CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಿಂಬಾಗಿಲ ಮೂಲಕ ಎಫ್ಡಿಐಗೆ ಮಣೆ ಪರಿಣಾಮದ ಬಗ್ಗೆ ಚಿಂತಿಸಿ

ಎಫ್ಡಿಐ ಮೇಲಿನ ನಿರ್ಬಂಧವನ್ನು ತೆಗೆದುಹಾಕುವತ್ತ ಕೇಂದ್ರ ಮುಂದಡಿ ಇರಿಸಿದೆ. ಅದರ ಮೇಲೆ ಅತಿ ಅವಲಂಬನೆ ಕ್ಷೇಮಕರವಲ್ಲ, ಜತೆಗೆ ಇದು ಎನ್‌ಡಿಎಯ ಈ ಹಿಂದಿನ ನಿಲುವಿಗೂ ವಿರುದ್ಧ ದಿಕ್ಕಿನ ನಡೆ. ಇದರಿಂದ ದೇಶೀಯ ವ್ಯಾಪಾರೋದ್ಯಮ, ಕೃಷಿ ಇತ್ಯಾದಿ ಮೇಲಿನ ಪರಿಣಾಮದ ಬಗ್ಗೆ ಚಿಂತಿಸಬೇಕು.

ವಿದೇಶಿ ನೇರ ಹೂಡಿಕೆ ಮೇಲಿದ್ದ ಅಲ್ಪಸ್ವಲ್ಪ ನಿರ್ಬಂಧಗಳನ್ನು ತೆಗೆದು ಹಾಕಲು ಸರಕಾರ ಮುಂದಾಗಿದೆ. ಇದರ ಮೊದಲ ನಡೆಯಾಗಿ ಆರ್ಥಿಕ ವ್ಯವಹಾರಗಳ ಇಲಾಖೆಯು ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಗೊಳಿಸುವ ಸಂಪುಟ ಟಿಪ್ಪಣಿಯನ್ನು ವಿವಿಧ ಸಚಿವಾಲಯಗಳ ಪರಿಗಣನೆಗಾಗಿ ರಚಿಸಿದೆ. ದೇಶಕ್ಕೆ ಹರಿದು ಬರುವ ಎಫ್ಡಿಐ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆಯಿದು. ಇದನ್ನು ರದ್ದುಗೊಳಿಸುವ ಪ್ರಸ್ತಾವಕ್ಕೆ ಸಂಪುಟದ ಅಂಗೀಕಾರ ಸಿಕ್ಕಿದರೆ ಮುಂದೆ ಎಲ್ಲ ವಿದೇಶಿ ಹೂಡಿಕೆಗಳಿಗೆ ಆಯಾಯ ಇಲಾಖೆಗಳ ಅನುಮತಿ ಮಾತ್ರ ಸಾಕು. ಹತ್ತಾರು ಮಟ್ಟದಲ್ಲಿ ಅನುಮತಿಗಾಗಿ ಪರದಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ಇದರಿಂದ ಏನಾಗುತ್ತದೆ ಎಂದರೆ ವಿಮೆ, ರಕ್ಷಣಾ ಉತ್ಪಾದನೆ, ಪ್ರಸಾರ ಮುಂತಾದ ಮಹತ್ವದ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರನಿಗೆ ಒಮ್ಮೆ ಲೈಸೆನ್ಸ್‌ ಸಿಕ್ಕಿದರೆ ಅನಂತರ ಇನ್ನಿತರ ಅನುಮತಿಗಳನ್ನು ಪಡೆಯುವ ಅಗತ್ಯವಿರುವುದಿಲ್ಲ. ಇದನ್ನು ತ್ವರಿತವಾಗಿ ಜಾರಿಗೆ ತರುವ ಸಲುವಾಗಿ ಸರಕಾರ ಏಪ್ರಿಲ್‌ನ ಸಂಪುಟ ಸಭೆಯಲ್ಲೇ ಪ್ರಸ್ತಾವ ಮಂಡಿಸುವ ಸಾಧ್ಯತೆಯಿದೆ. ದೇಶದ ಕೆಂಪುಪಟ್ಟಿಯ ಆಮೆಗತಿಯ ನಡಿಗೆಯ ಹಿನ್ನೆಲೆಯಲ್ಲಿ ಇದು ಅಪೇಕ್ಷಿತ ನಡೆಯಾಗಿದ್ದರೂ ಇದೇ ವೇಳೆ ವಿದೇಶಿ ಹೂಡಿಕೆ ಮೇಲಿನ ನಿಯಂತ್ರಣವನ್ನು ಸರಕಾರ ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯವೂ ಇದೆ. ಒಂದರ್ಥದಲ್ಲಿ ಇದು ಹಿಂಬಾಗಿಲಿನ ಮೂಲಕ ಎಫ್ಡಿಐಗೆ ಮಣೆ ಹಾಕುವ ತಂತ್ರ. 

ವಿರೋಧ ಪಕ್ಷವಾಗಿದ್ದಾಗ ಎಫ್ಡಿಐಯನ್ನು ಖಡಾಖಂಡಿತ ವಿರೋಧಿಸುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೇರಿದಾಗ ಎಫ್ಡಿಐಯನ್ನು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿರುವುದು ಒಂದು ರೀತಿಯಲ್ಲಿ ವಿರುದ್ಧ ದಿಕ್ಕಿನ ನಡಿಗೆ. ಅಧಿಕಾರ ಪಡೆದಾಗ ಎಲ್ಲ ಪಕ್ಷಗಳ ಬಣ್ಣ ಬದಲಾಗುತ್ತದೆ ಎನ್ನುವುದಕ್ಕೆ ಬಿಜೆಪಿಯೂ ಹೊರತಾಗಿಲ್ಲವೇನೋ ಎಂಬ ಅನುಮಾನವನ್ನು ಇದು ಹುಟ್ಟಿಸುತ್ತಿದೆ. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಮೇಕ್‌ ಇನ್‌ ಇಂಡಿಯಾ ವಿದೇಶಿ ಬಂಡವಾಳವಿಲ್ಲದೆ ಈಡೇರಲು ಸಾಧ್ಯವಿಲ್ಲ ಎನ್ನುವುದು ಒಪ್ಪತಕ್ಕ ಮಾತು. ಆದರೆ ಇದಕ್ಕಾಗಿ ಎಫ್ಡಿಐ ಮೇಲಿನ ಎಲ್ಲ ನಿಯಂತ್ರಣಗಳನ್ನು ಕಳೆದುಕೊಂಡರೆ ಏನಾಗಬಹುದು ಎನ್ನುವುದು ಚಿಂತಿಸಬೇಕಾದ ವಿಚಾರ. ರಕ್ಷಣೆ, ವಿಮಾನ ಯಾನ, ನಿರ್ಮಾಣ, ಪಿಂಚಣಿ, ತೋಟಗಾರಿಕೆ, ಚಿಲ್ಲರೆ ವ್ಯಾಪಾರ ಇತ್ಯಾದಿ ಕ್ಷೇತ್ರಗಳನ್ನು ಈಗಾಗಲೇ ಎಫ್ಡಿಐಗೆ ತೆರೆಯಲಾಗಿದೆ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ. 100 ಎಫ್ಡಿಐಗೆ ಅನುಮತಿ ಕೊಡುವ ಸಂದರ್ಭದಲ್ಲಿ ಶೇ.30 ಸರಕು ಖರೀದಿಯನ್ನು ಸ್ಥಳೀಯವಾಗಿ ಮಾಡಬೇಕೆಂಬ ನಿಯಮ ರಚಿಸಲಾಗಿತ್ತು. ಆದರೆ ಆ್ಯಪಲ್‌ ಮತ್ತಿತರ ವಿದೇಶಿ ದೈತ್ಯ ಕಂಪನಿಗಳ ಒತ್ತಡಕ್ಕೆ ಮಣಿದು ಈ ನಿಯಮದಲ್ಲೂ ವಿನಾಯಿತಿ ನೀಡಲಾಗಿದೆ. ಹೀಗಾಗಿಯೇ ಅಮೆಜಾನ್‌, ಫ್ಲಿÉಪ್‌ಕಾರ್ಟ್‌, ಪೇಟಿಎಂ, ಸ್ನ್ಯಾಪ್‌ಡೀಲ್‌ನಂತಹ ವಿದೇಶಿ ಆನ್‌ಲೈನ್‌ ಮಾರಾಟ ಕಂಪನಿಗಳು ಎರಡೂ ಕೈಗೆಳಲ್ಲಿ ದುಡ್ಡು ಬಾಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆನ್‌ಲೈನ್‌ ಮಾರಾಟ ಕಂಪನಿಗಳ ಪರಿಣಾಮ ಎಷ್ಟಾಗಿದೆಯೆಂದರೆ ಮಹಾನಗರಗಳು ಮಾತ್ರವಲ್ಲದೆ, ಚಿಕ್ಕಪುಟ್ಟ ಪಟ್ಟಣಗಳ ಚಿಲ್ಲರೆ ವ್ಯಾಪಾರಿಗಳು ಕೂಡ ವ್ಯಾಪಾರವಿಲ್ಲದೆ ನೊಣ ಹೊಡೆಯುವ ಪರಿಸ್ಥಿತಿ ಬಂದಿದೆ. 

ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಗೊಳಿಸುವ ಪ್ರಸ್ತಾವ ಅರುಣ್‌ ಜೇಟಿÉ ಬಜೆಟ್‌ ಭಾಷಣದಲ್ಲೂ ಇತ್ತು. ಕಳೆದೆರಡು ವರ್ಷಗಳಲ್ಲಿ ಕೇಂದ್ರ ವಿದೇಶಿ ನೇರ ಹೂಡಿಕೆಗೆ ಬಹಳ ಔದಾರ್ಯ ತೋರಿಸಿದೆ. 2014ರಲ್ಲಿ ನೀಡಿರುವ ಆಶ್ವಾಸನೆಗಳೆಲ್ಲ ಈಡೇರಿ 2019ರ ಚುನಾವಣೆಗೆ ಅಣಿಯಾಗಲು ದೊಡ್ಡ ಮಟ್ಟದ ಬಂಡವಾಳ ಹರಿದು ಬರಬೇಕು ಎನ್ನುವುದು ಇದರ ಹಿಂದಿರುವ ಕಾರಣ. ಹಾಲಿ ಸರಕಾರದ ಮೇಲೆ ಜನರು ಇಟ್ಟಿರುವ ಅಪಾರ ನಿರೀಕ್ಷೆಗಳನ್ನು ಈಡೇರಿಸುವ ಉದ್ದೇಶದಿಂದ ಮೋದಿ ಮತ್ತು ಜೇಟಿ ಬಂಡವಾಳ ಕ್ರೋಢೀಕರಣಕ್ಕೆ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. 

ಎಫ್ಡಿಐ ಮೇಲಿನ ಈ ಪರಿಯ ಅವಲಂಬನೆ ಭವಿಷ್ಯದಲ್ಲಿ ದೇಶದ ಆರ್ಥಿಕತೆಗೆ ಪ್ರಬಲ ಹೊಡೆತ ನೀಡಬಹುದು. ಎಫ್ಡಿಐಗೆ ಹೆಬ್ಟಾಗಿಲು ತೆರೆದುಕೊಟ್ಟ ಕಳೆದೆರಡು ದಶಕಗಳ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಇದರಿಂದ ರೈತರಿಗೆ, ಸಣ್ಣ ಉದ್ದಿಮೆದಾರರಿಗೆ ಆಗಿರುವ ಪ್ರಯೋಜನ ಅಷ್ಟಕ್ಕಷ್ಟೆ ಎನ್ನುವುದು ಅರಿವಾಗುತ್ತದೆ. ಹೀಗಾಗಿ ಎಫ್ಡಿಐಗೊಂದು ಮಿತಿ ಹಾಕಿ ಸ್ಥಳೀಯವಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಹೆಚ್ಚು ಸಮರ್ಪಕವಾದೀತು.

Back to Top