CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪಂಚರಾಜ್ಯ ಚುನಾವಣೆ: ಮೋದಿ ನಡೆಗಳಿಗೆ ಅಗ್ನಿ ಪರೀಕ್ಷೆ

ನೋಟು ರದ್ದತಿಯನ್ನು ಜನರು ಸ್ವಾಗತಿಸಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಈ ಕ್ರಮವನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿ, ದೇಶವೇ ಮೋದಿಯವರನ್ನು ಶಪಿಸುತ್ತಿದೆ ಎಂದು ಕಾಂಗ್ರೆಸ್‌ ಹಾಗೂ ಕೆಲ ಪಕ್ಷಗಳು ಹೇಳುತ್ತಿವೆ. ಯಾರು ನಿಜ ಎಂಬುದು 5 ರಾಜ್ಯಗಳ ವಿಧಾನಸಭೆ ಚುನಾವಣೆಯ ಫ‌ಲಿತಾಂಶದ ದಿನ ಸಾಬೀತಾಗುವ ನಿರೀಕ್ಷೆಯಿದೆ.

ದೇಶದಲ್ಲೇ ಅತಿ ಹೆಚ್ಚು ವಿಧಾನಸಭೆ, ಲೋಕಸಭೆಯ ಸ್ಥಾನಗಳು ಹಾಗೂ ಅತಿ ಹೆಚ್ಚು ಜನರನ್ನು ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆಯ ದಿನಾಂಕ ನಿಗದಿಯಾಗುವುದರೊಂದಿಗೆ ಇತ್ತೀಚಿನ ಕೆಲ ತಿಂಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಾಂತಿಕಾರಿ ಸುಧಾರಣಾ ಕ್ರಮಗಳಿಗೆ ಲಿಟ¾ಸ್‌ ಪರೀಕ್ಷೆಯ ವೇದಿಕೆ ಸಿದ್ಧವಾದಂತಾಗಿದೆ. ಚುನಾವಣೆ ಘೋಷಣೆಯಾಗಿರುವ ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ಈ ಐದು ರಾಜ್ಯಗಳಲ್ಲಿ ಕೇವಲ ಪುಟ್ಟ ರಾಜ್ಯವಾಗಿರುವ ಗೋವಾದಲ್ಲಿ ಮಾತ್ರ ಸದ್ಯಕ್ಕೆ ಬಿಜೆಪಿ ಅಧಿಕಾರದಲ್ಲಿದೆ. ಪಂಜಾಬ್‌ನಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರವಿದೆ. ಅಲ್ಲಿ ಬಿಜೆಪಿಗಿಂತ ಅಕಾಲಿದಳ ಪ್ರಬಲ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹಾಗೂ ಮಣಿಪುರ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಕಳೆದ ಲೋಕಸಭೆ ಚುನಾವಣೆಯ ನಂತರ ನಡೆದ ಬಹುತೇಕ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಪ್ರಚಂಡ ಓಟ ನಡೆಸಿದ್ದ ಬಿಜೆಪಿ ಅದೇ ಓಘವನ್ನು ಈಗಲೂ ಕಾಯ್ದುಕೊಳ್ಳುತ್ತದೆಯೇ ಎಂಬ ಕುತೂಹಲ ಎಲ್ಲರಿಗೂ ಇದೆ. ಅದಕ್ಕಿಂತ ಮುಖ್ಯವಾಗಿ, ನೋಟು ನಿಷೇಧವೆಂಬ ಮೋದಿಯವರ ಕಠಿಣಾತಿಕಠಿಣ ನಿರ್ಧಾರವನ್ನು ಜನರು ಹೇಗೆ ಸ್ವೀಕರಿಸಿದ್ದಾರೆಂಬುದಕ್ಕೆ ಇದು ಸಾಕ್ಷಿಯಾಗಲಿದೆ. ಹಾಗೆಯೇ, ಮುಂದಿನ ಲೋಕಸಭೆ ಚುನಾವಣೆಗೂ ಪಂಚರಾಜ್ಯ ಚುನಾವಣೆಯ ಫ‌ಲಿತಾಂಶ ದಿಕ್ಸೂಚಿಯಾಗುವ ಸಾಧ್ಯತೆಯಿದೆ.

ಸಹಜವಾಗಿಯೇ ಈ ಚುನಾವಣೆ ನೋಟು ರದ್ದತಿಗೆ ಅಗ್ನಿ ಪರೀಕ್ಷೆಯಾಗಲಿದೆ. ಒಂದೆಡೆ, ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಅಪನಗದೀಕರಣದ ಹೆಜ್ಜೆಯನ್ನು ಇಡೀ ದೇಶ ಖಂಡಿಸುತ್ತಿದೆ ಎಂದು ಹೇಳುತ್ತವೆ. ಇನ್ನೊಂದೆಡೆ, ಜನರು ತಮಗೆ ಕಷ್ಟವಾದರೂ ನೋಟು ರದ್ದತಿಯನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ ಮತ್ತು ಇದು ದೇಶದಲ್ಲಿ ಕಪ್ಪುಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಪರಿಣಾಮಕಾರಿ ಹೆಜ್ಜೆ ಎಂಬುದನ್ನು ಅರಿತುಕೊಂಡಿದ್ದಾರೆಂದು ಬಿಜೆಪಿ ಹೇಳುತ್ತಿದೆ. ಯಾರು ಹೇಳುತ್ತಿರುವುದು ನಿಜ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಲಿದೆ. ಅದರೊಂದಿಗೆ ಬಿಜೆಪಿಯ ಭವಿಷ್ಯವೂ ನಿರ್ಧಾರವಾಗುವ ಸಾಧ್ಯತೆಯಿದೆ.

ಹಾಗೆಯೇ, ಬಿಜೆಪಿ ವಿರೋಧಿ ಪಾಳೆಯದ ಶಕ್ತಿ ಅಥವಾ ಭವಿಷ್ಯವನ್ನು ಕೂಡ ಪಂಚರಾಜ್ಯ ಚುನಾವಣೆಗಳು ನಿರ್ಧರಿಸಲಿವೆ. ನೋಟು ರದ್ದತಿಯ ಕ್ರಮದ ವಿರುದ್ಧ ಹೋರಾಡಲು ಬಿಜೆಪಿಯೇತರ ಎಲ್ಲಾ ಪಕ್ಷಗಳನ್ನೂ ಒಗ್ಗೂಡಿಸುವುದಕ್ಕೆ ಹೋಗಿ ಈಗಾಗಲೇ ಕಾಂಗ್ರೆಸ್‌ ಕೈಸುಟ್ಟುಕೊಂಡಿದೆ. ಆದರೆ, ನರೇಂದ್ರ ಮೋದಿಯವರ ರಾಜಕೀಯ ಶಕ್ತಿಯ ವಿರುದ್ಧ ಒಂದಾಗಬೇಕೆಂಬ ಚಿಂತನೆಯಂತೂ ಹಲವು ಪಕ್ಷಗಳಲ್ಲಿದೆ. ಕೆಲ ಭಿನ್ನಾಭಿಪ್ರಾಯಗಳಷ್ಟೇ ಆ ಕಾರ್ಯವನ್ನು ಆಗಗೊಡುತ್ತಿಲ್ಲ. ಪಂಚರಾಜ್ಯ ಚುನಾವಣೆಯ ಫ‌ಲಿತಾಂಶ ಬಿಜೆಪಿಗೆ ವಿರುದ್ಧವಾಗಿ ಬಂದರೆ ಮತ್ತೆ ಎಲ್ಲ ವಿರೋಧಿಗಳೂ ಒಗ್ಗಟ್ಟಾಗುವ ಪ್ರಯತ್ನಕ್ಕೆ ಚಾಲನೆ ಸಿಗಬಹುದು. ಹಾಗೆ ಅವು ಒಂದಾದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿ ಶಕ್ತಿಯೊಂದು ಸೃಷ್ಟಿಯಾದಂತಾಗುತ್ತದೆ. ಅದೇ ವೇಳೆ, ಲೋಕಸಭೆ ಚುನಾವಣೆಯ ನಂತರ ಜನಪ್ರಿಯತೆಯ ಪಾತಾಳಕ್ಕೆ ಕುಸಿದಿರುವ ಕಾಂಗ್ರೆಸ್‌ಗೆ ಈ ಚುನಾವಣೆಗಳು ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಅವಕಾಶವಾಗಿಯೂ ಒದಗಿ ಬಂದಿವೆ. ಹೇಗಿದ್ದರೂ ಉತ್ತರಾಖಂಡ ಮತ್ತು ಮಣಿಪುರದಲ್ಲಿ ಸದ್ಯ ಕಾಂಗ್ರೆಸ್‌ ಸರ್ಕಾರವೇ ಇದೆ. ಅಲ್ಲಿ ಅಧಿಕಾರ ಉಳಿಸಿಕೊಂಡರೂ ಅದು ಕಾಂಗ್ರೆಸ್‌ನ ಮಟ್ಟಿಗೆ ದೊಡ್ಡ ಸಾಧನೆಯೇ ಆಗುತ್ತದೆ. ಅದು ಸಾಧ್ಯವಾದರೆ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ಚೇತರಿಸಿಕೊಳ್ಳಲು ಕೊಂಚ ನೈತಿಕ ಸ್ಥೈರ್ಯ ಸಿಕ್ಕಂತಾಗುತ್ತದೆ.

ಬಿಜೆಪಿಗಿರುವ ಸಮಸ್ಯೆಯೇನೆಂದರೆ, ಈ ಚುನಾವಣೆಯಲ್ಲಿ ಬಿಜೆಪಿಯೇತರ ಎಲ್ಲ ಪಕ್ಷಗಳೂ ಅಭಿವೃದ್ಧಿ, ಜಾತಿ ಸಮೀಕರಣ, ಡ್ರಗ್ಸ್‌ ಹಾವಳಿ ಮುಂತಾದ ತಮ್ಮ ತಮ್ಮ ಸ್ಥಳೀಯ ಅಜೆಂಡಾಗಳ ಜೊತೆಗೆ ನೋಟು ರದ್ದತಿಯಿಂದಾದ ಸಮಸ್ಯೆಗಳನ್ನು ಜನರಿಗೆ ತಿಳಿಹೇಳುವುದನ್ನೂ ಪ್ರಮುಖ ಅಜೆಂಡಾ ಮಾಡಿಕೊಳ್ಳುತ್ತವೆ. ಆದರೆ, ಬಿಜೆಪಿಗೆ ಈ ಚುನಾವಣೆಯಲ್ಲಿ ಪ್ರಚಾರ ಮಾಡುವುದಕ್ಕೆ ಇರುವುದೂ ಅದೇ ನೋಟು ರದ್ದತಿಯ ವಿಷಯ ಹಾಗೂ ಪ್ರಧಾನಿ ಮೋದಿಯವರ ಜನಪ್ರಿಯತೆ. ಇದು ಜನರನ್ನು ಸೆಳೆಯುತ್ತದೆಯೋ, ವಿಮುಖರನ್ನಾಗಿ ಮಾಡುತ್ತದೆಯೋ ಎಂಬುದು ಸದ್ಯಕ್ಕಂತೂ ಸ್ಪಷ್ಟವಿಲ್ಲ. 

Back to Top