ಸರ್ಕಾರಿ ನೌಕರಿ ಹೆಸರಲ್ಲಿ ಯುವಕರಿಗೆ ವಂಚನೆ!

ಹುಮನಾಬಾದ: ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಈ ಭಾಗದ ಬಡ ಕುಟುಂಬಗಳ ಯುವಕರನ್ನು ಗುರುತಿಸಿ ಮಹಾರಾಷ್ಟ್ರಕ್ಕೆ ಕರೆಸಿಕೊಳ್ಳುತ್ತಿರುವ ಜಾಲವೊಂದು ವ್ಯಾಪಕವಾಗಿ ಕೆಲಸ ಮಾಡುತ್ತಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪಾಸ್ ಅಥವಾ ಫೇಲ್ ಆದರೂ ಪರವಾಗಿಲ್ಲ, ಮಹಾರಾಷ್ಟ್ರದ ಕೃಷಿ ಇಲಾಖೆಯಲ್ಲಿ ಕಾಯಂ ಸರ್ಕಾರಿ ನೌಕರಿ ಕೊಡಿಸಲಾಗುತ್ತದೆ. ಉತ್ತಮ ಸಂಬಳ ಜೊತೆಯಲ್ಲಿ ವ್ಯಾಸ್ತವ್ಯ, ಊಟದ ವ್ಯವಸ್ಥೆ
ಕೂಡ ಕಲ್ಪಿಸಲಾಗುವುದು ಎಂದು ಆಮಿಷವೊಡ್ಡಿ, ಇಲ್ಲಿನ ಯುವಕರನ್ನು ಮಹಾರಾಷ್ಟ್ರದ ಪಂಢರಾಪುರ ನಗರಕ್ಕೆ ಕರೆಸಿಕೊಳ್ಳುತ್ತಿದ್ದಾರೆ.
ಅಲ್ಲದೆ ದಾಖಲಾತಿ ಖರ್ಚಿಗಾಗಿ ಯುವಕರಿಂದ ತಲಾ 15 ರಿಂದ 20 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹುಮನಾಬಾದ ಪಟ್ಟಣದ ಧನಗಾರ ಗಡ್ಡಾ ನಿವಾಸಿ ನಾಗೇಶ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲ್ಲಾಲಿಂಗ ಮೋಸಹೋದ ಯುವಕರು. ತೀರ ಬಡತನ ಎದುರಿಸುತ್ತಿರುವ ಎರಡು ಕುಟುಂಬಗಳು ಮಕ್ಕಳ ಭವಿಷ್ಯ ಹಿನ್ನೆಲೆಯಲ್ಲಿ ಸಾಲಮಾಡಿ ತಲಾ 20 ಸಾವಿರ ರೂ. ಖಾಸಗಿ ಕಂಪನಿಗೆ ಪಾವತಿಸಿದ್ದು, ಇದೀಗ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿದ್ದಾರೆ.
ಖಾಸಗಿ ಕೆಲಸ: ಸರ್ಕಾರಿ ಕೆಲಸ ಎಂದು ಹೇಳಿ ಯುವಕರನ್ನು ಕರೆಯುವ ವ್ಯಕ್ತಿಗಳು, ಯುವಕರಿಗೆ ಖಾಸಗಿ ಕಂಪನಿಯೊಂದರ ಕಾಸ್ಮೆಟಿಕ್ ವಸ್ತುಗಳ ಮಾರಟ ಕುರಿತು ತರಬೇತಿ ನೀಡುತ್ತಿದ್ದಾರೆ. ಯುವಕರ ಮೇಲೆ ತಮ್ಮ ಹಿಡಿತ ಸಾಧಿಸುವ ಮೂಲಕ ನಗರ ಪ್ರದೇಶಗಳಲ್ಲಿ ಕಾಸೆಟಿಕ್ ವಸ್ತುಗಳ ಮಾರಾಟಕ್ಕೆ ಕಳುಹಿಸುವ ಕೆಲಸ ನಿರ್ವಹಿಸುತ್ತಿದೆ.
ಗೆಳೆಯರಿಗೆ ಕರೆಸಬೇಕು: ಪಂಢರಾಪುರ ನಗರದಲ್ಲಿನ ಖಾಸಗಿ ಕಂಪನಿಯಲ್ಲಿ ತರಬೇತಿ ಪಡೆಯುವ ಹಂತದಲ್ಲಿ ಒಬ್ಬ ಯುವಕ ಹತ್ತು ಜನ ಸಂಬಂಧಿಕರು ಹಾಗೂ ಗೆಳೆಯರ ಹೆಸರುಗಳು ಹಾಗೂ ಮೊಬೈಲ್ ಸಂಖ್ಯೆಗಳನ್ನು ಬರೆದುಕೊಡಬೇಕು. ಅಲ್ಲದೇ ಪ್ರತಿಯೊಬ್ಬರು ತಮ್ಮ ಆಪ್ತ ಮೂವರು ಯುವಕರಿಗೆ ಕರೆ ಮಾಡಿ ಅಲ್ಲಿಗೆ ಕರೆಸಬೇಕು. ಹೀಗೆ ಮಾಡಿದವರಿಗೆ ಹೆಚ್ಚು ಸಂಬಳದ ಜೊತೆಗೆ ಉತ್ತಮ ಕೆಲಸ ನೀಡುವುದಾಗಿ ಯುವಕರಿಗೆ ಆಮಿಷವೊಡ್ಡುವ ಕೆಲಸ ಮಾಡಲಾಗುತ್ತಿದೆ ಎಂದು ಯುವಕರು ವಿವರಿಸಿದ್ದಾರೆ. ಒಂದು ಕೋಣೆಯಲ್ಲಿ 10 ಜನರು ಇದ್ದರೂ ಕೂಡ ಯಾರ ಜೊತೆ ಯಾರೂ ಮಾತಾಡುವಂತಿಲ್ಲ. ಯಾರ ಪರಿಚಯ ಕೂಡ ಮಾಡಿಕೊಳ್ಳದ ಸ್ಥಿತಿ ಅಲ್ಲಿದೆ ಎಂದು ವಿವರಿಸಿದ್ದಾರೆ.
ಕಿರುಕುಳ: ಸಂಬಂಧಿಕರು ಹಾಗೂ ಗೆಳೆಯರಿಗೆ ಕರೆ ಮಾಡಿ ಕರೆಯದಿದ್ದರೆ. ಅಥವಾ ಯಾವ ಕಾರಣಕ್ಕೆ ಅವರನ್ನು ಇಲ್ಲಿಗೆ ಕರೆಸಬೇಕು ಎಂದು ಪ್ರಶ್ನಿಸುವ ಯುವಕರನ್ನು ಕೋಣೆಯಲ್ಲಿಯೇ ಇರುವಂತೆ ಮಾಡುತ್ತಾರೆ. ಹೊರಗಡೆ ಹೋಗಲು ಕೂಡ ಬಿಡುವುದಿಲ್ಲ. ಮೊಬೈಲ್ ಕೂಡ ಕಿತ್ತುಕೊಳ್ಳುತ್ತಾರೆ. ನಮ್ಮ ಜೊತೆ ಕೂಡ ಹೀಗೆ ನಡೆದಿದೆ. ಏಪ್ರಿಲ್ 24ರಿಂದ ಮೇ 8ರ ವರೆಗೆ ಪಂಢರಾಪುರದಲ್ಲಿ ಉಳಿದಿದ್ದು, ಸರ್ಕಾರಿ ನೌಕರಿ ಮಾತುಗಳು ಸುಳ್ಳು ಎಂದು ಗೊತ್ತಾದ ಮೇಲೆ ನಮಗೆ ಮಾನಸಿಕ ಕಿರುಕುಳ ನೀದ್ದಾರೆ. ಮೇ 9ರಂದು ನಸುಕಿನ ಜಾವ ನಾವು ಇಬ್ಬರು ಅಲ್ಲಿಂದ ತಪ್ಪಿಸಿಕೊಂಡು ಮರಳಿ ಊರಿಗೆ ಬಂದಿದ್ದೇವೆ ಎಂದು ನಾಗೇಶ ವಿವರಿಸಿದ್ದಾರೆ.
ಯುವಕರಿಗೆ ಸರ್ಕಾರಿ ನೌಕರಿ ಎಂದು ಕರೆ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ನಾನು ಅಲ್ಲಿಗೆ ಹೋಗಿ ಸಂಕಷ್ಟ ಎದುರಿಸಿದ್ದೇನೆ. ನನ್ನ ಗೆಳೆಯ ಕರೆಮಾಡಿ ಸರ್ಕಾರಿ ನೌಕರಿ ಇದೆ ಎಂದು ಹೇಳಿ ಪಂಢರಾಪುರಕ್ಕೆ ಕರೆಸಿಕೊಂಡ. ಆದರೆ ಅದೊಂದು ಖಾಸಗಿ ಮಾರ್ಕೆಟಿಂಗ್ ಕಂಪನಿ. ಯುವಕರ ಅವಶ್ಯಕತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸುಳ್ಳು ಹೇಳಿ ಯುವಕರಿಗೆ ವಿವಿಧ ಆಮಿಷಗಳನ್ನು ನೀಡಿ ಒತ್ತಾಯ ಪೂರ್ವಕ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ತಂದೆ ಸಾಲ ಮಾಡಿ 20 ಸಾವಿರ ರೂ. ನೀಡಿದ್ದು, ಇದೀಗ ಮತ್ತೆ ಹೆಚ್ಚು ಸಂಕಷ್ಟ ಎದುರಿಸಬೇಕಾಗಿದೆ. ನಾವು ಪಾವತಿಸಿದ ಹಣ ಮರಳಿ ನೀಡುವಂತೆ ಹೇಳಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಕುರಿತು ಚಿಂತನೆ ಮಾಡುತ್ತಿದ್ದೇವೆ.
ನಾಗೇಶ ಭೀಮಶಾ
ಯುವಕರು ಜಾಗೃತರಾಗಬೇಕು. ಸರ್ಕಾರಿ ನೌಕರಿಗೆ ನಿಯಮಗಳ ಪ್ರಕಾರ ಅರ್ಜಿ ಕರೆದು ಹುದ್ದೆ ಭರ್ತಿ ಮಾಡಿಕೊಳ್ಳುತ್ತಾರೆ. ಯಾವುದೊ ಮಧ್ಯವರ್ತಿಗಳಿಂದ ಕರೆ ಮಾಡಿ ನೌಕರಿ ನೀಡುವುದಾಗಿ ಹೇಳಿದರೆ ಅವರ ಕುರಿತು
ಮಾಹಿತಿ ಕಲೆಹಾಕಬೇಕು. ಬಡವರು ಉದ್ಯೋಗ ಆಸೆಗೆ ಮರುಳಾಗಿ ಮೋಸ ಹೋಗಬಾರದು. ಮೋಸ ಹೋದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮಹೇಶ್ವರಪ್ಪ, ಡಿವೈಎಸ್ಪಿ