CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತಮಿಳುನಾಡು ಅಸ್ಥಿರತೆ: ಎರಡೂ ಬಣಗಳು ಒಂದಾಗುವ ಸಾಧ್ಯತೆ

ಎಐಎಡಿಎಂಕೆಯ ಎರಡು ಬಣಗಳು ವಿಲೀನಗೊಳ್ಳುವುದು ತಮಿಳುನಾಡಿಗೆ ಎಷ್ಟು ಮುಖ್ಯ; ಅದಕ್ಕಿಂತಲೂ ಹೆಚ್ಚಿನ ಅಗತ್ಯ ಬಿಜೆಪಿಗಿದೆ.

ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ನಡುವೆ ಇಬ್ಭಾಗವಾಗಿರುವ ಎಐಎಡಿಎಂಕೆ ಕೊನೆಗೂ ಒಂದಾಗುವ ಸಾಧ್ಯತೆಯೊಂದು ಗೋಚರಿಸಿದೆ. ಇತ್ತೀಚೆಗೆ ಎರಡೂ ಬಣಗಳು ಕುಳಿತು ಈ ಕುರಿತು ಮಾತುಕತೆ ನಡೆಸಿರುವುದು ಮಾತ್ರವಲ್ಲದೆ ಅನಂತರ ಈ ನಿಟ್ಟಿನಲ್ಲಿ ಕೆಲವು ದೃಢ ಹೆಜ್ಜೆಗಳನ್ನಿಡಲಾಗಿದೆ. ಮೊದಲನೆಯದಾಗಿ ಶಶಿಕಲಾ ಮತ್ತು ಅವರ ಬಂಧು ಟಿ.ಟಿ.ವಿ. ದಿನಕರನ್‌ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬೆನ್ನಿಗೆ ಪಳನಿಸ್ವಾಮಿ ದಿಲ್ಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ವಿದ್ಯಮಾನಗಳಿಂದಾಗಿ ಜಯಲಲಿತಾ ನಿಧಾನನಂತರ ಎಐಎಡಿಎಂಕೆಯಲ್ಲಿ ಸೃಷ್ಟಿಯಾಗಿರುವ ಗೊಂದಲಗಳು ನಿವಾರಣೆಯಾಗಲಿವೆ ಎಂಬ ನಿರೀಕ್ಷೆ ಹುಟ್ಟಿದೆ. 

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ತಲೆಕೆಳಗು ಮಾಡಿ ಎಐಎಡಿಎಂಕೆ 134 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದುಕೊಂಡಾಗ ಮುಂದಿನ ಐದು ವರ್ಷ ಜಯಲಲಿತಾ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ನಿಶ್ಚಿತವಾಗಿತ್ತು. ಆದರೆ ವಿಧಿಯಾಟದಿಂದಾಗಿ ಸರಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಜಯ ನಿಧನರಾಗುವುದರೊಂದಿಗೆ ರಾಜಕೀಯ ಅಸ್ಥಿರತೆ ಕಾಣಿಸಿಕೊಂಡಿತು. ಬಹುಕಾಲ ಜಯಲಲಿತಾ ಅಂತರಂಗದ ಗೆಳತಿಯಾಗಿದ್ದ ಶಶಿಕಲಾ ಪಕ್ಷದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡು ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದ್ದೇ ಈಗಿನ ಎಲ್ಲ ಅವಾಂತರಗಳ ಮೂಲ. ಒಂದು ವೇಳೆ ಜಯಲಲಿತಾ ಆಸ್ಪತ್ರೆಯಲ್ಲಿರುವಾಗ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ಸೆಲ್ವಂ ಅವರನ್ನೇ ಮುಂದುವರಿಯಲು ಬಿಟ್ಟಿದ್ದರೆ ಪಕ್ಷ ಹೋಳಾಗುವ ಸಂದರ್ಭ ಬರುತ್ತಿರಲ್ಲಿಲ್ಲ. ಭ್ರಷ್ಟಾಚಾರ ಕೇಸಿನಲ್ಲಿ ಜೈಲು ಸೇರಿದ ಕಾರಣ ಮುಖ್ಯಮಂತ್ರಿಯಾಗುವ ಶಶಿಕಲಾ ಮಹತ್ವಾಕಾಂಕ್ಷೆಯೂ ಈಡೇರಲಿಲ್ಲ, ಇತ್ತ ಪಕ್ಷದ ಒಗ್ಗಟ್ಟೂ ಮುರಿಯಿತು. ಶಶಿಕಲಾ ನಾಯಕತ್ವವನ್ನು ಒಪ್ಪದ ಪನ್ನೀರ್‌ಸೆಲ್ವಂ ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಾಗಿ ತಮಿಳುನಾಡಿನಲ್ಲಿ ಸದ್ಯಕ್ಕೆ ಹೆಸರಿಗೆ ಮಾತ್ರ ಒಂದು ಸರಕಾರವಿದೆಯೇ ಹೊರತು ಅದರಿಂದ ಪರಿಣಾಮಕಾರಿ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. 

ಎಐಎಡಿಎಂಕೆಯ ಎರಡು ಬಣಗಳು ವಿಲೀನಗೊಳ್ಳುವುದು ತಮಿಳುನಾಡಿಗೆ ಎಷ್ಟು ಮುಖ್ಯ; ಅದಕ್ಕಿಂತಲೂ ಹೆಚ್ಚಿನ ಅಗತ್ಯ ಬಿಜೆಪಿಗಿದೆ. ಇದಕ್ಕೆ ಕಾರಣ ಸಂಸತ್ತಿನ ಎರಡು ಮನೆಗಳಲ್ಲಿ ಎಐಎಡಿಎಂಕೆ 50 ಸಂಸದರನ್ನು ಹೊಂದಿರುವುದು. ಇದರ ಜತೆಗೆ ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯೂರಲು ಒಂದು ಸಂದರ್ಭ ಬೇಕಾಗಿದೆ. ಎಐಎಡಿಎಂಕೆಯನ್ನು ಎನ್‌ಡಿಎ ಕೂಟಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಈ ಉದ್ದೇಶವನ್ನು ಈಡೇರಿಸಿಕೊಳ್ಳಲು ಬಯಸಿರುವ ಬಿಜೆಪಿ ಈಗ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡುತ್ತಿದೆ. 

ಹಾಗೆಂದು ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಒಂದಾದ ಕೂಡಲೇ ಎಲ್ಲ ಸಮಸ್ಯೆಗಳು ಬಗೆಹರಿಯಿತು ಎನ್ನುವಂತಿಲ್ಲ. ಏಕೆಂದರೆ ದಿನಕರನ್‌ ಕೂಡ ತನ್ನದೇ ಬಣ ಕಟ್ಟಿಕೊಂಡಿದ್ದಾರೆ. ಒಂದಷ್ಟು ಶಾಸಕರು ಮತ್ತು ಮುಖಂಡರು ಅವರ ಜತೆಗೆ ಗುರುತಿಸಿಕೊಂಡಿದ್ದಾರೆ. ಪಕ್ಷದಿಂದ ಹೊರಬಿದ್ದ ಮೇಲೆ ಶಶಿಕಲಾ ಜತೆ ಸೇರಿ ಅವರು ಯಾವ ಆಟ ಆಡುತ್ತಾರೆ ಎನ್ನುವುದು ನಿಗೂಢವಾಗಿದೆ. ಒಂದು ವೇಳೆ ಸುಮಾರು 20 ಶಾಸಕರನ್ನು ಸೆಳೆದುಕೊಳ್ಳಲು ದಿನಕರನ್‌ ಸಫ‌ಲರಾದರೆ ಎರಡು ಬಣಗಳು ವಿಲೀನವಾದರೂ ಅನಿಶ್ಚಿತತೆ ತಪ್ಪುವುದಿಲ್ಲ.

ಪನ್ನೀರ್‌ಸೆಲ್ವಂ ಮತ್ತು ಪಳನಿಸ್ವಾಮಿ ಬಣದ ನಡುವೆ ಪಕ್ಷದ ಎರಡೆಲೆ ಚಿಹ್ನೆಗಾಗಿ ಕಚ್ಚಾಟ ನಡೆಯುತ್ತಿದೆ. ಸದ್ಯಕ್ಕೆ ಚುನಾವಣಾ ಆಯೋಗ ಎರಡೆಲೆ ಚಿಹ್ನೆಯನ್ನು ಯಾರಿಗೂ ನೀಡದೆ ಅಮಾನತಿನಲ್ಲಿಟ್ಟಿದ್ದು, ಬಣಗಳು ವಿಲೀನವಾದರೆ ಚಿಹ್ನೆ ಮರಳಿ ಸಿಗಲಿದೆ. ಅಂತೆಯೇ ಜಯ ನಿಧನದಿಂದ ತೆರವಾಗಿರುವ ಆರ್‌.ಕೆ.ನಗರ ಕ್ಷೇತ್ರದ ಚುನಾವಣೆಗೂ ಹಾದಿ ಸುಗಮವಾಗುತ್ತದೆ. ಜಿಡಿಪಿ ಆಧಾರದಲ್ಲಿ ಹೇಳುವುದಾದರೆ ತಮಿಳುನಾಡು ಎರಡನೇ ಶ್ರೀಮಂತ ರಾಜ್ಯ. ಈ ರಾಜ್ಯದ ರಾಜಕೀಯ ಅಸ್ಥಿರತೆ ಸ್ಥಳೀಯವಾಗಿ ಮಾತ್ರವಲ್ಲದೆ ರಾಷ್ಟ್ರೀಯವಾಗಿಯೂ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ. ಸ್ಥಿರ ಸರಕಾರವಿಲ್ಲದ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಮುಂದಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಒಂದಾಗಿ ರಾಜಕೀಯ ಸ್ಥಿರತೆ ತರಲು ಪ್ರಯತ್ನಗಳು ನಡೆಯುತ್ತಿರುವುದು ಶುಭಸೂಚನೆ ಎನ್ನಬಹುದು.

Back to Top