CONNECT WITH US  

ವರ್ಚುವಲ್‌ ಐಡಿ ಎಂಬ ಹೊಸ ಐಡಿಯಾ 

ಕಡೆಗೂ ಎಚ್ಚೆತ್ತ ಆಧಾರ್‌ ಪ್ರಾಧಿಕಾರ 

ಆಧಾರ್‌ ಪ್ರಾಧಿಕಾರಕ್ಕೆ ಕಡೆಗೂ ಜ್ಞಾನೋದಯ ಆಗಿರುವಂತೆ ಕಾಣಿಸುತ್ತದೆ. ಮಾಹಿತಿ ಸೋರಿಕೆಯಾಗುವ ಕುರಿತು ಪುಂಖಾನುಪುಂಖವಾಗಿ ದೂರುಗಳು ಬಂದರೂ ತಲೆಕೆಡಿಸಿಕೊಳ್ಳದ ಪ್ರಾಧಿಕಾರ ಈಗ ವರ್ಚುವಲ್‌ ಐಡಿ ಎಂಬ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ. ಅಂದರೆ ಪರೋಕ್ಷವಾಗಿ ಸ್ವತಹ ಪ್ರಾಧಿಕಾರವೇ ಮಾಹಿತಿ ಸೋರಿಕೆ ಯಾಗುವ ಸಾಧ್ಯತೆಯಿದೆ ಎಂದು ಒಪ್ಪಿಕೊಂಡು ಅದನ್ನು ತಡೆಗಟ್ಟಲು ಹೊಸ ಮಾರ್ಗವೊಂದನ್ನು ಕಂಡುಕೊಂಡಂತಾಗಿದೆ. ಹೀಗಾಗಿ ಇಷ್ಟರ ತನಕ ಪ್ರಾಧಿಕಾರ ಆಧಾರ್‌ ಮಾಹಿತಿ ಭದ್ರತೆಯ ಕುರಿತು ನೀಡುತ್ತಿದ್ದ ಸಮರ್ಥನೆಗಳೆಲ್ಲ ಪೂರ್ತಿ ಸತ್ಯವಲ್ಲ ಎನ್ನುವುದು ಸಾಬೀತಾಗಿದೆ. ವರ್ಚುವಲ್‌ ಐಡಿ ಆಧಾರ್‌ಗೆ ಪರ್ಯಾಯವಾಗಿ ಉಪಯೋಗಲಿರುವ ಗುರುತಿನ ದಾಖಲೆ. ಆಧಾರ್‌ ವೆಬ್‌ಸೈಟಿಗೆ ಹೋಗಿ ಇದನ್ನು ಪಡೆದು ಕೊಳ್ಳಬಹುದು. ವರ್ಚುವಲ್‌ ಐಡಿಯಲ್ಲಿ ಮೂಲ ಆಧಾರ್‌ ನಂಬರ್‌ ಬದಲಾಗಿ 16 ಅಂಕಿಯ ಹೊಸ ನಂಬರ್‌ ಸಿಗುತ್ತದೆ. ಜತೆಗೆ ಇದರಲ್ಲಿ ಹೆಸರು, ಮನೆ ವಿಳಾಸದಂತಹ ಕೆಲವು ಸಾಮಾನ್ಯ ಮಾಹಿತಿಗಳಷ್ಟೆ ಇರು ತ್ತದೆ. ಹೀಗಾಗಿ ಇದು ಸುಭದ್ರ ಎನ್ನುತ್ತಿದೆ ಪ್ರಾಧಿಕಾರ. ಒಬ್ಬರು ಎಷ್ಟು ಬೇಕಾದರೂ ವರ್ಚುವಲ್‌ ಐಡಿ ಪಡೆದುಕೊಳ್ಳಬಹುದು. ಹೊಸ ವರ್ಚುವಲ್‌ ಐಡಿ ಪಡೆದುಕೊಂಡ ಕೂಡಲೇ ಹಳೆಯ ಐಡಿ ಅನೂರ್ಜಿ ತಗೊಳ್ಳುತ್ತದೆ. ಈ ವರ್ಚುವಲ್‌ ಐಡಿಗೂ ಕಾಲಮಿತಿ ಇದೆ. ಅನಂತರ ಅದು ತನ್ನಿಂದ ತಾನೇ ಮೌಲ್ಯ ಕಳೆದುಕೊಳ್ಳುತ್ತದೆ. ಮೊಬೈಲ್‌ ಸಿಮ್‌ ಖರೀದಿಯಂತಹ ಮಾಮೂಲು ವ್ಯವಹಾರಗಳಿಗೆ ವರ್ಚುವಲ್‌ ಐಡಿಯೇ ಸಾಕು. ಅಂತೆಯೇ ಕೆಲವೇ ತಿಂಗಳಲ್ಲಿ ಕೆಲವು ಸೇವೆಗಳಿಗೆ ವರ್ಚುವಲ್‌ ಐಡಿಯನ್ನು ಮಾತ್ರ ಪಡೆದುಕೊಳ್ಳುವುದು ಕೂಡ ಕಡ್ಡಾಯವಾಗಲಿದೆ. 

ದಿಢೀರ್‌ ಎಂದು ವರ್ಚುವಲ್‌ ಐಡಿಯ ಐಡಿಯಾ ಮೂಡಲು ಕಾರಣವಾಗಿರುವುದು ಇತ್ತೀಚೆಗೆ ಪ್ರಕಟವಾದ ಒಂದು ಸುದ್ದಿ. "ಟ್ರಿಬ್ಯೂನ್‌'ಎಂಬ ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ಎಂಬವರು ಆಧಾರ ಮಾಹಿತಿ ಭದ್ರತೆ ಕುರಿತು ತನಿಖೆ ನಡೆಸಿ ವಿಶೇಷ ವರದಿಯನ್ನು ಪ್ರಕಟಿಸಿದ್ದರು. ಜುಜುಬಿ 500 ರೂ. ಕೊಟ್ಟರೆ 100ಕೋಟಿಗೂ ಮಿಕ್ಕಿ ಇರುವ ಜನರ ಆಧಾರ್‌ ಮಾಹಿತಿಯೆಲ್ಲ ಸಿಗುತ್ತದೆ ಎಂಬ ಬೆಚ್ಚಿ ಬೀಳಿಸುವ ಅಂಶ ಈ ವರದಿಯಲ್ಲಿತ್ತು. ಆಧಾರ್‌ ಮಾಹಿತಿ ಭದ್ರತೆ ಕುರಿತಾಗಿದ್ದ ಭ್ರಮೆಗಳನ್ನೆಲ್ಲ ಕಳಚಿದ ಈ ವರದಿ ಸಹಜವಾಗಿಯೇ ಸಂಚಲನವುಂಟು ಮಾಡಿದೆ ಎನ್ನುವುದಕ್ಕೆ ಸ್ವತಹ ಕೇಂದ್ರ ಸಚಿವ ರವೀಂದ್ರ ಪ್ರಸಾದ್‌ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಿರುವುದು ಸಾಕ್ಷಿ. ಆದರೆ ಪತ್ರಿಕೆಯ ವಿರುದ್ಧ ಆಧಾರ್‌ ಪ್ರಾಧಿಕಾರ ನಡೆದುಕೊಂಡ ರೀತಿ ಮಾತ್ರ ಅಕ್ಷಮ್ಯ. ತನ್ನಲ್ಲಿರುವ ಹುಳುಕುಗಳನ್ನು ಮುಚ್ಚಿ ಹಾಕಲು ಅದು ಪತ್ರಿಕೆಯ ವಿರುದ್ಧವೇ ಕೇಸ್‌ ದಾಖಲಿಸಿತು. ರಚನಾ ಖೈರಾ ವಿರುದ್ಧ ತನಿಖೆ ನಡೆಸಲು ಆಗ್ರಹಿಸಿತು. ಒಟ್ಟಾರೆಯಾಗಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿತು. ಈ ಕ್ರಮಕ್ಕೆ ಮಾಧ್ಯಮ ವಲಯದಿಂದ ಪ್ರಬಲ ಪ್ರತಿರೋಧ ವ್ಯಕ್ತವಾದ ಬಳಿಕ ರವಿಶಂಕರ್‌ ಪ್ರಸಾದ್‌ ರಂಗಕ್ಕಿಳಿದರು. 

2009ರಲ್ಲಿ ಆಧಾರ್‌ ನೀಡಲು ಪ್ರಾರಂಭಿಸಲಾಯಿತು. ಪ್ರಸ್ತುತ ಶೇ. 99ರಷ್ಟು ಜನರು ಆಧಾರ್‌ ನಂಬರ್‌ ಹೊಂದಿದ್ದಾರೆ. ಸರಕಾರದ 100ಕ್ಕೂ ಅಧಿಕ ಸೌಲಭ್ಯಗಳಿಗೆ ಆಧಾರ್‌ ಸಂಯೋಜನೆಯಾಗಿದೆ. ಅಂತೆಯೇ ಡ್ರೈವಿಂಗ್‌ ಲೈಸೆನ್ಸ್‌, ಬ್ಯಾಂಕ್‌ ಖಾತೆಯಿಂದ ಹಿಡಿದು ವಿಮೆಯ ತನಕ ಪ್ರತಿಯೊಂದಕ್ಕೂ ಆಧಾರ್‌ ಲಿಂಕ್‌ ಮಾಡಲಾಗುತ್ತಿದೆ. ಮೊಬೈಲ್‌ ನಂಬರ್‌ಗೆ ಆಧಾರ್‌ ನಂಬರ್‌ ಲಿಂಕ್‌ ಮಾಡುವುದು ಕಡ್ಡಾಯವಾದ ಬಳಿಕ ಮಾಹಿತಿ ಸೋರಿಕೆಯಾಗುತ್ತಿರುವ ದೂರುಗಳು ಹೆಚ್ಚಾಗಿರುವುದು ಗಮನಾರ್ಹ. ಮೊಬೈಲ್‌ ಸೇವಾದಾರ ಕಂಪೆನಿಗಳೆಲ್ಲ ಖಾಸಗಿಯವರ ಕೈಯಲ್ಲಿವೆ. ಮೊಬೈಲ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡುವುದೆಂದರೆ ಖಾಸಗಿಯ ವರಿಗೆ ನಮ್ಮ ಸಮಸ್ತ ರಹಸ್ಯಗಳನ್ನು ನೀಡುವುದು ಎಂದರ್ಥ. ಸಹಜವಾಗಿ ಜನರಿಗೆ ಈ ವಿಚಾರದಲ್ಲಿ ಆತಂಕವಿದೆ. ಆಧಾರ್‌ ಮೂಲಕ ವ್ಯಕ್ತಿಗತ ಮಾಹಿತಿಗಳು ಸೋರಿಕೆಯಾ ಗುತ್ತಿರುವ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದರೂ ಸರಕಾರ ತಲೆಕೆಡಿಸಿಕೊಳ್ಳದೆ ಇನ್ನೂ ಹೆಚ್ಚು ಸೇವೆ ಮತ್ತು ಸೌಲಭ್ಯಗಳಿಗೆ ಸಂಯೋಜನೆ ಮಾಡುತ್ತಾ ಹೋಗುತ್ತಿದೆ. ಹಾಗೇ ನೋಡಿದರೆ ಆರಂಭದಿಂದಲೂ ಆಧಾರ್‌ ಗೊಂದಲದ ಗೂಡು. ಆಗ ಆಧಾರ್‌ ಮಾಡಿಸಿಕೊಳ್ಳಲು ಜನರು ಇನ್ನಿಲ್ಲದ ಪಡಿಪಾಟಲು ಪಟ್ಟಿದ್ದರು. ಶತ ಪ್ರಯತ್ನದ ಬಳಿಕ ಸಿಕ್ಕಿದ ಆಧಾರ್‌ ಕಾರ್ಡಿನಲ್ಲಿ ಹಲವಾರು ತಪ್ಪುಗಳು. ಅದನ್ನು ಸರಿಪಡಿ ಸಿಕೊಳ್ಳಲು ಈಗ ಮತ್ತೂಮ್ಮೆ ತಿದ್ದುಪಡಿ ಕೇಂದ್ರಗಳಿಗೆ ಎಡತಾಕುವ ಕೆಲಸ. ಹೀಗೆ ಎಂಟು ವರ್ಷಗಳಾದರೂ ಆಧಾರ್‌ ಕಾಟ ತಪ್ಪಿಲ್ಲ. ಆಧಾರ್‌ ಉತ್ತಮ ಯೋಜನೆಯೇ ಆಗಿದ್ದರೂ ಅದನ್ನು ಸಮರ್ಪ ಕವಾಗಿ ಜಾರಿ ಗೊಳಿಸುವಲ್ಲಿ ಮಾತ್ರ ಸರಕಾರ ವಿಫ‌ಲಗೊಂಡಿರುವುದರಿಂದ ಇಷ್ಟೆಲ್ಲ ಗೊಂದಲಗಳು ಉಂಟಾಗಿವೆ. 

Trending videos

Back to Top