CONNECT WITH US  

ಕೇವಲ ಕನಸಾದ ಮಾರುಕಟ್ಟೆ ಸಂಕೀರ್ಣ

ಯಾದಗಿರಿ: ಮೂರು ವರ್ಷ ಕಳೆದರೂ ನಗರದ ಸ್ಟೇಷನ್‌ ಏರಿಯಾದಲ್ಲಿ ತರಕಾರಿ, ಮಾಂಸಹಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿ ಆರಂಭವಾಗದೆ ಕನಸಾಗಿಯೇ ಉಳಿದಿದೆ. ಕಳೆದ 13-11-2014ರಲ್ಲಿ ತರಕಾರಿ ಮಾರುಕಟ್ಟೆ ಮತ್ತು 24-11-2014ರಂದು ಮಾಂಸಹಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ನಗರೋತ್ಥಾನ ಯೋಜನೆಯಡಿ ತಲಾ ಒಂದು ಕೋಟಿ ರೂ.
ವೆಚ್ಚದಲ್ಲಿ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ ಒಂದು ವರ್ಷದಲ್ಲಿ ಸಂಕೀರ್ಣಗಳು ನಿರ್ಮಿಸಿ ಲೋಕಾರ್ಪಣೆ ಮಾಡಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕಿತ್ತು. ಮೂರು ವರ್ಷ ಗತಿಸಿದರೂ ಇನ್ನೂ ಸಹ ಸಂಕೀರ್ಣಗಳ ನಿರ್ಮಾಣ ಕಾಮಗಾರಿಯೇ ಆರಂಭಿಸಿಲ್ಲ. ನಗರದ ಸ್ಟೇಷನ್‌ ಏರಿಯಾದಲ್ಲಿ ತರಕಾರಿ ಮತ್ತು ಮಾಂಸಹಾರಿ ಮಾರಾಟಕ್ಕೆ ಸಂಕೀರ್ಣ ಇಲ್ಲದೆ ಇರುವುದರಿಂದ ತರಕಾರಿ ಮತ್ತು ಮಾಂಸಹಾರಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಇನ್ನೂ ಕೆಲವು ವ್ಯಾಪಾರಿಗಳು ಅಂಗಡಿಗಳ ಎದುರು ವ್ಯಾಪಾರ ಮಾಡುತ್ತಿದ್ದು, ಆ ಅಂಗಡಿ ಮಾಲೀಕರಿಗೆ ಪ್ರತಿ ನಿತ್ಯ 100ರಿಂದ 200 ರೂ. ಬಾಡಿಗೆ ನೀಡುತ್ತಿದ್ದಾರೆಂದು ತಿಳಿದು ಬಂದಿದೆ. ಸಾರ್ವಜನಿಕರ ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ನಗರಸಭೆ ಸಾಮಾನ್ಯ ಸಭೆ ನಡೆಸಿ ತರಕಾರಿ ಮತ್ತು ಮಾಂಸಹಾರಿ ಮಾರಾಟಕ್ಕೆ ಸ್ಟೇಷನ್‌ ಏರಿಯಾದ ಶಿವ ನಗರದಲ್ಲಿ ಒಂದುವರೆ ಎಕರೆ ಪ್ರದೇಶ ಗುರುತಿಸಿ ಆ ಸ್ಥಳದ ಒಂದು ಭಾಗದಲ್ಲಿ ತರಕಾರಿ ಮಾರುಕಟ್ಟೆ ಮತ್ತು ಇನ್ನೊಂದು ಭಾಗದಲ್ಲಿ ಮಾಂಸಹಾರಿ ಮಾರುಕಟ್ಟೆಗೆ ಸಂಕೀರ್ಣ ನಿರ್ಮಿಸಲು ನಗರೋತ್ಥಾನ ಯೋಜನೆಯಲ್ಲಿ ತಲಾ ಒಂದು ಕೋಟಿ ರೂ. ವೆಚ್ಚ ಮಾಡಲು ನಿರ್ಣಯ ಕೈಗೊಂಡಿತು. ಆದರೆ ನಿರ್ಮಿತಿ ಕೇಂದ್ರದ ನಿರ್ಲಕ್ಷದಿಂದ ಕಾಮಗಾರಿ ಮಾತ್ರ ಇನ್ನೂ ಪ್ರಾರಂಭವಾಗದೆ ನೆನೆಗುದಿಗೆ ಬಿದ್ದಿದೆ. ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕುರಿತಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಕೇಳಿದರೆ ಈ ಕಾಮಗಾರಿಗಳನ್ನು ಪಿಡಬ್ಲ್ಯೂಡಿ ಇಲಾಖೆ ವಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಪಿಡಬ್ಲ್ಯೂಡಿ ಅಧಿಕಾರಿಗಳನ್ನು ಕೇಳಿದರೆ ತರಕಾರಿ ಮತ್ತು ಮಾಂಸಹಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ನಿರ್ಮಿತಿ ಕೇಂದ್ರದಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವಂತೆ ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರು ಮೌಖೀಕವಾಗಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಇದುವರೆಗೆ ಡಿಸಿಯಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಆದೇಶ ಬಂದ ತಕ್ಷಣ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಚನ್ನಬಸಪ್ಪ ಮೇಕಾಲೆ ತಿಳಿಸಿದ್ದಾರೆ. ಸ್ಟೇಷನ್‌ ಏರಿಯಾದಲ್ಲಿ ತರಕಾರಿ ವ್ಯಾಪಾರಿಗಳು
ಯಾವುದೇ ಸುರಕ್ಷತೆ ಇಲ್ಲದೆ ರಸ್ತೆ ಮಧ್ಯದಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ದೂಳು ಮತ್ತು ಸೊಳ್ಳೆ, ನೋಣಗಳು ಕುಳಿತಿರುವ ತರಕಾರಿ ಮತ್ತು ಮಾಂಸಹಾರ ಖರೀದಿಸುವಂತಾಗಿದೆ. ತರಕಾರಿ ಮತ್ತು ಮಾಂಸಹಾರಿ ಮಾರುಕಟ್ಟೆ ಸಂಕೀರ್ಣ ವಿಲ್ಲದೆ ಒಂದೆಡೆ ಕುಳಿತು ಮಾರಾಟ ಮಾಡುತ್ತಿರುವದರಿಂದ ಸಸ್ಯಹಾರಿಗಳು ಮಾಂಸಹಾರಿ ಅಂಗಡಿಗಳ ಎದುರಿ ನಿಂದಲೇ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧ ಪಟ್ಟವರು ಈಗಲಾದರೂ ಎಚ್ಚೆತ್ತುಕೊಂಡು ಶೀಘ್ರ ಸಾರ್ವಜನಿಕರ ಹಿತ ದೃಷ್ಟಿಯಿಂದ ತರಕಾರಿ ಮತ್ತು ಮಾಂಸಹಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಿ ಅನುಕೂಲ ಮಾಡಿ ಕೊಡುವವರೇ ಕಾಯ್ದು ನೋಡಬೇಕಿದೆ. 

„ರಾಜೇಶ ಪಾಟೀಲ್‌ ಯಡ್ಡಳ್ಳಿ

Trending videos

Back to Top