CONNECT WITH US  

ಇಷ್ಟಲಿಂಗ ಧರಿಸುವವರಿಗೆ ಜಾತಿಯಿಲ್ಲ

ಹರಪನಹಳ್ಳಿ: ಗುರುವಿನ ಮೂಲಕ ಲಿಂಗ ಧರಿಸಿದರೆ ನರ ಜನ್ಮ ಹೋಗಿ ಹರ ಜನ್ಮ ಪ್ರಾಪ್ತವಾಗುತ್ತದೆ. ಇಷ್ಟಲಿಂಗವನ್ನು ಧರಿಸುವವರಿಗೆ ಯಾವ ಜಾತಿಯೂ ಇಲ್ಲ. ಲಿಂಗಾಯತ ಧರ್ಮ ಅತ್ಯಂತ ಸರಳವಾದ ಧರ್ಮ ಎಂದು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಾಗಳಿ ಗ್ರಾಮದಲ್ಲಿ ಬುಧವಾರ ಸಾಣೇಹಳ್ಳಿ ಶಿವಾನುಭವ ಸಮಿತಿ ಹಮ್ಮಿಕೊಂಡಿದ್ದ ವಚನಕಾರರ ತಾತ್ವಿಕ ಚಿಂತನಾಗೋಷ್ಠಿಯ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಲಿಂಗವಾದ ನಿನ್ನ ದೇವರನ್ನು ನೀನೇ ಮುಟ್ಟಿ ಪೂಜಿಸಬಹುದು. ಅನ್ಯ ಧರ್ಮಗಳಲ್ಲಿ ಪೂಜಾರಿ-ಪುರೋಹಿತರ ಮಧ್ಯಪ್ರವೇಶವಾಗುತ್ತದೆ. ಬಸವಣ್ಣ "ದೇವನೊಬ್ಬ ನಾಮ ಹಲವು' ಅಲ್ಲಮ ಪ್ರಭು "ಕಲ್ಲ ಕಲ್ಲ ಮೇಲೆ ಕಡೆದರೆ ದೇವರೆತ್ತ ಹೋದರೋ" ಎಂದು ದೇವರ ಬಗ್ಗೆ ಜನರಲ್ಲಿ ಇದ್ದ ಅಜ್ಞಾನವನ್ನು ದೂರ ಮಾಡಿ ಸರಿಯಾದ ತಿಳಿವಳಿಕೆ ಮೂಡಿಸಿದರು.

ಅಕ್ಕಿಗೆ ಸಂಸ್ಕಾರ ಕೊಟ್ಟರೆ ಅನ್ನವಾಗುವಂತೆ, ಕಲ್ಲಿಗೆ ಸಂಸ್ಕಾರ ಕೊಟ್ಟರೆ ಮೂರ್ತಿಯಾಗುವಂತೆ ಮನುಷ್ಯನಿಗೆ ಸಂಸ್ಕಾರ ಕೊಟ್ಟರೆ ಶರಣನಾಗುತ್ತಾನೆ. ಈ ನಿಟ್ಟಿನಲ್ಲಿ ಪಂಚಾಚಾರಗಳ ಮೂಲಕ ಶರಣರು ಸಂಸ್ಕಾರ ನೀಡಿದರು. ಪಂಚಾಚಾರದಲ್ಲಿ ಮೊದಲನೆಯದು ಲಿಂಗಾಚಾರ. ಇಡೀ ವಿಶ್ವವನ್ನೇ ಪ್ರತಿನಿಧಿಸುವಂಥದ್ದು ಲಿಂಗ ಎಂದರು.

ಯಾರೂ ಇಂಥ ಜಾತಿಯಲ್ಲಿಯೇ ಹುಟ್ಟಬೇಕು ಎಂದು ಅರ್ಜಿ ಸಲ್ಲಿಸಿ ಹುಟ್ಟಿಲ್ಲ. ಆಕಸ್ಮಿಕವಾಗಿ ಹುಟ್ಟಿದ್ದೇವೆ. ಹುಟ್ಟಿದ ಮೇಲೆ ನಮ್ಮ ರೀತಿನೀತಿಗಳಿಂದ ಹುಟ್ಟಿದ ಜಾತಿಯನ್ನೂ ಮೀರಿ ವಿಶ್ವಮಾನವರಾಗಿ ಬೆಳೆಯಬೇಕು. ಇಂದು ಜಗತ್ತು ವೇಗದ ನಾಗಾಲೋಟದಲ್ಲಿದೆ. ಈ ಕಾರಣ ನೆಮ್ಮದಿ ಮರೆಯಾಗಿ ಉದ್ವೇಗವೇ ಬದುಕಿನಲ್ಲಿ ತುಂಬಿದೆ. ಹಣ ಸಂಪಾದನೆಯನ್ನು ಮುಂದು ಮಾಡಿಕೊಂಡು ನೈತಿಕ ನೆಲೆಗಟ್ಟನ್ನು ಕಳೆದುಕೊಂಡು, ಧಾರ್ಮಿಕ ಅಧಃಪತನ ಹೊಂದಿರುವುದೇ ನೆಮ್ಮದಿ ಮರೀಚಿಕೆಯಾಗಲು ಕಾರಣ. ಶರಣರು ವಿಚಾರ ಮತ್ತು ಆಚಾರಗಳಿಗೆ ಸಮಾನವಾದ ಒತ್ತು ನೀಡಿದರು. ನುಡಿ ಜಾಣರಾದರೆ ಸಾಲದು; ನಡೆ ಧೀರರಾಗಬೇಕು. ನಡೆ-ನುಡಿ ಸಿದ್ಧಾಂತವಾಗಬೇಕು ಎಂದು ಹೇಳಿದರು.

ತರಳಬಾಳು ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರ ಜೀವನ ಚರಿತ್ರೆಯನ್ನು ಇಲ್ಲಿನ ಬಾಗಳಿ ದೇವಕವಿ "ಮರುಳಸಿದ್ಧ ಸಾಂಗತ್ಯ'ದ ಮೂಲಕ ಪ್ರಚುರ ಪಡಿಸಿದರು. ಅಂಥ ಕವಿಯನ್ನು ನೀಡಿದ ಗ್ರಾಮ ಬಾಗಳಿ ಎಂದು ತಿಳಿಸಿದರು. 

ದಾವಣಗೆರೆಯ ನಿವೃತ್ತ ಪ್ರಾಚಾರ್ಯ ಲೋಕೇಶ ಒಡೆಯರ್‌ ಪಂಚಾಚಾರ ವಿಷಯ ಕುರಿತು ಉಪನ್ಯಾಸ ನೀಡಿ, ಬಸವ ಧರ್ಮದಲ್ಲಿ ಅಷ್ಟಾವರಣ, ಷಟಸ್ಥಲ ಹಾಗೂ ಪಂಚಾಚಾರಗಳಾದ "ಶಿವಾಚಾರ, ಸದಾಚಾರ, ಲಿಂಗಾಚಾರ, ಭತ್ಯಾಚಾರ, ಗಣಾಚಾರ' ಮುಖ್ಯವಾಗಿವೆ. ಸುಖ, ನೆಮ್ಮದಿ, ಶಾಂತಿಯಿಂದ ಬದುಕಲು ಬಯಸುವ ಪ್ರತಿಯೊಬ್ಬರೂ ಈ ಪಂಚಾಚಾರಗಳನ್ನು ಆಚರಣೆಗೆ ತಂದುಕೊಳ್ಳಬೇಕು. ನಾನಾ ಜಾತಿಯ, ಧರ್ಮದ ಜನರನ್ನು ಒಗ್ಗೂಡಿಸಲು ಈ ಪಂಚಾಚಾರದ ಸೂತ್ರಗಳನ್ನು ಬಸವಾದಿ ಶರಣರು ರೂಪಿಸಿದರು ಎಂದು ತಿಳಿಸಿದರು.

ಗ್ರಾಮದಲ್ಲಿ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಕೂಲಹಳ್ಳಿಯ ಗೋಣಿಬಸವೇಶ್ವರ ಸಂಸ್ಥಾನಮಠದ ಪಟ್ಟದ ಚಿನ್ಮಯಿ ಸ್ವಾಮೀಜಿ, ಜಿ.ಪಂ ಸದಸ್ಯ ಉತ್ತಂಗಿ ಮಂಜುನಾಥ್‌, ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷ ಮಂಜುನಾಥ ಗುಂಡಗತ್ತಿ, ಬಸವರಾಜ ಶಿವಪುರ, ಚಂದ್ರಶೇಖರ ತಾಳ್ಯ, ಭಾಗ್ಯಮ್ಮ, ಕೆಂಚನಗೌಡ, ಮಂಜುನಾಥ್‌, ಪಾಟೀಲ್‌, ಯತಿರಾಜು, ವಾಮದೇವಪ್ಪ, ಲೋಕೇಶ್‌, ಹೆಚ್‌.ಎಸ್‌.ದ್ಯಾಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top