CONNECT WITH US  

ರಾಜ್ಯಗಳತ್ತ ಕೇಂದ್ರದ ಭೇದಭಾವ ಸಲ್ಲ : ಬರ ಪರಿಹಾರ ಸಾಲದು

ಕೇಂದ್ರ ಸರಕಾರ ಬರ ಪರಿಹಾರಕ್ಕೆಂದು ಅಳೆದೂ ಸುರಿದೂ ರಾಜ್ಯಕ್ಕೆ ಕೊಟ್ಟಿರುವುದು 1,782.44 ಕೋಟಿ ರೂ. ರಾಜ್ಯ ಕೇಳಿರುವ ಅರ್ಧದಷ್ಟು ಹಣವೂ ಸಿಕ್ಕಿಲ್ಲ. ಕರಾವಳಿಯ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ಬರಪೀಡಿತವಾಗಿವೆ ಎಂದು ಸರಕಾರ ಘೋಷಿಸಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಈ ಸಲ ರಾಜ್ಯ ಬರಕ್ಕೆ ತುತ್ತಾಗುವುದು ಬಹುತೇಕ ನಿಚ್ಚಳವಾಗಿತ್ತು. ಇದರಂಗವಾಗಿ ರಾಜ್ಯ ಕೇಂದ್ರದಿಂದ 4702.54 ಕೋಟಿ ರೂ. ಗೆ ಬೇಡಿಕೆಯಿಟ್ಟಿತ್ತು. ಸದ್ಯಕ್ಕೆ 1,782.44 ಕೋಟಿ ರೂ. ಮಾತ್ರ ಬರ ಪರಿಹಾರ ಅನುದಾನ ಘೋಷಣೆ ಮಾಡಿದೆ. ರಾಜ್ಯ ಕೇಳಿರುವ ಮೊತ್ತದ ಹಿನ್ನೆಲೆಯಲ್ಲಿ ಇದು ಬಹಳ ಕಡಿಮೆ. ಆದರೆ ಹಿಂದಿನ ಅನುದಾನಗಳನ್ನು ಹೋಲಿಸಿದರೆ ದೊಡ್ಡ ಮೊತ್ತ. 

ಕೇಂದ್ರದ ತಂಡ ಬಂದು ಬರದ ಭೀಕರತೆಯನ್ನು ಕಣ್ಣಾರೆ ಕಂಡಿದೆ. ರಾಜ್ಯ ಸರಕಾರ ಆರಂಭದಿಂದಲೇ ಬರ ಪರಿಹಾರಕ್ಕಾಗಿ ಮೊರೆಯಿಡುತ್ತಿದೆ. ಕರ್ನಾಟಕ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಈ ಸಲ ಬರದ ಪರಿಸ್ಥಿತಿಯಿಲ್ಲ. ನೋಟು ರದ್ದುಗೊಳಿಸಿದ ಪರಿಣಾಮವಾಗಿ ಸರಕಾರಕ್ಕೆ ಧಾರಾಳ ತೆರಿಗೆಯೂ ಹರಿದು ಬಂದಿದೆ. ಬ್ಯಾಂಕುಗಳಲ್ಲೂ ಸಾಕಷ್ಟು ಹಣ ಜಮೆಯಾಗಿದೆ. ಈ ಎಲ್ಲ ಪರಿಸ್ಥಿತಿಗಳನ್ನು ಗಮನಿಸುವಾಗ ರಾಜ್ಯಕ್ಕೆ ತುಸು ಹೆಚ್ಚಿಗೆ ನೆರವು ನೀಡುವ ಔದಾರ್ಯವನ್ನು ಕೇಂದ್ರ ತೋರಿಸಬೇಕಿತ್ತು. ರಾಜ್ಯಕ್ಕೆ ಅನುದಾನ ನೀಡಲು ಕೇಂದ್ರ ಜಿಪುಣತನ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ 3830 ಕೋಟಿ ರೂ.ಗೆ ರಾಜ್ಯ ಬೇಡಿಕೆಯಿಟ್ಟಿದ್ದರೆ, ನೀಡಿದ್ದು 1540 ಕೋಟಿ ರೂ. ಬರ ಪರಿಹಾರ ಎಂದಲ್ಲ; ಕೇಂದ್ರದ ಮರ್ಜಿಯಿಂದ ರಾಜ್ಯ ಅನ್ಯಾಯಕ್ಕೊಳಗಾಗುವುದಕ್ಕೆ  ಅನೇಕ ನಿದರ್ಶನಗಳಿವೆ. ಇದಕ್ಕೆ ಪ್ರತಿಕೂಲ ರಾಜಕೀಯ ಪರಿಸ್ಥಿತಿಯೂ ಕಾರಣ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರವಿರುವುದರಿಂದ ರಾಜ್ಯ ಕೇಳಿದೆಲ್ಲವನ್ನೂ ಕೇಂದ್ರ ನೀಡುತ್ತದೆ ಎಂದು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ.  

ಕೇಂದ್ರ ಘೋಷಿಸಿರುವ ಅನುದಾನದಿಂದ ರಾಜ್ಯಕ್ಕೆ ನಿರಾಶೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಬೇರೆ ಯಾವ ರಾಜ್ಯವೂ ಬರ ಪರಿಹಾರಕ್ಕಾಗಿ ಮನವಿ ಮಾಡಿರಲಿಲ್ಲ. ಬರ ಪರಿಹಾರ ಹಾಗೂ ಇತರ ವಿಪತ್ತುಗಳ ಸಂದರ್ಭದಲ್ಲಿ ಕೇಂದ್ರ ರಾಜ್ಯಗಳತ್ತ ಬೇಧಭಾವ ಮಾಡಬಾರದು. ರಾಜ್ಯದ 139 ತಾಲೂಕುಗಳಲ್ಲಿ ಬರವಿದ್ದು ಸುಮಾರು 33 ಲಕ್ಷ ರೈತರನ್ನು ನೇರವಾಗಿ ಹಾಗೂ ಹಲವಾರು ಲಕ್ಷ ಜನರನ್ನು ಪರೋಕ್ಷವಾಗಿ ತಟ್ಟಿದೆ. 17,000 ಕೋಟಿ ರೂ. ಬೆಳೆ ನಾಶವಾಗಿದೆ ಎಂದು ರಾಜ್ಯ ಸರಕಾರ ಅಂದಾಜಿಸಿದೆ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ತೃಪ್ತಿಕರವಾದ ಮೊತ್ತವನ್ನು ನೀಡಬಹುದಿತ್ತು. 

ಹಾಗೆಂದು ರಾಜಕೀಯ ಕಾರಣಕ್ಕಾಗಿ ರಾಜ್ಯಗಳತ್ತ ಮಲತಾಯಿ ಧೋರಣೆ ಅನುಸರಿಸುವುದು ಇದೇ ಮೊದಲಲ್ಲ. ಹಿಂದಿನ ಸರಕಾರಗಳೂ ಈ ಧೋರಣೆಯನ್ನು ಯಥಾನುಶಕ್ತಿ ಪಾಲಿಸಿವೆ. ಉದಾಹರಣೆಗೆ, ಹೇಳುವುದಾದರೆ ಕಳೆದ ವರ್ಷ ಬಿಜೆಪಿ ಆಳ್ವಿಕೆಯಿರುವ ಮಹಾರಾಷ್ಟ್ರಕ್ಕೆ ಬರ ಪರಿಹಾರದಲ್ಲಿ ಗರಿಷ್ಠ ಪಾಲು ಸಿಕ್ಕಿತ್ತು. ಈ ರಾಜ್ಯಕ್ಕೆ 3050 ಕೋಟಿ ರೂ. ಕೊಟ್ಟಿದ್ದರೆ ಹೆಚ್ಚು ನಷ್ಟ ಸಂಭವಿಸಿದ ಉತ್ತರ ಪ್ರದೇಶಕ್ಕೆ ಕೊಟ್ಟಿರುವುದು 1304 ಕೋಟಿ ರೂ.  ಹೀಗೆ ಇನ್ನೂ ಅನೇಕವಿದೆ. 

ಬರದ ವಿಚಾರಕ್ಕೆ ಸಂಬಂದಿಸಿದಂತೆ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಬಿಜೆಪಿ ಈಗ ಪ್ರತ್ಯೇಕವಾಗಿ ಬರದ ಪ್ರವಾಸ ಮಾಡುತ್ತಿದೆ. ಜತೆಗೆ ಯಡಿಯೂರಪ್ಪ ಕಳೆದ ವರ್ಷ ಕೊಟ್ಟ ಅನುದಾನವೇ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ. ಅವರ ಆರೋಪದಲ್ಲಿ ರಾಜಕೀಯ ಉದ್ದೇಶಗಳಿದ್ದರೂ ಕಾಡಿಬೇಡಿ ಪಡೆದುಕೊಂಡ ಅನುದಾನ ಪೂರ್ತಿಯಾಗಿ ಬಳಕೆಯಾಗುವಂತೆ ಮಾಡುವ ಹೊಣೆ ರಾಜ್ಯ ಸರಕಾರದ್ದು. ರೈತರಿಗೆ ಬರ ಪರಿಹಾರ ಎಂದು ಕಾಸು ಕೊಟ್ಟು ನಷ್ಟ ಪರಿಹಾರ ತುಂಬಿಸಿಕೊಡುವುದರ ಜತೆಗೆ ಬರವನ್ನು ಎದುರಿಸಲು ಶಾಶ್ವತವಾದ ಯೋಜನೆಗಳನ್ನು ಹಾಕಿಕೊಳ್ಳುವ ಕುರಿತು ಚಿಂತಿಸಬೇಕಿತ್ತು. ಬರ ಬಂದಾಗ ಒಂದಷ್ಟು ಅಧ್ಯಯನ, ಪ್ರವಾಸ ಮಾಡುವುದು ಅಂಕಿಅಂಶ ಸಂಗ್ರಹಿಸಿ ಹಣದ ರೂಪದಲ್ಲಿ ಪರಿಹಾರ ನೀಡಿ ಕೈತೊಳೆದುಕೊಳ್ಳುವುದು ಇಷ್ಟಕ್ಕೆ ಸರಕಾರದ ಕಾಳಜಿ ಮುಗಿಯುತ್ತದೆ. ದೂರಗಾಮಿ ಉಪಕ್ರಮಗಳನ್ನು ಚಿಂತಿಸುವ ಪ್ರಬುದ್ಧತೆಯನ್ನು ಯಾವ ಪಕ್ಷ ಅಥವ ನಾಯಕ ತೋರಿಸುತ್ತಿಲ್ಲ ಎನ್ನುವುದು ವಿಷಾದದ ಸಂಗತಿ.

Trending videos

Back to Top