CONNECT WITH US  

ಆಸ್ತಿಯಾಯ್ತು, ಈಗ ಸಿಬ್ಬಂದಿ ಇಬ್ಬಂದಿ !

ಕೆಳಹಂತದ ನೌಕರರು ಮಾತ್ರ ಎರವಲು ಬಿಆರ್‌ಟಿಎಸ್‌ನಿಂದ ವಾಕರಸಾ ಸಂಸ್ಥೆಗೆ ಮತ್ತೊಂದು  ಗುನ್ನ

ಹುಬ್ಬಳ್ಳಿ: ಬೇಷರತ್ತಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಿರ ಹಾಗೂ ಚರಾಸ್ತಿ ಕೇಳಲಿರುವ ಬಿಆರ್‌ಟಿಎಸ್‌ ಕಂಪನಿ ಇಲ್ಲಿನ ಸಿಬ್ಬಂದಿಯ ತಾತ್ಕಾಲಿಕ ನಿಯೋಜನೆಗೆ ಸಿದ್ಧತೆ ನಡೆಸಿದೆ. ಸಿಬ್ಬಂದಿ ವರ್ಗಾವಣೆಗೆ ಹತ್ತು ಹಲವು ಕರಾರುಗಳನ್ನು ಹಾಕಿದ್ದು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳ ಹೊಸ ನೇಮಕಾತಿಗೆ ಹೆಚ್ಚು ಆಸಕ್ತಿ ಹೊಂದಿರುವಂತೆ ಕಾಣುತ್ತಿದೆ.

ಅವಳಿ ನಗರ ತ್ವರಿತ ಸಾರಿಗೆ ವ್ಯವಸ್ಥೆಗೆ ವಾಯವ್ಯ ಸಾರಿಗೆ ಸಂಸ್ಥೆ ಅಡಿಯಲ್ಲೇ ಪ್ರತ್ಯೇಕ ನಗರ ವಿಭಾಗೀಯ ಕಚೇರಿ ಆರಂಭಿಸಿ, ಈ ಮೂಲಕ ನಿರ್ವಹಿಸುವುದು ಹಾಗೂ ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸುವುದು ಹಿಂದಿನ ಸಭೆಗಳ ನಿರ್ಧಾರವಾಗಿತ್ತು. ಹೀಗಾಗಿಯೇ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಸಂಚರಿಸುವ ಬಸ್‌ಗಳ ಚಾಲನೆಗಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಸುಮಾರು 200ಕ್ಕೂ ಹೆಚ್ಚು ಚಾಲಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಸಾರಿಗೆ ಸಂಸ್ಥೆಯ ಆಸ್ತಿಯನ್ನು ಯಾವುದೇ ಕರಾರು ಇಲ್ಲದೆ ಕೇಳುತ್ತಿರುವ ಬಿಆರ್‌ಟಿಎಸ್‌, ಸಿಬ್ಬಂದಿ ವರ್ಗಾವಣೆಗೆ ಹಲವು ನಿಯಮಗಳಿಟ್ಟಿರುವುದು ಕಾರ್ಮಿಕರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಹಳೇ ಒಪ್ಪಂದಕ್ಕೆ ತದ್ವಿರುದ್ಧವಾಗಿ ಸಂಸ್ಥೆಯ ಆಸ್ತಿ ಪಡೆಯಲು ಸರಕಾರದ ಮಟ್ಟದಲ್ಲಿ ಲಾಬಿ ನಡೆಸಿರುವುದೇ ತಪ್ಪು. ಈ ನಡುವೆಯೇ ಸಿಬ್ಬಂದಿಯನ್ನು ತಾತ್ಕಾಲಿಕ ನಿಯೋಜನೆ ಆಧಾರದಲ್ಲಿ ಪಡೆಯಲು ನಿರ್ಧರಿಸುವುದು ಎಷ್ಟು ಸೂಕ್ತ ಎನ್ನುವ ಆಕ್ರೋಶ ಕಾರ್ಮಿಕ ವಲಯದಿಂದ ವ್ಯಕ್ತವಾಗಿದೆ.

ವಾಯವ್ಯ ಸಾರಿಗೆ ಸಂಸ್ಥೆ ಸ್ಥಿರ ಹಾಗೂ ಚರಾಸ್ತಿ ಕಬಳಿಸಲು ಬಿಆರ್‌ ಟಿಎಸ್‌ ಕಂಪನಿ ಹುನ್ನಾರ ನಡೆಸಿರುವ ಕುರಿತು 'ಉದಯವಾಣಿ' ವಿಸ್ತೃತ ವರದಿ ಪ್ರಕಟಿಸಿದ್ದು, ಕಾರ್ಮಿಕ ಸಂಘಟನೆಗಳು ಎಚ್ಚೆತ್ತಿವೆ. ಸದ್ಯ ಬಿಆರ್‌ಟಿಎಸ್‌ ನಡೆಯಿಂದ ಆಘಾತ ಹಾಗೂ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿದೆ.

ಸಿಬ್ಬಂದಿ ಬೇಡಿಕೆ: ಬಿಆರ್‌ಟಿಎಸ್‌ ಹಾಗೂ ಪೂರಕ ಸೇವೆಗೆ 775 ಚಾಲಕರು ಹಾಗೂ 665 ನಿರ್ವಾಹಕರು, 100 ಭದ್ರತಾ ಮತ್ತು ಆಡಳಿತ ಸಿಬ್ಬಂದಿ ಅಗತ್ಯವಿದೆ. ಕೇವಲ 6 ಅಧಿಕಾರಿಗಳನ್ನು ನೀಡುವಂತೆ ಬೇಡಿಕೆಯಿದೆ. ಇವರೆಲ್ಲರ ಸೇವೆ ಕೇವಲ ಬಸ್‌ ನಿಲ್ದಾಣ ಹಾಗೂ ಘಟಕಗಳಿಗೆ ಮಾತ್ರ ಸೀಮಿತ. ಕೇಂದ್ರ ಕಚೇರಿಯ ಕಾರ್ಯನಿರ್ವಹಣೆ ಮಾಡಲು ಹೊಸ ನೇಮಕಾತಿಗೆ ಬಿಆರ್‌ ಟಿಎಸ್‌ ಮನಸ್ಸು ಮಾಡಿದಂತಿದೆ. ಮುಂದಿನ ದಿನಗಳಲ್ಲಿ ನಗರ ಹಾಗೂ ಉಪನಗರ ಸಾರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಮಾರ್ಗಗಳನ್ನು ಬಿಆರ್‌ಟಿಎಸ್‌ ಹೆಸರಲ್ಲಿ ನೀಡಬೇಕೆಂಬುದು ಪ್ರಮುಖವಾಗಿದೆ.

ಹೊಣೆಗಾರಿಕೆ ಇಲ್ಲ: ಬಿಆರ್‌ಟಿಎಸ್‌ ಇಷ್ಟೊಂದು ಸಂಖ್ಯೆಯಲ್ಲಿ ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆ ಕೋರಿದ್ದು, ಈ ಸಿಬ್ಬಂದಿಗೆ ನೀಡಬೇಕಾದ ಹಿಂಬಾಕಿ ಹಾಗೂ ಬಾಕಿ ಉಳಿದಿರುವ ಸೌಲಭ್ಯಗಳ ಪಾವತಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಈ ಸಿಬ್ಬಂದಿ ಹೊಣೆಗಾರಿಕೆ ವಾಯವ್ಯ ಸಾರಿಗೆ ಸಂಸ್ಥೆ ಮೇಲೆ ಬೀಳಲಿದೆ. ದುಡಿಯುವ ಸಿಬ್ಬಂದಿ, ವಾಹನಗಳು ಇಲ್ಲವಾದ ಮೇಲೆ ಸಿಬ್ಬಂದಿಯ ಬಾಕಿ ಕೊಡುವುದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆ. ಬಾಕಿ ಉಳಿದ ಸೌಲಭ್ಯಗಳನ್ನು ಪಡೆಯಲು ದೊಡ್ಡ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಬಿಆರ್‌ಟಿಎಸ್‌ ಸಂಸ್ಥೆಗೆ ಹೋದರೆ ನಮ್ಮ ಬಾಕಿ ಪಾವತಿಗೆ ಪಂಗನಾಮ ಎನ್ನುವ ಆತಂಕ ವಾಕರಸಾ ಸಿಬ್ಬಂದಿಯದ್ದು.

ನೇಮಕಾತಿಗೆ ಒಲವು: ಪ್ರತ್ಯೇಕ ಸಂಸ್ಥೆ ಮಾಡಿದರೆ ಲಾಭ ಗಳಿಸಬಹುದೆಂಬ ನಿರೀಕ್ಷೆಯಲ್ಲಿ ಬಿಆರ್‌ಟಿಎಸ್‌ ಅಧಿಕಾರಿಗಳು ಇದ್ದಂತೆ ಕಾಣುತ್ತಿದೆ. ಆದರೆ ರಾಜ್ಯ ಸಾರಿಗೆ ಇತಿಹಾಸದಲ್ಲಿ ಸರಕಾರಿ ಒಡೆತನದ ಸಂಸ್ಥೆಗಳು ಲಾಭ ಗಳಿಸಿದ ಉದಾಹರಣೆಗಳಿಲ್ಲ. ಆದರೆ ಪ್ರತ್ಯೇಕ ನಿಗಮದ ಪ್ರಸ್ತಾವನೆಗೆ ಮುಂದಾಗಿರುವ ಬಿಆರ್‌ ಟಿಎಸ್‌ ಕೇಂದ್ರ ಕಚೇರಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಹೊಸ ಹುದ್ದೆಗಳಾದ ಎಂಡಿ, ಹಣಕಾಸು, ಕಾನೂನು, ಸಂಚಾರ, ತಾಂತ್ರಿಕ, ಕಾಮಗಾರಿ, ಆಡಳಿತ ಸೇರಿದಂತೆ 13 ಶಾಖೆಗಳಿಗೆ ದೊಡ್ಡ ಸಂಬಳದ ಹಿರಿಯ ಅಧಿಕಾರಿಗಳು ಹಾಗೂ ಆಡಳಿತಾತ್ಮಕ ಸಿಬ್ಬಂದಿ ನೇಮಕಕ್ಕೆ ಒತ್ತು ನೀಡಿದಂತಿದೆ. ಪ್ರತ್ಯೇಕ ನಿಗಮ ಸರಕಾರಕ್ಕೆ ಹೆಚ್ಚುವರಿ ಹೊರೆ ವಿನಃ ಲಾಭ ದೂರದ ಮಾತು ಎಂಬುದು ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರ ಅಭಿಪ್ರಾಯ.

ಪ್ರತ್ಯೇಕ ನಿಗಮಕ್ಕೆ ಮಹಾಮಂಡಳ ಎಂದಿಗೂ ಬೆಂಬಲ ನೀಡುವುದಿಲ್ಲ. ಯಾವುದೇ ಕರಾರು ಇಲ್ಲದೆ ಯಥಾಸ್ಥಿತಿಯಲ್ಲಿ ಸಂಸ್ಥೆ ಆಸ್ತಿ ಬಿಟ್ಟುಕೊಡಬೇಕು ಎಂದು ಕೇಳುವ ಬಿಆರ್‌ಟಿಎಸ್‌ ಕಂಪೆನಿ, ಸಿಬ್ಬಂದಿ ವಿಚಾರದಲ್ಲಿ ಕರಾರುಗಳನ್ನಿಟ್ಟಿರುವುದು ಮುಂದಿನ ಖಾಸಗೀಕರಣದ ಸುಳಿವು ನೀಡುತ್ತವೆ. ಜು.4ರಂದು ನಡೆಯುವ ಮಹಾಮಂಡಳದ ಸಾಮಾನ್ಯ ಸಭೆಯಲ್ಲಿ ಸಾರಿಗೆ ಸಂಸ್ಥೆ ಆಸ್ತಿ ವರ್ಗಾಯಿಸದಂತೆ ಠರಾವು ಪಾಸ್‌ ಮಾಡಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸುತ್ತೇವೆ.
ಡಾ| ಕೆ.ಎಸ್‌. ಶರ್ಮಾ, ಕಾರ್ಮಿಕ ಹೋರಾಟಗಾರ

„ಹೇಮರಡ್ಡಿ ಸೈದಾಪುರ

Trending videos

Back to Top