆ. ರಾಷ್ಟ್ರವನ್ನು ಕಾಡುತ್ತಿರುವ ಭಯೋತ್ಪಾದನೆ, ಮಹಿಳೆಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ತಡೆಗಟ್ಟಲು ನಾವೆಲ್ಲರೂ ಜಾಗೃತರಾಗಬೇಕು ಎಂದರು. 

ಶಿಕ್ಷಕ ಕೆ.ಎಂ. ಶಿವಸ್ವಾಮಿ, ಪತ್ರಕರ್ತ ಕೆ. ರಾಮಾಂಜನೇ, ಕೃಷಿ ಅಧಿಕಾರಿ ಎ. ಮಮತಾ, ಪ್ರಗತಿಪರ ರೈತ ಎಚ್‌.ಎಂ.
ಯೋಗಾನಂದಮೂರ್ತಿ, ಲೇಖಕ ದುಗ್ಗಾವರ ತಿಪ್ಪೇಸ್ವಾಮಿ ಮತ್ತಿತರರನ್ನು ಸನ್ಮಾನಿಸಲಾಯಿತು. ನೃತ್ಯ ಪ್ರದರ್ಶನದಲ್ಲಿ ಬಿ.ಎಂ. ಸರ್ಕಾರಿ ಪ್ರೌಢಶಾಲೆ ಪ್ರಥಮ, ಕಸ್ತೂರಿಬಾ ಶಾಲೆ ದ್ವಿತೀಯ ಹಾಗೂ ವಾಸವಿ ಶಾಲೆ ತೃತೀಯ ಬಹುಮಾನ ಪಡೆದವು. ಉತ್ತಮ ವಾದ್ಯವೃಂದಕ್ಕೆ ಜ್ಞಾನಧಾರಾ ಪ್ರೌಢಶಾಲೆ, ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ ಹಾಗೂ ವಾಸವಿ ಶಾಲೆ ಅಣುಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದವು. ಪಥಸಂಚಲನದಲ್ಲಿ ಕಸ್ತೂರಿಬಾ ಶಾಲೆ ಪ್ರಥಮ, ವಾರಿಯರ್ ಶಾಲೆ ದ್ವಿತೀಯ, ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ ತೃತೀಯ ಬಹುಮಾನ ಗಳಿಸಿದವು. 

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಕವಿತಾ ರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಗಿರಿಯಪ್ಪ, ಸದಸ್ಯರಾದ ವೀರೇಶ್‌, ಸಣ್ಣ ಸೂರಯ್ಯ, ಎಚ್‌. ಸಮರ್ಥರಾಯ, ಎನ್‌.ರಂಜಿತಾ, ಜೆ.ಲಕ್ಷ್ಮಿ, ಹನುಮಕ್ಕ, ನಗರಸಭಾ ಸದಸ್ಯೆ ಲಕ್ಷ್ಮೀದೇವಿ, ತಾಪಂ ಇಒ ಈಶ್ವರಪ್ರಸಾದ್‌, ಡಿವೈಎಸ್ಪಿ ಎಸ್‌. ರೋಷನ್‌ ಜಮೀರ್‌, ವೃತ್ತ ನಿರೀಕ್ಷಕ ಎನ್‌. ತಿಮ್ಮಣ್ಣ, ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು, ಬಿಇಒ ಸಿ.ಎಸ್‌. ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ, ಸಮಾಜ ಕಲ್ಯಾಣಾಧಿಕಾರಿ ಮಮತಾ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಮಾಲತಿ, ಆರ್‌.ಎ .ದಯಾನಂದಮೂರ್ತಿ ಮತ್ತಿತರರು ಭಾಗವಹಿಸಿದ್ದರು. ಮುತ್ತುರಾಜ್‌ ನಾಡಗೀತೆ ಹಾಡಿದರು. ಶಿಕ್ಷಕ ಕೆ.ವಿ. ಶ್ರೀನಿವಾಸಮೂರ್ತಿ  ರೂಪಿಸಿದರು. ಡಿ. ಶ್ರೀನಿವಾಸ್‌ ವಂದಿಸಿದರು. ಧ್ವಜಾರೋಹಣದ ನಂತರ "ಹಸಿರು ಕರ್ನಾಟಕ' ಯೋಜನೆಗೆ ಚಾಲನೆ ನೀಡಲಾಯಿತು.


Trending videos

Back to Top