CONNECT WITH US  

ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಲಿ

ಚಿತ್ರದುರ್ಗ: ಮಾನವ ಜನ್ಮ ಸಾರ್ಥಕವಾಗಬೇಕಾದರೆ ಮೂಢನಂಬಿಕೆ, ಅಂಧ ಶ್ರದ್ಧೆ, ಕಂದಾಚಾರ ನಿರ್ಮೂಲನೆ
ಮಾಡಬೇಕು. ಬದುಕಿರುವವರೆಗೆ ರಕ್ತದಾನ, ಬದುಕಿನ ನಂತರ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕು
ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ 33ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಶಿಬಿರವನ್ನು ಉದ್ಘಾಟಿಸಿ ಶರಣರು ಮಾತನಾಡಿದರು. 

 ನೇತ್ರದಾನ ಮಹಾದಾನ. ಒಬ್ಬ ವ್ಯಕ್ತಿಯ ನೇತ್ರದಾನ ಇಬ್ಬರು ಅಂಧರಿಗೆ ದೃಷ್ಟಿದಾನ ನೀಡಬಲ್ಲದು. ಮನುಷ್ಯನ ಸಾವಿನ ನಂತರ ದೇಹದ ಯಾವುದೇ ಅಂಗವನ್ನು ದಾನ ಮಾಡಿದರೆ ಮುಕ್ತಿ ದೊರೆಯುವುದಿಲ್ಲ ಎಂಬ ಮೂಢನಂಬಿಕೆ ಜನರಲ್ಲಿದೆ. ಆದರೆ ಇಂತಹ ಮೌಡ್ಯ ಬಿಟ್ಟು ಮಣ್ಣಲ್ಲಿ ಮಣ್ಣಾಗಿ ಕರಗುವ, ಬೂದಿಯಾಗಿ ಹೋಗುವ ದೇಹದ ಬಗ್ಗೆ ವ್ಯಾಮೋಹ ಇರಿಸಿಕೊಳ್ಳದೆ ನಮ್ಮ ಜೀವನದ ನಂತರ ಈ ದೇಹ ಇತರರಿಗೂ ನೆರವಾಗಲಿ ಎಂಬ ಸದುದ್ದೇಶದಿಂದ ಅಂಗಾಂಗ ದಾನ ಮಾಡಬೇಕು ಎಂದರು.

ಮರಣ ಸಂಭವಿಸಿದ ಆರು ಘಂಟೆಯೊಳಗೆ ನೇತ್ರದಾನ ಮಾಡಬೇಕು. ಮಧುಮೇಹ, ರಕ್ತದೊತ್ತಡ, ದೃಷ್ಟಿ
ದೋಷ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು, ಮೂರು ತಿಂಗಳ ಶಿಶು ಹಾಗೂ ವೃದ್ಧರೂ ನೇತ್ರದಾನ ಮಾಡಬಹುದು ಎಂದು ತಿಳಿಸಿದರು.
 
ಜಯರಾ, ರೆಡ್ಡಿ ಹಾಗೂ ಅನಸೂಯಾ ರೆಡ್ಡಿ ದಂಪತಿ ತಮ್ಮ ನೇತ್ರದಾನದ ಪತ್ರವನ್ನು ಮುರುಘಾ ಶರಣರಿಗೆ
ನೀಡಿದರು. ಜ್ಞಾನಪೂರ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವೇಶ್ವರ ಪುನರ್‌ ಜ್ಯೋತಿ ಐ ಬ್ಯಾಂಕ್‌ ಸ್ಥಾಪಕ ಅಧ್ಯಕ್ಷೆ ಗಾಯತ್ರಿ ಶಿವರಾಂ, ಜ್ಞಾನಪೂರ್ಣ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಸುಹಾಸಿನಿ, ಡಾ| ರಾಜಶೇಖರ್‌ ಮೇತ್ರಿ, ಕಾರ್ಯಕ್ರಮದ ಸಂಚಾಲಕ ವೀರೇಶ್‌, ಬಸವೇಶ್ವರ ಪುನರ್‌ ಜ್ಯೋತಿ ಐ ಬ್ಯಾಂಕ್‌ ಅಧ್ಯಕ್ಷ ಎಂ.ಪಿ. ಗುರುರಾಜ್‌, ಕಾರ್ಯದರ್ಶಿ ಪಿ.ಬಿ. ಶಿವರಾಂ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆಯ ಡಾ| ಆರ್‌. ಕೃಷ್ಣಮೂರ್ತಿ, ಜಲ ತಜ್ಞ ಡಾ| ದೇವರಾಜ ರೆಡ್ಡಿ ಭಾಗವಹಿಸಿದ್ದರು. ಶಿಕ್ಷಕ ಸುರೇಶ್‌ ನಿರೂಪಿಸಿದರು. ಐ ಬ್ಯಾಂಕ್‌ ಸಹ ಕಾರ್ಯದರ್ಶಿ ವೀರಭದ್ರಸ್ವಾಮಿ ವಂದಿಸಿದರು.

ಮನುಷ್ಯನ ಸಾವಿನ ನಂತರ ದೇಹದ ಯಾವುದೇ ಅಂಗವನ್ನು ದಾನ ಮಾಡಿದರೆ ಮುಕ್ತಿ ದೊರೆಯುವುದಿಲ್ಲ ಎಂಬ ಮೂಢನಂಬಿಕೆ ಜನರಲ್ಲಿದೆ. ಆದರೆ ಇಂತಹ ಮೌಡ್ಯ ಬಿಟ್ಟು ಮಣ್ಣಲ್ಲಿ ಮಣ್ಣಾಗಿ ಕರಗುವ, ಬೂದಿಯಾಗಿ ಹೋಗುವ ದೇಹದ ಬಗ್ಗೆ ವ್ಯಾಮೋಹ ಇರಿಸಿಕೊಳ್ಳದೆ ನಮ್ಮ ಜೀವನದ ನಂತರ ಈ ದೇಹ ಇತರರಿಗೂ ನೆರವಾಗಲಿ ಎಂಬ ಸದುದ್ದೇಶದಿಂದ ಅಂಗಾಂಗ ದಾನ ಮಾಡಬೇಕು.
 ಡಾ| ಶಿವಮೂರ್ತಿ ಮುರುಘಾ ಶರಣರು.


Trending videos

Back to Top