CONNECT WITH US  

ಓಟಿನ ಬೇಟೆಗೆ ಚರ್ಚೆ-ಮನೆ ಮನೆ ಭೇಟಿ

ದಾವಣಗೆರೆ: ಕ್ಷೇತ್ರದ ಮುಖಂಡರೊಂದಿಗೆ ಗಹನ ಚರ್ಚೆ..., ಮನೆ ಮನೆ ಪ್ರಚಾರ..., ರಾಜ್ಯ ವಿಧಾನಸಭಾ ಚುನಾವಣೆಗೆ
ನಾಮಪತ್ರ ಸಲ್ಲಿಕೆ (ಏ.17) ದಿನ ಸಮೀಪಿಸುತ್ತಿರುವಂತೆ ಟಿಕೆಟ್‌ ಖಾತರಿಗೆ ಮುಂದುವರೆದ ಭಗೀರಥ ಪ್ರಯತ್ನ...ಇವು ವೋಟಿನ ಬೇಟೆಯ ದೌಡಿನಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಕಂಡು ಬಂದ ರಾಜಕೀಯ ಮುಖಂಡರ ಚಟುವಟಿಕೆಗಳು.

ಬೆಂಗಳೂರಿನಿಂದ ಹಿಂದಿರುಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ದಿನವಿಡೀ ಮನೆಯಲ್ಲಿ ಮುಖಂಡರೊಂದಿಗೆ ಚರ್ಚೆಯಲ್ಲಿ ನಿರತರಾಗಿದ್ದರು. ಮಾಯಕೊಂಡ ಟಿಕೆಟ್‌ ಕೋರಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ ತಮ್ಮ ಬೆಂಬಲಿಗರೊಡಗೂಡಿ ಮಲ್ಲಿಕಾರ್ಜುನ್‌ರನ್ನು ಭೇಟಿ ಮಾಡಿದರು. ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ನಿವಾಸದಲ್ಲೇ ಸರಣಿ ಚರ್ಚೆ ನಡೆಸಿದರು. 

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಕ್ಷೇತ್ರದ ಮುಖಂಡರ ಮನೆಗೆ ತೆರಳಿ ಚರ್ಚೆ ನಡೆಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಸಹ ಮುಖಂಡರ ಮನೆಗೆ ತೆರಳಿ, ಮಾತುಕತೆ ನಡೆಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿ ಕೆ.ಎಲ್‌. ರಾಘವೇಂದ್ರ ಸುದ್ದಿಗೋಷ್ಠಿ ನಡೆಸಿ, ತಮಗೆ ಟಿಕೆಟ್‌ ದೊರೆತಿರುವುದನ್ನು ಖಚಿತಪಡಿಸುವ ಜೊತೆಗೆ ಮುಂದಿನ 2-3 ದಿನಗಳಲ್ಲಿ ಸ್ಥಳೀಯ ಸಮಸ್ಯೆಗಳ ಆಧರಿಸಿದ ಪ್ರಣಾಳಿಕೆ ಬಿಡುಗಡೆಯ ಬಗ್ಗೆ ತಿಳಿಸಿದರು. ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ಕುಣಿಬೆಳಕೆರೆ, ನಂದಿತಾವರೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ಕಾಂಗ್ರೆಸ್‌ ಟಿಕೆಟ್‌ ಬಯಸಿರುವ ಎಸ್‌. ರಾಮಪ್ಪ ಬೆಳಗ್ಗೆ ಗಂಗನರಸಿ, ಕರ್ಲಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ ನಂತರ ಸಂಜೆ ಹರಿಹರದ ಗಾಂಧಿನಗರ ಇತರೆ ಭಾಗದಲ್ಲಿ ಪ್ರಚಾರ ನಡೆಸಿದರು.

ಜಗಳೂರು ಶಾಸಕ ಎಚ್‌.ಪಿ. ರಾಜೇಶ್‌ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಮತ್ತವರ ಬೆಂಬಲಿಗರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಾಣದಕಟ್ಟೆ ಗ್ರಾಮದ ಮಾಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಪ್ರಾರಂಭಿಸಿದರು. ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಮಾಜಿ ಸಚಿವ ಜಿ. ಕರುಣಾಕರೆಡ್ಡಿ ಕುಂಚೂರು, ಬಾಗಳಿ, ಬೆಣ್ಣೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಎನ್‌.
ಕೊಟ್ರೇಶ್‌ ಬಿಜೆಪಿ ಟಿಕೆಟ್‌ಗೆ ಭಗೀರಥ ಪ್ರಯತ್ನ ಮುಂದುವರೆಸಿದ್ದಾರೆ.

ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಹಾಗೂ ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಮಾಜಿ ಶಾಸಕ ಕೆ. ಮಾಡಾಳ್‌ ವಿರುಪಾಕ್ಷಪ್ಪ ಸಹ ಹೊದಿಗೆರೆ ಗ್ರಾಮದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರಚಾರ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಹೊದಿಗೆರೆ ರಮೇಶ್‌ ಮೇಳನಾಯಕನಹಟ್ಟಿ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಜೆಡಿಯು ರಾಜ್ಯ ಅಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್‌ ಚಿಕ್ಕಗಂಗೂರು ಮತ್ತಿತರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು. 

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಸವಳಂಗ ಗ್ರಾಮದಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹುಣಸಘಟ್ಟ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಮಾಯಕೊಂಡ ಕ್ಷೇತ್ರದಲ್ಲಿ ಯಾವ ಪಕ್ಷದ ಮುಖಂಡರೂ ಕಾಣಿಸಿಕೊಳ್ಳಲಿಲ್ಲ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಅಶ್ವತಿ ಹೊನ್ನಾಳಿ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸ್ವೀಪ್‌ ಕಾರ್ಯಕ್ರಮದಡಿ ವಿಶೇಷ ಚೇತನರ ಮತದಾನದ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ಬೈಕ್‌ ರ್ಯಾಲಿಗೆ ಚಾಲನೆ ನೀಡಿದರು. 

ಮಹಾನಗರ ಪಾಲಿಕೆ ಆಯುಕ್ತ ಇಸ್ಲಾವುದ್ದೀನ್‌ ಗದ್ಯಾಳ್‌ ಸುದ್ದಿಗೋಷ್ಠಿ ನಡೆಸಿ, ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕೆ ಸಕಲ ರೀತಿಯ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಅರೆ ಸೇನಾ ಪಡೆಗಳು ಮತ್ತು ಪೊಲೀಸ್‌ ತುಕಡಿ ನಗರದ ವಿವಿಧ ಭಾಗದಲ್ಲಿ ಪಥ ಸಂಚಲನ ನಡೆಸಿದರು.


Trending videos

Back to Top