CONNECT WITH US  

ಯಾವ ಸರ್ಕಾರಗಳೂ ಕಾರ್ಮಿಕರ ಪರ ಇಲ್ಲ

ದಾವಣಗೆರೆ: ಯಾವ ಸರ್ಕಾರಗಳೂ ಕಾರ್ಮಿಕರ ಪರ ಚಿಂತಿಸುತ್ತಿಲ್ಲ, ಬಂಡವಾಳ ಶಾಹಿಗಳ ಪರ ಇವೆ ಎಂದು ಎಐಯುಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಸೋಮಶೇಖರ್‌ ದೂರಿದ್ದಾರೆ.

ರೋಟರಿ ಬಾಲಭವನದಲ್ಲಿ ಭಾನುವಾರ ಎಐಯುಟಿಯುಸಿ ಸಂಯೋಜಿದ ದಾವಣಗೆರೆ ವಿಶ್ವವಿದ್ಯಾನಿಲಯದ ಸಿ ಮತ್ತು ಡಿ ಗ್ರೂಪ್‌ ಹೊರಗುತ್ತಿಗೆ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಕಲ್ಯಾಣಕ್ಕಾಗಿ ಯಾವುದೇ ಸರ್ಕಾರ ಮುಂದಾಗುತ್ತಿಲ್ಲ. ಬಂಡವಾಳ ಶಾಹಿಗಳು, ಮಾಲಿಕರ ಪರ ಇವೆ ಎಂದರು.  ಪ್ರಸ್ತುತ ಎಲ್ಲಾ ಸರ್ಕಾರಗಳು ಗುತ್ತಿಗೆ ಆಧಾರಿತ ನೌಕರರ ಮೇಲೆ ಅವಲಂಬಿತ ಆಗುತ್ತಿವೆ.ಇದರಿಂದಾಗಿ ಖಾಯಂ ನೌಕರರ ಸಂಖ್ಯೆ ಕಡಮೆ ಆಗುತ್ತಾ ಹೋಗುತ್ತಿದೆ. ಕಾರ್ಮಿಕ, ನೌಕರರ ಪರ ನಿಲ್ಲಬೇಕಿದ್ದ ಸರ್ಕಾರಗಳೇ ತಾವೇ ಮಾಡಿದ ಕಾನೂನು ಉಲ್ಲಂಘನೆ ಮಾಡುತ್ತಿವೆ. ಶ್ರಮಿಕ ವರ್ಗದವರಿಗೆ
ಬೆಲೆ ಕೊಡುತ್ತಿಲ್ಲ. ಗುಲಾಮಗಿರಿ ಜೀವಂತವಾಗಿಡಲು ಕಾನೂನು ರೂಪಿಸುತ್ತಿವೆ. ಇಂತಹ ಸಂದರ್ಭದಲ್ಲಿ  ಕಾರ್ಮಿಕರು ಅರ್ಥಮಾಡಿಕೊಂಡು ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ತಿಳಿಹೇಳಿದರು. 

ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ಕಾನೂನು ವ್ಯಾಪ್ತಿಯಲ್ಲಿಯೇ ಕಾರ್ಮಿಕರ ಶೋಷಣೆಮಾಡಲು  ಸರ್ಕಾರಗಳು ಅನುವುಮಾಡಿಕೊಡುತ್ತಿವೆ. ಕಾರ್ಮಿಕರನ್ನು ತಿರಸ್ಕಾರ, ನಿರ್ಲಕ್ಷದ ಜೊತೆಗೆ ಅಗೌರವ ತೋರಲಾಗುತ್ತಿದೆ. ಹೊರಗುತ್ತಿಗೆ ನೌಕರರಿಗೆ ಖಾಯಂ ನೌಕರರಿಗೆ ಸಿಗುವಂತಹ ಸೌಲಭ್ಯ ಸಿಗುತ್ತಿಲ್ಲ. ಇಡೀ ದೇಶದಲ್ಲಿಯೇ ಇಂದು ಇಂತಹ ಸ್ಥಿತಿ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌, ರಜೆ ಸೌಲಭ್ಯಗಳನ್ನು ನೀಡಬೇಕೆಂದು ಕಾನೂನಿನಲ್ಲಿ ಇದೆ. ಆದರೆ, ಅಧಿಕಾರಿಗಳು, ಗುತ್ತಿಗೆದಾರರು ಕಾನೂನು ಉಲ್ಲಂಘನೆ ಮಾಡಿ, ಕಾರ್ಮಿಕರ ಹೆಸರಿನಲ್ಲಿ ಸವಲತ್ತುಗಳ ಲೂಟಿ ಮಾಡುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಲು ಯಾರೂ ಸಿದ್ಧರಿಲ್ಲ. ಆದ್ದರಿಂದ ಯಾವುದೇ ಒಬ್ಬ ಕಾರ್ಮಿಕರಿಗೂ ಅನ್ಯಾಯವಾದಲ್ಲಿ ಎಲ್ಲರು ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

ದುಡಿಯುವ ವರ್ಗಕ್ಕೆ ಸ್ವಾತಂತ್ರ ಸಿಗುತ್ತಿಲ್ಲ. ಮಾಲಿಕರು, ಬಂಡವಾಳಶಾಹಿ, ಕೈಗಾರಿಕೋದ್ಯಮಿಗಳಿಗೆ ಮಾತ್ರ ಸ್ವಾತಂತ್ರ ಸಿಕ್ಕಿದೆ. ಇವರೆಲ್ಲರು ಕಾರ್ಮಿಕರನ್ನು ಶೋಷಣೆ ಮಾಡುತ್ತಾ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಆಡಳಿತಕ್ಕೆ ಬರುವ ಎಲ್ಲಾ ಸರ್ಕಾರಗಳು ಕಾರ್ಮಿಕರ, ಜನಸಮಾನ್ಯರ ಪರವಾಗಿಲ್ಲ. ದೇಶದಲ್ಲಿ ಭ್ರಷ್ಟಚಾರ, ಕಾರ್ಮಿಕರಿಗೆ ಅನ್ಯಾಯ, ಉದ್ಯೋಗವಿಲ್ಲದೆ ಯುವಕರು ಅಲೆದಾಟ ನಿಂತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಲ್ಲುತ್ತಿಲ್ಲ. ರೈತರ ಸಾಲ ಮನ್ನಾವಾಗಿಲ್ಲ. ಇಂತಹ ಸಮಸ್ಯೆಗಳ ಬಗೆಹರಿಸುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಾಗಲಿ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ವಿವಿ ಸಿ ಮತ್ತು ಡಿ ಗ್ರೂಪ್‌ ಹೊರಗುತ್ತಿಗೆ ನೌಕರರ ಸಂಘದ ಗೌರವ ಅಧ್ಯಕ್ಷ ಮಂಜುನಾಥ್‌ ಕೈದಾಳೆ ಮಾತನಾಡಿ, ಹೋರಾಟದ ಫಲವಾಗಿ ಕನಿಷ್ಠ ವೇತನ ದೊರೆತ್ತಿದ್ದು, ವಿವಿ ಹೊರಗುತ್ತಿಗೆ ನೌಕರರ ಸಂಘದೊಂದಿಗೆ ಎಐಯುಟಿಯುಸಿ ಸಂಘಟನೆಯ ಮುಖೇನಾ ವಿಶ್ವವಿದ್ಯಾಲಯ ಆವರಣದಲ್ಲಿ ಅನಿರ್ದಿಷ್ಟ ಹೋರಾಟದಲ್ಲಿ ಮಹಿಳೆಯರು ಭಾಗವಹಿಸಿದ್ದು, ಹೋರಾಟಕ್ಕೆ ಜಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಉಳಿದ ಸವಲತ್ತಿಗೆ ಹೋರಾಡೋಣ ಎಂದರು. 

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ.ಎನ್‌.ಶ್ರೀರಾಮ್‌, ಮಂಜುನಾಥ್‌ ಕುಕ್ಕವಾಡ, ಎಲ್‌.ಎಚ್‌. ಪ್ರಕಾಶ್‌, ಆರ್‌.
ತಿಪ್ಪೇಶ್‌, ರುದ್ರೇಶ್‌, ಸಣ್ಣಕೊಟ್ರೇಗೌಡ ವೇದಿಕೆಯಲ್ಲಿದ್ದರು.


Trending videos

Back to Top