CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೌಲ್ಯರಹಿತ ರಾಜಕಾರಣ ಮತ್ತೆ ಅನಾವರಣ: ಇದು ಬದಲಾಗಬೇಕು

ರಾಜ್ಯದಲ್ಲಿ ಕೇಳಿಬರುತ್ತಿರುವ ಸಾವಿರಾರು ಕೋಟಿ ರೂ. ಕಪ್ಪಕಾಣಿಕೆಯ ಸದ್ದು ರಾಜಕಾರಣದ ಅಧಃಪತನವನ್ನು ಮತ್ತೆ ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸಿದೆ. ಇದು ಕೊನೆಯಾಗಲೇ ಬೇಕು. ಕೇಂದ್ರ ಸರಕಾರವೇ ಚುನಾವಣಾ ವೆಚ್ಚ ಭರಿಸುವ ಪ್ರಸ್ತಾವ ಜಾರಿಗೆ ಬಂದರೆ ಇದಕ್ಕೆ ಅಲ್ಪ ವಿರಾಮವಾದರೂ  ಬೀಳಬಹುದೇನೋ.

ವಾಚ್‌ ಹಗರಣದ ಬಳಿಕ ತುಸು ನಿರಾಳವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ ಮತ್ತೆ ತಲೆನೋವು ಶುರುವಾಗಿದೆ. ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಂದ ಈ ತಲೆನೋವು. ತನ್ನ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಕಾಂಗ್ರೆಸ್‌ ಹೈಕಮಾಂಡಿಗೆ 1,000 ಕೋ.ರೂ. ಕಪ್ಪ ಸಲ್ಲಿಸಿದ್ದಾರೆಂದು ಹೇಳಿದ್ದ ಬಿಎಸ್‌ವೈ ಮರುದಿನವೇ ವಿವಾದಿತ ಸ್ಟೀಲ್‌ ಬ್ರಿಜ್‌ ಡೀಲ್‌ನಲ್ಲಿ ಸಿಎಂ ಮತ್ತು ಅವರ ಶಿಷ್ಯರಿಗೆ 65 ಕೋ. ರೂ. ಲಂಚ ಸಂದಾಯವಾಗಿದೆ ಎಂದು ಇನ್ನೊಂದು ಬಾಂಬ್‌ ಸಿಡಿಸಿದ್ದಾರೆ. ಈ ಎರಡೂ ಆರೋಪಗಳಿಗೆ ಅವರು ಕಾಂಗ್ರೆಸ್‌ ಶಾಸಕ ಗೋವಿಂದರಾಜು ನಿವಾಸದ ಮೇಲೆ ಐಟಿ ನಡೆದ ದಾಳಿ ವೇಳೆ ದೊರೆತ ಡೈರಿಯ ಪುರಾವೆಯನ್ನೂ ತೋರಿಸಿದ್ದಾರೆ. ಇದನ್ನು ನಿರಾಕರಿಸಿರುವ ಕಾಂಗ್ರೆಸ್‌, ಬಿಎಸ್‌ವೈ ಮತ್ತು ಸಂಸದ ಅನಂತಕುಮಾರ್‌ ಸೇರಿಕೊಂಡು ರಚಿಸಿದ ಷಡ್ಯಂತ್ರ ವಿದು. ಇದರ ಭಾಗವಾಗಿ ಗೋವಿಂದರಾಜು ಮನೆಯಿಂದ ಡೈರಿ ವಶಪಡಿಸಿಕೊಂಡು ಕಥೆ ಹೆಣೆಯಲಾಗಿದೆ. ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗಲೂ ಬಿಜೆಪಿ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿದ್ದಾರೆ ಎಂದು ಪ್ರತ್ಯಾರೋಪಿಸಿ, ಪುರಾವೆಯಾಗಿ ಅನಂತಕುಮಾರ್‌ ಮತ್ತು ಬಿಎಸ್‌ವೈ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಸಿಡಿ ಬಿಡುಗಡೆಗೊಳಿಸಿ ತಿರುಗೇಟು ನೀಡಲು ಪ್ರಯತ್ನಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಪರಸ್ಪರರ ಮೇಲೆ ಕೆಸರೆರಚಲು ವೇದಿಕೆ ಸಿದ್ಧಪಡಿಸಿವೆ. 

ಅಧಿಕಾರದಲ್ಲಿರುವ ಪಕ್ಷ ಹೈಕಮಾಂಡಿಗೆ ಅಥವಾ ಪಕ್ಷದ ವರಿಷ್ಠರಿಗೆ ಕಪ್ಪಕಾಣಿಕೆ ಸಲ್ಲಿಸುವುದು ಹೊಸ ವಿಚಾರವಂತೂ ಅಲ್ಲ. ಅನಾದಿ ಕಾಲದಿಂದ ರಾಜಕೀಯ ವ್ಯವಸ್ಥೆಯಲ್ಲಿ ಇದು ಪರೋಕ್ಷ ತೆರಿಗೆ ಪದ್ಧತಿಯಂತೆ ಜಾರಿಯಲ್ಲಿದೆ. ಹೆಚ್ಚೇಕೆ, ಚುನಾವಣೆ ಸಂದರ್ಭದಲ್ಲಿ ಟಿಕೇಟ್‌ಗಳನ್ನೇ ಮಾರಿ ಹಣ ಮಾಡಿಕೊಳ್ಳುವ ಪಕ್ಷಗಳೂ ಇವೆ. ದೇಶಕ್ಕೊಂದು ಆರ್ಥಿಕ ವ್ಯವಸ್ಥೆಯಾದರೆ ರಾಜಕೀಯ ರಂಗಕ್ಕೆ ಅದರದ್ದೇ ಇನ್ನೊಂದು ಸಮಾನಾಂತರ ಆರ್ಥಿಕ ವ್ಯವಸ್ಥೆಯಿದೆ. ದುರದೃಷ್ಟವೆಂದರೆ ಈ ಪರ್ಯಾಯ ಆರ್ಥಿಕ ವ್ಯವಸ್ಥೆ ನಿಂತಿರುವುದು ಅಕ್ರಮ ಗಳಿಕೆಯ ಆಧಾರದ ಮೇಲೆ. ಹೀಗಾಗಿಯೇ ರಾಜಕೀಯದವರ ಮನೆ ದಾಳಿಯಾದಾಗ ಕೋಟಿಗಟ್ಟಲೆ ಲೆಕ್ಕವಿಲ್ಲದ ಸಂಪತ್ತು ಪತ್ತೆಯಾಗುತ್ತದೆ. ನೋಟು ರದ್ದಾದ ಬಳಿಕ ರಾಜ್ಯದ ಕೆಲವು ರಾಜಕಾರಣಿಗಳ ಮನೆಗೆ ನಡೆದ ದಾಳಿಯ ವೇಳೆ ಸಿಕ್ಕಿದ ಅಪಾರ ಪ್ರಮಾಣದ ಸಂಪತ್ತೇ ಇದಕ್ಕೆ ಉದಾಹರಣೆ. ಚುನಾವಣೆ ಎದುರಿಸಲು ಬೇಕಾಗುತ್ತದೆ ಎಂದು ಅಧಿಕಾರ ಸಿಕ್ಕಿದ ಕೂಡಲೇ ರಾಜಕಾರಣಿಗಳು ಹಣ ಜಮೆ ಮಾಡತೊಡಗುತ್ತಾರೆ. ರಾಜಕೀಯ ಭ್ರಷ್ಟಾಚಾರದ ಮೂಲವಿರುವುದೇ ಚುನಾವಣೆಯಲ್ಲಿ. ಇದನ್ನು ನಿಗ್ರಹಿಸುವ ಸಲುವಾಗಿ ಕೇಂದ್ರ ಬಜೆಟ್‌ನಲ್ಲಿ ಬೇನಾಮಿ ನಗದು ದೇಣಿಗೆ ಸ್ವೀಕಾರಕ್ಕೆ ಮಿತಿ ವಿಧಿಸಿರುವುದು ಉತ್ತಮ ನಡೆಯೇನೋ ನಿಜ. ಹಾಗೆಂದು ಇದೊಂದರಿಂದಲೇ ಚುನಾವಣಾ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳು ಸಾಕಷ್ಟು ಪ್ರಯತ್ನಪಟ್ಟಿದ್ದರೂ ಪೂರ್ತಿ ಫ‌ಲ ಸಿಕ್ಕಿಲ್ಲ. 

ಎಲ್ಲ ಪಕ್ಷಗಳು ಅಧಿಕಾರದಲ್ಲಿರುವಾಗ ಹೈಕಮಾಂಡ್‌ಗೆ ಕಪ್ಪ ಸಲ್ಲಿಸುತ್ತವೆ. ಹಿಂದೆ ಬಿಎಸ್‌ವೈ ಮಾಡಿದ್ದಾರೆ, ಈಗ ನಾವು ಮಾಡಿರುವುದರಲ್ಲಿ ತಪ್ಪೇನಿದೆ ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದೆ ಸರಕಾರ. ಭ್ರಷ್ಟಾಚಾರ ಯಾರು ಎಸಗಿದರೂ ತಪ್ಪು. ಅವರು ಮಾಡಿದ್ದಾರೆ ಎನ್ನುವುದು ನಾವು ಮಾಡಿದ ತಪ್ಪಿಗೆ ಸಮರ್ಥನೆಯಾಗದು. ಆರೋಪ ಹೊರಿಸಿದವನನ್ನೇ ಭ್ರಷ್ಟ ಎಂದು ಹೇಳಿ ಪಾರಾಗುವುದು ಈಗ ರಾಜಕೀಯದವರ ಚಾಳಿಯೇ ಆಗಿದೆ. ಕಾಂಗ್ರೆಸ್‌ ಈ ಹಾದಿಯನ್ನು ಅನುಸರಿಸದೆ ತನ್ನ ಮೇಲೆ ಕೇಳಿ ಬಂದಿರುವ ಆರೋಪವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ನಿರ್ದೋಷಿ ಎಂದು ಸಾಬೀತುಪಡಿಸಿಕೊಂಡಿದ್ದರೆ ಘನತೆ ಹೆಚ್ಚುತ್ತಿತ್ತು. ಅದೇ ರೀತಿ ಚುನಾವಣೆ ಕಾಲಕ್ಕೆ ಸುದ್ದಿಯಲ್ಲಿರಲು ಹಿಟ್‌ ಆ್ಯಂಡ್‌ ರನ್‌ ಆರೋಪ ಮಾಡಿದ ಅಪಖ್ಯಾತಿಯಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಮಾಡಿದ ಆರೋಪಗಳಿಗೆಲ್ಲ ಪುರಾವೆಗಳನ್ನು ಒದಗಿಸಿ ಸರಕಾರವನ್ನು ಕಟಕಟೆಗೆ ಎಳೆದು ತರಬೇಕಿದೆ.

Back to Top