CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಳಿ ತಪ್ಪುತ್ತಿರುವ ದಾಂಪತ್ಯ; ಮದುವೆಗಳು ಮುರಿದುಬೀಳುವ ವಿಷಾದ

ಪರಸ್ಪರ ಪ್ರೀತಿಸಿ ಮದುವೆಯಾದವರಲ್ಲೇ ವಿಚ್ಛೇದನ ಪ್ರಮಾಣ ಅಧಿಕ ಎಂಬುದು ವಿಪರ್ಯಾಸ. ಪ್ರೀತಿ ಕುರುಡು, ಆದರೆ ಮದುವೆ ಕಣ್ತೆರೆಸುತ್ತದೆ ಎಂಬ ಮಾತು ಈ ದಂಪತಿಗಳ ವಿಚಾರದಲ್ಲಿ ಪ್ರತಿಶತ ಸತ್ಯವಾಗುತ್ತಿದೆ.

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ವಿವಾಹ ವಿಚ್ಛೇದನ ಪಡೆದುಕೊಳ್ಳುತ್ತಿರುವ ದಂಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುತ್ತಿದೆ ಒಂದು ವರದಿ. ಬೆಂಗಳೂರಿನಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 2300ಕ್ಕೂ ಹೆಚ್ಚು ವಿಚ್ಛೇದನ ಅರ್ಜಿಗಳು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗಿವೆಯಂತೆ! ವಿಚ್ಛೇದನ ಕೋರುವವರಲ್ಲಿ ಐಟಿ-ಬಿಟಿ ವಲಯದವರೇ ಹೆಚ್ಚು. ಅದೂ ಮದುವೆಯಾಗಿ ಕೆಲವೇ ತಿಂಗಳು, ವರ್ಷದಲ್ಲಿ ಈಗಿನ ದಂಪತಿಗಳು ವಿಚ್ಛೇದನಕ್ಕೆ ಮುಂದಾಗುತ್ತಿದ್ದಾರೆ. ಅತಿ ಹೆಚ್ಚು ವಿಚ್ಛೇದನ ಕೋರುವ ಟಾಪ್‌ ಐದು ನಗರಗಳಲ್ಲಿ ಬೆಂಗಳೂರು ಕೂಡ ಇದೆ ಎನ್ನುವುದು ಕನ್ನಡಿಗರಿಗೆ ಕಳವಳಕಾರಿಯಾದ ಸಂಗತಿ. 

ನಿತ್ಯ 25ರಿಂದ 30 ವಿಚ್ಛೇದನ ಅರ್ಜಿಗಳು ನ್ಯಾಯಾಲಯಗಳಿಗೆ ಬರುತ್ತಿವೆ ಎನ್ನುವ ಅಂಕಿಅಂಶವೇ ಕೌಟುಂಬಿಕ ವ್ಯವಸ್ಥೆ ಎಷ್ಟು ಶಿಥಿಲಗೊಂಡಿದೆ ಎನ್ನುವುದನ್ನು ತಿಳಿಸುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ವಿವಾಹ ವಿಚ್ಛೇದನ ಒಂದು ಸಾಮಾನ್ಯ ವಿಷಯ. ಅಮೆರಿಕದಲ್ಲಿ ಪ್ರತಿ ನೂರರಲ್ಲಿ 60 ದಾಂಪತ್ಯಗಳು ಅರ್ಧಕ್ಕೆ ಮುರಿದು ಬೀಳುತ್ತವೆ.

ವಿದೇಶಗಳಲ್ಲಿ ತನ್ನ ಎರಡನೇ ಗಂಡನ ಮೂರನೇ ಹೆಂಡತಿಯ ಮಗ ಅಥವಾ ಮಗಳು ಎಂದು ಸಂಬಂಧವನ್ನು ವಿವರಿಸುವುದು ಸಾಮಾನ್ಯ. ಭಾರತದಲ್ಲಿ ವಿವಾಹ ವಿಚ್ಛೇದನಗಳ ಏರುಗತಿಯನ್ನು ನೋಡಿದರೆ ಇದೇ ಪರಿಸ್ಥಿತಿ ಬರುವ ದಿನಗಳು ದೂರವಿಲ್ಲ. 

90ರ ದಶಕದ ತನಕವೂ ನಮ್ಮಲ್ಲಿ ವಿಚ್ಛೇದನ ಎಂದರೆ ಏನೋ ಅಳುಕಿತ್ತು. ವಿಚ್ಛೇದಿತ ಮಹಿಳೆ ಅಥವಾ ಪುರುಷನನ್ನು ಸಮಾಜ ತುಸು ಭಿನ್ನ ದೃಷ್ಟಿಯಿಂದ ನೋಡುತ್ತಿತ್ತು. ಸಿನೆಮಾ ಕ್ಷೇತ್ರದಲ್ಲಿರುವವರು ಮತ್ತು ಸೆಲೆಬ್ರಿಟಿಗಳಲ್ಲಿ ಮಾತ್ರ ಹೆಚ್ಚಾಗಿ ವಿಚ್ಛೇದನಗಳಾಗುತ್ತಿದ್ದವು. ಆದರೆ ಈಗ ಜನಸಾಮಾನ್ಯರೂ ವಿಚ್ಛೇದನವನ್ನು ಸಾಮಾನ್ಯ ವಿಷಯ ಎಂಬಂತೆ ಒಪ್ಪಿಕೊಳ್ಳುವಷ್ಟು ಸಮಾಜ ಬದಲಾಗಿದೆ. ಹಿಂದೆ ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ, ವಂಚನೆ, ನಪುಂಸಕತೆ, ಕಾಯಿಲೆ ಈ ಮುಂತಾದ ಗಂಭೀರ ಕಾರಣಗಳಿದ್ದರೆ ಮಾತ್ರ ದಂಪತಿಗಳು ದೂರವಾಗುವ ನಿರ್ಧಾರ ಮಾಡುತ್ತಿದ್ದರು. ಈಗ ಪರಸ್ಪರರ ನಡುವೆ ಹೊಂದಾಣಿಕೆ ಇಲ್ಲದಿರುವುದು, ಅಡುಗೆ ಮಾಡಲು ತಿಳಿಯದಿರುವುದು, ವಿವಾಹಬಾಹಿರ ಸಂಬಂಧ, ಭಿನ್ನ ಹವ್ಯಾಸಗಳು, ಸ್ಥಾನಮಾನದ ಅಹಂ, ಖಾಸಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಈ ಮುಂತಾದ ಕಾರಣಗಳಿಗಾಗಿ ವಿಚ್ಛೇದನ ಕೋರುವವರ ಸಂಖ್ಯೆ ಹೆಚ್ಚಿದೆ. ನಿಜವಾಗಿ ನೋಡಿದರೆ ಇವೆಲ್ಲ ಸರಿಪಡಿಸಲಾಗದ ಕಾರಣಗಳು ಅಲ್ಲ. ಆದರೆ ಅಪಕ್ವ ಮನಸ್ಸಿನ ಯುವ ದಂಪತಿಗಳಿಗೆ ಪರಸ್ಪರರನ್ನು ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ಇಲ್ಲದಿರುವುದರಿಂದ ಮದುವೆಗಳು ವಿಚ್ಛೇದನದಲ್ಲಿ ಕೊನೆಯಾಗುತ್ತಿವೆ. ಮೊಬೈಲ್‌ ಫೋನ್‌ ಕೂಡ ಎಷ್ಟೋ ದಾಂಪತ್ಯ ಮುರಿಯಲು ಕಾರಣವಾಗಿದೆ ಎನ್ನುವುದು ವಿಚಿತ್ರವಾದರೂ ಸತ್ಯ.  

ಮಹಿಳೆ ಈಗ ಸಬಲೆಯಾಗಿದ್ದಾಳೆ. ವಿದ್ಯಾವಂತ ಉದ್ಯೋಗಸ್ಥ ಹೆಂಡತಿಗೆ ಈಗ ಬದುಕಲು ಗಂಡನ ಆಸರೆಯ ಅಗತ್ಯವಿಲ್ಲ. ಹೀಗಾಗಿ ಚಿಕ್ಕಪುಟ್ಟ ಕಾರಣಗಳಿಗೂ ದಂಪತಿಗಳು ಪ್ರತ್ಯೇಕವಾಗುತ್ತಿದ್ದಾರೆ. ಐಟಿ-ಬಿಟಿ ಕ್ಷೇತ್ರದಲ್ಲಿ ದುಡಿಯುವ ದಂಪತಿಗಳಲ್ಲಿ ವಿಚ್ಛೇದನ ಹೆಚ್ಚಾಗಲು ಇಬ್ಬರಿಗೂ ಸಿಕ್ಕಿರುವ ಅತಿಯಾದ ಆರ್ಥಿಕ ಸ್ವಾತಂತ್ರ್ಯ ಕಾರಣ. ಗಂಡ ಹೆಂಡತಿ ಇಬ್ಬರೂ ಐದಂಕಿ-ಆರಂಕಿಯ ಸಂಬಳ ತರುವಾಗ ಪರಸ್ಪರ ಅವಲಂಬಿಸಿ ಬದುಕುವ ಅನಿವಾರ್ಯತೆ ಇಲ್ಲ. ಹೀಗಾಗಿ ಮದುವೆಯಾದ ಒಂದೆರಡು ವರ್ಷಗಳಲ್ಲೇ ದಾಂಪತ್ಯ ಹೊರೆಯಾಗತೊಡಗುತ್ತದೆ. 
 
ಪ್ರೀತಿಸಿ ಮದುವೆಯಾದವರಲ್ಲೇ ವಿಚ್ಛೇದನ ಪ್ರಮಾಣ ಅಧಿಕ ಎಂಬುದು ವಿಪರ್ಯಾಸ. ಪ್ರೀತಿ ಕುರುಡು, ಆದರೆ ಮದುವೆ ಕಣ್ತೆರೆಸುತ್ತದೆ ಎಂಬ ಮಾತು ಇವರ‌ ವಿಚಾರದಲ್ಲಿ ಸತ್ಯವಾಗುತ್ತಿದೆ. ಹೆಚ್ಚಿನ ಲವ್‌ ಮ್ಯಾರೇಜ್‌ಗಳಲ್ಲಿ ಬೇಗನೇ ಬಿರುಕು ಕಾಣಿಸಿಕೊಂಡಿರುತ್ತದೆ. ನಂತರ ನಡೆಯುವುದು ಈ ಬಿರುಕನ್ನು ಮುಚ್ಚುವ ಪ್ರಯತ್ನ ಮಾತ್ರ. ಆದರೆ ಮುಚ್ಚಿದಷ್ಟು ಆಳವಾಗುತ್ತಾ ಹೋಗುವ ಬಿರುಕು ಕೊನೆಗೆ ಇಬ್ಬರನ್ನು ದೂರ ಮಾಡಿಬಿಡುತ್ತದೆ. ಚಿಂತೆಯ ವಿಷಯವೆಂದರೆ ನ್ಯಾಯಾಲಯಗಳೂ ವಿಚ್ಛೇದನವನ್ನು ಪ್ರೋತ್ಸಾಹಿಸುವಂತಹ ತೀರ್ಪುಗಳನ್ನೇ ನೀಡುತ್ತಿರುವುದು. ಸಂಬಂಧ ಸರಿ ಪಡಿಸಲಾಗದಷು ಕೆಟ್ಟರೆ ದೂರವಾಗಲು ಅನುಮತಿ ನೀಡುವುದೇ ಸರಿ ಎನ್ನುವುದನ್ನು ಹಲವು ತೀರ್ಪುಗಳಲ್ಲಿ ಉಲ್ಲೇಖೀಸಿವೆ. 

ವಿವಾಹ ಕಾಯಿದೆಗಳಿಗೆ ಆಗಾಗ ತಿದ್ದುಪಡಿಗಳನ್ನು ಮಾಡಿ ಸರಕಾರಗಳೂ ವಿಚ್ಛೇದನ ಸುಲಭವಾಗುವಂತೆ ಮಾಡಿವೆ.  ಒಂದು ಕಾಲದಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆಗೆ ಜಗತ್ತಿನಲ್ಲಿ ಗೌರವದ ಸ್ಥಾನವಿತ್ತು. ಅನೇಕ ವಿದೇಶಿಯರು ಭಾರತೀಯ ಕೌಟುಂಬಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾವು ಅವರ ಸಂಸ್ಕೃತಿಯನ್ನು ಅನುಕರಿಸಲು ಹೋಗಿ ಅಧಃಪತನದತ್ತ ಸಾಗುತ್ತಿರುವುದು ಖೇದಕರ.

Back to Top