CONNECT WITH US  

ಪ್ರಾಥಮಿಕ ಶಿಕ್ಷಕರ ಜವಾಬ್ದಾರಿ ಹಿರಿದು

„ ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ ಪ್ರಥಮ ಸಮ್ಮೇಳನ,„ ಶಿಕ್ಷಕ ವೃತ್ತಿಯೇ ಬಹು ದೊಡ್ಡದು: ಬೆಲ್ಲದ 

ಹುಬ್ಬಳ್ಳಿ: ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ ಪ್ರಥಮ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮಗ್ರ ಹಾಗೂ ಮತ್ತಷ್ಟು ಉನ್ನತವಾಗಿ ಬೆಳೆಯುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು. ಶಿಕ್ಷಣಕ್ಕೆ ಅಡಿಪಾಯ ಹಾಕುವ ಪ್ರಾಥಮಿಕ ಶಾಲೆ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ| ಬಿ.ಎಫ್. ದಂಡಿನ್‌ ಅಭಿಪ್ರಾಯಪಟ್ಟರು.

ಕನಕದಾಸ ಶಿಕ್ಷಣ ಸಮಿತಿ ಹಾಗೂ ಚುಟುಕು ಸಾಹಿತ್ಯ ಪರಿಷತ್‌ ವತಿಯಿದ ಬುಧವಾರ ಆಯೋಜಿಸಿದ್ದ ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಅತೀ ಅಮೂಲ್ಯವಾಗಿರುತ್ತದೆ. ಅಡಿಪಾಯ ಗಟ್ಟಿಯಾಗಿದ್ದಾರೆ ಮೇಲಿನ ಕಟ್ಟಡ ಸುಂದರವಾಗಿ ರೂಪಗೊಳ್ಳುತ್ತದೆ. ಹೀಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದ್ದು, ಇದನ್ನು ಅರಿತು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ರೂಪಿಸಬೇಕು ಎಂದು ಸಲಹೆ ನೀಡಿದರು.

ಆಂಗ್ಲ ಹಾಗೂ ಹಿಂದಿ ಭಾಷೆ ಅನಿವಾರ್ಯವಾಗಿದ್ದು, ಅನ್ಯ ಭಾಷೆಗಳ ಭರಾಟೆಯಲ್ಲಿ ಕನ್ನಡ ಸೊರಗಬಾರದು, ಕೊರಗಬಾರದು. ಕನ್ನಡ ಸಮೃದ್ಧಿಯಾಗಿ ಬೆಳೆಸುವ ನಿಟ್ಟಿನಲ್ಲಿ ಸರಕಾರದ ಪಾತ್ರ ಕೂಡ ದೊಡ್ಡದು. ಅಕಾಡೆಮಿ, ಸಾಹಿತ್ಯ ಪರಿಷತ್‌ನಿಂದ ಪ್ರಕಟಿಸಿದ ಪುಸ್ತಕಗಳನ್ನು ಮಾರಾಟಕ್ಕಾಗಿ ಗೋದಾಮುಗಳಲ್ಲಿ ಕೊಳೆಸುವ ಬದಲು ಪುಸ್ತಕಗಳ ಬೇಡಿಕೆಯಿರುವ ಗ್ರಂಥಾಲಯಗಳಿಗೆ ನೀಡುವುದು ಒಳಿತು. ಶಿಕ್ಷಕನಲ್ಲಿರುವ ಸಾಹಿತ್ಯವನ್ನು ಗುರುತಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಸಮ್ಮೇಳನ ನಿಜಕ್ಕೂ ಶ್ಲಾಘನೀಯವಾಗಿದೆ ಸಂತಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸಮ್ಮೇಳನಕ್ಕೆ ಚಾಲನೆ ನೀಡಿ, ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹು ದೊಡ್ಡದಾಗಿದೆ. ಮಹಾನ್‌ ವ್ಯಕ್ತಿಗಳನ್ನಾಗಿ ರೂಪಿಸುವ ಮಹತ್ಕಾರ್ಯದಲ್ಲಿ ತೊಡಗಿರುವುದರಿಂದ ನಾವು ಯಾವು ಹುದ್ದೆಯಲ್ಲಿದ್ದರೂ ಶಿಕ್ಷಕರಿಗೆ ತಲೆ ಬಾಗಲೇಬೇಕು. ಇಂತಹ ಗೌರವ ಘನತೆ ಹೊಂದಿದ ವೃತ್ತಿಯಲ್ಲಿರುವ ಪ್ರತಿಯೊಬ್ಬರು ಸಮಾಜದ ಜವಾಬ್ದಾರಿ ಅರಿತುಕೊಂಡು ಉತ್ತಮ ಪ್ರಜೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಶಿಕ್ಷಕರಿಂದಲೇ ರಾಷ್ಟ್ರ ಬದುಕಿದಿಯೇ ಹೊರತು ಯಾವುದೇ ಸರಕಾರ, ರಾಜಕಾರಣಿಗಳಿಂದಲ್ಲ. ಶಿಕ್ಷಕ ಸಮೂಹ ಉತ್ತಮ ಪ್ರಜೆಗಳನ್ನು ರೂಪಿಸುತ್ತಿರುವುದರಿಂದ ನಮ್ಮ ದೇಶ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಗಳಿಸಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದ್ದು, ಮಾನವನಾಗಿ ಬಾಳಬೇಕಾದರೆ ಸಂಸ್ಕಾರ ಅತಿ ಮುಖ್ಯ ಎಂದರು. ಇದಕ್ಕೂ ಮೊದಲು ಸಮ್ಮೇಳನದ ಸರ್ವಾಧ್ಯಕ್ಷ ಡಾ| ಬಿ.ಎಫ್.ದಂಡಿನ ದಂಪತಿಯನ್ನು ಕಿಮ್ಸ್‌ ಮುಂಭಾಗದ ಮಹಾತ್ಮಗಾಂಧಿ ಪ್ರತಿಮೆಯಿಂದ ಕನಕದಾಸ ಮಹಾವಿದ್ಯಾಲಯದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಉದ್ಘಾಟನಾ ಕಾರ್ಯಕ್ರಮದ ನಂತರ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಗಳು ಜರುಗಿದವು. ಪ್ರೊ| ಎಸ್‌.ವೈ. ಚಿಕ್ಕಟ್ಟಿ, ಎಚ್‌.ಬಿ. ಕೊರವರ, ಶಿವಮೂರ್ತಿ ದ್ಯಾವನೂರ ಅವರನ್ನು ಸನ್ಮಾನಿಸಲಾಯಿತು. ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ|ಡಿ.ಡಿ.ಮುತಾಲಿಕ ದೇಸಾಯಿ, ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ನಿರ್ದೇಶಕ ಚನ್ನಬಸಪ್ಪ ಧಾರವಾಡಶಟ್ರಾ, ಡಾ| ಎಚ್‌.ಬಿ. ಬೆಳಗಲಿ, ಸಂದೀಪ ಬೂದಿಹಾಳ ಇನ್ನಿತರರಿದ್ದರು.


Trending videos

Back to Top