CONNECT WITH US  

ನಗರಸಭೆ ಚುಕ್ಕಾಣಿಗೆ ಪ್ರಬಲ ಪೈಪೋಟಿ

ಚಿತ್ರದುರ್ಗ: ಇಲ್ಲಿನ ನಗರಸಭೆ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಬಹುಮತ ಗಳಿಸಲು ಚಿತ್ರದುರ್ಗ ನಗರಸಭೆ ವ್ಯಾಪ್ತಿಯಿಂದ ಹೊರಗಿರುವ ಶಾಸಕರು, ವಿಧಾನ
ಪರಿಷತ್‌ ಸದಸ್ಯರ ಹೆಸರುಗಳನ್ನು ನಗರಸಭಾ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲು ಮೂರು ಪಕ್ಷಗಳೂ ಪ್ರಯತ್ನ ಮಾಡುತ್ತಿವೆ. ಈ ಕುರಿತು ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.

ಬಿಜೆಪಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಚಿತ್ರದುರ್ಗ ನಗರ ನಿವಾಸಿಯಾಗಿದ್ದು, ಇವರ ಮತ ಪಡೆಯಲು ಬಿಜೆಪಿ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಬಿಜೆಪಿ ವತಿಯಿಂದ ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಚಿತ್ರದುರ್ಗ ನಗರದ ರವಿಕುಮಾರ್‌ ಹಾಗೂ ವೈ.ಎ. ನಾರಾಯಣಸ್ವಾಮಿ ಬೆಂಗಳೂರು ನಿವಾಸಿಗಳಾಗಿದ್ದಾರೆ. ಇವರಿಬ್ಬರ ವಿಳಾಸವನ್ನು ಚಿತ್ರದುರ್ಗ ನಗರಕ್ಕೆ ಸ್ಥಳಾಂತರಿಸಿ ನಗರ ವಾಸಿಗಳೆಂದು ಧೃಢೀಕರಣ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿದೆ.
 
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಕೂಡ ಬಿಜೆಪಿ ಮಾದರಿಯ ಮೊರೆ ಹೋದಂತೆ ಕಾಣುತ್ತಿದೆ. ವಿಧಾನ ಪರಿಷತ್‌ ಸದಸ್ಯರಾದ ರಘು ಆಚಾರ್‌, ಜಯಮ್ಮ ಬಾಲರಾಜ್‌, ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರ ವಿಳಾಸವನ್ನು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಚಿತ್ರದುರ್ಗದಲ್ಲೇ ವಾಸವಾಗಿದ್ದು, ತಮ್ಮ ಮತವನ್ನೂ ಪರಿಗಣಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. 

ಈ ರೀತಿಯ ತಂತ್ರ-ಪ್ರತಿ ತಂತ್ರಗಳು ನಡೆದರೆ ಸಂಬಂಧವಿಲ್ಲದ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಚಿತ್ರದುರ್ಗ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ  ಚುನಾವಣೆಯಲ್ಲಿ ಮತದಾರರಾಗುವ ಅಪಾಯ ಎದುರಾಗಿದೆ. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗುತ್ತಾರೆ ಎನ್ನುವ ಚರ್ಚೆಗಿಂತ ಬಿಜೆಪಿ ಅಥವಾ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದಲ್ಲಿ
ಯಾರು ಬಲಾಬಲ ತೋರಿಸಿ ನಗರಸಭೆ ಅಧಿಕಾರ ಹಿಡಿಯುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಐದಾರು ಜನ ನಗರಸಭಾ ಸದಸ್ಯರ ಜೊತೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಗೌಪ್ಯ ಚರ್ಚೆ ನಡೆಸಿದೆ ಎನ್ನಲಾಗಿದ್ದು, ಬಿಜೆಪಿಯವರು ಪಕ್ಷೇತರರ ಓಲೈಕೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಸದಸ್ಯರನ್ನು ಸೆಳೆಯಲು "ಆಪರೇಷನ್‌ ಕಮಲ' ಆರಂಭಿಸಿದರೂ ಅಚ್ಚರಿ ಇಲ್ಲ. ಮೂರು ಪಕ್ಷಗಳು ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಶತಗತಾಯ ಪ್ರಯತ್ನ ಮಾಡುತ್ತಿವೆ. ಆದರೆ ಅಧಿಕಾರ ಪಡೆಯುವ ಹಾದಿ
ದಿನದಿಂದ ದಿನಕ್ಕೆ ಕಠಿಣವಾಗುತ್ತಲೇ ಇದೆ. ಯಾರು ಪಕ್ಷ ನಿಷ್ಠೆ ಬದಲಾಯಿಸುತ್ತಾರೋ ಎನ್ನುವ ಆತಂಕ ಪಕ್ಷಗಳ ನಾಯಕರಿಗೆ ಎದುರಾಗಿದೆ.

ಬಿಜೆಪಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರು ಮೂರನೇ ವಾರ್ಡ್‌ನಿಂದ ಗೆದ್ದಿರುವ ಕಾಂಗ್ರೆಸ್‌ ಸದಸ್ಯರ ಬೆಂಬಲ ಪಡೆಯಲು ಮುಂದಾಗಿದ್ದಾರೆ ಎಂಬ ವದಂತಿ ಹರಡಿದೆ. ಇದರಿಂದ ಎಚ್ಚೆಚ್ಚುಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು, ಈ ಹಿಂದೆ ತಮ್ಮ ಪಕ್ಷದಲ್ಲಿದ್ದು ಅಧಿ ಕಾರ ಅನುಭವಿಸಿ ಬಿಜೆಪಿಗೆ ಹೋಗಿರುವ ಐದಾರು ಸದಸ್ಯರ ಬೆಂಬಲ ಪಡೆಯಲು ಮುಂದಾಗಿವೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಾರೆ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಯಾವ ಪಕ್ಷ ಅಧಿಕಾರದ ಗದ್ದುಗೆಗೇರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
 
ಮ್ಯಾಜಿಕ್‌ ಸಂಖ್ಯೆ 18ಕ್ಕೆ ಹರಸಾಹಸ ಚಿತ್ರದುರ್ಗ ನಗರಸಭೆ ಒಟ್ಟು 35 ಸದಸ್ಯ ಬಲ ಹೊಂದಿದ್ದು, 17 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ , ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಬಿಜೆಪಿಗೆ ಕೇವಲ ಒಂದು ಸ್ಥಾನದ ಅಗತ್ಯವಿದೆ. ಕಾಂಗ್ರೆಸ್‌ -5, ಜೆಡಿಎಸ್‌-6 ಮತ್ತು ಪಕ್ಷೇತರರು 7 ಮಂದಿ ಸದಸ್ಯರಿದ್ದಾರೆ. ಇವರೆಲ್ಲರೂ ಸೇರಿ
ಒಕ್ಕೂಟ ರಚಿಸಿಕೊಂಡಲ್ಲಿ ಸಂಖ್ಯೆ 18 ಆಗಲಿದ್ದು ಬಹುಮತ ಸಿಗಲಿದೆ. ಆದರೆ 7 ಜನ ಪಕ್ಷೇತರ ಸದಸ್ಯರಲ್ಲಿ ಈಗಾಗಲೇ ಮೂರು ಜನರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ನಿಷ್ಠೆ ಬದಲಾಯಿಸುವುದನ್ನೂ ಅಲ್ಲಗಳೆಯುವಂತಿಲ್ಲ. ಹಾಗಾಗಿ ನಗರಸಭೆ ಚುಕ್ಕಾಣಿ ಹಿಡಿಯುವುದು ಬಿಜೆಪಿ ಮತ್ತು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಕೂಟಕ್ಕೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಹರಿಯಬ್ಬೆ ಹೆಂಜಾರಪ್ಪ

Trending videos

Back to Top