CONNECT WITH US  

ಮೊಬೈಲ್‌ ಬಳಕೆಗೆ ಸ್ವಯಂನಿಯಂತ್ರಣ ಅನಿವಾರ್ಯ: ಅತಿಯಾದರೆ ಅಮೃತವೂ ವಿಷ!

ಇಂದಿನ  ತಂತ್ರಜ್ಞಾನ ಮತ್ತು  ಅನ್ವೇಷಣಾ ಯುಗದಲ್ಲಿ  ನಾಗರಿಕತೆ  ಅಭಿವೃದ್ಧಿಯಲ್ಲಿ  ಮೊಬೈಲ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದೆಯಾದರೂ  ಇದರ ಅತಿಯಾದ ಬಳಕೆ ಭಾರೀ  ಸಮಸ್ಯೆ ತಂದೊಡ್ಡಲಿದೆ ಎಂಬುದನ್ನು  ನಾವು ಅರಿತುಕೊಳ್ಳಬೇಕಿದೆ. ಅತಿಯಾದರೆ  ಅಮೃತವೂ ವಿಷ ಎಂಬುದನ್ನು  ಅರ್ಥೈಸಿ ಮೊಬೈಲ್‌ ಬಳಕೆ  ಮೇಲೆ ಕಡಿವಾಣ ಹಾಕಲೇಬೇಕಿದೆ.

20ನೇ ಶತಮಾನದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಅನ್ವೇಷಣೆಯಾಗಿರುವ ಮೊಬೈಲ್‌ ಫೋನ್‌ ಬಳಕೆ   ಇಂದು  ಜಗತ್ತಿನಾದ್ಯಂತ  ಸಾರ್ವತ್ರಿಕವಾಗಿದೆ. ಅಗತ್ಯತೆಯಾಗಿ ಮಾರ್ಪಟ್ಟಿದೆ. ವಿಶ್ವಸಂಸ್ಥೆಯ ಟೆಲಿಕಾಂ ಸಂಸ್ಥೆಯ  ಸಮೀಕ್ಷೆ  ಪ್ರಕಾರ ವಿಶ್ವದಾದ್ಯಂತ  600 ಕೋಟಿ  ಮೊಬೈಲ್‌  ಫೋನ್‌ಗಳು  ಬಳಕೆಯಲ್ಲಿವೆ.  ಇನ್ನು  ಭಾರತದಲ್ಲಿ  ಕಳೆದ  ವರ್ಷ ನಡೆಸಲಾದ  ಸಮೀಕ್ಷೆ  ಪ್ರಕಾರ  ಶೇ. 88ರಷ್ಟು  ಕುಟುಂಬಗಳು  ಮೊಬೈಲ್‌ ಹೊಂದಿವೆ.  ಸಂಪರ್ಕ ಮತ್ತು ಸಂವಹನದ  ಕೊಂಡಿಯಾಗಿರುವ  ಮೊಬೈಲ್‌ನಲ್ಲಿ  ಜನರಿಗೆ  ಎಲ್ಲ  ಸೌಲಭ್ಯಗಳೂ  ಲಭ್ಯವಾಗುತ್ತಿದೆ.  ಇಂಟರ್‌ನೆಟ್‌  ಸೌಲಭ್ಯ  ಮೊಬೈಲ್‌ನ್ನು  ಜನರ  ಪಾಲಿಗೆ ಇನ್ನಷ್ಟು  ಅನಿವಾರ್ಯವನ್ನಾಗಿಸಿದೆ ಎಂದರೆ ತಪ್ಪಿಲ್ಲ. ಇದರಿಂದ  ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ  ಮೊಬೈಲ್‌ ಫೋನ್‌ಬಳಕೆ  ಹೆಚ್ಚುತ್ತಿದ್ದು,  ಇದು ಅವರ ಆರೋಗ್ಯ  ಮತ್ತು ಭವಿಷ್ಯದ  ಮೇಲೆ  ವ್ಯತಿರಿಕ್ತ  ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳಂತೂ ಮೊಬೈಲ್‌ನ್ನು  ತಮ್ಮ  ವ್ಯಾಸಂಗಕ್ಕೂ  ಬಳಸಿಕೊಳ್ಳತೊಡಗಿದ್ದು,  ನೋಟ್‌ಪುಸ್ತಕಗಳು  ಮರೆಯಾಗತೊಡಗಿವೆ. 

ಕಳೆದೆರಡು ದಶಕಗಳಿಂದೀಚೆಗೆ ಮೊಬೈಲ್‌  ಬಳಕೆ  ಸಾರ್ವತ್ರಿಕಗೊಂಡ  ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳು  ನಡೆಸಿದ  ಅಧ್ಯಯನದಲ್ಲಿ  ಮೊಬೈಲ್‌ನ ಅಧಿಕ  ಬಳಕೆ ಮಾನವನ ಆರೋಗ್ಯ, ವಿದ್ಯಾಭ್ಯಾಸ,  ದೈಹಿಕ ವ್ಯಾಯಾಮ, ಕಲೆ, ಸಂಸ್ಕೃತಿ...ಹೀಗೆ  ಎಲ್ಲದರ  ಮೇಲೂ ಪರಿಣಾಮ ಬೀರುತ್ತವೆ ಎಂಬುದು  ಸಾಬೀತಾಗಿದೆ. ಇತ್ತೀಚಿನ ಕೆಲವು  ಸಮೀಕ್ಷೆಗಳಲ್ಲಿ  ಮಾರಕ  ಕ್ಯಾನ್ಸರ್‌ ಕಾಯಿಲೆಗೂ ಮೊಬೈಲ್‌ ಫೋನ್‌ಗೂ  ನೇರ ಸಂಬಂಧವಿರುವುದು  ದೃಢಪಟ್ಟಿದೆ. ಆದರೆ ಈ ಬಗೆಗಿನ ಅಧ್ಯಯನ ವರದಿಗಳಲ್ಲಿ  ಪ್ರಸ್ತಾವಿಸಲಾಗಿರುವ  ವಿಚಾರಗಳ  ಬಗೆಗೆ ವಿಜ್ಞಾನಿಗಳಲ್ಲಿ  ಸಹಮತ ಇಲ್ಲ. ಅಲ್ಲದೆ  ಮೊಬೈಲ್‌ನ ಅತಿಯಾದ  ಬಳಕೆ ಮನುಷ್ಯನ  ನರವ್ಯೂಹದ  ಮೇಲೆ  ಪರಿಣಾಮ ಬೀರುತ್ತಿದೆ. ಮೊಬೈಲ್‌ ಬಳಕೆಯಿಂದ  ಪರಸ್ಪರ ಜನ ಸಂಪರ್ಕವೂ  ವಿರಳವಾಗಿ  ಮೊಬೈಲ್‌ನಲ್ಲಿ  ಚಾಟಿಂಗ್‌, ಸಂದೇಶ ರವಾನೆಗಳಲ್ಲಿಯೇ  ಕಾಲ ಕಳೆದು ಹೋಗುತ್ತಿದೆ.ಇದರಿಂದ ಸಹಜವಾಗಿ ಜನರೊಂದಿಗೆ  ಮುಖಾಮುಖೀ ಮಾತುಕತೆ  ನಡೆಸುವುದೂ  ಕಡಿಮೆಯಾಗುತ್ತಿದೆ. ಈ ಮೂಲಕ ಆತ ಒಂದು ತೆರನಾದ  ಮಾನಸಿಕ  ಸಮಸ್ಯೆಗೆ  ತುತ್ತಾಗುತ್ತಿದ್ದಾನೆ. ಯುವಜನರ  ಮೊಬೈಲ್‌  ಗೀಳಿನಿಂದ  ನೆಲದ  ಕಲೆ, ಸಂಸ್ಕೃತಿ, ಆಚಾರವಿಚಾರಗಳತ್ತ  ಅವರಲ್ಲಿ  ಆಸಕ್ತಿ ಕಡಿಮೆಯಾಗುತ್ತಿದೆ. 

ಇನ್ನು  ಗರ್ಭಿಣಿ ಮಹಿಳೆಯರಂತೂ ಮೊಬೈಲ್ ಬಳಸಿದಲ್ಲಿ ಆಕೆಯ ಮೇಲೆ ಮಾತ್ರವಲ್ಲದೇ ಜನಿಸುವ ಮಗುವಿನ ಮೇಲೂ  ಪರಿಣಾಮ ಬೀರುತ್ತದೆ.  ಪುರುಷರು ತಮ್ಮ  ಪ್ಯಾಂಟ್‌ನ  ಜೇಬುಗಳಲ್ಲಿ  ಮೊಬೈಲ್‌   ಇರಿಸಿದಲ್ಲಿ  ಅವರು  ಸಂತಾನಹೀನತೆ ಸಮಸ್ಯೆಗೆ  ತುತ್ತಾಗುವ ಸಾಧ್ಯತೆ ಅಧಿಕ ಎಂಬುದು  ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ. ಮೊಬೈಲ್‌ ಗೇಮ್‌ಗಳಲ್ಲಿ  ತಾಸುಗಳ  ಕಾಲ ತಲ್ಲೀನರಾಗಿರುವುದರಿಂದ  ದೃಷ್ಟಿ  ದೋಷ  ಕಾಣಿಸಿಕೊಳ್ಳುತ್ತವೆ. ಮೊಬೈಲ್‌ ಬ್ಯಾಕ್ಟೀರಿಯಾ ಹರಡಲೂ ಕಾರಣವಾಗುತ್ತದೆ ಎನ್ನುತ್ತಾರೆ  ವಿಜ್ಞಾನಿಗಳು. 

ಈ ಎಲ್ಲ  ಕಾರಣಗಳಿಂದಾಗಿಯೇ  ತಮ್ಮ ಮಕ್ಕಳಿಗೆ  14 ವರ್ಷ  ತುಂಬುವ ವರೆಗೆ  ಮೊಬೈಲ್‌  ಫೋನ್‌  ನೀಡಿಯೇ  ಇಲ್ಲ  ಎಂದು ವಿಶ್ವದ  ತಂತ್ರಜ್ಞಾನ ಕ್ರಾಂತಿಯಲ್ಲಿ  ಪ್ರಮುಖ ಪಾತ್ರ  ವಹಿಸಿರುವ ಮೈಕ್ರೋಸಾಫ್ಟ್  ಸ್ಥಾಪಕ, ಬಿಲ್‌ಗೇಟ್ಸ್‌  ಹೇಳಿದ್ದಾರೆ. ಮೊಬೈಲ್‌  ಬಳಕೆಗೆ  ಸಂಬಂಧಿಸಿ  ಮನೆಯಲ್ಲಿ  ಹಲವು ನಿರ್ಬಂಧ  ಹೇರಿದ್ದು  ಇವೆಲ್ಲವನ್ನೂ  ಅಕ್ಷರಶಃ ಪಾಲಿಸಿಕೊಂಡು ಬಂದಿರುವುದಾಗಿ  ಅವರು ತಿಳಿಸಿದ್ದಾರೆ.  ಈ ಮೂಲಕ ಬಿಲ್‌ಗೇಟ್ಸ್‌  ಜಗತ್ತಿನಾದ್ಯಂತದ   ಹೆತ್ತವರಿಗೆ  ಮಾದರಿಯಾಗಿದ್ದಾರೆ. ಮೊಬೈಲ್‌ ಫೋನ್‌ ಬಳಕೆಗೆ  ನಿಯಂತ್ರಣ  ಅನಿವಾರ್ಯ ಎಂಬುದನ್ನು  ಈ ಮೂಲಕ  ಪ್ರತಿಪಾದಿಸಿದ್ದಾರೆ.  ಇಂದಿನ  ತಂತ್ರಜ್ಞಾನ ಮತ್ತು  ಅನ್ವೇಷಣಾ ಯುಗದಲ್ಲಿ  ನಾಗರಿಕತೆ  ಅಭಿವೃದ್ಧಿಯಲ್ಲಿ  ಮೊಬೈಲ್‌  ಪ್ರಮುಖ ಪಾತ್ರ ನಿರ್ವಹಿಸುತ್ತಿದೆಯಾದರೂ  ಇದರ  ಅತಿಯಾದ ಬಳಕೆ ಭಾರೀ  ಸಮಸ್ಯೆ   ತಂದೊಡ್ಡಲಿದೆ ಎಂಬುದನ್ನು  ನಾವು ಅರಿತುಕೊಳ್ಳಬೇಕಿದೆ. ಅತಿಯಾದರೆ  ಅಮೃತವೂ ವಿಷ ಎಂಬುದನ್ನು  ಅರ್ಥೈಸಿಕೊಂಡು ಮೊಬೈಲ್‌  ಪೋನ್‌ ಬಳಕೆ  ಮೇಲೆ  ಕಡಿವಾಣ  ಹಾಕಲೇಬೇಕಿದೆ. ಮೊಬೈಲ್‌  ನಮ್ಮ  ಸ್ನೇಹಿತನೇ  ಹೊರತು  ಮಾಸ್ಟರ್‌ ಆಗಬಾರದು.  


Trending videos

Back to Top