CONNECT WITH US  

ಕಿಮ್ಸ್‌ನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ಶವಾಗಾರ

1 ಕೋಟಿ ರೂ. ವೆಚ್ಚ, ಕೆಎಚ್‌ಆರ್‌ಡಿಪಿಯಿಂದ ನಿರ್ಮಾಣ, ಮಾರ್ಚ್‌ ಅಂತ್ಯಕ್ಕೆ ಪೂರ್ಣ ಸಾಧ್ಯತೆ 

ಹುಬ್ಬಳ್ಳಿ: ಕಿಮ್ಸ್‌ ಆವರಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಶವಾಗಾರ ಕಟ್ಟಡ

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ನೂತನ ಶವಾಗಾರ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಪ್ಲಿಂತಪ್‌ ವರೆಗೆ ಕಾಮಗಾರಿ ಮುಗಿದಿದ್ದು, ಮಾರ್ಚ್‌ ಮೊದಲಾರ್ಧದಲ್ಲಿ ಈ ಕಟ್ಟಡ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಆರೋಗ್ಯ ಪ್ರೋಜೆಕ್ಟ್ ಇಂಜಿನಿಯರಿಂಗ್‌ ವಿಭಾಗ (ಕೆಎಚ್‌ಆರ್‌ಡಿಪಿ) ಈ ಕಟ್ಟಡ ನಿರ್ಮಿಸುತ್ತಿದ್ದು, ಇದನ್ನು ಪೂರ್ಣಗೊಳಿಸಲು ಎಂಟು ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಆದರೆ ಕೆಎಚ್‌ಆರ್‌ಡಿಪಿಯವರು ಆರೇ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಿಮ್ಸ್‌ನ ಆಡಳಿತ ಮಂಡಳಿಯವರಿಗೆ ಭರವಸೆ ನೀಡಿದ್ದಾರೆ.

ಈಗಿರುವ ಕಿಮ್ಸ್‌ನ ಶವಾಗಾರದಲ್ಲಿ ಈಗ ನಾಲ್ಕು ದೇಹಗಳನ್ನು ಮಾತ್ರ ಸಂಗ್ರಹಿಸಿ ಸಂರಕ್ಷಿಸಬಹುದು. ಅಲ್ಲದೆ ಇಲ್ಲಿ ಮೃತರು ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿ ಇಲ್ಲ. ಮರಣೋತ್ತರ (ಶವ) ಪರೀಕ್ಷೆ ಮಾಡುವ ವೇಳೆ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದೇಹವನ್ನು ಯಾವ ರೀತಿ ಚ್ಛೇದನ ಮಾಡಬೇಕು. ಯಾವ್ಯಾವ ಪ್ರಮುಖ ಅಂಗಾಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂಬುದನ್ನು ನ್ಯಾಯವೈದ್ಯ ಶಾಸ್ತ್ರ (ಫೋರೆನ್ಸಿಕ್‌ ಮೆಡಿಸನ್‌) ವಿಭಾಗದವರು ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬಹುದಾಗಿತ್ತು. ಆದರೆ ಈಗ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎಂಸಿಐ ಶಿಫಾರಸು ಪ್ರಕಾರ ಅಂದಾಜು 5ಸಾವಿರ ಚದರ ಅಡಿಯಲ್ಲಿ ನೂತನ ಶವಾಗಾರ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇಲ್ಲಿ ಎಂಟು ದೇಹಗಳನ್ನು ಸಂಗ್ರಹಿಸಿ ಸಂರಕ್ಷಿಸಬಹುದು. 

ಜೊತೆಗೆ ಸುಸಜ್ಜಿತ ನ್ಯಾಯವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರ ಕೊಠಡಿ, ಸಿಬ್ಬಂದಿ ಕೊಠಡಿ, ಶವಪರೀಕ್ಷೆಗಳ ವರದಿ ಸಿದ್ಧಪಡಿಸಲು ಪ್ರತ್ಯೇಕವಾದ ಪೊಲೀಸರ ಕೊಠಡಿ, ಮೃತರ ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿ, 20-30 ವಿದ್ಯಾರ್ಥಿಗಳು ಆಸೀನರಾಗಬಹುದಾದ ಕೊಠಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಶವಪರೀಕ್ಷೆಯ ವಿಧಿ-ವಿಧಾನ ತಿಳಿಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜೊತೆಗೆ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿಕ್ಕದಾದ ಮ್ಯೂಸಿಯಂ ಸ್ಥಾಪಿಸಲಾಗುತ್ತಿದೆ. 

ಈ ವ್ಯವಸ್ಥೆಯಿಂದ ನ್ಯಾಯವೈದ್ಯ ಶಾಸ್ತ್ರ ವಿಭಾಗದ ತಜ್ಞವೈದ್ಯರು ಮಾತ್ರವಲ್ಲದೆ ಪಿಜಿ ವಿದ್ಯಾರ್ಥಿಗಳು ಸಹ ಮರಣೋತ್ತರ ಪರೀಕ್ಷೆ ಮಾಡಬಹುದಾಗಿದೆ. ಆ ಮೂಲಕ ಪಿಜಿ ವಿದ್ಯಾರ್ಥಿಗಳು ಸಹ ಕೇವಲ ರೋಗಿಗಳಿಗೆ ಮೆಡಿಸನ್‌ ಕೊಡುವುದು, ಚಿಕಿತ್ಸೆ ನೀಡುವುದಕ್ಕೆ ಮಾತ್ರ ಸೀಮಿತವಾಗದೆ ಮನುಷ್ಯನ ದೇಹದ ಪ್ರತಿಯೊಂದು ಅಂಗಾಂಗಗಳ ಬಗ್ಗೆ ತಿಳಿಯುವುದರ ಜೊತೆಗೆ ಶವಪರೀಕ್ಷೆಯನ್ನು ಸುಲಭವಾಗಿ ಮಾಡುವ ವಿಧಾನ ಕುರಿತು ಅರಿಯಬಹುದಾಗಿದೆ.

ಶವಾಗಾರವನ್ನು ಅಂದಾಜು 1ಕೋಟಿ ರೂ. ವೆಚ್ಚದಲ್ಲಿ 5 ಸಾವಿರ ಚದರ ಅಡಿ ವಿಸ್ತಾರದಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ಫೆಬ್ರುವರಿ ಇಲ್ಲವೆ ಮಾರ್ಚ್‌ನಲ್ಲಿ ಈ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.
 ಡಾ| ದತ್ತಾತ್ರೇಯ ಡಿ. ಬಂಟ್‌,
ನಿರ್ದೇಶಕ, ಕಿಮ್ಸ್‌

ಶಿವಶಂಕರ ಕಂಠಿ


Trending videos

Back to Top