CONNECT WITH US  

ಸಚಿವರ ಹಿಂಬಾಲಕರಂತೆ ಪೊಲೀಸರ ವರ್ತನೆಗೆ ಆಕ್ರೋಶ

ಅಮೃತ ದೇಸಾಯಿ ನೇತೃತ್ವದಲ್ಲಿ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ: ನಗರದ ಡಿಸಿ ಕಚೇರಿ ಎದುರು ಧಾರವಾಡ ಗ್ರಾಮೀಣ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಪ್ರಶಾಂತ ನಾಯ್ಕ, ಪಿಎಸ್‌ಐ ಆನಂದ ಠಕ್ಕನವರ ಸಚಿವ ವಿನಯ್‌ ಕುಲಕರ್ಣಿ ಅವರ ಹಿಂಬಾಲಕರಂತೆ ವರ್ತಿಸುತ್ತಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಕಚೇರಿ ಎದುರು ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಮೂಲಕ ಪೊಲೀಸ್‌ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವುದರ ಜೊತೆಗೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸೋಲುತ್ತೇನೆಂದು ಕಂಗಾಲಾಗಿದ್ದಾರೆ. ಹೀಗಾಗಿ ಕೆಲವರಿಗೆ ನೇರವಾಗಿ ಧಮ್ಕಿ ಹಾಕಿದರೆ, ಇನ್ನು ಕೆಲವರಿಗೆ ತಮ್ಮ ಹಿಂಬಾಲಕರಿಂದ ಒತ್ತಡ ಹಾಕುವ ಕೆಲಸ ಮಾಡಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು. 

ಬಿಜೆಪಿ ಮುಖಂಡ ಗುರುನಾಥಗೌಡ ಅವರಿಗೆ ಪೊಲೀಸರು ಎನ್‌ಕೌಂಟರ್‌ ಮಾಡುತ್ತೇವೆ ಎಂಬುದಾಗಿ ಹೇಳಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಡಿವೈಎಸ್ಪಿ  ಚಂದ್ರಶೇಖರ,
ಗರಗ ಪಿಎಸ್‌ಐ ಸಂಗಮೇಶ ಹಾಲಬಾವಿ ಅವರ ವಿರುದ್ಧ ಒಂದು ವಾರದ ಹಿಂದೆ ದೂರು ನೀಡಿದರೂ ಈವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಈಗ ಮತ್ತೆ ಧಾರವಾಡ ಪೊಲೀಸ್‌ ಠಾಣೆಯ ಸಿಪಿಐ ಪ್ರಶಾಂತ ನಾಯ್ಕ, ಪಿಎಸ್‌ಐ ಆನಂದ ಠಕ್ಕನವರ ವಿರುದ್ಧವೂ ದೂರು ನೀಡಿದ್ದೇವೆ ಎಂದರು.

ಬಿಜೆಪಿ ಮುಖಂಡ ಗುರುನಾಥಗೌಡ ಮಾತನಾಡಿ, ಈಗಾಗಲೇ ಸಹೋದರ ಯೋಗಿಶಗೌಡ ಸಾವಿಗೆ ನ್ಯಾಯ ಕೇಳಿ ನಾವು
ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದೇವೆ. ಅಲ್ಲಿ ವಿಚಾರಣೆ ಹಂತದಲ್ಲಿದೆ. ಕ್ಷೇತ್ರದ ಜನರಿಗೆ ಸತ್ಯಾಂಶ ಗೊತ್ತಿದ್ದು, ಜನತೆ ಇದಕ್ಕೆ ತಕ್ಕ ನ್ಯಾಯ ನೀಡುವ ವಿಶ್ವಾಸವಿದೆ ಎಂದರು. ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನಿರ್ಮಲಾ ಜವಳಿ, ಶಂಕರ ಶೆಳಕೆ, ದತ್ತಾ ಡೋರ್ಲೆ, ನಿಜನಗೌಡ ಪಾಟೀಲ, ಮಹೇಶ ಎಲಿಗಾರ, ಈರಣ್ಣ ಹಪ್ಪಳ್ಳಿ, ವೀರೇಶ ಅಂಚಟಗೇರಿ, ರಾಕೇಶ ನಾಜರೆ, ಮಂಜು ನಡಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಉಗ್ರ ಹೋರಾಟ
ವಾರ್ಡ್‌ ನಂ.10ರಲ್ಲಿ ನೇರವಾಗಿ ಸಚಿವ ವಿನಯ ಕುಲಕರ್ಣಿ ಅವರು ಶ್ರೀನಿವಾಸ ಕೋಟ್ಯಾನ, ಸಚಿನ ಹಲಗೇರಿ ಅವರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೀಗ ಪೊಲೀಸರಿಂದ ಗುರುನಾಥ ಗೌಡ ಅವರಿಗೆ ಬೆದರಿಕೆ ಹಾಕಿಸಿದ್ದಾರೆ. ಹೀಗಾಗಿ ಈ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.
„ಅಮೃತ ದೇಸಾಯಿ,
ಬಿಜೆಪಿ ಅಭ್ಯರ್ಥಿ

Trending videos

Back to Top