CONNECT WITH US  

ಜಾರಕಿಹೊಳಿ ವಿರುದ್ಧ  ಡಿಕೆಶಿಗೆ ಹೆಬ್ಟಾಳಕರ ದೂರು

ಮಾವಿನ ಮರದಲ್ಲಿ ಹಣ್ಣಿದ್ದರೆ ಎಲ್ಲರೂ ಕಲ್ಲು ಹೊಡೆಯುತ್ತಾರೆ ಎಂದು ಸಂತೈಸಿದ ಡಿಕೆಶಿ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಪಕ್ಷದ ನಾಯಕರ ನಡುವಿನ ಬೀದಿ ರಂಪಾಟ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಹಾಗೂ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ನಡುವಿನ ಗೊಂದಲ ತಾರಕಕ್ಕೇರಿದೆ.

ಈ ಕುರಿತಂತೆ ಶುಕ್ರವಾರ ಲಕ್ಷ್ಮೀ ಹೆಬ್ಟಾಳ್ಕರ್‌ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ, ರಮೇಶ್‌ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದು, ಜಿಲ್ಲೆಯಲ್ಲಿ ತಮಗೆ ಆಗುತ್ತಿರುವ ನೋವಿನ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ಕಾರ್ಯಕರ್ತರ ಎದುರು ಹೀನಾಯವಾಗಿ ಮಾತನಾಡುತ್ತಾರೆ. ಇವರಿಗೆ ನಾನೇನು ಮಾಡಿದ್ದೇನೆ ಎಂದು ಲಕ್ಷ್ಮೀ ಹೆಬ್ಟಾಳ್ಕರ್‌ ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಸಾಂತ್ವನ ಹೇಳಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ. ಮಾವಿನ ಮರದಲ್ಲಿ ಹಣ್ಣಿದ್ದರೆ ಎಲ್ಲರೂ ಕಲ್ಲು ಹೊಡೆಯುತ್ತಾರೆ. ಇದರಿಂದ ನೀನೇನು ಹೊರತಲ್ಲ. ನಾವೂ ಪ್ರತಿ ದಿನ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂದು ತಿಳಿದು ಬಂದಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಗಮನಕ್ಕೆ ತಂದು ರಮೇಶ್‌ ಜಾರಕಿಹೊಳಿಗೆ ಬುದ್ಧಿವಾದ ಹೇಳಿಸುತ್ತೇನೆಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಮನ್ವಯ ಸಮಿತಿಗೆ ಎರಡೂ ಪಕ್ಷಗಳ ಅಧ್ಯಕ್ಷರನ್ನು ಸೇರಿಸಿಕೊಳ್ಳುವ ವಿಚಾರ ಪಕ್ಷದ ಮುಖಂಡರಿಗೆ ಬಿಟ್ಟಿದ್ದು, ಸಮಿತಿಯಲ್ಲಿ ಯಾರು ಇರುತ್ತಾರೆ ಎನ್ನುವುದು ಮುಖ್ಯವಲ್ಲ. ಪ್ರತಿ ತಿಂಗಳು ಸಮನ್ವಯ ಸಮಿತಿ ಸಭೆ ನಡೆದರೆ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಬಾರಿ ಸಮನ್ವಯ ಸಮಿತಿ ಸಭೆ ವಿಳಂಬವಾಗಿದೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಶನಿವಾರ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ನಾಯಕರ ಪ್ರತ್ಯೇಕ ಸಭೆ ನಡೆಸಿ ಗೊಂದಲ ಪರಿಹರಿಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಗೊಂದಲವನ್ನು ಚರ್ಚೆಯ ಮೂಲಕ ಬಗೆಹರಿಸುತ್ತೇವೆ. ಈಗಾಗಲೇ ಸಂಬಂಧ ಪಟ್ಟವರೊಂದಿಗೆ ಮಾತುಕತೆ ನಡೆಸಿದ್ದೇನೆ. 
ದಿನೇಶ್‌ ಗುಂಡೂರಾವ್‌,
ಕೆಪಿಸಿಸಿ ಅಧ್ಯಕ್ಷ

Trending videos

Back to Top