CONNECT WITH US  

ವಿವೇಕಾನಂದರ ಚಿಕಾಗೋ ಭಾಷಣ 125ನೇ ವರ್ಷಾಚರಣೆ

 ಸೆ. 11ರಂದು ಧಾರವಾಡದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ: ಜಿಲ್ಲಾಧಿಕಾರಿ ದೀಪಾ

ಧಾರವಾಡ: ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಎಂ. ದೀಪಾ ಮಾತನಾಡಿದರು.

ಧಾರವಾಡ: ಸ್ವಾಮಿ ವಿವೇಕಾನಂದರು 1893ರಲ್ಲಿ ಅಮೆರಿಕದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ತತ್ವಾದರ್ಶಗಳ ಕುರಿತು ನೀಡಿದ ಐತಿಹಾಸಿಕ ಉಪನ್ಯಾಸಕ್ಕೆ ಸೆ. 11ರಂದು 125 ವರ್ಷಗಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷವಿಡೀ ಅರ್ಥಪೂರ್ಣ ಕಾರ್ಯಕ್ರಮ ರೂಪಿಸುತ್ತಿದ್ದು, ಸೆ. 11ರಂದು ನಗರದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದೆಂದು ಡಿಸಿ ಎಂ. ದೀಪಾ ಹೇಳಿದರು.

ಡಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಇಲಾಖೆಗಳು, ಶಾಲೆ-ಕಾಲೇಜು, ವಿವಿಗಳು, ರಾಮಕೃಷ್ಣ ಮಿಷನ್‌, ಎನ್ನೆಸ್ಸೆಸ್‌, ಎನ್‌ಸಿಸಿ ಘಟಕಗಳ ವಿದ್ಯಾರ್ಥಿಗಳು ಈ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಸೆ. 11ರಂದು ಬೆಳಗ್ಗೆ 8:30 ಗಂಟೆಗೆ ಕರ್ನಾಟಕ ಕಾಲೇಜು ಆವರಣದಿಂದ ಜಾಥಾ ಆರಂಭಿಸಿ ಸ್ತಬ್ಧ ಚಿತ್ರಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಗುವುದು. ನಂತರ ಡಾ| ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ವಾರ್ಷಿಕೋತ್ಸವ ಆಚರಣೆ ಉದ್ಘಾಟನೆ, ವಿಶೇಷ ಉಪನ್ಯಾಸ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅರ್ಥಪೂರ್ಣವಾಗಿ ಈ ಸಮಾರಂಭ ಆಯೋಜಿಸಬೇಕು ಎಂದು ಸೂಚಿಸಿದರು.

ಕವಿವಿ ಕುಲಸಚಿವ ಪ್ರೊ| ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕವಿವಿಯ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠವು ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಾರ್ಷಿಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಎನ್ನೆಸ್ಸೆಸ್‌ ಸ್ವಯಂಸೇವಕರು ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಮಕೃಷ್ಣ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಮಾತನಾಡಿ, ಕಾರ್ಯಕ್ರಮವನ್ನು ವಿದ್ಯಾರ್ಥಿ ಹಾಗೂ ಯುವಜನರನ್ನು ಕೇಂದ್ರೀಕರಿಸಿ ರೂಪಿಸಬೇಕು. ಆಶ್ರಮದ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಾಗುವುದು ಎಂದು ಹೇಳಿದರು. ವರ್ಷಾಚರಣೆ ಅಂಗವಾಗಿ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ಸಂಗೀತ, ನಾಟಕ, ರಂಗೋಲಿ, ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ಸಲಹೆಗಳು ವ್ಯಕ್ತವಾದವು.

ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ, ಜಿಪಂ ಉಪಕಾರ್ಯದರ್ಶಿ ಎಸ್‌.ಜಿ. ಕೊರವರ, ಆಹಾರ-ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕಿ ಎಚ್‌.ಎಚ್‌. ಕುಕನೂರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಅಬಕಾರಿ ಉಪ ಆಯುಕ್ತ ಬಿ.ಆರ್‌. ಹಿರೇಮಠ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಇದ್ದರು.

Trending videos

Back to Top