CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮತ್ತೆ ಅಕ್ರಮ ಗಣಿಯ ಸದ್ದು: ತಪ್ಪೆಸಗಿದರೆ ಕಾನೂನು ಕುಣಿಕೆ ಖಾಯಂ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಉನ್ನತ ಅಧಿಕಾರಿಗಳು ಅಧಿಕಾರಾರೂಢ ರಾಜಕಾರಣಿಗಳ ಆದೇಶವನ್ನು ಕಣ್ಣುಮುಚ್ಚಿ ಪಾಲಿಸಿದರೆ ಕೊನೆಗೆ ಕಾನೂನಿನ ಉರುಳಿಗೆ ಸಿಲುಕಬೇಕಾಗುತ್ತದೆ. ಬಡೇರಿಯಾ ಪ್ರಕರಣದಿಂದ ಈ ಪಾಠವನ್ನು ಅಧಿಕಾರಿಗಳು ಕಲಿಯಬೇಕು.

ಜಂತಕಲ್‌ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾಮ್‌ ಬಡೇರಿಯಾ ಬಂಧಿತರಾಗುವುದರೊಂದಿಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಹಗರಣ ಮತ್ತೆ ಸದ್ದು ಮಾಡತೊಡಗಿದೆ. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ಹಾಲಿ ಐಎಎಸ್‌ ಅಧಿಕಾರಿ ಎಂಬ ಅಪಖ್ಯಾತಿ ಬಡೇರಿಯಾಗೆ ಅಂಟಿಕೊಂಡಿದೆ. ಬಿಜೆಪಿ - ಜೆಡಿಎಸ್‌ ಮೈತ್ರಿ ಸರಕಾರದ ಆಡಳಿತವಿದ್ದ ಕಾಲದಲ್ಲಿ ನಡೆದಿರುವ ಹಗರಣವಿದು. 11,100 ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಲು ಜಂತಕಲ್‌ ಮೈನಿಂಗ್‌ ಕಂಪೆನಿಯ ಮುಖ್ಯಸ್ಥ ವಿನೋದ್‌ ಗೋಯಲ್‌ಗೆ ಸರಕಾರ ಅನುಮತಿ ನೀಡಿತ್ತು. ಅವರು ಅದಿರು ಮಾರಾಟ ಮಾಡುವ ಸಲುವಾಗಿ ನಕಲಿ ದಾಖಲೆಪತ್ರ ಸಲ್ಲಿಸಿದ್ದರು. ಆದರೆ ಆಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಬಡೇರಿಯಾ ದಾಖಲೆ ಪತ್ರಗಳನ್ನು ಪರಿಶೀಲಿಸದೆ ಲಂಚ ಪಡೆದು ಅನುಮತಿ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ನಿವೃತ್ತ ಲೋಕಾಯುಕ್ತ ನ್ಯಾ|ಮೂ| ಸಂತೋಷ್‌ ಹೆಗ್ಡೆ ಸಲ್ಲಿಸಿದ್ದ ವರದಿಯಲ್ಲಿ ಬಡೇರಿಯಾ ಹೆಸರಿತ್ತು. ಬಿಜೆಪಿ-ಜೆಡಿಎಸ್‌ ಮೈತ್ರಿ ಸರಕಾರದಿಂದ ತೊಡಗಿದ ಅಕ್ರಮ ಗಣಿಗಾರಿಕೆ ಅನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಕಾಲದಲ್ಲಿ ತಾರಕ­ಕ್ಕೇರಿತ್ತು. ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಿಂದಾಗಿ ಹಲ ವರ್ಷ ಜೈಲು ವಾಸ ಅನುಭವಿಸಿದ್ದಾರೆ. ಬಿಜೆಪಿ ಸರಕಾರದ ಅಧಃಪತನಕ್ಕೆ ಕಾರಣ­­ವಾದದ್ದೂ ಅಕ್ರಮ ಗಣಿಗಾರಿಕೆ ಪ್ರಕರಣಗಳೇ. ಇದೀಗ ಮತ್ತೆ ಅಕ್ರಮ ಗಣಿಗಾರಿಕೆ ಭೂತ ಎದ್ದು ಕುಳಿತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಈ ಪ್ರಕರಣದ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದೆ. ಇದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿಗಳಾದ ಎಚ್‌. ಡಿ. ಕುಮಾರಸ್ವಾಮಿ, ಎಸ್‌.ಎಂ. ಕೃಷ್ಣ, ಧರಂ ಸಿಂಗ್‌, ಅಧಿಕಾರಿಗಳಾಗಿರುವ ಡಾ| ಎಂ.ಬಸಪ್ಪರೆಡ್ಡಿ, ವಿ. ಉಮೇಶ್‌, ಐ.ಆರ್‌.ಪೆರುಮಾಳ್‌, ಕೆ.ಎಸ್‌.ಮಂಜುನಾಥ್‌, ಡಿ.ಎಸ್‌.ಅಶ್ವಥ್‌, ಜೀಜಾ ಹರಿಸಿಂಗ್‌, ಮಹೇಂದ್ರ ಜೈನ್‌ ಮುಂತಾದವರ ಹೆಸರಿವೆ. ಕೃಷ್ಣ ಬಿಟ್ಟು ಉಳಿದ ಎಲ್ಲರಿಗೂ ಸಮನ್ಸ್‌ ಜಾರಿಯಾಗುವ ಸಾಧ್ಯತೆ ಇದ್ದು, ಕುಮಾರಸ್ವಾಮಿ ವಿಚಾರಣೆಗೊಳಪಡುವ ಸಾಧ್ಯತೆಯಿದೆ. ಹೀಗಾದರೆ ಮುಖ್ಯಮಂತ್ರಿ ಕನಸು ಕಾಣುತ್ತಿರುವ ಕುಮಾರಸ್ವಾಮಿ ಹಾಗೂ ಅವರ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಆಂತರಿಕ ಕಚ್ಚಾಟದ ಲಾಭ ಪಡೆದು ಜೆಡಿಎಸ್‌ನ್ನು ಅಧಿಕಾರಕ್ಕೇರಿಸಿ ಮುಖ್ಯಮಂತ್ರಿಯಾಗಲು ಕುಮಾ­ರಸ್ವಾಮಿ ತಯಾರಿ­ಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಹಗರಣದ ಸುಳಿಗೆ ಬಿದ್ದರೆ ಅವರ ಕನಸು ಭಂಗ ಸಾಧ್ಯತೆಯಿದೆ. ಹಾಗೆಂದು ಬಿಜೆಪಿ ಮತ್ತು ಕಾಂಗ್ರೆಸ್‌ ಕೂಡ ಸಂಭ್ರಮಪಡುವ ಅಗತ್ಯವಿಲ್ಲ. ಮೊದಲೇ ಒಳಜಗಳದಿಂದ ಹೈರಾಣಾಗಿರುವ ಪಕ್ಷಗಳಿಗೆ ಹಗರಣದ ಕಳಂಕವೂ ಅಂಟಿಕೊಂಡರೆ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಬಹುದು. ಕೃಷ್ಣ ವಿರುದ್ಧ ತನಿಖೆ ನಡೆಸಲು ತಡೆಯಾಜ್ಞೆಯೇನೋ ಇದ್ದು, ಪ್ರಮುಖ ಸಾಕ್ಷ್ಯ ದೊರೆತರೆ ತಡೆಯಾಜ್ಞೆ ತೆರವುಗೊಳಿಸುವುದಾಗಿ ಸುಪ್ರೀಂ ಹೇಳಿದೆ. 
ಡಿನೋಟಿಫಿಕೇಶನ್‌ ಮತ್ತು ಅಕ್ರಮ ಗಣಿಗಾರಿಕೆ ಕಳೆದ ಸುಮಾರು ಎರಡು ದಶಕಗಳಿಂದ ರಾಜ್ಯಕ್ಕೆ ಅನಿಷ್ಟವಾಗಿ ಪರಿಣಮಿಸಿದೆ. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಯಾವ ಸರಕಾರವೂ ಈ ಆರೋಪಗಳಿಂದ ಹೊರತಾಗಿಲ್ಲ. 

ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿಯಂತಹ ಅಗ್ರ ನಾಯಕರೇ ಈ ಹಗರಣಗಳ ಸುಳಿಗೆ ಸಿಲುಕಿ ಹೈರಾಣಾಗಿದ್ದಾರೆ. ನಿರ್ಧಾರ ರಾಜಕಾರಣಿಗಳದ್ದಾದರೂ ಅದನ್ನು ಜಾರಿಗೊಳಿಸುವುದು ಅಧಿಕಾರಿಗಳು. ಬಡೇರಿಯಾ ಅವರಂತಹ ಕೆಲವು ಅಧಿಕಾರಿಗಳು ಲಂಚದ ಆಮಿಷಕ್ಕೆ ಬಲಿಬಿದ್ದು ತಪ್ಪು ನಿರ್ಧಾರ ಕೈಗೊಂಡರೂ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ತಮ್ಮ ರಾಜಕೀಯ ಬಾಸ್‌ಗಳ ಆದೇಶವನ್ನು ಪಾಲಿಸಿ ತಮ್ಮದಲ್ಲದ ತಪ್ಪಿಗಾಗಿ ಹಗರಣದ ಸುಳಿಗೆ ಬೀಳುತ್ತಾರೆ. ಅಧಿಕಾರಸ್ಥ ರಾಜಕಾರಣಿಗಳ ಆದೇಶಗಳನ್ನು ಯಥಾವತ್‌ ಪಾಲಿಸದೆ ವಿವೇಚನೆಗೆ ಹಚ್ಚಿನೋಡದಿದ್ದರೆ ಕೊನೆಗೆ ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾಗುತ್ತದೆ ಎಂಬ ಪಾಠವನ್ನು ಉನ್ನತ ಅಧಿಕಾರಿಗಳು ಕಲಿಯಬೇಕು.

Back to Top