CONNECT WITH US  

ಸಾಲ ಮರು ಪಾವತಿಗಾಗಿ ರೈತರಿಗೆ ನೋಟಿಸ್‌

ಹರಪನಹಳ್ಳಿ: ಸರ್ಕಾರ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಪದೇ ಪದೇ ಹೇಳುತ್ತಿದೆ. ಆದರೆ ಬ್ಯಾಂಕ್‌ನವರು ಮಾತ್ರ ಸಾಲ ವಸೂಲಾತಿ ಪ್ರಕ್ರಿಯೆ ನಿಲ್ಲಿಸಿಲ್ಲ. ರೈತರ ಮನೆಗೆ ನೋಟಿಸ್‌ ಕಳಿಸಿದ ಪರಿಣಾಮ ಬಂಧನದ ಭಯದಿಂದ ಆತಂಕಗೊಂಡ ಕೆಲವು ರೈತರು ಶನಿವಾರ ನ್ಯಾಯಲಯಕ್ಕೆ ಆಗಮಿಸಿದ್ದರು.

ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ್‌ ಅದಾಲತ್‌ನಲ್ಲಿ ಪಾಲ್ಗೊಂಡು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ಮಾಡಿದರು. ತಾಲೂಕಿನ ಕರೆಕಾನಹಳ್ಳಿ ಗ್ರಾಮದ ಹನುಮವ್ವ, ಸೋನಾಬಾಯಿ
ಸೇರಿದಂತೆ ಹಲವರಿಗೆ ಎಸ್‌ಬಿಐ ಬ್ಯಾಂಕ್‌ನ ಮಾಡ್ಲಿಗೇರಿ ಶಾಖೆಯಿಂದ ಬೆಳೆ ಸಾಲ ಸಾಲ ಮರುಪಾವತಿಸುವಂತೆ ನೋಟಿಸ್‌ ಕಳಿಸಲಾಗಿದೆ. 

ಅಲ್ಲದೇ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಿಂದ ನೋಟಿಸ್‌ ಬಂದಿದೆ.

ಬ್ಯಾಂಕ್‌ ನೋಟಿಸ್‌ನಲ್ಲಿ ಏನಿದೆ?: ಕರೆಕಾನಹಳ್ಳಿ ಗ್ರಾಮದ ಹನುಮವ್ವ ಎಂಬುವವರರಿಗೆ ಬ್ಯಾಂಕ್‌ ನಿಂದ ಬಂದಿರುವ ಪತ್ರದಲ್ಲಿ ಒಂದೇ ಕಂತಿನಲ್ಲಿ ಬಾಕಿ ಇತ್ಯರ್ಥ ಗ್ರಾಹಕರಿಗೆ ಋಣ ಸಂಧಾನ ಯೋಜನೆ ಪ್ರಕಟಿಸಿದೆ. ಯೋಜನೆ ಅನ್ವಯ,
ಭರಿಸಬೇಕಾದ ಬಡ್ಡಿಯ ಮನ್ನಾ ಹಾಗೂ 31.3.2018ರಂದು ಬಾಕಿಯಿರುವ ಮೊತ್ತದಲ್ಲಿ ಶೇ.30ರಿಂದ ಶೇ.50ರಷ್ಟು ಬಾಕಿ ಪರಿಹಾರ ನಿಡುವ ಅವಕಾಶವಿದೆ. ಅರ್ಜಿಯೊಂದಿಗೆ ಶೇ.10ರಷ್ಟು, 30 ದಿನದೊಳಗಾಗಿ ಶೇ.20ರಷ್ಟು, 90 ದಿನದೊಳಗಾಗಿ ಶೇ.70ರಷ್ಟು ಪಾವತಿಸಬಹುದು. 30 ದಿನದೊಳಗಾಗಿ ಒಂದೇ ಕಂತಿನಲ್ಲಿ ಪಾವತಿಸಿದ್ದಲ್ಲಿ ಶೇ.5ರಷ್ಟು ಹೆಚ್ಚುವರಿಯಾಗಿ ರಯಿಯಾತಿ ಕೊಡಲಾಗುವುದು ಎಂದು ತಿಳಿಸಲಾಗಿದೆ. ಪೂರ್ಣ ಹಣ ಕಟ್ಟಿದ ನಂತರ ಋಣಭಾರ ಪತ್ರ
ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರ ಸಾಲ ಮನ್ನಾ ಮಾಡಿದ್ದರೂ ನಾವು ಏಕೆ ಸಾಲ ಮರು ಪಾವತಿಸಬೇಕು. ಸ್ವಲ್ಪ ಮಟ್ಟಿನ ಬಡ್ಡಿ ಕಡಿಮೆ ಮಾಡುತ್ತೇವೆ, ಸಾಲ ಕಟ್ಟಿ ಎಂಬ ಆದೇಶ ನೀಡುತ್ತಾರೆ. ವಿಳಂಭವಾದ್ರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ಬೇರೆ
ಬ್ಯಾಂಕಿನವರು ನೀಡುತ್ತಿದ್ದಾರೆ. ಹಾಗಾದರೆ ಸರ್ಕಾರ ಸಾಲ ಮನ್ನಾ ಮಾಡಿದ್ದು ಯಾರಿಗೆ, ಸಾಲ ಮನ್ನಾ ಆದೇಶ ಯಾವಾಗ ಬರುತ್ತದೆ ಎನ್ನುವುದು ರೈತರ ಪ್ರಶ್ನೆಯಾಗಿದೆ.


Trending videos

Back to Top