CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಲೀನಗೊಂಡರೆ ಮಾತ್ರ ಸಾಕೇ? ವಿಶ್ವದರ್ಜೆ ಕಾಪಾಡಿಕೊಳ್ಳಲಿ

ಎಸ್‌ಬಿಐ ಜತೆಗೆ ಐದು ಸಹವರ್ತಿ ಬ್ಯಾಂಕುಗಳ ವಿಲಯನ ಬ್ಯಾಂಕ್‌ ವಿಲಯನ ಪ್ರಕ್ರಿಯೆಯ ಪ್ರಸ್ತಾವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ ವಿಲೀನಗೊಂಡರೆ ಮಾತ್ರ ಸಾಲದು. ದೇಶದ ಎಲ್ಲರಿಗೂ ಬ್ಯಾಂಕಿಂಗ್‌ ಸೇವೆಯ ವಿಸ್ತರಣೆ, ಸೇವೆಯಲ್ಲಿ ವಿಶ್ವದರ್ಜೆ, ಖಾಸಗಿ ಬ್ಯಾಂಕುಗಳಿಗೆ ಸರಿಸಾಟಿಯಾಗಿ ಡಿಜಿಟಲ್‌ ಬ್ಯಾಂಕಿಂಗ್‌ ಸಾಧಿಸುವುದು ಕೂಡ ನಡೆಯಬೇಕಿದೆ.

ದೇಶದ ಅತಿ ದೊಡ್ಡ ಬ್ಯಾಂಕ್‌ ಎಂಬ ಹಿರಿಮೆಯಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾವನ್ನು ಜಾಗತಿಕ ಮಟ್ಟದ ಬ್ಯಾಂಕ್‌ ಆಗಿ ರೂಪಿಸುವ ಗುರಿಯೊಂದಿಗೆ ಐದು ಸಹವರ್ತಿ ಬ್ಯಾಂಕ್‌ಗಳನ್ನು ಅದರ ಜತೆಗೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದೆ. ಈ ಮೂಲಕ ಬಹಳ ಕಾಲದಿಂದ ಚರ್ಚೆಯಲ್ಲಿದ್ದ ವಿಲಯನ ಪ್ರಸ್ತಾವವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹೆಜ್ಜೆ ಮುಂದಿಟ್ಟಿದೆ. ಎಸ್‌ಬಿಐಗೆ ಐದು ಅಂಗ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳನ್ನು ಸ್ಟೇಟ್‌ ಬ್ಯಾಂಕಿನ ಭಾಗವೆಂದೇ ತಿಳಿಯಲಾಗುತ್ತಿದ್ದರೂ ಅವುಗಳಿಗೆ ಪ್ರತ್ಯೇಕ ಅಸ್ತಿತ್ವವಿದೆ. ಪ್ರತೀ ಬ್ಯಾಂಕ್‌ ಪ್ರತ್ಯೇಕ ಅಧ್ಯಕ್ಷರನ್ನು ಮತ್ತು ನಿರ್ದೇಶಕ ಮಂಡಳಿಯನ್ನು ಹೊಂದಿವೆ. ಎಲ್ಲ ಐದು ಬ್ಯಾಂಕ್‌ಗಳು ಪ್ರತ್ಯೇಕ ಬ್ಯಾಲನ್ಸ್‌ಶೀಟ್‌ ಇದೆ. ಈ ಬ್ಯಾಂಕ್‌ಗಳನ್ನು ಸ್ಟೇಟ್‌ ಬ್ಯಾಂಕಿನಲ್ಲಿ ವಿಲೀನಗೊಳಿಸಿ ಒಂದು ಬೃಹತ್‌ ಬ್ಯಾಂಕ್‌ ರಚಿಸುವ ಭಾರೀ ಸವಾಲಿನ ಕೆಲಸವಿದು.

ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಆ್ಯಂಡ್‌ ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್ತಿ ರುವಾಂಕೂರು, ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲ ಮತ್ತು ಸ್ಟೇಟ್‌ ಬ್ಯಾಂಕ್‌ ಹೈದರಾಬಾದ್‌ ವಿಲೀನದ ಬಳಿಕ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಭಾರತೀಯ ಮಹಿಳಾ ಬ್ಯಾಂಕ್‌ನ್ನು ಕೂಡ ವಿಲೀನಗೊಳಿಸುವ ಪ್ರಸ್ತಾವ ಇದ್ದರೂ ಸದ್ಯಕ್ಕೆ ಅದನ್ನು ಸೇರಿಸಿಕೊಳ್ಳಲಾಗಿಲ್ಲ. ಬ್ಯಾಂಕ್‌ಗಳನ್ನು ವಿಲಯನಗೊಳಿಸುವುದರಿಂದ ಆಗುವ ಲಾಭವೇನು ಎನ್ನುವ ಪ್ರಶ್ನೆ ಜನಸಾಮಾನ್ಯ ರಿಗೆ ಎದುರಾಗುವುದು ಸಹಜ. ತುಂಬ ಸರಳವಾಗಿ ಹೇಳುವುದಾದರೆ ಇದರಿಂದ ಒಂದು ಬೃಹತ್‌ ಬ್ಯಾಂಕ್‌ ಸೃಷ್ಟಿಯಾಗು ವುದು ಮಾತ್ರವಲ್ಲದೆ ಬ್ಯಾಂಕ್‌ಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಉಳಿತಾಯವಾಗಲಿದೆ. ವಿತ್ತ ಸಚಿವ ಅರುಣ್‌ ಜೇತ್ಲೀ ಹೇಳುವ ಪ್ರಕಾರ ವಿಲಯನ ಪ್ರಕ್ರಿಯೆ ಮುಗಿದ ಮೊದಲ ವರ್ಷವೇ ಸುಮಾರು 1000 ಕೋ. ರೂ. ನಿರ್ವಹಣಾ ವೆಚ್ಚ ಉಳಿತಾಯವಾಗಲಿದೆ. ಜತೆಗೆ ಬ್ಯಾಂಕ್‌ಗಳ ಕಾರ್ಯ ದಕ್ಷತೆ ಹೆಚ್ಚುತ್ತದೆ. ಬ್ಯಾಂಕ್‌ಗಳ ಪ್ರಾದೇಶಿಕ ಸೀಮಿತ ವ್ಯಾಪ್ತಿ ಕೊನೆಗೊಳ್ಳುತ್ತದೆ.

ಸೊತ್ತು ಮೌಲ್ಯದ ಆಧಾರದಲ್ಲಿ ರಚಿಸಿರುವ ಜಗತ್ತಿನ ಟಾಪ್‌ 20 ಬ್ಯಾಂಕ್‌ಗಳಲ್ಲಿ ಭಾರತದ ಒಂದೂ ಬ್ಯಾಂಕ್‌ ಇಲ್ಲ. ಈ ಪಟ್ಟಿಯಲ್ಲಿ ಚೀನದ್ದೇ ಪಾರಮ್ಯ. ಚೀನದ ಮೂರು ಬ್ಯಾಂಕ್‌ಗಳು ಸತತವಾಗಿ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿವೆ. ಇದೀಗ ವಿಲೀನ ಕಾರ್ಯಗತವಾದರೆ ಸ್ಟೇಟ್‌ ಬ್ಯಾಂಕ್‌ ಜಗತ್ತಿನ ಅತಿ ದೊಡ್ಡ 50 ಬ್ಯಾಂಕ್‌ಗಳ ಸಾಲಿನಲ್ಲಿ ವಿರಾಜಮಾನವಾಗಲಿದೆ. ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾದ ಸೊತ್ತು ಮೌಲ್ಯ 37 ಲಕ್ಷ ಕೋ. ರೂ.ಗೇರಲಿದೆ. 22,500 ಶಾಖೆಗಳು, 58,000 ಎಟಿಎಂಗಳು ಮತ್ತು 50 ಕೋಟಿ ಗ್ರಾಹಕ ಬಲಿಷ್ಠ ಜಾಲವನ್ನು ಹೊಂದಲಿದೆ.

ಹಾಗೆಂದು ಅಂಗ ಬ್ಯಾಂಕ್‌ಗಳು ಸ್ಟೇಟ್‌ ಬ್ಯಾಂಕ್‌ ಇಂಡಿಯಾದಲ್ಲಿ ವಿಲೀನವಾಗುತ್ತಿರುವುದು ಇದೇ ಮೊದಲೇನಲ್ಲ. ಸ್ಟೇಟ್‌ ಬ್ಯಾಂಕ್‌ ಇಂದೋರ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ಸೌ ರಾಷ್ಟ್ರವನ್ನು ಈ ಹಿಂದೆಯೇ ವಿಲೀನಗೊಳಿಸಲಾಗಿತ್ತು. ವಿಲಯನ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಮೊದಲಾಗಿ ಇದಕ್ಕೆ ವಿವಿಧ ಕಾರ್ಮಿಕ ಯೂನಿಯನ್‌ಗಳ ಪ್ರಬಲ ವಿರೋಧವಿದೆ. ವಿಲಯನಗೊಂಡ ಬಳಿಕ ಒಂದೇ ಬ್ಯಾಂಕಿನ ಎರಡೆರಡು ಶಾಖೆಗಳು ಒಂದೇ ಸ್ಥಳದಲ್ಲಿ ಕಾರ್ಯಾಚರಿಸುವಂತಿಲ್ಲ. ಸಹಜವಾಗಿಯೇ ಹೆಚ್ಚುವರಿ ಶಾಖೆಗಳನ್ನು ಮುಚ್ಚಬೇಕಾಗುತ್ತದೆ. ಈ ಶಾಖೆಯಲ್ಲಿರುವ ಸಿಬಂದಿ ಅತಂತ್ರರಾಗುತ್ತಾರೆ. ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಮತ್ತು ಪರಿಹಾರ ನೀಡುವುದು ಅತೀ ಅಗತ್ಯ. ಜತೆಗೆ ಪ್ರಾದೇಶಿಕ ಸ್ಟೇಟ್‌ ಬ್ಯಾಂಕ್‌ಗಳನ್ನು ಆಯಾಯ ರಾಜ್ಯಗಳು ತಮ್ಮ ಅಸ್ಮಿತೆ ಎಂಬುದಾಗಿ ಭಾವಿಸಿವೆ. ಈ ರಾಜ್ಯಗಳಲ್ಲಿ ವಿಲಯನಕ್ಕೆ ಪ್ರಬಲ ವಿರೋಧ ಎದುರಾಗಬಹುದು. ನಿರ್ದಿಷ್ಟವಾಗಿ ಎಡಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಇದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಸಂಸತ್ತಿನಲ್ಲೂ ವಿಲಯನವನ್ನು ವಿರೋಧಿಸಿವೆ. ಹೀಗಾಗಿ ಸಂಪುಟ ಸಭೆಯಲ್ಲಿ ಅಂಗೀಕಾರವಾಗಿದ್ದರೂ ಸಂಸತ್ತಿನ ಅಂಗೀಕಾರ ಪಡೆದುಕೊಳ್ಳಲು ಸರಕಾರ ಬಹಳಷ್ಟು ಬೆವರಿಳಿಸಬೇಕಾಗಬಹುದು. ಈಗ ಖಾಸಗಿ ಬ್ಯಾಂಕ್‌ಗಳು ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ ಭಾರೀ ಸ್ಪರ್ಧೆ ಒಡ್ಡುತ್ತಿವೆ. ಸೇವೆಗಳ ವಿಚಾರದಲ್ಲಿ ಸರಕಾರಿ ಬ್ಯಾಂಕ್‌ಗಳಿಂದ ಖಾಸಗಿ ಬ್ಯಾಂಕ್‌ಗಳು ಬಹಳ ಮುಂದೆ ಇವೆ. ಖಾಸಗಿ ಬ್ಯಾಂಕ್‌ಗಳ ಸೇವೆಗಳು ಈಗ ಮನೆ ಬಾಗಿಲಿಗೆ ಬಂದಿದೆ. ಜತೆಗೆ ಡಿಜಿಟಲ್‌ ಬ್ಯಾಂಕಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ವಿಶ್ವದರ್ಜೆಯ ಬ್ಯಾಂಕ್‌ ಆಗುವತ್ತ ಹೊರಟಿರುವ ಎಸ್‌ಬಿಐ ಸೇವೆಯಲ್ಲೂ ವಿಶ್ವದರ್ಜೆಯನ್ನು ಕಾಪಾಡಿಕೊಂಡರೆ ಮಾತ್ರ ವಿಲಯನ ಸಾರ್ಥಕವಾಗಬಹುದು.

ಇಂದು ಹೆಚ್ಚು ಓದಿದ್ದು

Back to Top