CONNECT WITH US  

ಡಿಜಿಟಲ್‌ ಇಂಡಿಯಾದತ್ತ ಹೆಜ್ಜೆ

ಹಳೆಯ ನೋಟುಗಳನ್ನು ರದ್ದು ಮಾಡಿ 1 ತಿಂಗಳು ಕಳೆದ ಅನಂತರ ಕೇಂದ್ರ ಸರಕಾರ ನಗದಿನ ಬದಲು ಜನರು ಆನ್‌ಲೈನ್‌ ಹಾಗೂ ಕಾರ್ಡ್‌ ವ್ಯವಹಾರ ಮಾಡುವಂತೆ ಉತ್ತೇಜಿಸಲು ಸಾಕಷ್ಟು ಕ್ರಮಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಮುಖ್ಯವಾಗಿ, ಕಾರ್ಡ್‌ ಬಳಕೆಗೆ ಶುಲ್ಕ ವಿಧಿಸುವುದನ್ನು ಕೈಬಿಟ್ಟು ಬಳಕೆದಾರರಿಗೇ ಲಾಭವಾಗುವಂತೆ ಡಿಸ್ಕೌಂಟ್‌ ನೀಡುವ ಕ್ರಮವೂ ಸೇರಿದೆ. ಇನ್ನುಳಿದಂತೆ ರೈಲ್ವೆ ಟಿಕೆಟ್‌ ಆನ್‌ಲೈನ್‌ ಖರೀದಿ, ಆನ್‌ಲೈನ್‌ ವಿಮೆ ಖರೀದಿ, ಪೆಟ್ರೋಲ್‌ ಬಂಕ್‌ಗಳಲ್ಲಿ ಕಾರ್ಡ್‌ ಅಥವಾ ಆನ್‌ಲೈನ್‌ ಪೇಮೆಂಟ್‌ ಮಾಡಿದರೆ ಸಣ್ಣ ಪ್ರಮಾಣದ ಡಿಸ್ಕೌಂಟ್‌, ಇ-ಟೋಲ್‌ ಪಾವತಿಗೆ ಡಿಸ್ಕೌಂಟ್‌ ಹೀಗೆ ಹಲವು ಘೋಷಣೆಗಳು ಹೊರಬಿದ್ದಿವೆ. ನಗದು ವ್ಯವಹಾರ ಹೆಚ್ಚು ನಡೆದಷ್ಟೂ ಹಣಕಾಸು ಅಕ್ರಮಗಳು ಹಾಗೂ ಭ್ರಷ್ಟಾಚಾರದ ಸಾಧ್ಯತೆ ಹೆಚ್ಚಿರುತ್ತದೆ, ಹಾಗಾಗಿ ನಗದುರಹಿತ ವ್ಯವಹಾರ ಹೆಚ್ಚಿದರೆ ಜನರಿಗೂ ಒಳ್ಳೆಯದು ಮತ್ತು ದೇಶಕ್ಕೂ ಒಳ್ಳೆಯದು ಎಂಬ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿಯವರ ಮಾತಿನಲ್ಲಿ ಹುರುಳಿದೆ.

ಆದರೆ, ಈ ಎಲ್ಲ ಕ್ರಮಗಳು 1000 ರೂ. ಹಾಗೂ 500 ರೂ.ಗಳ ಹಳೆಯ ನೋಟು ರದ್ದು ಮಾಡಿದ ಅನಂತರ ಆರ್ಥಿಕತೆಯಲ್ಲಾದ ಅಲ್ಲೋಲ ಕಲ್ಲೋಲ, ಜನರಿಗಾದ ಕಷ್ಟ, ಇನ್ನೂ ಚೇತರಿಸಿಕೊಳ್ಳದ ಉದ್ದಿಮೆಗಳು, ಹೊಸ ನೋಟು ಪ್ರಿಂಟ್‌ ಮಾಡಲು ಮತ್ತು ವಿತರಿಸಲು ಆದ ಖರ್ಚು ಹೀಗೆ ಎಲ್ಲ  ಬಾಬ್ತುಗಳನ್ನು ತುಂಬಿ ಕೊಡುತ್ತವೆಯೇ ಎಂಬುದು ಪ್ರಮುಖ ಪ್ರಶ್ನೆ. ಇದಕ್ಕೆ ಕೇಂದ್ರ ಸರಕಾರವೇ ಲೆಕ್ಕ ಕೊಡಬೇಕು. ಏಕೆಂದರೆ, ದೇಶದಲ್ಲಿ ಚಲಾವಣೆಯಲ್ಲಿದೆ ಎಂದು ಆರ್‌ಬಿಐ ಲೆಕ್ಕ ಹಾಕಿದ್ದ 14 ಲಕ್ಷ ಕೋಟಿ ರೂ. ಮೌಲ್ಯದ 500 ಮತ್ತು 1000 ರೂ. ಹಳೆಯ ನೋಟುಗಳ ಪೈಕಿ ಈಗಾಗಲೇ 12 ಲಕ್ಷ ಕೋಟಿ ರೂ. ಬ್ಯಾಂಕುಗಳಿಗೆ ವಾಪಸ್‌ ಬಂದಿದೆ. ಇನ್ನುಳಿದಿರುವುದು 2 ಲಕ್ಷ ಕೋಟಿ ರೂ. ಮಾತ್ರ. ಬದಲಾವಣೆಗೆ ಇನ್ನಷ್ಟು ಸಮಯವಿರುವುದರಿಂದ ಇನ್ನಷ್ಟು ಹಳೆಯ ಹಣ ವಾಪಸ್‌ ಬರಬಹುದು. ಆಗ ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಹೊರಬಂದಂತೆಯೂ ಆಗುವುದಿಲ್ಲ, ನಿಷ್ಕ್ರಿಯವಾದಂತೆಯೂ ಆಗುವುದಿಲ್ಲ. ಅಕ್ರಮ ದಾರಿಯಲ್ಲಿ ಹಣ ಬಿಳಿ ಮಾಡಿಕೊಂಡವರ ವಿರುದ್ಧ ಐಟಿ ಕಾರ್ಯಾಚರಣೆ ಮತ್ತಷ್ಟು ವ್ಯಾಪಕವಾಗಿ ನಡೆದು ಅವರಿಂದ ಭಾರಿ ಪ್ರಮಾಣದಲ್ಲಿ ಹಣ ವಸೂಲಾದರಷ್ಟೇ ಬೊಕ್ಕಸಕ್ಕೆ ನಿಜವಾದ ಲಾಭ.

ಇಷ್ಟಾಗಿಯೂ ನಗದುರಹಿತ ಆರ್ಥಿಕತೆಯತ್ತ ದೇಶ ಹೆಜ್ಜೆ ಹಾಕುವುದರಿಂದ ಸಾಕಷ್ಟು ಲಾಭಗಳಿವೆ. ಪ್ರಧಾನಿ ಮೋದಿಯವರು ಡಿಜಿಟಲ್‌ ಇಂಡಿಯಾ ಯೋಜನೆ ಪ್ರಕಟಿಸಿದಾಗ ಬಹುಶಃ ಈಗಿನ ಬೆಳವಣಿಗೆಗಳನ್ನು ಯಾರೂ ಊಹಿಸಿರಲಿಲ್ಲ. ಸರಕಾರಿ ಕಚೇರಿಗಳನ್ನು ಡಿಜಿಟೈಸ್‌ ಮಾಡುವುದು, ಜನರಿಗೆ ಸೇವೆಗಳನ್ನು ಡಿಜಿಟೈಸ್‌ ರೂಪದಲ್ಲಿ ಕೊಡುವುದು ಹೀಗೆ ಮೇಲ್ನೋಟದ ಒಂದಷ್ಟು ಕ್ರಮಗಳಷ್ಟೇ ಆಗ ಪ್ರಕಟವಾಗಿದ್ದವು. ಆದರೆ, ಡಿಜಿಟಲ್‌ ಇಂಡಿಯಾದ ನಿಜವಾದ ಅರ್ಥ ಈಗ ದೇಶಕ್ಕಾಗುತ್ತಿದೆ. ನೋಟು ನಿಷೇಧದ ಅನಂತರ ದೇಶದಲ್ಲಿ ಶೇ. 40ರಷ್ಟು ಪೆಟ್ರೋಲ್‌, ಡೀಸೆಲ್‌ ಖರೀದಿಯು ನಗದುರಹಿತವಾಗಿ ಆಗಿದೆ ಎಂಬುದು ಇದಕ್ಕೊಂದು ಉದಾಹರಣೆ. ಜನರು ಕಾರ್ಡ್‌ ನೀಡಿ ಪೆಟ್ರೋಲ್‌ ಖರೀದಿಸಿದ್ದು ಅನಿವಾರ್ಯತೆಯಿಂದಲೇ ಆಗಿರಬಹುದು, ಆದರೆ ಅದಕ್ಕೀಗ ಚಾರ್ಜ್‌ ಮಾಡುವುದರ ಬದಲು ಡಿಸ್ಕೌಂಟ್‌ ನೀಡಲಾಗುತ್ತದೆ ಎಂದಾದರೆ ಮಾರುಕಟ್ಟೆಗೆ ಸಾಕಷ್ಟು ನೋಟುಗಳು ಪೂರೈಕೆಯಾದ ಮೇಲೂ ಜನರು ಕಾರ್ಡ್‌ಗಳನ್ನೇ ಬಳಸುತ್ತಾರೆ. ಮೇಲೆ ಹೇಳಿದ್ದೆಲ್ಲ ಭವಿಷ್ಯದ ಪರಿಣಾಮಗಳಾದುವು. ಆದರೆ, ಸದ್ಯ 30 ದಿನ ಕಳೆದ ಮೇಲೂ ಬ್ಯಾಂಕ್‌ಗಳಲ್ಲಿ ಸಾಕಷ್ಟು ಹಣ ಸಿಗುತ್ತಿಲ್ಲ ಮತ್ತು ಎಟಿಎಂಗಳಲ್ಲಿ ಹಣ ಬರುತ್ತಿಲ್ಲ. ಮೋದಿ ಹೇಳಿದಂತೆ ಇನ್ನು 20 ದಿನದಲ್ಲಿ ಎಲ್ಲವೂ ಸರಿಹೋಗುತ್ತದೆಯೇ? 

ಸದ್ಯ ಜೇಟ್ಲಿ ಪ್ರಕಟಿಸಿರುವ ಕ್ರಮಗಳಿಂದ ಏಳೆಂಟು ಕ್ಷೇತ್ರಗಳಲ್ಲಿ ಮಾತ್ರ ಡಿಜಿಟಲ್‌ ಹಣ ಪಾವತಿಸುವುದಕ್ಕೆ ಪ್ರೋತ್ಸಾಹ ಸಿಗುತ್ತದೆ. ಇನ್ನೂ ನೂರಾರು ರೀತಿಯ ವ್ಯಾಪಾರ ವಹಿವಾಟಿನಲ್ಲಿ ಡಿಜಿಟಲ್‌ ಹಣ ಪಾವತಿಗೆ ಅವಕಾಶವಿದೆ, ಅಷ್ಟೇ ಅಲ್ಲ ಅವುಗಳಿಗೆ ಜನರು ಶುಲ್ಕ ಪಾವತಿಸಬೇಕಾಗಿದೆ. ಆದ್ದರಿಂದ ನಗದು ಹಣ ಪಾವತಿಗೆ ಹೇಗೆ ಎಲ್ಲೂ ಶುಲ್ಕವಿಲ್ಲವೋ ಹಾಗೆಯೇ ಆನ್‌ಲೈನ್‌ ಅಥವಾ ಕಾರ್ಡ್‌ ಪೇಮೆಂಟ್‌ಗೆ ಎಲ್ಲೂ ಶುಲ್ಕವಿಲ್ಲ ಎಂಬ ಸಾರ್ವತ್ರಿಕ ನೀತಿ ಬರಬೇಕು. ಆಗ ಡಿಜಿಟಲ್‌ ಇಂಡಿಯಾದ ಉದ್ದೇಶ ತಕ್ಕಮಟ್ಟಿಗೆ ಯಶಸ್ವಿಯಾಗುತ್ತದೆ.


Trending videos

Back to Top