CONNECT WITH US  

ಮಕ್ಕಳಿಗೆ ಸಂಸ್ಕಾರ-ವಿದ್ಯೆ ಕಲಿಸಲು ಮಹಿಳೆಯರು ಮುಂದಾಗಲಿ: ನಾಡಗೌಡ

ಗೊರೇಬಾಳ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪಶು ಸಂಗೋಪನ-ಮೀನುಗಾರಿಕೆ ಖಾತೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಗೊರೇಬಾಳ ಕ್ಯಾಂಪಿನಲ್ಲಿರುವ ಮರಳು ಸಿದ್ದೇಶ್ವರ ಶಿವಲಿಂಗ, ಜಗನ್ಮಾತೆ ಗೌರಮ್ಮದೇವಿ ವಿಘ್ನೇಶ್ವರ, ನಂದಿ ಆಂಜನೇಯ ಹಾಗೂ ಶರಣ-ಶರಣೆಯರ ಮೂರ್ತಿ ಪ್ರತಿಷ್ಠಾಪನೆ ತೃತೀಯ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಜಗನ್ಮಾತೆ ಶ್ರೀದೇವಿ ಪುರಾಣ ಪಠಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆಯುವ ಮೂಲಕ ತಮ್ಮ ಪ್ರತಿಭೆ ಹೊರಹಾಕುತ್ತಿರುವು‌ದು ಸ್ವಾಗತಾರ್ಹ.
ಮಹಿಳೆಯರು ಮಕ್ಕಳಿಗೆ ಸಂಸ್ಕಾರದ ಜತೆಗೆ ವಿದ್ಯೆ ಕಲಿಸಬೇಕು. ಸಂಸ್ಕಾರದಿಂದ ವಿದ್ಯೆ ಕಲಿತ ಮಕ್ಕಳು ನಾಡಿನ ಉತ್ತಮ ನಾಯಕರಾಗಿ ಬೆಳೆಯಲಿದ್ದಾರೆ ಎಂದು ಹೇಳಿದರು.

ಮರಳಸಿದ್ದೇಶ್ವರ ಮಠದ ಪೂಜ್ಯರಾದ ವೇ.ಮೂ. ಡಾ| ಸಿದ್ದಯ್ಯ ತಾತನವರ ಆಶೀರ್ವಾದದಿಂದ ತಾವು ಸಚಿವರಾಗಿದ್ದು, ನಾನು ಇನ್ನೂ ಏನು ಸಾಧನೆ ಮಾಡಿಲ್ಲ. ಆದರೂ ಪೂಜ್ಯರು ಸನ್ಮಾನ ಮಾಡಿದ್ದಾರೆ. ಅವರ
ಸನ್ಮಾನವನ್ನು ನನ್ನ ರಕ್ಷಣಾ ಕವಚ ಎಂದು ಸ್ವೀಕರಿಸಿ ನಾಡಿನ ಸರ್ವರ ಏಳ್ಗೆಗಾಗಿ ಶ್ರಮಿಸುವುದಾಗಿ ಹೇಳಿದರು.

ನಾನು ಶಾಸಕನಾಗಿದ್ದಾಗ ಕ್ಷೇತ್ರ ಮತದಾರರಿಗೆ ಹಾಗೂ ಸುಲಭವಾಗಿ ಸಿಗುತ್ತಿದ್ದೆ. ಈಗ ಸಚಿವರಾಗಿರುವುದರಿಂದ ರಾಜ್ಯಾದ್ಯಂತ ಸಂಚರಿಸಿ ಕೆಲಸ ಮಾಡಬೇಕಾದ ಹೊಣೆಗಾರಿಕೆ ಇದೆ. ಬಿಡುವಿಲ್ಲದ ಕಾರ್ಯಕ್ರಮ ಇರುವುದರಿಂದ ಕ್ಷೇತ್ರದ ಜನರಿಗೆ ಹಾಗೂ ಕಾರ್ಯಕರ್ತರಿಗೆ ಸುಲಭವಾಗಿ ಸಿಗದೆ ಇರುವುದು ನನಗೂ ಕೂಡ ಬೇಸರ ಇದೆ ಎಂದು ಹೇಳಿದರು.

ಮರಳು ಸಿದ್ದೇಶ್ವರ ಮಠಾಧಿಧೀಶರಾದ ವೇ.ಮೂ. ಸಿದ್ದಯ್ಯ ತಾತನವರು ಸಾನ್ನಿಧ್ಯ ವಹಿಸಿದ್ದರು. ಎಂ. ರುದ್ರಗೌಡ,
ಚನ್ನಬಸವ, ವೀರಭದ್ರಯ್ಯ ಶರಣರು ಹಿರೇಮಠ ಕಾರಟಗಿ ಎಂ. ನಗೇಶ ಇದ್ದರು.


Trending videos

Back to Top