CONNECT WITH US  

ಬಂದ್‌ಗೆ ವಿವಿಧ ಸಂಘಟನೆಗಳ ಬಲ

ಚಿತ್ರದುರ್ಗ: ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ದರ ಏರಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆ. 10 ರಂದು ಭಾರತ ಬಂದ್‌ಗೆ ಕರೆ ನೀಡಿದ್ದು, ಜಿಲ್ಲೆಯ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಎಐಟಿಯುಸಿ, ಸಿಪಿಎಂ, ಸಿಪಿಐ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಬಹುತೇಕ ಸಂಘ-ಸಂಸ್ಥೆಗಳು ಭಾರತ್‌ ಬಂದ್‌ಗೆ ಬೆಂಬಲ ನೀಡಿವೆ. ಆದರೆ ಹೋಟೆಲ್‌ ಮತ್ತು ಪೆಟ್ರೋಲ್‌ ಬಂಕ್‌ ಮಾಲೀಕರು ಬಂದ್‌ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಆಟೋ, ಲಾರಿ ಸೇರಿದಂತೆ ಇತರೆ ಲಘು ವಾಹನಗಳ ಮಾಲೀಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ
ಬಂದ್‌ ಸಂಪೂರ್ಣ ಯಶಸ್ವಿಯಾಗಬಹುದು ಎನ್ನಲಾಗುತ್ತಿದೆ.
 ಚಳ್ಳಕೆರೆ ಬ್ಲಾಕ್‌ ಕಾಂಗ್ರೆಸ್‌

ಚಳ್ಳಕೆರೆ: ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಅವಶ್ಯವಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಳೆಯನ್ನು ಯಾವುದೇ ಮಿತಿ ಇಲ್ಲದೆ ದರ ಹೆಚ್ಚಳ ಮಾಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಕೆಗೆ ಒತ್ತಾಯಿಸಿ ಕರೆ ನೀಡಿರುವ ಭಾರತ್‌ ಬಂದ್‌ಗೆ ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಘಟಕ ಬೆಂಬಲ ವ್ಯಕ್ತಪಡಿಸಿದೆ. ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಯಂಪ್ರೇರಣೆಯಿಂದ ಬಂದ್‌ ಮಾಡುವಂತೆ ಸಾರ್ವಜನಿಕರಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಮನವಿ ಮಾಡಿಕೊಳ್ಳಲಾಗುವುದು.

ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್‌ ಅನಿವಾರ್ಯವಾಗಿದೆ. ಶಾಸಕ ಟಿ. ರಘುಮೂರ್ತಿ ಬಂದ್‌ನಲ್ಲಿ ಭಾಗವಹಿಸಲಿದ್ದು, ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಿಂದ ನೆಹರೂ ವೃತ್ತದ ಮೂಲಕ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
 ಹೊಳಲ್ಕೆರೆ ತಾಲೂಕು ಕಾಂಗ್ರೆಸ್‌

ಹೊಳಲ್ಕೆರೆ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಕರೆ ನೀಡಿರುವ ಭಾರತ್‌ ಬಂದ್‌ಗೆ ತಾಲೂಕು ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಸುರೇಶ್‌ ಪಾಡಿಗಟ್ಟೆ ತಿಳಿಸಿದ್ದಾರೆ. ಪ್ರತಿನಿತ್ಯ ತೈಲ ಬೆಲೆ ಏರಿಕೆ ಹಿನ್ನೆಯಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಹಳ್ಳಿಗಳಲ್ಲಿರುವ ಜನರು ಜಿಎಸ್‌ಟಿ, ತೈಲ ಬೆಲೆ ಹೆಚ್ಚಳದ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ. ಕೇಂದ್ರ ಸರಕಾರ ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಭಾರತ್‌ ಬಂದ್‌ ಮಾಡುವ ಮೂಲಕ ಅಡಳಿತ ಪಕ್ಷಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಹಾಗಾಗಿ ತಾಲೂಕಿನಲ್ಲಿರುವ ವಿವಿಧ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಬಂದ್‌ನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
 ಹಿರಿಯೂರು ತಾಲೂಕು ಕಾಂಗ್ರೆಸ್‌

ಹಿರಿಯೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಹಾಗೂ ಡಾಲರ್‌ ವಿರುದ್ಧ ರೂಪಾಯಿ ಅಪಮೌಲ್ಯ ವಿರೋ ಧಿಸಿ ಕೇಂದ್ರ ಸರ್ಕಾರದ ವಿರುದ್ಧ ಯುಪಿಎ ಮೈತ್ರಿಕೂಟದ ಪಕ್ಷಗಳು ಸೆ. 10 ರಂದು ಭಾರತ್‌ ಬಂದ್‌ಗೆ ಕರೆ ನೀಡಿವೆ. ಈ
ಹೋರಾಟ ಬೆಂಬಲಿಸಲು ಹಾಗೂ ಹಿರಿಯೂರು ಬಂದ್‌ ಯಶಸ್ವಿಗೊಳಿಸಬೇಕು. ತಾಲೂಕಿನ ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಬೆಳಿಗ್ಗೆ 8 ಗಂಟೆಗೆ ಕಾಂಗ್ರೆಸ್‌ ಪಕ್ಷದ ಕಚೇರಿ ಬಳಿ ಸಮಾವೇಶಗೊಳ್ಳಬೇಕು. ನಂತರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾದಿ ರಮೇಶ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 


Trending videos

Back to Top