ಇಂಧನ ದರ ಏರಿಕೆ ಖಂಡಿಸಿ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ದರ ತಿಂಗಳಲ್ಲಿ 3-4 ಬಾರಿ ಏರಿಕೆ ಮತ್ತು ನರೇಂದ್ರ ಮೋದಿ ನೇತೃತ್ವದ ಜನವಿರೋಧಿ ನೀತಿ ಖಂಡಿಸಿ, ಶನಿವಾರ ಮಹಾನಗರಪಾಲಿಕೆ ಆವರಣದ ಗಾಂಧೀಜಿ ಪ್ರತಿಮೆ ಮುಂದೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ಪ್ರತಿಭಟಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ದಿನೇ ದಿನೆ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ಒಂದಿಷ್ಟೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂಥಹ ಜನವಿರೋಧಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಿತ್ತೂಗೆಯಲು ಜನತೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರದ ಆಡಳಿತದ ಅವಧಿಯಲ್ಲಿ ಅಂತಾರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರಲ್ಗೆ 130 ಡಾಲರ್ ದರಕ್ಕೆ ಇದ್ದಾಗ ಭಾರತದಲ್ಲಿ 50 ರೂ. ಲೀಟರ್ ಡಿಸೇಲ್, 60 ರೂ. ಲೀಟರ್ ಪೆಟ್ರೋಲ್ ಹಾಗೂ 380 ರೂಪಾಯಿಗೆ ಅಡುಗೆ ಅನಿಲ ದೊರೆಯುತ್ತಿತ್ತು. ಆ ಸಂದರ್ಭದಲ್ಲಿ ಇಂಧನ ಬೆಲೆ ಒಂದು ರೂಪಾಯಿ ಏರಿಸಿದರೂ ಬಿಜೆಪಿಯವರು ಪ್ರತಿಭಟಿಸುತ್ತಿದ್ದರು.
ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿದಿದ್ದರೂ ನಮ್ಮಲ್ಲಿ 83 ರೂ. ಲೀಟರ್ ಪೆಟ್ರೋಲ್, 74 ರೂ. ಲೀಟರ್ ಡಿಸೇಲ್ ಹಾಗೂ ಅಡುಗೆ ಅನಿಲ 820 ರೂ. ಬೆಲೆ ಏರಿದೆ. ನರೇಂದ್ರ ಮೋದಿ ಸರ್ಕಾರ ಜನರ ರಕ್ತ ಹೀರುತ್ತಿದೆ ಎಂದು ಅವರು ಟೀಕಿಸಿದರು.
2 ವರ್ಷದ ಹಿಂದೆ ನೋಟುಗಳ ರದ್ದತಿ ಮಾಡಿ, ದೇಶದ ಬಡವರಿಗೆ ದ್ರೋಹ ಬಗೆದು ಉದ್ಯೋಗ ಕಿತ್ತುಕೊಂಡರು.
ಮೋದಿ ಆಪ್ತರು ಬ್ಯಾಂಕ್ಗಳಿಂದ 70 ಸಾವಿರ ಕೋಟಿ ಸಾಲ ಪಡೆದು ದೇಶ ಬಿಟ್ಟು ಹೋಗಿದ್ದಾರೆ. ಅವರ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ ಎಂದು ದೂರಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಧನ ಬೆಲೆ ಏರಿಕೆ, ಕರೆನ್ಸಿ ರದ್ದತಿ, ರಫೆಲ್ ವಿಮಾನ ಖರೀದಿಯಲ್ಲಿನ
ಅವ್ಯವಹಾರ ಬಗ್ಗೆ ಜನತೆಗೆ ತಿಳಿಸಿ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನ ಕಿತ್ತೂಗೆಯಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು. ರಾಜ್ಯ ಯುವ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಮೈನುದ್ದೀನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬದಲಾಯಿಸಿ, ದೇಶ ಉಳಿಸಿ ಎಂಬ ಜನಾಂದೋಲನವನ್ನು
ಯುವ ಕಾಂಗ್ರೆಸ್ ಹಮ್ಮಿಕೊಳ್ಳಲಿದೆ ಎಂದರು.
ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಅಲ್ಲಾವಲಿ ಘಾಜಿಖಾನ್, ಕೆ.ಜಿ. ರಹಮತ್ವುಲ್ಲಾ, ಎಚ್.ಕೆ. ಮುಶರಫ್,
ಅಶ್ರಫ್ ಅಲಿ, ಬಿ. ವಿನಾಯಕ, ಡಿ. ಶಿವಕುಮಾರ್, ರಮೇಶ್, ಎಂ.ಜಿ. ನಾಗೇಂದ್ರ, ಲಿಯಾಖತ್ ಅಲಿ, ಮಮತಾಜ್ ಬೇಗಂ, ಉಮಾತೋಟಪ್ಪ, ಇತರರು ಎನ್ಡಿಎ ಸರ್ಕಾರದ ನೀತಿ ವಿರೋಧಿಸಿ ಮಾತನಾಡಿದರು.