CONNECT WITH US  

ಹೆಚ್ಚುತ್ತಿದೆ ಅನ್ಯ ರಾಜ್ಯದವರ ವಲಸೆ 

ಉದ್ಯೋಗ ಅರಸಿ ಅವಳಿ ನಗರಕ್ಕೆ ಬರುವವರ ಸಂಖ್ಯೆ ವೃದ್ಧಿ, ವೃತ್ತಿಯಲ್ಲಿ ನೈಪುಣ್ಯತೆ ಇವರ ಮೊದಲ ಪ್ರಾಧಾನ್ಯತೆ

ಹುಬ್ಬಳ್ಳಿ: ಒಂದೆಡೆ ನಗರದಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿನ ಜನರು ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದರೆ, ಇನ್ನೊಂದೆಡೆ ಪರ ರಾಜ್ಯದ ನೂರಾರು ಉದ್ಯೋಗಿಗಳು ಕೆಲಸ ಅರಸಿಕೊಂಡು ಹುಬ್ಬಳ್ಳಿ-ಧಾರವಾಡಕ್ಕೆ ಬಂದು ಉದ್ಯೋಗ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಕಟ್ಟಡ ನಿರ್ಮಾಣದ ಕಾಮಗಾರಿಯಲ್ಲಿ ಬಾರ್‌ ಬೆಂಡಿಂಗ್‌, ಸೆಂಟ್ರಿಂಗ್‌, ಸೆಂಟರಿಂಗ್‌, ಟೈಲ್ಸ್‌ ಫಿಟ್ಟಿಂಗ್‌, ಗ್ಲಾಸ್‌ ಪೈಟ್ಟಿಂಗ್‌, ಕಾಂಕ್ರೀಟ್‌ ಮಿಕ್ಸಿಂಗ್‌, ಪೈಟಿಂಗ್‌, ವೈರಿಂಗ್‌ ಕೆಲಸಗಳನ್ನು ಪರ ರಾಜ್ಯದವರು ಸೆಳೆದುಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳ, ಆಸ್ಸಾಂ ರಾಜ್ಯದಿಂದ ಇಲ್ಲಿಗೆ ಬಂದು ಹೊಟೇಲ್‌ಗ‌ಳಲ್ಲಿ ದುಡಿದು ಬದುಕು ಕಟ್ಟಿಕೊಂಡವರು ಸಾಕಷ್ಟಿದ್ದಾರೆ. ಕುಶಲ ಕೆಲಸಗಳಾದ ಬಡಿಗತನ, ಇಲೆಕ್ಟ್ರಿಶಿಯನ್‌ ಅಷ್ಟೇ ಅಲ್ಲ ಗಣೇಶ ಮೂರ್ತಿ ತಯಾರಿಕೆಯಲ್ಲೂ ಪರ ರಾಜ್ಯದವರು ಮಿಂಚುತ್ತಿದ್ದಾರೆ. ಹೊರ ರಾಜ್ಯದ ಅನೇಕ ಜನ ವಾಹನ ಚಾಲಕರು ನಗರವನ್ನಾಶ್ರಯಿಸಿದ್ದಾರೆ.

ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ ರಾಜ್ಯಗಳಿಂದ, ಬಡಿಗತನ ಕಾರ್ಯ ಮಾಡುವವರು ರಾಜಸ್ಥಾನದಿಂದ, ಇಲೆಕ್ಟ್ರಿಕ್‌ ಕೆಲಸ ಮಾಡುವವರು ಮಹಾರಾಷ್ಟ್ರದಿಂದ, ಒಳಚರಂಡಿ ಕಾಮಗಾರಿಗಾಗಿ ತಮಿಳುನಾಡಿನಿಂದ, ಚಿನ್ನಾಭರಣ ಮಾಡುವವರು ಪಶ್ಚಿಮ ಬಂಗಾಳದಿಂದ ಬಂದವರು ಅಧಿಕ ಪ್ರಮಾಣದಲ್ಲಿದ್ದಾರೆ. ಇನ್ನು ಆಂಧ್ರಪ್ರದೇಶದಿಂದ ಬಂದು ಇಲ್ಲಿ ಸೆಟಲ್‌ ಆದವರ ಸಂಖ್ಯೆ ಕಡಿಮೆಯೇನಿಲ್ಲ. 

ಪರ ರಾಜ್ಯದಿಂದ ಬಂದು ಇಲ್ಲಿಗೆ ಉದ್ಯೋಗ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ತಮ್ಮ ವೃತ್ತಿಯಲ್ಲಿ ನೆಲೆಯೂರಿದವರು, ಇಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ರಾಜ್ಯದಿಂದ ಅದೇ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದವರನ್ನು ಇಲ್ಲಿಗೆ ಕರೆತರುತ್ತಾರೆ. ಈ ಪರಂಪರೆ ಮುಂದುವರಿದಿದೆ.

ಸ್ಥಳಿಯರ ನಿರಾಸಕ್ತಿ: ಸ್ಥಳಿಯ ಉದ್ಯೋಗಾರ್ಥಿಗಳು ಇಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ನಿರಾಸಕ್ತಿ ತೋರುತ್ತಿರುವುದರಿಂದ ಅನ್ಯರಾಜ್ಯಗಳ ಉದ್ಯೋಗಿಗಳು ಅವಕಾಶ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರು ಸಣ್ಣ-ಪುಟ್ಟ ಕೆಲಸಗಳನ್ನು ಸಹ ಕಡೆಗಣಿಸುತ್ತಿದ್ದು, ಹೊರ ರಾಜ್ಯದ ಕೆಲಸಗಾರರು ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಉತ್ತಮ ಸೇವೆಯಿಂದ ಜನರ ಮೆಚ್ಚುಗೆ ಗಳಿಸಿ ದೊಡ್ಡ ಕೆಲಸಗಳನ್ನೂ ಪಡೆಯುತ್ತಿದ್ದಾರೆ.

ಗ್ರಾಹಕರು ಸ್ಥಳಿಯರು, ಪರರಾಜ್ಯದವರು ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಮರ್ಪಕ ಕಾರ್ಯವಾಗಬೇಕು, ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಸೇವೆ ಲಭ್ಯವಾಗಬೇಕು ಎಂಬುದಷ್ಟೇ ಅವರಿಗೆ ಮುಖ್ಯ. ವೃತ್ತಿಗೆ ಅನುಗುಣವಾಗಿ ಕೌಶಲ್ಯತೆ, ಗುಣಮಟ್ಟ, ನಿಗದಿತ ಸಮಯದಲ್ಲಿ ಸೇವೆ, ಆಕರ್ಷಕ ಮಾದರಿ ಯಾರೇ ನೀಡಲಿ ಅವರನ್ನು ಕೆಲಸಗಳು ಹುಡುಕಿಕೊಂಡು ಬರುತ್ತವೆ. 

ಸ್ಥಳಿಯ ಗೌಂಡಿಗಳನ್ನು ಆಶ್ರಯಿಸಿದರೆ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ವಾರದಲ್ಲಿ 4 ದಿನ ಕೆಲಸ ಮಾಡಿ ಸುಳ್ಳು ಕಾರಣ ಹೇಳಿ ಕೆಲಸ ತಪ್ಪಿಸುವವರೇ ಹೆಚ್ಚು. ಬಿಹಾರದಿಂದ ಬಂದು ಒಂದೆಡೆ ವಾಸವಾಗಿರುವ ಕಾರ್ಮಿಕರು ದಿನದ 24 ಗಂಟೆ ದುಡಿಯಲು ಸಿದ್ಧರಿರುತ್ತಾರೆ. ದುಡಿಯುವುದಕ್ಕಾಗಿಯೇ ತಮ್ಮ ರಾಜ್ಯ ಬಿಟ್ಟು ಬಂದವರು ಇಲ್ಲಿ ಕಷ್ಟ ಪಟ್ಟು ದುಡಿದು ಹಣ ಮಾಡಿಕೊಂಡು ಹೋಗುತ್ತಾರೆ. ಆದ್ದರಿಂದ ನಾವು ಕಷ್ಟ ಪಟ್ಟು ದುಡಿಯುವವರಿಗೆ ಆದ್ಯತೆ ನೀಡುತ್ತೇವೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದರೆ ಕಷ್ಟ ಪಟ್ಟು ದುಡಿಯುವ ಪರ ರಾಜ್ಯದ ಕಾರ್ಮಿಕರನ್ನು ಅವಂಬಿಸಬೇಕಾಗುತ್ತದೆ.
. ವಾಸಿಮ್‌, ಕಟ್ಟಡ ಕಾಮಗಾರಿ ಗುತ್ತಿಗೆದಾರ

ಮನೆಯಲ್ಲಿ ಕುರ್ಚಿ, ಮೇಜು ದುರಸ್ತಿ ಕೆಲಸವಿದ್ದಾಗ ಸ್ಥಳಿಯ ಬಡಿಗರು ಎಷ್ಟು ಕರೆದರೂ ಬರಲಿಲ್ಲ. ಹೀಗಾಗಿ ರಾಜಸ್ಥಾನದ ಕಾರ್ಪೆಂಟರ್ ನ್ನು ಕರೆದೆ, ಉತ್ತಮ ರೀತಿಯಿಂದ ಕೆಲಸ ಮಾಡಿಕೊಟ್ಟ. ಆತನ ಕೆಲಸ ತೃಪ್ತಿ ಕೊಟ್ಟಿದ್ದಕ್ಕೆ ಹೊಸ ಮನೆಯ ಎಲ್ಲ ಕಾರ್ಪೆಂಟರಿನ ಕೆಲಸವನ್ನು ಆತನಿಗೇ ನೀಡಿದೆ. ಆತ ಬದ್ಧತೆಯಿಂದ ಕೆಲಸ ಮುಗಿಸಿ ಕೊಟ್ಟ. ಯಾರು ಕೆಲಸ ಮಾಡಿದರು ಎಂಬುದಕ್ಕಿಂತ ಹೇಗೆ ಕೆಲಸ ಮಾಡಿದರು ಎಂಬುದು ಮುಖ್ಯ.
 . ಎಸ್‌.ಆರ್‌.ಕುಲಕರ್ಣಿ, ನವನಗರ ನಿವಾಸಿ.

ವಿಶ್ವನಾಥ ಕೋಟಿ

Trending videos

Back to Top