CONNECT WITH US  

ಜನಮನದಲ್ಲಿ ಅರಸು ಚಿರಸ್ಥಾಯಿ

ವಿಜಯಪುರ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್‌ ಅರಸು ಅವರು ಜನಪರವಾಗಿ ರೂಪಿಸಿದ ದೂರದೃಷ್ಟಿ ಯೋಜನೆಗಳಿಂದ ಇಂದಿಗೂ ರಾಜ್ಯದ ಜನಮನದಲ್ಲಿ ಜೀವಂತವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಹೇಳಿದರು. ರವಿವಾರ ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಿ.ದೇವರಾಜ್‌ ಅರಸು ಮುಖ್ಯಮಂತ್ರಿಯಾಗಿದ್ದಾಗ
ಜಾರಿಗೊಳಿಸಿದ ದೂರದೃಷ್ಟಿ ಯೋಜನೆಗಳು ಇಂದಿಗೂ ಸಹ ಶಾಲಾ ಕಾಲೇಜ್‌ ಮಕ್ಕಳು, ರೈತರು ಹಾಗೂ ಬಡ ಹಿಂದುಳಿದ ವರ್ಗಗಳ ಜನರು ಹಲವು ರೀತಿಯಲ್ಲಿ ನೆರವು ಪಡೆಯುತ್ತಿದ್ದಾರೆ. ಅವರು ಕಲ್ಪಿಸಿದ ಕನಸಿನ ಕಾರ್ಯಕ್ರಮಗಳಿಂದಾಗಿ ಶೈಕ್ಷಣಿಕ ಸಾಧನೆ ಮಾಡಿ, ಉನ್ನತ ಹುದ್ದೆ ಅಲಂಕರಿಸಲು ಶೋಷಿತರಿಗೆ ಸಾಧ್ಯವಾಗಿದೆ
ಎಂದರು. ಮುತ್ಸದ್ದಿ ನಾಯಕರಾಗಿದ್ದ ಅರಸು, ಭೂ ಒಡೆತನ ಯೋಜನೆ ಜಾರಿಗೊಳಿಸಿದ್ದು ಕ್ರಾಂತಿಕಾರಕ ಹೆಜ್ಜೆ. ಹೊಲದಲ್ಲಿ ಉಳುವವನ್ನೇ ಒಡೆಯನನ್ನಾಗಿ ಮಾಡಿದರು. ಅಲ್ಲದೇ ಬಡವರು, ಶೋಷಿತರ ಪರವಾಗಿ ಹಲವು ಕಾರ್ಯಕ್ರಮ ಜಾರಿಗೆ ತಂದರು. ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಜನಾಂಗದ ಮಕ್ಕಳ ಅನುಕೂಲಕ್ಕಾಗಿ ವಸತಿ ಶಾಲೆ ಆರಂಭಿಸಿದ್ದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ. ಹೀಗೆ ಹತ್ತು ಹಲವು ಜನಪರ ಯೋಜನೆಗಳಿಂದಾಗಿ ಅರಸು ಅವರು ಇಂದಿಗೂ ನಡಿನ ಜನರ ಮನದಲ್ಲಿ ಸ್ಮರಣೀಯರಾಗಿದ್ದಾರೆ ಎಂದರು. ನಿವೃತ್ತ ಪ್ರಾಚಾರ್ಯ ಎಸ್‌.ಎಸ್‌. ಕನಮಡಿ ಮಾತನಾಡಿ, ಹಾವನೂರು ಆಯೋಗ ರಚಿಸಿ ಎಲ್ಲ ವರ್ಗದ ಬಡವರು, ದಲಿತರು, ಶೋಷಿತರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬಲ ತಂದುಕೊಟ್ಟರು. ಜೀತಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿ ನಿರ್ಮೂಲನೆ, ಭೂ ಒಡೆತನ, ಸೇರಿದಂತೆ ಹಲವು ಕ್ರಾಂತಿಕಾರಕ ಕಾರ್ಯಕ್ರಮ ಜಾರಿಗೆ ತಂದರು. ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ಮಾಡಿ, ಮೀಸಲಾತಿ ವ್ಯವಸ್ಥೆ ಕಲ್ಪಿಸಿ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದರು. ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು ಎಂದು ವಿವರಿಸಿದರು. ಜಿಪಂ ಸಿಇಒ ಎಂ.ಸುಂದರೇಶಬಾಬು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಲ್ಲಮ್ಮ ಸಂಗಾಲಕರ, ರಾಜಶ್ರೀ ಮದುರಕರ, ರಾಜೇಶ್ವರಿ ಚಿಗರಿ, ಶ್ರೀಧರ ಪಡೇಕನೂರ, ಹನುಮಂತ ಪೂಜಾರಿ, ಶಂಕ್ರಪ್ಪ ಕರ್ಕಿ, ಲಾವಣ್ಯ ಬಾಳಿ, ಲಕ್ಷ್ಮೀ ಕೋಳಕರ, ಸಂಗೀತಾ ರಾಠೊಡ, ಉಮೇಶ ಪೂಜಾರಿ, ಶ್ರೀರಾಮ ಕಠಾರೆ, ಶ್ರೀಧರ ಪವಾರ ಹಾಗೂ ವಿವಿಧ ಸ್ಪರ್ಧಾ ವಿಜೇತರಾದ ಅಶ್ವಿ‌ನಿ ಸಾಸ್ವೇಕರ, ಮೀನಾಜ್‌ ಮೋಮಿನ್‌, ಶಿಲ್ಪಾ ಕವಟಗಿ, ಮಹೇಶ ಕಾಂಬಳೆ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಎಎಸ್ಪಿ ಶಿವಕುಮಾರ ಗುಣಾರೆ, ಉಪ ವಿಭಾಗಾಧಿಕಾರಿ ಡಾ|ಶಂಕರ ವಣಕ್ಯಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋದ್ದಾರ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ದೊಡಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾದೇವ ಮುರಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎನ್‌.ಎಸ್‌. ಶಿವಣಕರ, ಸಮಾಜದ ಮುಖಂಡರಾದ ಅಡಿವೆಪ್ಪ ಸಾಲಗಲ್‌, ಕೆ.ಎಫ್‌. ಅಂಕಲಗಿ, ಗುಜ್ಜರ, ನಾಗಠಾಣ, ನಾಗರಾಜ ಲಂಬು, ಪರಶುರಾಮ ಪಡಗಾರ, ಕಮಲಾಬಾಯಿ ನಾಯಿಕ ಇದ್ದರು. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬಿ.ಜೆ. ಇಂಡಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಡಿ.ದೇವರಾಜ್‌ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಚಾಲನೆ ನೀಡಿದರು.


Trending videos

Back to Top