CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರುಷಿ ಪ್ರಕರಣ ಕಲಿಸುತ್ತಿದೆ ಪಾಠ, ತನಿಖಾ ವ್ಯವಸ್ಥೆಯ ಜಾಡ್ಯ

ದೇಶದ ಅತಿದೊಡ್ಡ ಮರ್ಡರ್‌ ಮಿಸ್ಟರಿ ಎಂದು ಕರೆಸಿಕೊಂಡ ಆರುಷಿ-ಹೇಮರಾಜ್‌ ಹತ್ಯೆ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಹೊರಬಿದ್ದಿದೆ. ಸಿಬಿಐನ ವಿಶೇಷ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸುತ್ತಾ ಆರುಷಿಯ ತಂದೆ ರಾಜೇಶ್‌ ಮತ್ತು ತಾಯಿ ನೂಪುರ್‌ ತಲ್ವಾರ್‌ರನ್ನು ನಿರ್ದೋಷಿಗಳೆಂದು ಪ್ರಕಟಿಸಿದೆ ಹೈಕೋರ್ಟ್‌. ಈ ತೀರ್ಪಿನಿಂದಾಗಿ, ತಲ್ವಾರ್‌ ದಂಪತಿಯ ವಿರುದ್ಧ ಸಿಬಿಐ ಮಂಡಿಸಿದ್ದ ದಾಖಲೆಗಳೆಲ್ಲ ತೀರಾ ದುರ್ಬಲವಾಗಿದ್ದವು ಎನ್ನುವ ಸಂಗತಿಯಂತೂ ಸ್ಪಷ್ಟವಾಗಿದೆ. ಕೇವಲ ಪರಿಸ್ಥಿತಿ ಜನ್ಯ ಸಾಕ್ಷಿಗಳ ಆಧಾರದ ಮೇಲೆ ತಲ್ವಾರ್‌ ದಂಪತಿಯನ್ನು ದೋಷಿಗಳೆಂದು ತೀರ್ಮಾನಿಸಿಬಿಟ್ಟಿತ್ತು ಸಿಬಿಐ ನ್ಯಾಯಾಲಯ. ಅಲಹಾಬಾದ್‌ ಹೈಕೋರ್ಟ್‌ನ ತೀರ್ಪು ತಲ್ವಾರ್‌ ದಂಪತಿಗೆ ನಿಟ್ಟುಸಿರುಬಿಡುವಂತೆ ಮಾಡಿದೆಯಾದರೂ ಅವರು ಇಷ್ಟು ವರ್ಷ ಎದುರಿಸಿದ ತೊಂದರೆಗೆ ಪರಿಹಾರ ಸಿಗುತ್ತದೆಯೇ? ಆರುಷಿಗೆ ನ್ಯಾಯ ದೊರಕುತ್ತದೆಯೇ? ದೇಶದ ಉನ್ನತ ತನಿಖಾ ಸಂಸ್ಥೆಗೆ ಈ ಪ್ರಕರಣದಲ್ಲಿ ಕಳೆದುಕೊಂಡ ಗೌರವ ಮತ್ತೆ ಬರುತ್ತದೆಯೇ? ಇನ್ನು ಉಚ್ಚ ನ್ಯಾಯಾಲಯದ ಈ ತೀರ್ಪು ಮತ್ತೂಮ್ಮೆ, ದೇಶಾದ್ಯಂತ ಕಳೆದ 9 ವರ್ಷಗಳಿಂದ ಭುಗಿಲೇಳುತ್ತಲೇ ಇರುವ ಪ್ರಶ್ನೆಯನ್ನೇ ಎದುರಿಟ್ಟಿದೆ-""ಆರುಷಿಯ ಕೊಲೆಗಡುಕರು ಯಾರು?''
ಸತ್ಯವೇನೆಂದರೆ ಭಾರತದಲ್ಲಿ ಮತ್ಯಾವ ಕೊಲೆ ಪ್ರಕರಣವೂ ಈ ಪಾಟಿ ತಿರುವುಗಳನ್ನು ಪಡೆದೇ ಇಲ್ಲ. ವರ್ಷಗಳೆದಂತೆ ಪ್ರಕರಣ ಬಗೆಹರಿಯುವ ಬದಲು ಬಿಗಿ ಗಂಟಾಗುತ್ತಲೇ ಬಂದಿತು. ದುರಂತವೆಂದರೆ ಈ ಗಂಟನ್ನು ಬಿಗಿಯಾಗಿಸಿದ್ದು ಪೊಲೀಸರು ಮತ್ತು ಸಿಬಿಐಯ ಎಡವಟ್ಟುಗಳು! 

16 ಮೇ 2008ರಂದು ಆರುಷಿಯ ಮೃತದೇಹ ಆಕೆಯ ಬೆಡ್‌ರೂಂನಲ್ಲಿ ಪತ್ತೆಯಾಯಿತು. ಕತ್ತು ಸೀಳಿ ಆಕೆಯ ಹತ್ಯೆ ನಡೆಸಲಾಗಿತ್ತು. ಆರಂಭದಲ್ಲಿ ತಲ್ವಾರ್‌ ದಂಪತಿ ಮತ್ತು ಪೊಲೀಸರ ಅನುಮಾನ ಹೊರಳಿದ್ದು ಮನೆ ನೌಕರ 45 ವರ್ಷದ ಹೇಮ್‌ರಾಜ್‌ನತ್ತ. ಆ ಹೊತ್ತಿಗೆ ಆತ ನಾಪತ್ತೆಯಾಗಿದ್ದ. ಆದರೆ ಮರುದಿನವೇ ಬಿಲ್ಡಿಂಗಿನ ಮಾಳಿಗೆಯ ಮೇಲೆ ಹೇಮರಾಜನ ಶವ ಪತ್ತೆಯಾಯಿತು. ತದನಂತರ ಪೊಲೀಸರು ತಲ್ವಾರ್‌ ದಂಪತಿಯನ್ನೇ ದೋಷಿ ಎಂದು ಘೋಷಿಸಿ ಬಿಟ್ಟರು. ತನ್ನ ಮಗಳು ಆರುಷಿ ಮತ್ತು ಹೇಮರಾಜ್‌ರನ್ನು ಅಸಭ್ಯ ಭಂಗಿಯಲ್ಲಿ ನೋಡಿ ಕೋಪಗೊಂಡ ರಾಜೇಶ್‌ ತಲ್ವಾರ್‌ ಮಗಳು ಮತ್ತು ಕೆಲಸದವನನ್ನು ಹತ್ಯೆ ಮಾಡಿದರು ಎಂದುಬಿಟ್ಟರು ಪೊಲೀಸರು (ಯಾವುದೇ ವಿಧಿವಿಜ್ಞಾನ ಪರೀಕ್ಷೆ ನಡೆಸದೆ ಮತ್ತು ಮೆಟೀರಿಯಲ್‌ ಎವಿಡೆನ್ಸ್‌ ಇಲ್ಲದೆಯೇ!) ಹತ್ಯೆ ನಡೆದ ಒಂದು ವಾರದ ಅನಂತರ ರಾಜೇಶ್‌ ಬಂಧನವಾಯಿತು. ಜಾಮೀನು ಪಡೆದು ಹೊರಬರುವುದಕ್ಕೇ ಅವರಿಗೆ 60 ದಿನ ಹಿಡಿಯಿತು! 

ಸಿಬಿಐ ತನಿಖಾಧಿಕಾರಿಗಳ ಮೊದಲ ತಂಡ ವೈಜ್ಞಾನಿಕ ಆಧಾರದ ಮೇಲೆ ಡಾ| ತಲ್ವಾರ್‌ ಅವರ ಕಂಪೌಂಡರ್‌ ಮತ್ತು ಆತನ ಇಬ್ಬರು ಸ್ನೇಹಿತರನ್ನು ಅರೆಸ್ಟ್‌ ಮಾಡಿತ್ತು. ಆದರೆ ಏಜೆನ್ಸಿ ಇವರ ಮೇಲೆ ಚಾರ್ಜ್‌ ಶೀಟ್‌ ಸಲ್ಲಿಸಲು ವಿಫ‌ಲವಾಗಿದ್ದರಿಂದ ಆ ಮೂವರೂ ಹೊರಬಿದ್ದರು.

ಸಿಬಿಐ ಅಧಿಕಾರಿಗಳ ನಡುವಿನ ಒಳ ಜಗಳಗಳಿಂದಾಗಿ ಎರಡನೆಯ ತಂಡ ಅಸ್ತಿತ್ವಕ್ಕೆ ಬಂದು ತನಿಖೆ ಆರಂಭಿಸಿತು. ಮೊದಲನೆಯ ತಂಡ ಅಲ್ಲಿಯವರೆಗೂ ಹಿಡಿದಿದ್ದ ಜಾಡು ಜಡ್ಡುಗಟ್ಟಿತು. ಆದರೆ ಎರಡನೆಯ ತಂಡಕ್ಕೂ ತಲ್ವಾರ್‌ ದಂಪತಿಯ ವಿರುದ್ಧ ಪುರಾವೆ ಸಿಗಲಿಲ್ಲ. ಹೀಗಿದ್ದರೂ ಸಿಬಿಐನ ವಿಶೇಷ ನ್ಯಾಯಾಲಯ 2013ರಲ್ಲಿ ತನ್ನೆದುರಿದ್ದ 
ಅಷ್ಟಿಷ್ಟು ಅಸ್ಪಷ್ಟ ದಾಖಲೆಗಳ ಆಧಾರದ ಮೇಲೆ ತಲ್ವಾರ್‌ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿಬಿಟ್ಟಿತು.

ಈ ಪ್ರಕರಣ ಸಿಬಿಐ, ಪೊಲೀಸ್‌ ಇಲಾಖೆಯ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿದ್ದು ಸುಳ್ಳಲ್ಲ. ಇಷ್ಟೇ ಅಲ್ಲ, ಆರುಷಿ ಹತ್ಯೆ ಪ್ರಕರಣದ ವಿಚಾರದಲ್ಲಿ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಟಿ.ವಿ. ಮಾಧ್ಯಮಗಳು ನಡೆದುಕೊಂಡ ರೀತಿಯನ್ನೂ ಪ್ರಶ್ನಿಸುವಂತೆ ಮಾಡಿದೆ. ತಲ್ವಾರ್‌ ದಂಪತಿಯೇ ದೋಷಿಗಳೆಂದು ತೀರ್ಪು ನೀಡಿಬಿಟ್ಟವು ಮಾಧ್ಯಮಗಳು.

ಟಿಆರ್‌ಪಿ ಆಸೆಯಲ್ಲಿ ತಾವೇ ದಿನಕ್ಕೊಂದು ಕಾನ್ಸ್‌ಪಿರಸಿ ಥಿಯರಿಗಳನ್ನು ಪತ್ತೆದಾರಿ ಕಥೆಗಳಂತೆ ಹೆಣೆಯುತ್ತಾ 
ಬಂದವು. ಕೆಲವು ಚಾನೆಲ್‌ಗ‌ಳಂತೂ ಆರುಷಿಯ ಚಾರಿತ್ರÂವೇ ಸರಿಯಿರಲಿಲ್ಲ ಎಂದು "ಮೂಲಗಳ' ಆಧಾರವನ್ನು ಎದುರಿಟ್ಟವು. ಆರುಷಿ ಹತ್ಯೆ ಪ್ರಕರಣ ಮಾಧ್ಯಮಗಳ ಮುಂದೆ ನೈತಿಕ ಪ್ರಶ್ನೆಯನ್ನು ಎದುರಿಡುತ್ತಿದೆ. ದುರ್ದೈವಿಯು ಹೆಣ್ಣಾಗಿದ್ದರೆ ಕೂಡಲೇ ಆಕೆಯ ಚಾರಿತ್ರÂವಧೆಗೆ ನಿಲ್ಲಲಾಗುವ ಕೆಟ್ಟ ಸಂಸ್ಕೃತಿ ದೂರವಾಗುವುದು ಯಾವಾಗ? ಎಂಬ ಪ್ರಶ್ನೆಯದು. ಇನ್ನು ತನಿಖಾ ವೈಖರಿ ದುರ್ಬಲ ವಾಗಿದ್ದರೆ ಹೇಗೆ ಒಂದು ಸೂಕ್ಷ್ಮ ಪ್ರಕರಣ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಆರುಷಿ ಕೇಸ್‌ ಅತ್ಯುತ್ತಮ ಉದಾಹರಣೆ.

ತನಿಖಾ ವ್ಯವಸ್ಥೆಯಲ್ಲಿನ ಲೋಪವನ್ನು ಸರಿಪಡಿಸಿದಾಗ ಮಾತ್ರ ಇಂಥ ತಪ್ಪುಗಳು ಆಗುವುದು ನಿಲ್ಲುತ್ತದೆ.

Author/Source: 
Back to Top