CONNECT WITH US  

ವಾಣಿವಿಲಾಸಕ್ಕೆ ಬರಲಿದ್ದಾಳೆ ವೇದಾವತಿ!

ಚಿತ್ರದುರ್ಗ: ಕಳೆದ ಒಂದೆರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಆದರೆ ವೇದಾವತಿ ನದಿ ಮೂಲಕ ಹಿರಿಯೂರಿನ ವಾಣಿವಿಲಾಸ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ ನೀರು ಹರಿದು ಬರಲಿದೆ!

ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿವಿ ಸಾಗರಕ್ಕೆ ಕೆಲ್ಲೋಡು ಬ್ಯಾರೇಜ್‌ ಮೂಲಕ ನೀರು ಹರಿದು ಬರಲಿದೆ. ಮಳೆಗಾಗಿ ಮುಗಿಲು ನೋಡುತ್ತಿದ್ದ, ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ವಾಣಿವಿಲಾಸ ಜಲಾಶಯ ವ್ಯಾಪ್ತಿಯ ಜನರಿಗೆ ಸಿಹಿ ಸುದ್ದಿ ಇದು. ಚಿಕ್ಕಮಗಳೂರು-ಕಡೂರು ಮಾರ್ಗ ಮಧ್ಯದ ಮದಗದ ಕೆರೆ-ಅಯ್ಯನಕೆರೆ ಭರ್ತಿಯಾಗಿವೆ. ಅಯ್ಯನಕೆರೆ ಭರ್ತಿಯಾಗಿ ನಾಲ್ಕೈದು ದಿನಗಳು ಕಳೆದಿದ್ದು, ಕಡೂರು, ಬಿರೂರು, ಕೋಡಿಹಳ್ಳಿ, ಯಗಟಿಪುರ, ಮಲ್ಲಾಪುರ, ಚೌಳಹಿರಿಯೂರು ಮಾರ್ಗವಾಗಿ ಹೊಸದುರ್ಗ ತಾಲೂಕಿನ ಭಾಗಶೆಟ್ಟಿಹಳ್ಳಿ, ಕೊರಟಿಕೆರೆ, ಆಲಘಟ್ಟ, ಬಲ್ಲಾಳಸಮುದ್ರ ಊರಿನ ಸಮೀಪದಿಂದ ಕನ್ನಗುಂಡಿ-ಕೆಲ್ಲೋಡು ಮಾರ್ಗವಾಗಿ ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರದ ಕಡೆ ಹರಿಯಲಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯನಪಟ್ಟಣದ ಬಳಿ ಅಯ್ಯನಕೆರೆ ಇದೆ. ಇದು ಚಿಕ್ಕಮಗಳೂರಿನಿಂದ ಸುಮಾರು 25 ಕಿಮೀ ದೂರದ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿದೆ. ಅಯ್ಯನಕೆರೆಯನ್ನು ಸರೋವರಕ್ಕೂ ಹೋಲಿಕೆ ಮಾಡಲಾಗುತ್ತದೆ. ಕರ್ನಾಟಕ ಎರಡನೇ ದೊಡ್ಡ ಕೆರೆ ಇದು ಎನ್ನಲಾಗಿದ್ದು, 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಸರೋವರ 1574 ಹೆಕ್ಟೇರ್‌ ಪ್ರದೇಶ ವ್ಯಾಪ್ತಿಯಲ್ಲಿ ವಿಸ್ತರಣೆಗೊಂಡಿದ್ದು 420.70 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಕೆರೆ ಭರ್ತಿಯಾದರೆ 21,560 ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯದ ಜೊತೆಗೆ ವೇದಾವತಿ ನದಿ ಮೂಲಕ ನೀರು ಹರಿದು ವಿವಿ ಸಾಗರ ಸೇರಲಿದೆ.

ಈಗಾಗಲೇ ಕೆಲ್ಲೋಡು ಬ್ಯಾರೇಜ್‌ಗೆ ನೀರು ಹರಿದಿದ್ದು ಶನಿವಾರ ಬೆಳಿಗ್ಗೆ 11:45ರ ಸುಮಾರಿಗೆ ಕೋಡಿ ಹರಿದಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಕಾರೇಹಳ್ಳಿ ಬ್ಯಾರೇಜ್‌ ಇದ್ದು ಆ ಬ್ಯಾರೇಜ್‌ ಕೂಡಾ ಭರ್ತಿಯಾಗಿ ಭಾನುವಾರದೊಳಗೆ ವಿವಿ ಸಾಗರಕ್ಕೆ ವೇದಾವತಿ ನೀರು ಹರಿದು ಬರುವ ಸಾಧ್ಯತೆ ಇದೆ.

ಭದ್ರಾ ನೀರು ಹರಿಸಲೂ ಇದೆ ಅವಕಾಶ: ಭದ್ರಾ ಮೇಲ್ದಂಡೆ ಯೋಜನೆ ಹೊರತಾಗಿಯೂ ಭದ್ರಾ ನೀರನ್ನು ಈಗಲೇ ಹರಿಸಲು ಸಾಧ್ಯವಿದೆ. 56 ಸಾವಿರಕ್ಕೂ ಕ್ಯೂಸೆಕ್‌ ನೀರನ್ನು ಭದ್ರಾ ಡ್ಯಾಂನಿಂದ ಹೊರಗೆ ಹರಿಸಲಾಗುತ್ತಿದೆ. ಈ ನೀರನ್ನು ಅಜ್ಜಂಪುರ ಸಮೀಪದ ಬುಕ್ಕಾಂಬುದಿ ಕೆರೆಗೆ ಉಬ್ರಾಣಿ ಏತ ನೀರಾವರಿ ಯೋಜನೆ ಮೂಲಕ ಭರ್ತಿ ಮಾಡಲು ಅವಕಾಶವಿದೆ.

ಶಿವನಸಮುದ್ರ ಭರ್ತಿಯಾಗಿದ್ದು ವಿದ್ಯುತ್‌ ಉತ್ಪಾದನೆಗೆ ಸಮಸ್ಯೆ ಇಲ್ಲ. ಭದ್ರಾವತಿ ಸಮೀಪದ ಅಂತರಗಂಗೆ ಪಂಪ್‌ಹೌಸ್‌ ನಲ್ಲಿ ದೊಡ್ಡ ಸಾಮರ್ಥಯದ ಮೋಟಾರ್‌ ಪಂಪ್‌ ಅಳವಡಿಸಿ ಉಬ್ರಾಣಿ ಯೋಜನೆಗೆ ನೀರು ಹರಿಸಿದರೆ ಬುಕ್ಕಾಂಬುದಿ ಕೆರೆ ಭರ್ತಿಯಾಗಲಿದೆ. ಈ ಕೆರೆ ಭರ್ತಿಯಾದರೆ ಅಜ್ಜಂಪುರ ಸಮೀಪದ ಶಿವನಿ ಮಾರ್ಗವಾಗಿ ಬಂಗನಕಟ್ಟೆ, ಸೊಲ್ಲಾಪುರ-ಆಸಂದಿ ಗೇಟ್‌ ಮಧ್ಯದಲ್ಲಿನ ದೊಡ್ಡಹಳ್ಳ, ಕುಕ್ಕಸಂದ, ಚೌಳ ಹಿರಿಯೂರು ಮಾರ್ಗವಾಗಿ ವೇದಾವತಿ ನದಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಬಹುದಾಗಿದೆ.
 
ವೇದಾವತಿಗೆ ಅಯ್ಯನಕೆರೆ, ಉಬ್ರಾಣಿ ಏತ ನೀರಾವರಿ ಯೋಜನೆ ಹಾಗೂ ಹೇಮಾವತಿ ಜಲಾಶಯದ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿ ಹರಿದು ಹಳ್ಳ ಸೇರುತ್ತಿರುವುದನ್ನು ತಡೆದು ಹೊನ್ನವಳ್ಳಿ ಏತ ನೀರಾವರಿ ಯೋಜನೆ ಅಡಿ ಹೆಚ್ಚಿನ ಸಾಮರ್ಥ್ಯದ ಮೋಟಾರ್‌ ಪಂಪ್‌ ಅಳವಡಿಕೆ ಮಾಡಬೇಕಿದೆ. ಅಲ್ಲಿಂದ ಬಲ್ಲಾಳಸಮುದ್ರ ಕೆರೆಗೆ ನೀರು ಹರಿಸಿ ಭರ್ತಿ ಮಾಡಿದರೆ ಈ ಮೂರು ಯೋಜನೆಗಳಿಂದ ವಿವಿ ಸಾಗರಕ್ಕೆ ನಿರಂತರವಾಗಿ ನೀರು ಹರಿಸಬಹುದು. ಆಗ ಭದ್ರಾ ಮೇಲ್ದಂಡೆ ಯೋಜನೆಯ ಅಗತ್ಯ ಇಲ್ಲದೆಯೂ ವಿವಿ ಸಾಗರಕ್ಕೆ ನೀರು ಹರಿಸಬಹುದು. ಈ ಕಾರ್ಯಕ್ಕೆ ಸ್ಥಳೀಯ ಜನಪ್ರನಿಧಿಗಳು, ಸರ್ಕಾರ ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ.
 
1933ರಲ್ಲಿ ಕೋಡಿ ಹರಿದಿತ್ತು ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ವಿವಿ ಸಾಗರಕ್ಕೆ 1933ರಲ್ಲಿ 135.25 ಅಡಿ ನೀರು ಹರಿದು ಭರ್ತಿಯಾಗಿ ಕೋಡಿ ಹರಿದಿತ್ತು. ನಂತರ 2000ರಲ್ಲಿ 122.50 ಅಡಿ, 2010ರಲ್ಲಿ 112.75 ಅಡಿಗೂ ಅಧಿಕ ನೀರು ಹರಿದು ಬಂದು ಹತ್ತಾರು ವರ್ಷಗಳ ನೀರಿನ ಸಮಸ್ಯೆಯನ್ನು ಹೋಗಲಾಡಿಸಿತ್ತು. ಈ ಬಾರಿ ಆಗಸ್ಟ್‌ ತಿಂಗಳ ಆರಂಭದಲ್ಲೇ ಮದಗದ ಕೆರೆ ಮತ್ತು ಅಯ್ಯನಕೆರೆಗಳು ಭರ್ತಿಯಾಗಿವೆ. ಸೆಪ್ಟಂಬರ್‌, ಅಕ್ಟೋಬರ್‌ ತಿಂಗಳವರೆಗೂ ಮಳೆ ಬರುವ ಸಾಧ್ಯತೆ ಇದ್ದು ಈ ವರ್ಷ ವಾಣಿವಿಲಾಸ ಸಾಗರಕ್ಕೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

„ಹರಿಯಬ್ಬೆ ಹೆಂಜಾರಪ್ಪ

Trending videos

Back to Top