CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶಾಶ್ವತ ಕಾರ್ಯಕ್ರಮಗಳು ಅಗತ್ಯ ಮತ್ತೆ ಬರದ ಬವಣೆ

ಮುಂಗಾರು ಆರಂಭಕ್ಕೆ ಮುನ್ನ ಹವಾಮಾನ ಇಲಾಖೆ ನುಡಿದ ಶೇ.95 ಮಳೆಯಾಗುವ ಭವಿಷ್ಯ ಸುಳ್ಳಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿದಿ ಲ್ಲ ಮಾತ್ರವಲ್ಲದೆ, ಮಳೆಯ ಅಸಮರ್ಪಕ ಹಂಚಿಕೆಯೂ ಆಗಿದೆ. ಈ ಸಲ ನೆರೆ ಬಂದಿರುವುದು ಮುಂಬಯಿ, ಬೆಂಗಳೂರು, ಲಕ್ನೊ ಮತ್ತಿತರ ದೊಡ್ಡ ನಗರಗಳಲ್ಲಿ ಮಾತ್ರ. ಇದು ಅತಿವೃಷ್ಟಿಯಿಂದಾಗಿರುವ ನೆರೆಯಲ್ಲ, ಬದಲಾಗಿ ಯದ್ವಾತದ್ವಾ ಬೆಳೆದ ನಗರಗಳಿಂದಾಗಿ  ಸೃಷ್ಟಿಯಾಗಿರುವ ಕೃತಕ ಪ್ರವಾಹ. ಒಟ್ಟಾರೆ ಸುಮಾರು ಶೇ. 17ರಷ್ಟು ಮಳೆ ಕೊರತೆಯಾಗಿದ್ದು, ಕರ್ನಾಟಕವೂ ಸೇರಿ 17 ರಾಜ್ಯಗಳಲ್ಲಿ ಮತ್ತೆ ಬರದ ಭೀತಿ ಆವರಿಸಿದೆ.

ಕರ್ನಾಟಕದ ಪಾಲಿಗಂತೂ ಸತತ ನಾಲ್ಕನೇ ವರ್ಷ ವರುಣನ ಮುನಿಸು ಮುಂದುವರಿದಂತಾಗಿದೆ. ಸದ್ಯಕ್ಕೆ 17 ರಾಜ್ಯಗಳ 225 ಜಿಲ್ಲೆಗಳಲ್ಲಿ ಬರಗಾಲ ಕಾಣಿಸಿಕೊಳ್ಳಲಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ಮತ್ತು ಬರಗಾಲ ಪರಿಶೀಲನಾ ವ್ಯವಸ್ಥೆ ಎಚ್ಚರಿಸಿದೆ. ಬೇಸಿಗೆ ಆಗಮಿಸಿದಂತೆ ಬರಪೀಡಿತವಾಗುವ ಜಿಲ್ಲೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅದರಲ್ಲೂ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪಂಜಾಬ್‌, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಬರದ ಹೊಡೆತಕ್ಕೆ ಗುರಿಯಾಗಲಿವೆ ಎನ್ನುವುದು ಹೆಚ್ಚು ಕಳವಳಕಾರಿ  ವಿಚಾರ.

ಬರಗಾಲದ ನಾನಾ ರೀತಿಯ ಪರಿಣಾಮಗಳನ್ನು ಕಳೆದ ಬೇಸಿಗೆ ಯಲ್ಲಿ ನಾವು ನೋಡಿದ್ದೇವೆ. ಒಂದೆಡೆ ಜನರು ಜಾನುವಾರುಗಳು ಅನ್ನ ನೀರು ಇಲ್ಲದೆ ವಿಲಿವಿಲಿ ಒದ್ದಾಡುತ್ತಿದ್ದರೆ ನಮ್ಮನ್ನಾಳುವವರು ಬರ ಪರಿಹಾರ ಮತ್ತು ಸಾಲಮನ್ನಾ ವಿಚಾರಗಳನ್ನು ಹಿಡಿದುಕೊಂಡು ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಎಲ್ಲದ ರಲ್ಲೂ ರಾಜಕೀಯದ ಲಾಭವನ್ನು
ಲೆಕ್ಕ ಹಾಕಿದರು. ಇದೀಗ ಇದೇ ಪ್ರಹಸನ ಈ ವರ್ಷವೂ ಪುನರಾವರ್ತ ನೆಯಾಗುವ ಸಾಧ್ಯತೆಯಿದೆ. ಇದು ಚುನಾವಣಾ ವರ್ಷವೂ ಆಗಿರುವು ದರಿಂದ ಬರದ ಮೇಲಿನ ರಾಜಕೀಯ ಕೆಸರೆರಚಾಟ ಜೋರಾಗಿಯೇ ನಡೆಯಬಹುದು.

ಬರ ಎಲ್ಲರನ್ನೂ ಕಾಡಿದರೂ ಹೆಚ್ಚು ಹೊಡೆತ ನೀಡುವುದು ರೈತ ಸಮುದಾಯಕ್ಕೆ. ಈ ಸಮುದಾಯ ಉಳಿದೆಲ್ಲ ಜನವರ್ಗಗಳ ತಳಪಾಯ ಇದ್ದ ಹಾಗೆ. ಇದು ತನಕ ರೈತ ಸಮುದಾಯಕ್ಕೆ ಸತತ ಉಂಟಾಗುತ್ತಿರುವ ಬರದ ಬಾಧೆಯ ಪರಿಣಾಮ ಉಳಿದ ಜನವರ್ಗಗಳನ್ನು ಅಷ್ಟಾಗಿ ತಟ್ಟಿಲ್ಲ. ಆದರೆ ಇಂದಲ್ಲ ನಾಳೆಯಾದರೂ ಅದು ಆಹಾರ ಕ್ಷಾಮ, ಬೆಲೆಯೇರಿಕೆಯಂತಹ ಪರಿಣಾಮಗಳ ಮೂಲಕ ಸಮಾಜದ ಇತರ ಸಮುದಾಯಗಳನ್ನೂ ತೀವ್ರವಾಗಿ ತಟ್ಟುವುದು ಶತಸ್ಸಿದ್ಧ. ಕೃಷಿಯಿಂದ ದೇಶದ ಜಿಡಿಪಿಗೆ ಈಗ ಭಾರೀ ಎನ್ನಬಹುದಾದ ಯೋಗದಾನ ಇಲ್ಲದಿದ್ದರೂ, ಈಗಲೂ ಅತ್ಯಧಿಕ ಜನರಿಗೆ ಉದ್ಯೋಗ ನೀಡುತ್ತಿರುವುದು
ಕೃಷಿ ಕ್ಷೇತ್ರ ಮತ್ತು ಕೃಷಿ ಸಂಬಂಧಿ ಉದ್ಯಮಗಳು. ಬರದಿಂದಾಗಿ ಬೆಳೆ ವಿಫ‌ಲವಾದರೆ ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾಗುತ್ತಾರೆ  ಹಾಗೂ ಇದರಿಂದ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ.

ಹಲವು ರಾಜ್ಯಗಳು ಬರಕ್ಕೆ ತುತ್ತಾಗುವ ಮುನ್ಸೂಚನೆ ಇದ್ದರೂ ಒಟ್ಟಾರೆ ಆಹಾರ ಉತ್ಪಾದನೆ ಕಡಿಮೆಯಾಗುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿರುವುದು ಪೂರ್ಣ ನಿಜವಲ್ಲ. ಹಾಲಿ ಹಂಗಾಮಿನ ಕೊಯ್ಲು ಇನ್ನಷ್ಟೇ ಆಗಬೇಕಾಗಿದೆ. ಇದಕ್ಕೂ ಮೊದಲು ಆಹಾರ ಉತ್ಪಾದನೆಯನ್ನು ಅಂದಾಜಿಸುವುದು ಸಾಧ್ಯವಿಲ್ಲ. ಒಂದು ವೇಳೆ ಉತ್ಪಾದನೆ ಕಡಿಮೆಯಾದರೂ ವಿದೇಶದಿಂದ ಆಮದು ಮಾಡಿಕೊಳ್ಳುವ ಆಯ್ಕೆ ಇದೆ ಎಂದು ನಿಶ್ಚಿಂತೆಯಿಂದ ಇರಬಹುದು.

ಆದರೆ ಪ್ರತಿ ವರ್ಷ ಆಹಾರ ಧಾನ್ಯಗಳಿಗಾಗಿ ವಿದೇಶಗಳ ಅವಲಂಬನೆ ಆರ್ಥಿಕವಾಗಿ ಮಾತ್ರವಲ್ಲದೆ ದೇಶದ ಒಟ್ಟು ಹಿತಾಸಕ್ತಿಯಿಂದಲೂ ಸರಿಯಾದ ನಡೆಯಲ್ಲ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಬರ ಮಾಮೂಲಾಗುತ್ತಿರುವ ಸಂದರ್ಭದಲ್ಲಿ ಸರಕಾರ ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಶಾಶ್ವತ ಕಾರ್ಯಕ್ರಮಗಳನ್ನು
ರೂಪಿಸುವತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಎಂ. ಎಸ್‌. ಸ್ವಾಮಿನಾಥನ್‌ ಆಯೋಗ ಮಾಡಿರುವ ಶಿಫಾರಸುಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

*ಸಂಪಾದಕೀಯ

Back to Top