CONNECT WITH US  

ಹೊಣೆಗಾರಿಕೆ ಅರಿತು ಅಧಿಕಾರಿಗೆಖರ್ಚು ವೆಚ್ಚ ಮಾಹಿತಿ ನೀಡಿ

ಚಿತ್ರದುರ್ಗ: ನಗರಸಭೆ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿಗಳಿಗೆ ಅಭ್ಯರ್ಥಿಗಳು ಹೊಣೆಗಾರಿಕೆಯಿಂದ ಖರ್ಚು
ವೆಚ್ಚಗಳ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್‌ ಮತ್ತು ತಾಲೂಕು ಚುನಾವಣಾ ಅಧಿಕಾರಿ ಎಂ. ಮಲ್ಲಿಕಾರ್ಜುನ್‌ ತಿಳಿಸಿದರು. ನಗರದ ತರಾಸು ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಗರಸಭೆ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣಾ ಖರ್ಚು ವೆಚ್ಚಗಳ ಸಲ್ಲಿಕೆ ವಿಚಾರವನ್ನು ಹಗುರವಾಗಿ ಪರಿಗಣಿಸಬೇಡಿ. ಜವಾಬ್ದಾರಿಯಿಂದ ಫಲಿತಾಂಶ ಪ್ರಕಟವಾದ 30 ದಿನಗಳೊಳಗೆ ಸೋತವರು, ಗೆದ್ದವರು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂದರು.

ನಗರಸಭೆಯ 35 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಚಿತ್ರದುರ್ಗ ನಗರಸಭೆ 35 ವಾರ್ಡ್‌ಗಳಲ್ಲಿ 161 ಅಭ್ಯರ್ಥಿಗಳು ಕಣದಲ್ಲಿದ್ದು ಇದರಲ್ಲಿ 34 ಕಾಂಗ್ರೆಸ್‌, 29 ಬಿಜೆಪಿ, 26 ಜೆಡಿಎಸ್‌, 2 ಬಿಎಸ್‌ಪಿ ಹಾಗೂ 70 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು 2 ಲಕ್ಷ ರೂ.ತನಕ ಖರ್ಚು ವೆಚ್ಚ ಮಾಡಬಹುದಾಗಿದೆ. ಇದರ ಮಿತಿ ಮೀರುವಂತಿಲ್ಲ ಎಂದು ತಿಳಿಸಿದರು.

ಈ ಎಲ್ಲ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಸಾಮಗ್ರಿಗಳು, ಕರಪತ್ರಗಳು, ವಾಹನಗಳ ಬಳಕೆ ಸೇರಿದಂತೆ ಪ್ರತಿಯೊಂದನ್ನು ಲೆಕ್ಕ ನೀಡಬೇಕು. ಕರ ಪತ್ರಗಳ ಮುದ್ರಣ ಮಾಡಿಸಿದರೆ ಯಾವ ಪ್ರಿಂಟಿಂಗ್‌ ನಲ್ಲಿ ಎಷ್ಟು ಸಂಖ್ಯೆಯಲ್ಲಿ ಮುದ್ರಣ ಮಾಡಿಸಲಾಯಿತು, ಬಾವುಟ, ಬ್ಯಾನರ್‌, ಬಂಟ್ಟಿಂಗ್‌ ಇತ್ಯಾದಿಗಳ ಲೆಕ್ಕ ನೀಡಬೇಕು. ಒಂದು ವೇಳೆ ವಾಹನಗಳ ಬಳಕೆ ಮಾಡಿದರೆ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು ಎಂದರು.

ಜಿಪಂ ಮುಖ್ಯಲೆಕ್ಕಾಧಿಕಾರಿ ಹಾಗೂ ಚುನಾವಣಾ ಖರ್ಚು ವೆಚ್ಚದ ತಂಡದ ಅಧಿಕಾರಿ ಓಂಕಾರಪ್ಪ ಮಾತನಾಡಿ, ಮತಗಟ್ಟೆಗಳಿಗೆ ನೇಮಕವಾಗಿರುವ ಚುನಾವಣಾ ಖರ್ಚು ವೆಚ್ಚಗಳ ತಂಡ ಸೂಕ್ಷ್ಮಾವಾಗಿ ಅಭ್ಯರ್ಥಿಗಳ ಖರ್ಚು ವೆಚ್ಚಗಳನ್ನು ಪರಿಶೀಲಿಸುತ್ತಿರುತ್ತದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ವೆಚ್ಚ ಮಾಡಲಿರುವ ಲೆಕ್ಕಪತ್ರಗಳ ಕುರಿತು ನಿಗಾವಹಿಸಲು ನಿಯೋಜಿತರಾಗಿರುವ ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಅವಧಿ ದಿನದಿಂದಲೇ ಅಭ್ಯರ್ಥಿಗಳ ಖರ್ಚು ವೆಚ್ಚವನ್ನು ಲೆಕ್ಕಕ್ಕೆ ಪರಿಗಣಿಸಲಿದ್ದಾರೆ. ಅಂದಿನಿಂದಲೆ ಲೆಕ್ಕ ಕೊಡಬೇಕಾಗುತ್ತದೆ. ಸೆಕ್ಟರ್‌ ಅಧಿಕಾರಿಗಳು ಸಹ ನೇಮಕವಾಗಿದ್ದು, ಆಯಾ ನಿಗದಿತ ವಾರ್ಡಗಳಲ್ಲಿ ಚುನಾವಣಾ ಸಂಬಂಧ ಸಮರ್ಪಕವಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದರು. 

ಚುನಾವಣಾ ವೀಕ್ಷಕರಾದ ಅಪರ ಪ್ರಾದೇಶಿಕ ಆಯುಕ್ತ ಬಿ. ಶಿವಯ್ಯ, ಚುನಾವಣಾಧಿಕಾರಿ ಜೆ. ರಾಜು, ರಾಜಶೇಖರ್‌, ನಗರಸಭೆ ಆಯುಕ್ತ ಚಂದ್ರಪ್ಪ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


Trending videos

Back to Top