CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪ್ರತಿಷ್ಠೆಯ ಹೋರಾಟ ಗೆದ್ದ ಕಾಂಗ್ರೆಸ್‌: ಎರಡು ಪಕ್ಷಗಳಿಗೂ ಪಾಠ

ನಿಜವಾಗಿ ನೋಡಿದರೆ ರಾಜ್ಯಸಭೆಯ ಒಂದು ಸೀಟಿನಿಂದ ಬಿಜೆಪಿಗೆ ಆಗಬೇಕಾದದ್ದೇನೂ ಇರಲಿಲ್ಲ. ಈಗಾಗಲೇ ಅದು ರಾಜ್ಯಸಭೆಯಲ್ಲಿ ದೊಡ್ಡ ಪಕ್ಷ.

ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಮತ್ತು ಅಮಿತ್‌ ಶಾ ನಡುವಿನ ಪ್ರತಿಷ್ಠೆಯ ಹೋರಾಟವಾಗಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಕೊನೆಗೂ ಪಟೇಲ್‌ ಗೆಲುವಿನ ನಗೆ ಬೀರಿದ್ದಾರೆ. ರಾಜ್ಯಸಭಾ ಚುನಾವಣೆಯೊಂದು ಈ ಮಟ್ಟದ ಕುತೂಹಲ ಕೆರಳಿಸಿದ್ದು ಪ್ರಾಯಶಃ ಇದೇ ಮೊದಲು. ತಡರಾತ್ರಿ ತನಕ ಹತ್ತಾರು ತಿರುವುಗಳನ್ನು ಪಡೆದ ಟ್ವೆಂಟಿ-ಟ್ವೆಂಟಿ ಕ್ರಿಕೆಟ್‌ ಪಂದ್ಯಕ್ಕಿಂತಲೂ ರೋಚಕವಾಗಿದ್ದ ಹೈಡ್ರಾಮಾದಲ್ಲಿ ಕಾಂಗ್ರೆಸ್‌ ತಾಂತ್ರಿಕ ಕಾರಣದಿಂದಾಗಿ ಗೆದ್ದಿದೆ. ಸೋಲಿನ ಮೇಲೆ ಸೋಲುಗಳನ್ನು ಕಾಣುತ್ತಾ ಬಂದಿರುವ ಕಾಂಗ್ರೆಸ್‌ಗೆ ಈ ಗೆಲವು ಒಂದಕ್ಕಿಂತ ಹೆಚ್ಚು ಕಾರಣಕ್ಕೆ ಮುಖ್ಯವಾಗಿದೆ ಹಾಗೂ ಇನ್ನು ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಎದುರಿಸುವ ನೈತಿಕ ಸ್ಥೈರ್ಯವನ್ನು ಪಕ್ಷಕ್ಕೆ ನೀಡಿದೆ. ಒಂದು ವೇಳೆ ಪಟೇಲ್‌ ಸೋಲುತ್ತಿದ್ದರೆ ಪರೋಕ್ಷವಾಗಿ ಇದು ಸೋನಿಯಾ ಗಾಂಧಿಯ ಸೋಲು ಆಗುತ್ತಿತ್ತು. ಅಂತೆಯೇ ಪಕ್ಷದ ಜಂಘಾಬಲವನ್ನೇ ಉಡುಗಿಸುವ ಸಾಧ್ಯತೆಯಿತ್ತು. ಸದ್ಯಕ್ಕೆ ಈ ಅಪಾಯದಿಂದ ಕಾಂಗ್ರೆಸ್‌ ಪಾರಾಗಿರುವುದಲ್ಲದೆ ತನ್ನಲ್ಲಿನ್ನೂ ಹೋರಾಟದ ಕೆಚ್ಚು ಉಳಿದುಕೊಂಡಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಹೋರಾಟಕ್ಕಿಂತಲೂ ಶಾ ಮತ್ತು ಪಟೇಲ್‌ ನಡುವಿನ ವೈಯಕ್ತಿಕ ಜಿದ್ದಿನ ಹೋರಾಟ ಎಂದೇ ಅರಿಯಲ್ಪಟ್ಟಿತ್ತು.  

ಪಟೇಲರನ್ನು ಸೋಲಿಸಲು ಬಿಜೆಪಿ ಸಾಮ ದಾನ ದಂಡ ಬೇಧ ತಂತ್ರಗಳನ್ನೆಲ್ಲ ಪ್ರಯೋಗಿಸಿತ್ತು. ಇದನ್ನೆಲ್ಲ ಎದುರಿಸಿ ಪಟೇಲ್‌ ರಾಜ್ಯಸಭಾ ಸ್ಥಾನ ಉಳಿಸಿಕೊಂಡಿರುವುದು ಸಣ್ಣ ಸಂಗತಿಯಲ್ಲ. ಇದೇ ವೇಳೆ ಈ ಚುನಾವಣೆ ಒಂದು ಗೆಲುವಿಗಾಗಿ ರಾಜಕೀಯ ಪಕ್ಷಗಳು ಯಾವ ಕಸರತ್ತು ನಡೆಸಲು ಕೂಡ ಹಿಂಜರಿಯುವುದಿಲ್ಲ ಎಂಬ ನಗ್ನಸತ್ಯವನ್ನು ಜಗಜ್ಜಾಹೀರುಗೊಳಿಸಿದೆ. ನಿಜವಾಗಿ ನೋಡಿದರೆ ರಾಜ್ಯಸಭೆಯ ಒಂದು ಸೀಟಿನಿಂದ ಬಿಜೆಪಿಗೆ ಆಗಬೇಕಾದದ್ದೇನೂ ಇರಲಿಲ್ಲ. ಈಗಾಗಲೇ ಅದು ರಾಜ್ಯಸಭೆಯಲ್ಲಿ ದೊಡ್ಡ ಪಕ್ಷ. ಒಂದು ವೇಳೆ ಪಕ್ಷದ ಮೂರನೇ ಅಭ್ಯರ್ಥಿ ಗೆದ್ದಿದ್ದರೆ ಒಂದು ಸ್ಥಾನ ಹೆಚ್ಚುತ್ತಿತ್ತು ಅಷ್ಟೆ. ಆದರೆ ಇದೇ ಅಹ್ಮದ್‌ ಪಟೇಲ್‌ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಿಬಿಐಯನ್ನು ಬಳಸಿಕೊಂಡು ರೌಡಿಯೊಬ್ಬನ ಎನ್‌ಕೌಂಟರ್‌ ಪ್ರಕರಣದಲ್ಲಿ ಶಾ ಅವರನ್ನು ಮೂರು ತಿಂಗಳು ಜೈಲಲ್ಲಿರುವಂತೆ ಮಾಡಿದ್ದರು. ಈ ಹಗೆಯನ್ನು ತೀರಿಸಲು ಶಾಗೆ ರಾಜ್ಯಸಭೆ ಚುನಾವಣೆ ಒಂದು ಅವಕಾಶವನ್ನು ನೀಡಿತು. ಆದರೆ ಮತದಾನದ ವೇಳೆ ಆದ ಚಿಕ್ಕದೊಂದು ಎಡವಟ್ಟಿನಿಂದಾಗಿ ಶಾ ಲೆಕ್ಕಾಚಾರವೆಲ್ಲ ಬುಡಮೇಲಾಯಿತು. ಹಾಗೆ ನೋಡಿದರೆ ಈ ಚುನಾವಣೆಯಲ್ಲಿ ಕಾಂಗೆ‌Åಸ್‌ ಗಳಿಸಿದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು. ಜು.26ರ ತನಕ ಗುಜರಾತಿನಲ್ಲಿ ಕಾಂಗ್ರೆಸ್‌ 57 ಶಾಸಕರನ್ನು ಹೊಂದಿತ್ತು. ಮುಂದಿನ ಆರು ದಿನಗಳಲ್ಲಿ ಆರು ಮಂದಿ  ರಾಜಿನಾಮೆ ನೀಡಿ ಕಾಂಗ್ರೆಸ್‌ ಬಲ 51ಕ್ಕಿಳಿಯಿತು. ಈ 51 ಮಂದಿಯಲ್ಲಿ ಪಟೇಲ್ಗೆ ಮತ ಹಾಕಿರುವುದು 42 ಮಂದಿ ಮಾತ್ರ. ಅಂದರೆ ಮತ್ತೆ ಒಂಬತ್ತು ಶಾಸಕರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಒಟ್ಟಾರೆಯಾಗಿ ಪಕ್ಷ 15 ಶಾಸಕರನ್ನು ಕಳೆದುಕೊಂಡಂತಾಗಿದೆ. ಈ ಪೈಕಿ ಹೆಚ್ಚಿನ ಶಾಸಕರು ತಮ್ಮದೇ ಆದ ಮತಬ್ಯಾಂಕ್‌ ಹೊಂದಿದವರು. ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವಾಗ 15 ಶಾಸಕರನ್ನು ಕಳೆದುಕೊಂಡಿರುವುದು ಪಕ್ಷಕ್ಕಾಗಿರುವ ಭಾರೀ ಹಿನ್ನಡೆಯೇ ಸರಿ. ಮುಖ್ಯವಾಗಿ ಪ್ರಬಲ ನಾಯಕ ಶಂಕರ್‌ ಸಿನ್ಹ ವಘೇಲಾ ಅವರೇ ಪಕ್ಷದಿಂದ ಹೊರಬಂದಿದ್ದಾರೆ. ಕಾಂಗ್ರೆಸ್‌ನ ದುರಾದೃಷ್ಟಕ್ಕೆ ಶಾಸಕರು ರೆಸಾರ್ಟ್‌ನಲ್ಲಿರುವಾಗಲೇ ಗುಜರಾತ್‌  ಪ್ರವಾಹಕ್ಕೆ ತುತ್ತಾಯಿತು. ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾದಾಗ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನಲ್ಲಿ ಮೋಜು ಮಾಡುತ್ತಿದ್ದರು ಎಂಬ ಭಾವನೆ ಹುಟ್ಟುಹಾಕುವಲ್ಲಿ ಬಿಜೆಪಿ ಸಫ‌ಲವಾಗಿದ್ದು, ಕಾಂಗ್ರೆಸ್‌ಗಾಗಿರುವ ಭಾರೀ ಹಿನ್ನಡೆ. ಏನೇ ಆದರೂ ಈ ಫ‌ಲಿತಾಂಶದಲ್ಲಿ  ಎರಡೂ ಪಕ್ಷಗಳು ಯಾವುದನ್ನೂ ಟೇಕನ್‌ ಫಾರ್‌ ಗ್ರಾಂಟೆಡ್‌ ಎಂಬುದಾಗಿ ಪರಿಗಣಿಸಬಾರದು ಪಾಠ ಕಲಿತಿರುವುದಂತೂ ನಿಜ. ಇದು ಪ್ರಜಾತಂತ್ರಕ್ಕಾಗಿರುವ ನಿಜವಾದ ಲಾಭ.

Back to Top