CONNECT WITH US  

ಗರ್ಭಿಣಿಯರಿಗೆ ಏಡ್ಸ್‌ ಬಾರದಂತೆ ಎಚ್ಚರ ವಹಿಸಿ

ದಾವಣಗೆರೆ: ಗರ್ಭಿಣಿಯರಲ್ಲಿ ಏಡ್ಸ್‌ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ ಹೇಳಿದ್ದಾರೆ.

ಶನಿವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ಗರ್ಭಿಣಿಯರಲ್ಲಿ ಏಡ್ಸ್‌ ರೋಗ ಕಾಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ರಾಜ್ಯದ ಶೇ.0.35ರಷ್ಟು ಗರ್ಭಿಣಿಯರಲ್ಲಿ ಏಡ್ಸ್‌ ಸೋಂಕು ಇರುವುದು ಖಚಿತಪಟ್ಟಿದೆ. ಇನ್ನು ಜಿಲ್ಲೆಯ ಮಟ್ಟಿಗೆ ಬಂದರೆ ಅದು ಇನ್ನೂ ಆತಂಕಕಾರಿಯಾಗಿದೆ. ಜಿಲ್ಲೆಯ ಗರ್ಭಿಣಿಯರ ಪೈಕಿ ಶೇ.0.63ರಷ್ಟು ಗರ್ಭಿಣಿಯರಲ್ಲಿ ಏಡ್ಸ್‌ ಕಾಣಿಸಿಕೊಂಡಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬಮದಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ ಎಂದರು. 

ಏಡ್ಸ್‌ ಪ್ರಮಾಣ ಬೆಳಗಾವಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದೆ. ನಮ್ಮ ಜಿಲ್ಲೆಯಲ್ಲಿ ಆ ಪ್ರಮಾಣದಲ್ಲಿ ಇಲ್ಲ. ವೈಜ್ಞಾನಿಕತೆಯಿಂದ ಆರೋಗ್ಯ ಸಮಸ್ಯೆಗಳು ಪರಿಹಾರ ಸುಲಭ ಆಗುತ್ತದೆ. ಮೊದಲೆಲ್ಲಾ ರಕ್ತದೊತ್ತಡ ನಿಯಂತ್ರಣಕ್ಕೂ ಪರದಾಡುವ ಸ್ಥಿತಿ ಇತ್ತು. ಇಂದು ಎಲ್ಲವೂ ಬದಲಾಗಿದೆ. ಯಾವುದೇ ರೋಗವನ್ನು ಗುಣಪಡಿಸಬಹುದು ಎಂಬ ಮಟ್ಟಕ್ಕೆ ಆರೋಗ್ಯ ಕ್ಷೇತ್ರ ಬಂದಿದೆ. ಹಾಗಾಗಿ ಯಾರೂ ಸಹ ರೋಗ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಎದೆಗುಂದಬಾರದು ಎಂದು ಕಿವಿಮಾತು ಹೇಳಿದರು.

ಎಚ್‌ವಿಐ ಸೋಂಕು ತಗುಲಿದವರು ಸಹ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಂಡು ದೀರ್ಘಾಯುಷಿಯಗಳಾಗಿರುವುದು ನಮ್ಮ ಮುಂದೆ ಇದೆ. ಧ್ಯಾನ, ಯೋಗ, ಪ್ರಾಣಯಾಮ ಮಾಡುವ ಮೂಲಕ ಆರೋಗ್ಯದ ಸ್ಥಿತಿ ಸುಧಾರಿಸಿಕೊಳ್ಳಬೇಕು. ಇದರ ಜೊತೆಗೆ ಉತ್ತಮ ಪೌಷ್ಠಿಕ ಆಹಾರ ಸೇವನೆ ಮುಖ್ಯ. ರೋಗದ ಬಗ್ಗೆ ವ್ಯಸನ ಹಚ್ಚಿಕೊಂಡು ದುಶ್ಚಟಕ್ಕೆ ದಾಸರಾಗಬಾರದು. ಎಲ್ಲರಂತೆ ನಾವೂ ಸಹ ಬಾಳಬಹುದು ಎಂಬ ಆತ್ಮವಿಶ್ವಾಸ ವೃದ್ಧಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೆಲ ದಿನಗಳ ಹಿಂದೆ ರಾಜ್ಯದ 19 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಿಸಿದ್ದು, ಅದರಲ್ಲಿ 10 ಸಾವಿರ ಜನರಿಗೆ ಏಡ್ಸ್‌ ರೋಗ ಕಂಡುಬಂದಿದೆ. ಇದಕ್ಕೆ ಅಸುರಕ್ಷಿತ ಲೆ„ಂಗಿಕ ಸಂಪರ್ಕ, ಎಚ್‌ಐವಿ ಸೋಂಕು ಇರುವ ವ್ಯಕ್ತಿಯಿಂದ ಪಡೆದ ರಕ್ತ ಹೀಗೆ ಕೆಲವು ಕಾರಣಗಳಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಏಡ್ಸ್‌ ಪೀಡಿತರನ್ನು ಕೀಳಾಗಿ ಕಾಣುವುದನ್ನು ಬಿಡಬೇಕು. ಅವರಿಗೆ ಮನಸ್ಥೈರ್ಯ ತುಂಬಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.

ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿ ಕಾರಿ ಡಾ| ಜಿ.ಡಿ. ರಾಘವನ್‌ ಮಾತನಾಡಿ, ಏಡ್ಸ್‌ ರೋಗ ನಾಲ್ಕು ರೀತಿಯಲ್ಲಿ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕು ಇರುವ ವ್ಯಕ್ತಿಗೆ ಬಳಸಿದ ಸೂಜಿಯನ್ನು ಬಳಸುವುದರಿಂದ, ಸೋಂಕು ಇರುವ
ವ್ಯಕ್ತಿಯಿಂದ ರಕ್ತ ಪಡೆದಾಗ, ತಾಯಿಗೆ ಶೇ.30ರಷ್ಟು ಏಡ್ಸ್‌ ವೈರಾಣುವಿದ್ದಲ್ಲಿ ಮಾತ್ರ ಮಗುವಿಗೂ ಈ ಕಾಯಿಲೆ ಬರಲಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾ ಧೀಶ ಕೆಂಗಬಾಲಯ್ಯ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಆರೋಗ್ಯ ಅಧಿ ಕಾರಿ ಡಾ| ಎಂ.ಎಸ್‌. ತ್ರಿಪುಲಾಂಭ, ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ, ಆಯೂಷ್‌ ಅಧಿಕಾರಿ ಸಿದ್ದೇಶ್‌, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ಬಸವನಗೌಡ ವೇದಿಕೆಯಲ್ಲಿದ್ದರು.

Trending videos

Back to Top