CONNECT WITH US  

ವಿಷದ ಬಾಟಲಿ ಹಿಡಿದು ಪರಿಹಾರಕ್ಕೆ ಆಗ್ರಹ

ಹರಿಹರ: 2017ರ ಮೇ 30ರಂದು ಲಾಕ್‌ಔಟ್‌ ಆಗಿದ್ದ ಇಲ್ಲಿನ ಲಕ್ಷ್ಮೀ ಪೌಂಡ್ರಿ ಕಾರ್ಮಿಕರು ಸೋಮವಾರ ಕಾರ್ಖಾನೆ ಮಾಲೀಕ ಸತ್ಯನಾರಾಯಣರಾವ್‌ ಮನೆ ಎದುರು ವಿಷದ ಬಾಟಲಿ ಹಿಡಿದು ಪರಿಹಾರಕ್ಕೆ ಆಗ್ರಹಿಸಿದರು.

ಇಲ್ಲಿನ ಹರಪನಹಳ್ಳಿ ರಸ್ತೆಯ ಪೌಂಡ್ರಿ ಪಕ್ಕದಲ್ಲಿರುವ ಮನೆ ಎದುರು ಬೆಳಿಗ್ಗೆ 11ಕ್ಕೆ ಜಮಾಹಿಸಿದ ಕಾರ್ಮಿಕರು, ಮಾಲೀಕ ಸತ್ಯನಾರಾಯಣ ಅವರನ್ನು ಕರೆಸಿಕೊಂಡು ಏಕಾಏಕಿ ಕಾರ್ಖಾನೆ ಬಂದ್‌ ಮಾಡುವ ಮೂಲಕ ಕಳೆದ 2-3 ದಶಕಗಳ ಕಾಲ ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರನ್ನು ಬೀದಿಪಾಲು ಮಾಡಿದ್ದೀರಿ. ಅಲ್ಲಿಂದ ಇಲ್ಲಿವರೆಗೆ ಬಾಕಿ ವೇತನ, ಯಾವುದೇ ಪರಿಹಾರ
ನೀಡದೆ ಅಲೆದಾಡಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

2017ರ ಜೂ. 2ರಂದು ನಡೆದ ಕಾರ್ಮಿಕರ ಸಭೆಯಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಬಾಕಿ ವೇತನ, ಇನ್ನಿತರೆ ಪರಿಹಾರ ಸೇರಿ ಒಟ್ಟು 1.27 ಕೋ. ರೂ. ನೀಡುವುದಾಗಿ ಎಲ್ಲ ಪಾಲುದಾರರು ಒಪ್ಪಿಕೊಂಡಿದ್ದೀರಿ. ಆದರೆ, ನಂತರ ಇದಕ್ಕೆ ಒಬ್ಬ ಪಾಲುದಾರರ ಒಪ್ಪಿಲ್ಲ ಎಂದು ಹೇಳಿದಿರಿ. ಕೊನೆಗೆ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದು, ಕೂಡಲೆ ಪರಿಹಾರ ವಿತರಿಸಲು ನ್ಯಾಯಾಲಯ
ಆದೇಶಿಸಿದ್ದರೂ ಅದನ್ನು ಪ್ರಶ್ನಿಸಿ ಗುಲ್ಬರ್ಗ ವಿಭಾಗೀಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ತೊಂದರೆ ಕೊಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕ ಸತ್ಯನಾರಾಯಣರಾವ್‌, ಕಾರ್ಮಿಕರಿಗೆ ನ್ಯಾಯಯುತ ಪರಿಹಾರ ನೀಡಲು ನನ್ನದೇನು
ತಕರಾರಿಲ್ಲ. ಪಾಲುಗಾರರಲ್ಲಿ ಒಬ್ಬರಾದ ಅಜೆಯ್‌ ಹಂಸಾಗರ್‌ ಹಣ ವರ್ಗಾವಣೆಗೆ ಸಮ್ಮತಿಸಿಲ್ಲ. ಅವರು ಹೈದರಾಬಾದ್‌ಗೆ ಹೋಗಿ ಕುಳಿತಿದ್ದು, ಸಮಸ್ಯೆಗೆ ಕಾರಣವಾಗಿದೆ ಎಂದರು.

ಇದನ್ನು ಒಪ್ಪದ ಕಾರ್ಮಿಕರು ಎಲ್ಲ ಸಮಸ್ಯೆಯ ರೂವಾರಿ ನೀವೆ ಆಗಿದ್ದೀರಿ. ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶಸ್ತಿ ಮೇಲ್ಮನವಿ ಸಹ ನೀವೆ ಸಲ್ಲಿಸಿದ್ದೀರಿ. ಎಲ್ಲ ಸೇರಿಕೊಂಡು ಕಾರ್ಮಿಕರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದೀರಿ ಎಂದು ಕೈಯ್ಯಲ್ಲಿದ್ದ ವಿಷದ ಬಾಟಲಿ ಮುಚ್ಚಳ ತೆಗೆದು ವಿಷ ಕುಡಿಯಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿಗಳನ್ನು ಕಿತ್ತು ಬಿಸಾಡಿದರು.

 ಈ ವೇಳೆ ಪಿಎಸ್‌ಐ ಸಿದ್ದನಗೌಡ ಮಾತನಾಡಿ, ತಾವು ಕಾರ್ಮಿಕರ ಪರವಾಗಿದ್ದು, ಅನ್ಯಾಯವಾಗಲು ಬಿಡುವುದಿಲ್ಲ, ಆದರೆ ಠಾಣೆಗೆ ಯಾವುದೇ ಸೂಚನೆ ನೀಡದೆ ಏಕಾಏಕಿ ಪ್ರತಿಭಟನೆ ನಡೆಸುವುದು ತಪ್ಪು ಎಂದು ತಿಳಿಸಿದರು.

ಆಗ ಕಾರ್ಮಿಕರು ಕಳೆದ 25-30 ವರ್ಷಗಳಿಂದ ಇವರ ಕಾರ್ಖಾನೆಯಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಶ್ರಮವಹಿಸಿ ದುಡಿದಿದ್ದೇವೆ, ಅನೇಕ ತೊಂದರೆಗಳ ಮಧ್ಯೆಯೂ ಎಂದೂ ಪ್ರತಿಭಟನೆಯನ್ನಾಗಲಿ, ಮುಷ್ಕರವನ್ನಾಗಲಿ ಮಾಡಿಲ್ಲ. ಮಾಲೀಕರು ಇದೆಲ್ಲ
ಮರೆತು ಏಕಾಏಕಿ ಕಂಪನಿಗೆ ಬೀಗ ಜಡಿದಿದ್ದಲ್ಲದೆ, ಯಾವುದೇ ಪರಹಾರ ನೀಡದೆ ಅಮಾನವೀಯವಾಗಿ ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಕಾರ್ಮಿಕರು ದೂರಿದರು.

ಕಂಪನಿಯ ಉತ್ಪನ್ನಗಳು ದೇಶ ವಿದೇಶಗಳಿಗೆ ರಫ್ತಾಗುತ್ತಿದ್ದವು. ಕಂಪನಿ ಉತ್ತಮ ಲಾಭದಲ್ಲಿದ್ದರೂ ಪಾಲುದಾರರು ತಮ್ಮ ವೈಯಕ್ತಿಕ ಒಳ ಜಗಳಕ್ಕೆ ಕಂಪನಿ ಬಲಿ ಕೊಟ್ಟಿದ್ದಲ್ಲದೆ, ಬಾಕಿ ವೇತನ, ಪರಿಹಾರ ನೀಡದೆ ನೂರಾರು ಕಾರ್ಮಿಕ ಕುಟುಂಬಗಳಿಗೆ ಸಂಕಷ್ಟ
ತಂದೊಡ್ಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಸತ್ಯನಾರಾಯಣರಾವ್‌ ಮಾತನಾಡಿ, ಕಾರ್ಮಿಕರ ಪರಿಹಾರಕ್ಕಾಗಿ ಹಣ ಮೀಸಲಿಟ್ಟಿದ್ದು, ತಾಂತ್ರಿಕ ಸಮಸ್ಯೆ ಬಗೆಹರಿದ ತಕ್ಷಣ ಎಲ್ಲಾ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಪಿಎಸ್‌ಐ ಸಿದ್ದನಗೌಡ ವಿವಾದ ನ್ಯಾಯಾಲಯದಲ್ಲಿದೆ. ಆದರೂ ಹೈದರಾಬಾದ್‌ ನಲ್ಲಿರುವ ಒಬ್ಬ ಪಾಲುದಾರರನ್ನು ಶೀಘ್ರ ಕರೆಸಿ
ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು. ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ಕಾರ್ಮಿಕ ಮುಖಂಡರಾದ ರಾಜಶೇಖರ, ಲಕ್ಷ್ಮಣ್‌ ಕೆ. ವೀರೇಶ್‌, ಪರಮೇಶ್‌, ಕೊಟ್ರೇಶಪ್ಪ, ಬಿ. ಕೆಂಚಪ್ಪ, ಎಂ. ನಾಗರಾಜ್‌, ಎಸ್‌. ರುದ್ರೇಶ್‌, ಜಿ.ಎಂ. ಮಲ್ಲಿಕಾರ್ಜುನ್‌, ಆರ್‌. ನಾಗರಾಜ್‌, ಹನುಮಂತಪ್ಪ ಮತ್ತಿತರರಿದ್ದರು.

Trending videos

Back to Top