ಬ್ಯಾಡಗಿ ಮೆಣಸಿನಕಾಯಿಗೂ ಬೇಕಿದೆ ಬ್ರಾಂಡ್

ಬ್ಯಾಡಗಿ: 'ಚಿಲ್ಲಿ ಎಕ್ಸಪೋ-2018' ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ ಉದಾಸಿ ಮಾತನಾಡಿದರು.
ಬ್ಯಾಡಗಿ: ಬೆಳೆದಂತಹ ಶೇ.42ರಷ್ಟು ಮೆಣಸಿನಕಾಯಿ ವಿದೇಶಗಳಿಗೆ ರಫ್ತಾಗುತ್ತಿದೆ. ಆದರೆ, ಅದಕ್ಕೆ ವಿಶ್ವ ಮಾರುಕಟ್ಟೆಯಲ್ಲಿ (ಡಬ್ಲೂಟಿಒ) ಬ್ರಾಂಡ್ ಸಿಗದಿರುವುದು ದುರಂತ. ಮೆಣಸಿನಕಾಯಿ ಮಾರಾಟವನ್ನು ಎರಡನೇ ಹಂತಕ್ಕೆ ಕೊಂಡೊಯ್ಯುಬೇಕಾಗಿದ್ದರೇ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಫುಡ್ ಪಾರ್ಕ್ ನಿರ್ಮಿಸಲು ಸಿದ್ಧರಾಗಬೇಕು ಎಂದು ಸಂಸದ ಶಿವಕುಮಾರ ಉದಾಸಿ ವರ್ತಕರಿಗೆ ಕರೆ ನೀಡಿದರು.
ವರ್ತಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ 'ಚಿಲ್ಲಿ ಎಕ್ಸಪೋ-2018' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಇಂದಿಗೂ ಮೂಲ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಇಲ್ಲಿ ವ್ಯಾಪಾರಸ್ಥರಿಗಿಂತಲೂ ಹೆಚ್ಚು ರೈತರಿಗೆ ಪ್ರಯೋಜನಗಳಾಗುತ್ತಿವೆ. ಬ್ಯಾಡಗಿ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವ ನೂರಾರು ವಿದೇಶಿ ಕಂಪನಿಗಳು ಇಂದು ವಿಶ್ವ ಮಾರುಕಟ್ಟೆಯಲ್ಲಿ ಬ್ರಾಂಡ್ ಆಗಿ ಉಳಿದುಕೊಂಡಿವೆ ಎಂದರು.
ಬ್ಯಾಡಗಿಯಲ್ಲಿನ ವರ್ತಕರು ಕೇವಲ ವ್ಯಾಪಾರ ವಹಿವಾಟಿಗಷ್ಟೇ ಸೀಮಿತವಾಗಿದ್ದಾರೆ. ಇದರ ಬದಲಾಗಿ ಎರಡನೇ ಹಂತದ ಮಾರುಕಟ್ಟೆ ಪ್ರವೇಶಿಸಬೇಕು. ಅದರ ಜೊತೆಗೆ ಬ್ಯಾಡಗಿಯಿಂದಲೇ ನೇರವಾಗಿ ರಫ್ತು ಮಾಡಲು ಸಿದ್ಧರಾಗಬೇಕು. ಇದಕ್ಕೆ ಅವಶ್ಯವಿರುವ ಬಂಡವಾಳ ಸೊಸೈಟಿ ಮಾದರಿಯಲ್ಲಿ ಕ್ರೋಡೀಕರಿಸುವ ಮೂಲಕ ನೇರ ರಫ್ತಿಗೆ ಮುಂದಾಗಬೇಕು ಎಂದರು.
ಮೂಲ ತಳಿ ಮೆಣಸಿನಕಾಯಿ ಕೆಲವೇ ವರ್ಷಗಳಲ್ಲಿ ಮಾಯವಾಗುವ ಹಂತಕ್ಕೆ ಬಂದು ತಲುಪಿದೆ. ಇದರಲ್ಲಿರುವ ಕಡಿಮೆ ಖಾರ ಮತ್ತು ನೈಸರ್ಗಿಕ ಬಣ್ಣ ವಿಶ್ವದ ಯಾವುದೇ ತಳಿ ಮೆಣಸಿನಕಾಯಿಯಲ್ಲಿಯೂ ಸಿಗದು. ಈ ಕುರಿತು ಕೃಷಿಕರಲ್ಲಿ ಸಮಗ್ರ ಮಾಹಿತಿ ನೀಡುವ ಮೂಲಕ ತಾಂತ್ರಿಕತೆ ಬಳಸಿ ಒಣಗಿಸುವ (ಸೋಲಾರ್ ಟ್ರೈಯಾರ್ಡ್) ಕಣಗಳನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.