CONNECT WITH US  

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನಸಾಗರ

ಚಿತ್ರದುರ್ಗ: ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವೀಕ್ಷಣೆಗೆ ಜನಸಾಗರ ಹರಿದು ಬರುತ್ತಿದೆ. ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ 'ನಡೆದಾಡುವ ದೇವರು' ಎಂದೇ ಖ್ಯಾತರಾಗಿದ್ದ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಯವರ ಪ್ರತಿಕೃತಿ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ

ಕೆತ್ತಿರುವ ಅವರ ಜೀವನದ ವಿವಿಧ ಮಜಲುಗಳ ಕಲಾಕೃತಿಗಳು. ವಿವಿಧ ಬಣ್ಣ ಬಣ್ಣಗಳ ಪುಷ್ಪಗಳ ನಡುವೆ ಸುಂದರ ಪರಿಸರದಲ್ಲಿ ಇರಿಸಿರುವ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಗಳ ಪ್ರತಿಕೃತಿ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮಕ್ಕಳು, ಯುವಜನರು, ವೃದ್ಧರಾದಿಯಾಗಿ ಎಲ್ಲರೂ ಪ್ರತಿಕೃತಿಗೆ ಭಕ್ತಿ ಭಾವದಿಂದ ನಮಿಸಿ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದಿದ್ದು ಕಂಡು ಬಂತು.

ಬಗೆಬಗೆಯ ಪುಷ್ಪಗಳು, ಸಸ್ಯಗಳು, ಹಣ್ಣುಗಳ ಪ್ರದರ್ಶನ, ಸಿರಿಧಾನ್ಯಗಳ ಮಹತ್ವ ಅರಿಯುವ ವಸ್ತು ಪ್ರದರ್ಶನ, ತೋಟಗಾರಿಕೆ ಉಪಕರಣಗಳು, ಅಣಬೆ ಬೇಸಾಯ, ನೂತನ ತಂತ್ರಜ್ಞಾನದ ವರ್ಗಾವಣೆ ಮಾಡುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಲು ಬೇಸಾಯ ಕ್ರಮದಲ್ಲಿ ತಾಂತ್ರಿಕತೆ ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಉತ್ತೇಜನ ನೀಡಲಾಗಿದೆ. ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ತೂಗು ಉದ್ಯಾನ, ವರ್ಟಿಕಲ್‌ ಗಾರ್ಡನ್‌ ಪದ್ಧತಿಯನ್ನು ಆಕರ್ಷಕ ರೀತಿಯಲ್ಲಿ ಪರಿಚಯಿಸಲಾಗಿದೆ.

ಸಕಲ ಜೀವ ರಾಶಿಗಳಿಗೂ ತಾಯಿಯಾಗಿರುವ ನಿಸರ್ಗ ಮಾತೆಗೆ ನಮನ ಸಲ್ಲಿಸುವ ಕಲಾಕೃತಿಯನ್ನು 50ಕ್ಕೂ ಹೆಚ್ಚು ಬಗೆಯ ಹೂವು ಬಳಸಿ ಸಿದ್ಧಪಡಿಸಿರುವುದು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ ಆನೆ, ಜಿರಾಫೆಗಳ ಕಲಾಕೃತಿ, ಜಿಂಕೆ, ಚಿರತೆಗಳ ಮಾದರಿ, ಮರ-ಗಿಡ ಬೆಳೆಸಿ ಕಾಡು ಪ್ರಾಣಿ ರಕ್ಷಿಸಿ ಎಂಬ ಪರಿಕಲ್ಪನೆ, ಪಕ್ಷಿಗಳ ಕಲಾಕೃತಿಗಳು ಕೂಡ ಪಕ್ಷಿಗಳ ಸಂತತಿ ಉಳಿಸುವ ಸಂದೇಶ ಸಾರುತ್ತಿವೆ. ತೆಂಗಿನ ಚಿಪ್ಪಿನಲ್ಲಿ ಕೆತ್ತನೆ ಮಾಡಿರುವ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿದೆ. 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವುಗಳನ್ನು ಪ್ರದರ್ಶಿಸಲಾಗಿದೆ. ಕುಬ್ಜ ಬೊನ್ಸಾಯ್‌ ಮರಗಳು ನೋಡುಗರನ್ನು ಕುತೂಹಲ ಲೋಕಕ್ಕೆ ಒಯ್ಯುವಂತಿವೆ.

ಕೃಷಿ-ತೋಟಗಾರಿಕೆಗೆ ಒತ್ತು
ಆಹಾರ ಭದ್ರತೆ ಬಹು ಮುಖ್ಯ ವಿಷಯವಾಗಿದೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದಾದ ಉತ್ತಮ ಪೌಷ್ಟಿಕ ಆಹಾರವೆಂದರೆ ಅಣಬೆ. ಇದು ಸಂಪೂರ್ಣ ಸಸ್ಯಾಹಾರವಾಗಿದ್ದು ಅಣಬೆ ಬೆಳೆಯ ಬೇಸಾಯ ಕ್ರಮಗಳನ್ನು ಸ್ತಬ್ಧಚಿತ್ರಗಳಲ್ಲಿ ಅಳವಡಿಸಲಾಗಿದೆ. ತೋಟಗಾರಿಕಾ ಕ್ಷೇತ್ರದ ಮಾದರಿ ನಿರ್ಮಿಸಲಾಗಿದೆ. ಇಸ್ರೇಲ್‌ ಮಾದರಿಯ ತಂತ್ರಜ್ಞಾನ ಅಂದರೆ ಕಡಿಮೆ ನೀರು ಬಳಸಿ ಉತ್ತಮ ಬೆಳೆ ಬೆಳೆಯುವ ವಿಧಾನ, ಮಲ್ಚಿಂಗ್‌ ಪದ್ಧತಿ, ಹೈಡ್ರೋಫೋನಿಕ್ಸ್‌ ಮಾದರಿ ಪ್ರದರ್ಶಿಸಲಾಗಿದೆ. ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ಕುಂಬಳಕಾಯಿ, ಟೊಮ್ಯಾಟೋ, ಬಾಳೆಹಣ್ಣು ವಿವಿಧ ಹಣ್ಣು ಹಾಗೂ ತರಕಾರಿಗಳನ್ನು ಇರಿಸಲಾಗಿದೆ. ಒಟ್ಟಾರೆ ಈ ಬಾರಿ ತೋಟಗಾರಿಕೆ ಇಲಾಖೆ ಆಕರ್ಷಕ ಫಲಪುಷ್ಪ ಪ್ರದರ್ಶನ ಆಯೋಜಿಸಿ ತೋಟಗಾರಿಕೆ ಪ್ರದೇಶ ವಿಸ್ತರಣೆಯ ಕನಸನ್ನು ಸಾಕಾರಗೊಳಿಸಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ನೇತೃತ್ವದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ನೋಡುಗರನ್ನು ಕೈಬೀಸಿ ಕರೆಯುತ್ತಿದೆ.

ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜನೆ
ಚಿತ್ರದುರ್ಗ: ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ 28ನೇ ಫಲಪುಷ್ಪ ಪ್ರದರ್ಶನದಲ್ಲಿ ವಯೋಮಾನಕ್ಕೆ ಅನುಗುಣವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಚಿತ್ರಕಲೆ, ಹಣ್ಣು ಮತ್ತು ತರಕಾರಿ ಗುರುತಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಹಣ್ಣು ಮತ್ತು ತರಕಾರಿಗಳ ಫ್ಯಾನ್ಸಿ ಡ್ರೆಸ್‌ ಸೇರಿದಂತೆ ಹಲವು ಸ್ಪರ್ದೆಗಳು ನಡೆದವು. ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ಹಂತದ 5ರಿಂದ 7ನೇ ತರಗತಿ ಮತ್ತು ಪ್ರೌಢಶಾಲೆಯ 8 ರಿಂದ 10ನೇ ತರಗತಿಗಳಿಂದ 11 ಶಾಲೆಗಳ 65ಕ್ಕೂ ಹೆಚ್ಚಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ನಾನಾ ರೀತಿಯ ಉದ್ಯಾನವನಗಳ ಚಿತ್ರಕಲೆಗಳನ್ನು ತಮ್ಮ ಕುಂಚದಲ್ಲಿ ಬಿಡಿಸಿದರು.

ಕಿರಿಯ ಪ್ರಾಥಮಿಕ ಶಾಲೆಯ 1 ರಿಂದ 2ನೇ ತರಗತಿಯ ಮಕ್ಕಳಿಗಾಗಿ ಹಣ್ಣು ಮತ್ತು ತರಕಾರಿಗಳನ್ನು ಗುರುತಿಸುವ ಸ್ಪರ್ಧೆಯಲ್ಲಿ 30 ಮಕ್ಕಳು ಪಾಲ್ಗೊಂಡಿದ್ದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಾವಯವ ಕೃಷಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡಿದ್ದರು. ಜಾನಪದ ಮತ್ತು ಭಾವಗೀತೆ ಸ್ಪರ್ಧೆಗಳಲ್ಲಿ ತಲಾ 15 ರಂತೆ 30 ಮಕ್ಕಳು ಭಾಗವಹಿಸಿ ರಂಜಿಸಿದರು. ಫೆ. 12 ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


Trending videos

Back to Top