CONNECT WITH US  

ದೃಶ್ಯ ಮಾಧ್ಯಮದಿಂದ ಕನ್ನಡ ಸಾಹಿತ್ಯ ಕಡೆಗಣನೆ

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯ ತನ್ನದೇಯಾದ ವೈವಿಧ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಆದರೆ ದೃಶ್ಯ ಮಾಧ್ಯಮಗಳು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಕಡೆಗಣಿಸುತ್ತಿವೆ ಎಂದು ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಪಿ. ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಹಲವಾರು ವಿಷಯಗಳನ್ನೊಳಗೊಂಡ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದು, ಅವುಗಳ ಮೌಲ್ಯವನ್ನು
ಪ್ರತಿಪಾದಿಸಲು ಅಭಿಪ್ರಾಯ ಮಂಡನೆಗಾಗಿ ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಕಾರ್ಯಕ್ರಮವನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಅಚ್ಚುಮೆಚ್ಚಿನ ಪುಸ್ತಕಗಳ ಬಗ್ಗೆ ಅಭಿಪ್ರಾಯ ತಿಳಿಸಬೇಕು ಎಂದರು. 

ಪತ್ರಕರ್ತ ಕೊರ‌್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಾಹಿತ್ಯ ಪ್ರತಿಯೊಬ್ಬರ ಬದುಕಿನ ಕನ್ನಡಿಯಂತಿದೆ. ಅದನ್ನು ಸದ್ವಿನಿಯೋಗ ಮಾಡಿಕೊಂಡವರು ಸಾರ್ಥಕ ಬದುಕು ನಡೆಸಬಹುದು. ಸಾಹಿತ್ಯವನ್ನು ಹೃದಯ ವೈಶಾಲ್ಯದಿಂದ ಕಾಣುವ ಮನಸ್ಸುಗಳ ಸಂಖ್ಯೆ ಹೆಚ್ಚಾಗಬೇಕಿದೆ. ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಸಾಹಿತ್ಯದ ಗುಣಾತ್ಮಕ ಮೌಲ್ಯವನ್ನು
ಪ್ರತಿಬಿಂಬಿಸುವ ವಿಚಾರಗಳನ್ನು ಶಾಲಾ ಮಕ್ಕಳು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ. ಶಿವಲಿಂಗಪ್ಪ ಮಾತನಾಡಿ, ಪ್ರಸ್ತುತ ಸಾಹಿತ್ಯದ ಬೆಳವಣಿಗೆ ಬಗ್ಗೆ ನಡೆಯುವ ಕಾರ್ಯಕ್ರಮಗಳು ಅಪರೂಪವಾಗಿವೆ. ಹಾಗಾಗಿ ಕನ್ನಡ ಸಾಹಿತ್ಯ ಜನಮಾನಸದಿಂದ ದೂರವಾಗುತ್ತಿದೆಯೇ ಎಂಬ
ಅನುಮಾನ ಕಾಡುತ್ತಿದೆ. ಕನ್ನಡ ಭಾಷೆ ಉಳಿವಿನ ಬಗ್ಗೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಆಸಕ್ತಿ ಯಾರೂ ತೋರುತ್ತಿಲ್ಲ ಎಮದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್‌. ವೆಂಕಟೇಶಪ್ಪ, ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಆರ್‌. ಕೃಷ್ಣಮೂರ್ತಿ, ಎನ್‌.ಎಂ. ಕೃಷ್ಣಮೂರ್ತಿ, ನಿವೃತ್ತ ಪ್ರಾಧ್ಯಾಪಕ ಜಿ.ವಿ. ಶ್ರೀರಾಮ ರೆಡ್ಡಿ, ಮುಖ್ಯಶಿಕ್ಷಕ ಎನ್‌. ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು. 

Trending videos

Back to Top