CONNECT WITH US  

ಆಭರಣ ಹರಾಜು-ರೈತರ ಪ್ರತಿಭಟನೆ

ಮಲೇಬೆನ್ನೂರು: ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಭರಣ ಸಾಲ ಪಡೆದಿದ್ದ ರೈತನಿಗೆ ಮಾಹಿತಿ ನೀಡದೆ ಚಿನ್ನಾಭರಣ
ಹರಾಜು ಮಾಡಿರುವ ಪ್ರಕ್ರಿಯೆಯನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಎಸ್‌ಬಿಐ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸಂಕೀಪುರ ಗ್ರಾಮದ ಸಿದ್ದಮ್ಮ, ಸಂಗನಬಸಪ್ಪ ಮತ್ತು ಬಿ.ಜಿ. ಪದ್ಮಪ್ಪ ಎಂಬುವರು ಮಲೇಬೆನ್ನೂರು ಎಸ್‌.ಬಿ.ಐ. ಶಾಖೆಯಲ್ಲಿ ಆಭರಣ ಸಾಲ ಪಡೆದಿದ್ದರು. ಜು. 23ರೊಳಗೆ ಸಾಲದ ಕಂತು ಪಾವತಿಸುವಂತೆ ಬ್ಯಾಂಕ್‌ನಿಂದ ನಮಗೆ ನೋಟಿಸ್‌ ನೀಡಲಾಗಿದೆಯಾದರೂ ನೋಟಿಸ್‌ನ್ನು ಬ್ಯಾಂಕ್‌ ಜು. 21ರಂದು ರಿಜಿಸ್ಟರ್‌x ಪೋಸ್ಟ್‌ ಮಾಡಿದ್ದು ನಮಗೆ 25ಕ್ಕೆ ತಲುಪಿದೆ. ಇನ್ನು ಜು. 23ರ ಒಳಗಾಗಿ ಕಂತನ್ನು ಹೇಗೆ ಪಾವತಿಸಬೇಕು. ನೋಟಿಸ್‌ ನಲ್ಲಿ ಆಭರಣ ಹರಾಜು ಮಾಡುತ್ತೇವೆ ಎಂಬ ಮಾಹಿತಿಯನ್ನು ತಿಳಿಸಿಲ್ಲ ಎಂದು ರೈತರು ಆರೋಪಿಸಿದರು.

ಸಾಲಗಾರ ರೈತರಿಗೆ ಮಾಹಿತಿ ನೀಡದೆ, ಆಭರಣ ಹರಾಜು ಮಾಡಿದ ಬ್ಯಾಂಕ್‌ ಅಧಿಕಾರಿಗಳ ಕ್ರಮ ಖಂಡಿಸಿ, ಹಸಿರು ಸೇನೆ ಮತ್ತು ರೈತ ಸಂಘದ ಕಾರ್ಯಕರ್ತರು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನಾವು ಹಣವನ್ನು ಪಾವತಿ ಮಾಡಲು ಬಂದಿದ್ದೇವೆ. ನಮ್ಮ ಆಭರಣ ನಮಗೆ ಕೊಡಿ ಎಂದು ರೈತರು ಬಿಗಿ ಪಟ್ಟು ಹಿಡಿದರು.

ಒಂದು ತಿಂಗಳ ಹಿಂದೆಯೇ ಆಭರಣ ಸಾಲಗಾರರಿಗೆ ನೋಟಿಸ್‌ ಕೊಟ್ಟಿರುವ ದಾಖಲೆ ತಮ್ಮ ಬಳಿ ಇದೆ ಎಂದ ಬ್ಯಾಂಕ್‌ ಅಧಿಕಾರಿಗಳು ನೋಟಿಸ್‌ ತಡವಾಗಿ ಕಳುಹಿಸಿರುವುದನ್ನು ಒಪ್ಪಿಕೊಂಡರು.

ಹರಾಜು ಪ್ರಕ್ರಿಯೆಯ ಬಗ್ಗೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟಿಸಿರುವುದಾಗಿ ಅಧಿಕಾರಿಗಳ ನೀಡಿದ ಸ್ಪಷ್ಟನೆಗೆ ಕುಪಿತರಾದ ರೈತರು ನಮ್ಮೂರಿಗೆ ಬಾರದ ಪತ್ರಿಕೆಗೆ ಜಾಹೀರಾತು ನೀಡಿದ್ದೀರಿ. ಹೋಗಲಿ, ಸಾಲಗಾರನಿಗಾದರೂ ಮಾಹಿತಿ ನೀಡಬೇಕಿತ್ತು ಎಂದು ಆಗ್ರಹಿಸಿದರು. ಸಮಸ್ಯೆ ಬಗೆಹರಿಸಲು ಬ್ಯಾಂಕ್‌ ಅಧಿಕಾರಿಗಳು, ರೈತ ಮುಖಂಡರು ಹಾಗೂ ಪಿಎಸ್‌ಐ ಮೇಘರಾಜ್‌ ಪ್ರತ್ಯೇಕ ಸಭೆ ನಡೆಸಿದರು.

ಸಭೆಯ ಬಳಿಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್‌.ಓಂಕಾರಪ್ಪ ಮಾತನಾಡಿ, ಮಳೆ-ಬೆಳೆ ಇಲ್ಲದೆ ರೈತರು
ಹತಾಶ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಇನ್ನೂ 6 ತಿಂಗಳು ಆಭರಣ ಹರಾಜು ಮಾಡಬಾರದೆಂಬ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಹರಾಜಿನಲ್ಲಿ ಆಭರಣ ಪಡೆದವರೊಂದಿಗೆ ಮಾತುಕತೆ ನಡೆಸಿ ಮರಳಿ
ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ತಾತ್ಕಾಲಿಕವಾಗಿ ಪ್ರತಿಭಟನೆ ನಿಲ್ಲಿಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಆಭರಣಗಳನ್ನು ಕೊಡಿಸದಿದಲ್ಲಿ ಪುನಃ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿ.ಪ್ರಭುಗೌಡ, ಸಂಕ್ಲಿಪುರದ ಮಹೇಂದ್ರಪ್ಪ, ಶಂಭುಲಿಂಗಪ್ಪ, ಬಿ.ಜಿ. ಪದ್ಮಪ್ಪ, ಸಂಗನಬಸಪ್ಪ, ಕೋಗಳಿ ಮಂಜುನಾಥ್‌, ಮಹೇಂದ್ರಪ್ಪ, ಜಿಗಳಿ ನಂದ್ಯಪ್ಪ, ಗುಳದಹಳ್ಳಿ ವಾಸಪ್ಪ, ರವಿ, ವೀರೇಶ್‌, ಚಂದ್ರಶೇಖರಪ್ಪ, ಎಂ.ಬಿ.ಸಮೀವುಲ್ಲ, ಮೊಹ್ಮದ್‌ ಹನೀಫ್‌ ಸಾಬ್‌, ರಾಘವೇಂದ್ರ, ನಾಗರಾಜಯ್ಯ, ಸೈಯದ್‌ ಫಯಾಜ್‌, ವಿಜಯ್‌ಕುಮಾರ್‌, ಸಿ.ನಂದ್ಯಪ್ಪ ಮತ್ತಿತರರು ಇದ್ದರು.

Trending videos

Back to Top