CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರ್ಥಿಕ ಪ್ರಗತಿಗೆ ವೇಗದ ಸಾರಿಗೆ ಪೂರಕ ಶಿಂಜೊ ಅಬೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ ಒಂದೇ ಸಮಯದಲ್ಲಿ ಅಧಿಕಾರಕ್ಕೇರಿದವರು. 2014ರಲ್ಲಿ ಪ್ರಧಾನಿಗಳಾದ ಅವರು ಇಷ್ಟರತನಕ ಮೂರು ಸಲ ಭೇಟಿಯಾಗಿದ್ದಾರೆ. ಇದೀಗ ಅಹಮದಾಬಾದ್‌ನಲ್ಲಿ ನಡೆಯುತ್ತಿರುವುದು ನಾಲ್ಕನೇ ಭೇಟಿ. ಮಾಮೂಲು ಸಂದರ್ಭದಲ್ಲಾಗಿದ್ದರೆ ಎರಡು ಸ್ನೇಹಿತ ದೇಶಗಳ ಪ್ರಧಾನಿಗಳು ಪರಸ್ಪರರ ದೇಶಕ್ಕೆ ಭೇಟಿ ಕೊಟ್ಟು ದ್ವಿಪಕ್ಷೀಯ ಸಂಬಂಧ ವೃದ್ಧಿಸಿಕೊಳ್ಳುವುದು ಒಂದು ಮಾಮೂಲು ರಾಜತಾಂತ್ರಿಕ ನಡೆಯಷ್ಟೇ ಆಗುತ್ತಿತ್ತು. ಆದರೆ ಶಿಂಜೋ ಅಬೆ ಅವರ ಭಾರತ ಭೇಟಿ ಮಾತ್ರ ಒಂದು ಕಾರಣಕ್ಕೆ ಬಹಳ ಮಹತ್ವ ಪಡೆದುಕೊಂಡಿದೆ. ಅದು ಬುಲೆಟ್‌ ರೈಲು. ಅಹಮದಾಬಾದ್‌-ಮುಂಬಯಿ ನಡುವೆ ಓಡಲಿರುವ ಬುಲೆಟ್‌ ರೈಲು ಜಾಗತಿಕ ಭೂಪಟದಲ್ಲಿ ಭಾರತದ ಸ್ಥಾನವನ್ನು ಬಹಳ ಎತ್ತರಕ್ಕೇರಿಸಿರುವ ಭಾರೀ ನಿರೀಕ್ಷೆಯಿರುವುದರಿಂದ ಈ ಭೇಟಿ ಕುತೂಹಲ ಕೆರಳಿಸಿದೆ. ಗುರುವಾರ ಅಹಮದಾಬಾದ್‌ನಲ್ಲಿ ಉಭಯ ಪ್ರಧಾನಿಗಳು ಬುಲೆಟ್‌ ಟ್ರೈನ್‌ಗೆ ಶಿಲಾನ್ಯಾಸ ನೆರವೇರಿಸುವುದರೊಂದಿಗೆ ಮಿಂಚಿನ ವೇಗದ ರೈಲುಗಳನ್ನು ಓಡಿಸುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುವ ಐತಿಹಾಸಿಕ ಘಟನೆಗೆ ಮುಹೂರ್ತವಿಟ್ಟಂತಾಗುತ್ತದೆ. ಭಾರೀ ವೆಚ್ಚ ಬೇಡುವ ಬುಲೆಟ್‌ ರೈಲು ಕುರಿತು ಈಗಾಗಲೇ ಬಹಳಷ್ಟು ಪರ-ವಿರೋಧ ಚರ್ಚೆಗಳು ನಡೆದಿವೆ. ಇರುವ ರೈಲ್ವೇಯ ವ್ಯವಸ್ಥೆಯನ್ನೇ ಸಮರ್ಪಕವಾಗಿ ಇಟ್ಟುಕೊಳ್ಳಲು ಸಾಧ್ಯವಾಗದ ನಮಗೆ ದುಬಾರಿ ಬುಲೆಟ್‌ ರೈಲು ಬೇಕೆ? ಇದಕ್ಕೂ ಹೂಡುವ ಅಪಾರ ಬಂಡವಾಳವನ್ನು ಈಗಿರುವ ರೈಲ್ವೇ ವ್ಯವಸ್ಥೆಯನ್ನು ಸುಧಾರಿಸಲು ಬಳಸಿಕೊಳ್ಳಬಾರದೇಕೆ? ಇಷ್ಟಕ್ಕೂ ಬುಲೆಟ್‌ ಟ್ರೈನ್‌ನಿಂದ ಬಡವರಿಗಾಗುವ ಪ್ರಯೋಜನವೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ. ಮೇಲ್ನೋಟಕ್ಕೆ ನೋಡಿದರೆ ಈ ಎಲ್ಲ ಪ್ರಶ್ನೆಗಳಲ್ಲಿ ಹುರುಳಿದೆ ಎಂದು ಅನ್ನಿಸುತ್ತದೆ. ಏಶ್ಯಾದಲ್ಲಿಯೇ ಅತಿ ವಿಸ್ತಾರವಾದ ರೈಲು ಲೈನ್‌ ಹೊಂದಿದ್ದರೂ ಅದನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ಪದೇ ಪದೆ ಹಳಿ ತಪ್ಪುವ ರೈಲುಗಳನ್ನು ನೋಡುವಾಗ ಬುಲೆಟ್‌ ರೈಲಿಗಿಂತ ಈಗಿರುವ ರೈಲ್ವೆಯನ್ನು ಸುಧಾರಿಸುವ ಕೆಲಸ ಮೊದಲು ಆಗಬೇಕು ಎನ್ನುವುದು ನಿಜ. ಅಲ್ಲದೆ ಬುಲೆಟ್‌ ರೈಲಿನಿಂದ ಬಡವರಿಗಂತೂ ಯಾವ ಪ್ರಯೋಜನವೂ ಆಗುವುದಿಲ್ಲ. 3000-4000 ರೂ. ಟಿಕೆಟ್‌ ದರ ಇರುವ ಬುಲೆಟ್‌ ರೈಲು ಶ್ರೀಮಂತರ ಅನುಕೂಲಕ್ಕೆ ಮಾತ್ರ ನಿರ್ಮಾಣವಾಗುತ್ತದೆ ಎನ್ನುವುದು ನಿಜವೇ ಆಗಿರಬಹುದು. ಆದರೆ ಈಗಾಗಲೇ ಬುಲೆಟ್‌ ರೈಲುಗಳು ಓಡುತ್ತಿರುವ ಚೀನ, ಜಪಾನ್‌ ಅಥವಾ ಇನ್ನಿತರ ದೇಶಗಳತ್ತ ಒಮ್ಮೆ ನೋಡಿದಾಗ ಅವುಗಳ ಮಹತ್ವ ಏನು ಎಂದು ಅರಿವಾಗುತ್ತದೆ. ಒಂದು ದೇಶದ ಆರ್ಥಿಕ ಪ್ರಗತಿಗೆ ವೇಗದ ಸಾರಿಗೆ ಸೇವೆ ಹೇಗೆ ಪೂರಕವಾಗುತ್ತದೆ ಎನ್ನುವುದನ್ನು ಈ ದೇಶಗಳನ್ನು ನೋಡಿ ತಿಳಿದುಕೊಳ್ಳಬಹುದು. ತೀರಾ ಬಡವರಿಗೆ ಬುಲೆಟ್‌ ಟ್ರೈನ್‌ ದುಬಾರಿಯಾದರೂ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೆ ಕೈಗೆಟುಕದಂತಹ ಟಿಕೆಟ್‌ ದರವಲ್ಲ ಇದು. ದೇಶದ ವಿಮಾನ ಯಾನ ಕ್ಷೇತ್ರದ ಮೇಲೆ ಬೀಳುತ್ತಿರುವ ವಿಪರೀತ ಒತ್ತಡವನ್ನು ನಿವಾರಿಸಲು ಬುಲೆಟ್‌ ಟ್ರೈನ್‌ ಸಹಕಾರಿ. ಇನ್ನು ಬಂಡವಾಳದ ವಿಷಯಕ್ಕೆ ಬರುವುದಾದರೆ 1.1 ಲಕ್ಷ ಕೋಟಿ ರೂಪಾಯಿ ಎನ್ನುವುದು ಸದ್ಯದ ಮಟ್ಟಿಗೆ ದೇಶಕ್ಕೆ ಭಾರೀ ದೊಡ್ಡ ಹೊರೆಯೇ ಆಗಿದ್ದರೂ ಇದರ ಬಹುಪಾಲು ಮೊತ್ತವನ್ನು ಜಪಾನ್‌ ಬರೀ ಶೇ.0.1 ಬಡ್ಡಿಗೆ ನೀಡುತ್ತಿದೆ. 50 ವರ್ಷಗಳಲ್ಲಿ ತೀರಿಸಬೇಕಾದ ಸಾಲವಿದು. ಹೀಗಾಗಿ ಬುಲೆಟ್‌ ಟ್ರೈನ್‌ನಿಂದ ದೇಶದ ಆರ್ಥಿಕತೆಯ ಮೇಲೆ ಹೊರೆ ಬೀಳಲಿದೆ ಎನ್ನುವ ವಾದ ಸರಿಯಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಐದು ವರ್ಷಗಳಲ್ಲಿ ಅಂದರೆ 2022ರಲ್ಲಿ ಭಾರತದಲ್ಲಿ ಬುಲೆಟ್‌ ಟ್ರೈನ್‌ ಓಡಲಿದೆ.  

ಕಳೆದ ಮೂರು ವರ್ಷಗಳಲ್ಲಿ ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯ ಬಹಳಷ್ಟು ಉತ್ತಮಗೊಂಡಿದೆ. ಉಭಯ ದೇಶಗಳ ನಡುವೆ ಏರ್ಪಟ್ಟಿರುವ ನಾಗರಿಕ ಪರಮಾಣು ಒಪ್ಪಂದ ಈ ಬಾಂಧವ್ಯ ವೃದ್ಧಿಯ ಫ‌ಲಶ್ರುತಿ. ಪರಮಾಣು ತಂತ್ರಜ್ಞಾನ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದ ದೇಶವಾಗಿದ್ದರೂ ಭಾರತದ ಜತೆಗಿನ ಒಪ್ಪಂದಕ್ಕೆ ಜಪಾನ್‌ ಅಂಕಿತ ಹಾಕಿರುವುದು ಆ ದೇಶ ನಮ್ಮ ಮೇಲಿಟ್ಟಿರುವ ವಿಶ್ವಾಸದ ದ್ಯೋತಕ. ಅಂತೆಯೇ ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟುಗಳು ಕೂಡ ಗಣನೀಯವಾಗಿ ಏರಿದೆ. 2005ರಲ್ಲಿ 22,900 ಕೋ. ರೂ. ಇದ್ದ ಜಪಾನ್‌ ಆಮದು 2015ರಲ್ಲಿ 57,800 ಕೋಟಿಯಾಗಿದೆ. ದಿಲ್ಲಿ ಮೆಟ್ರೊ, ದಿಲ್ಲಿ ಮುಂಬಯಿ ಇಂಡಸ್ಟ್ರಿಯಲ್‌ ಕಾರಿಡಾರ್‌ ಮುಂತಾದ ಬೃಹತ್‌ ಯೋಜನೆಗಳಲ್ಲಿ ಜಪಾನ್‌ ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಈ ಭೇಟಿಯಲ್ಲಿ ಸುಮಾರು 10 ಒಪ್ಪಂದಗಳು ಏರ್ಪಡಲಿವೆ. ಏಶ್ಯಾದ ಎರಡು ಬಲಿಷ್ಠ ರಾಷ್ಟ್ರಗಳ ಈ ರೀತಿಯ ನಿಕಟ ಬಾಂಧವ್ಯ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಪರಿಣಾಮ ಬೀರಲಿದೆ.

Back to Top