CONNECT WITH US  

ಐತಿಹಾಸಿಕ ಕಾದಂಬರಿ ರಚನೆ ಲೇಖಕರಿಗೆ ಸವಾಲು

ಚಿತ್ರದುರ್ಗ: ಇತಿಹಾಸ ಪುರುಷರ ಚರಿತ್ರೆಗೆ ಧಕ್ಕೆ ಬಾರದಂತೆ ಕಾದಂಬರಿ ಬರೆಯುವುದೆಂದರೆ ಕತ್ತಿ ಮೇಲೆ ನಡೆದಂತೆ ಎಂದು ತುಮಕೂರಿನ ವಿಮರ್ಶಕ ಡಾ| ಜಿ.ವಿ.ಆನಂದಮೂರ್ತಿ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಹಾಗೂ ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಾದಂಬರಿಕಾರ ಡಾ| ಬಿ.ಎಲ್‌. ವೇಣು ಬರೆದ "ರಾಜಾ ಮತ್ತಿ ತಿಮ್ಮಣ್ಣ ನಾಯಕ' ಐತಿಹಾಸಿಕ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇತಿಹಾಸ ಪುರುಷರ ಆಳ್ವಿಕೆ, ಘಟನೆ ಕುರಿತು ಬರೆಯುವುದು ಲೇಖಕರಿಗೆ ದೊಡ್ಡ ಸವಾಲು. ಬಹಳ ಎಚ್ಚರಿಕೆ ವಹಿಸಿ ಚರಿತ್ರೆಗೆ ಚ್ಯುತಿ ಬಾರದಂತೆ ಕಾದಂಬರಿ ಬರೆಯಬೇಕು. ಆ ಕೆಲಸವನ್ನು ಬಿ.ಎಲ್‌. ವೇಣು ಈ ಕಾದಂಬರಿಯಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. 16ನೇ ಶತಮಾನದಲ್ಲಿ ಚಿತ್ರದುರ್ಗ ಕೋಟೆಯನ್ನು ಆಳಿದ ಪಾಳೆಯಗಾರರನ್ನು ಕೇಂದ್ರೀಕರಿಸಿ "ರಾಜಾ ಮತ್ತಿ ತಿಮ್ಮಣ್ಣ ನಾಯಕ' ಕಾದಂಬರಿ ಬರೆದಿದ್ದಾರೆ. ಆದರ್ಶ ಸಮಾಜ ಹೇಗಿರಬೇಕೆಂಬುದನ್ನು ಬಹಳ ಸುಂದರವಾಗಿ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಎಲ್ಲ ವಿದ್ಯಮಾನ, ಪಾತ್ರ, ಘಟನೆಗಳು ಕಣ್ಣ ಮುಂದೆ ಬಂದು ನಿಲ್ಲವಷ್ಟು ಕಾದಂಬರಿ ಪ್ರಭಾವಶಾಲಿಯಾಗಿದೆ. ಶ್ರಮಿಕ ವರ್ಗಗಳಾದ ರೈತರು, ದುಡಿಯುವ ಜನ, ಮಹಿಳೆಯರು, ಭೂಮಿ ಸಮಾನ ಹಂಚಿಕೆ ಹೀಗೆ ಎಲ್ಲಾ ರೀತಿಯ ತಲ್ಲಣಗಳಿಗೆ
ಧ್ವನಿಯಾಗಿ ಕೃತಿ ಹೊರಹೊಮ್ಮಿದೆ. ರಾಜಸ್ವ, ಆಳ್ವಿಕೆ ಅರಮನೆಗೆ ಸೀಮಿತವಾಗಿರಬಾರದು ಎನ್ನುವುದನ್ನು ಮಾತು ಕ್ರಿಯೆಗಳ ಮೂಲಕ ಶಕ್ತಿಶಾಲಿಯಾಗಿ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬುದ್ಧ, ಬಸವ, ಅಲ್ಲಮಪ್ರಭು, ಸರ್ವಜ್ಞ ಎಲ್ಲರೂ ಕಾದಂಬರಿಯಲ್ಲಿ ಬಂದು ಹೋಗಿದ್ದಾರೆ. ಇದೊಂದು ಹೊಸ ಕಾಲದ ಚಿಂತನೆ ಸಮಾನತೆಯ ಸಮಾಜವನ್ನು ಮೈಗೂಡಿಸಿಕೊಂಡಿರುವ ಅದ್ಭುತ ಕಾದಂಬರಿ.

ದುಡಿಯವ ಜನತೆಯ ವಿವೇಚನೆಗಳನ್ನು ದೊಡ್ಡ ದಾಹವನ್ನಾಗಿಸಿಕೊಂಡು ಬರೆದಿರುವ ಈ ಕಾದಂಬರಿಯನ್ನು ಎಲ್ಲರೂ ತಪ್ಪದೇ ಓದಲೇಬೇಕು ಎಂದು ಕೋರಿದರು. ರಾಜಾ ಮತ್ತಿ ತಿಮ್ಮಣ್ಣ ನಾಯಕ ಹಿಂಸೆಯ ವಿರೋಧಿಯಾಗಿದ್ದ ಎನ್ನುವುದು ಈ ಕಾದಂಬರಿಯಿಂದ ತಿಳಿಯುತ್ತದೆ. ಹಿಂಸೆ, ಕೌರ್ಯ, ದಬ್ಟಾಳಿಕೆ ಇಲ್ಲದ ಸಮಾಜವಿರಬೇಕು ಎನ್ನುವುದು ಈ ಕಾದಂಬರಿಯ ಮೂಲ ಉದ್ದೇಶ. 

ಪಾಳೆಯಗಾರರೆಂದರೆ ಬರೀ ಧೈರ್ಯ, ಸಾಹಸಕ್ಕಷ್ಟೆ ಹೆಸರುವಾಸಿಯಾಗಿರಬಾರದು. ಕತ್ತಿ ಹಿಡಿದರೂ ದಯೆ, ಕರುಣೆ ಇರಬೇಕು ಎನ್ನುವುದನ್ನು ಬರವಣಿಗೆಯಲ್ಲಿ ವೇಣು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಸಂಶೋಧಕ ಲಕ್ಷ್ಮಣ ತೆಲಗಾವಿ ಮಾತನಾಡಿ, ಚಿತ್ರದುರ್ಗದ ಭೂ ಪರಿಸರ ಸ್ವಾಭಿಮಾನ, ಛಲವನ್ನು ಕೆರಳಿಸಿತು ಎಂಬುದು ಕಾದಂಬರಿಯಲ್ಲಿ ಸ್ಪಷ್ಟವಾಗುತ್ತದೆ. ದುರ್ಗದಲ್ಲಿ ಕೆರೆ ಕಟ್ಟೆ, ಹೊಂಡ ನಿರ್ಮಿಸಿ ಸಕಲ ಜೀವರಾಶಿಗಳಿಗೂ ನೀರಿನ ದಾಹ ತೀರಿಸುವ ಹಂಬಲ ರಾಜಾ ಮತ್ತಿ ತಿಮ್ಮಣ್ಣ ನಾಯಕರಿಗೆ ಇತ್ತು. ಛಲ ಸಾಧಿಸಿದ ಮತ್ತಿ ತಿಮ್ಮಣ್ಣ ನಾಯಕರ ವ್ಯಕ್ತಿತ್ವವನ್ನು ಬಿ.ಎಲ್‌. ವೇಣು ಸರಿಯಾಗಿ ಗ್ರಹಿಸಿಕೊಂಡು ಕಾದಂಬರಿ ಬರೆದಿದ್ದಾರೆ ಎಂದರು.

ಸಾಹಿತಿ ಶಿವಮೊಗ್ಗದ ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ವೀರೇಶ್‌, ಗೀತಾಂಜಲಿ ಪುಸ್ತಕ ಪ್ರಕಾಶನದ ಮೋಹನ್‌ಕುಮಾರ್‌, ಕಾದಂಬರಿಕಾರ ಡಾ| ಬಿ.ಎಲ್‌. ವೇಣು, ಸಾಹಿತಿ-ಚಿಂತಕ ಕುಂ. ವೀರಭದ್ರಪ್ಪ, ಲೋಕೇಶ್‌ ಅಗಸನಕಟ್ಟೆ, ಪ್ರಾಧ್ಯಾಪಕ ಡಾ| ಕರಿಯಪ್ಪ ಮಾಳಿಗೆ, ಪ್ರೊ| ಲಿಂಗಪ್ಪ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ, ಸಂಗೇನಹಳ್ಳಿ ಅಶೋಕ್‌ಕುಮಾರ್‌, ಆರ್‌. ಸತ್ಯಣ್ಣ, ಭದ್ರಣ್ಣ, ಅಹೋಬಲ ನಾಯಕ, ನಿರಂಜನ ದೇವರಮನೆ, ಲಲಿತಾ ಕೃಷ್ಣಮೂರ್ತಿ ಮತ್ತಿತರರು ಇದ್ದರು. ಪ್ರಾಧ್ಯಾಪಕ ಮಹಂತೇಶ್‌ ನಿರೂಪಿಸಿದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top