CONNECT WITH US  

ಕಂಬಾರರಿಗೆ ಅಧ್ಯಕ್ಷ ಗೌರವ ಲಾಭವಲ್ಲ, ನಿರೀಕ್ಷೆಯ ಕಾಲ

ಭಾರತೀಯ ಸಾರಸ್ವತ ಲೋಕದಲ್ಲಿ ಕನ್ನಡ ಸಾಹಿತ್ಯಕ್ಕೆ ಮಗದೊಂದು ಹೊಳಪು. ಇಲ್ಲಿಯ ತನಕ ಅತಿಹೆಚ್ಚು ಜ್ಞಾನಪೀಠದ ಗರಿಮೆ ತೊಟ್ಟ ಕನ್ನಡ ಸಾಹಿತ್ಯಕ್ಕೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಮುನ್ನಡೆಸುವ ಭಾಗ್ಯವು ಡಾ. ಚಂದ್ರಶೇಖರ ಕಂಬಾರರ ಮೂಲಕ ಲಭಿಸಿರುವುದು ಸ್ತುತ್ಯಾರ್ಹ. 1983ರಲ್ಲಿ ವಿ.ಕೃ. ಗೋಕಾಕ್‌, 1993ರಲ್ಲಿ ಡಾ.ಯು.ಆರ್‌. ಅನಂತಮೂರ್ತಿ ಅವರ ನಂತರ ಮೂರನೇ ಸುಸಂದರ್ಭವಿದು. ಕವಿ, ನಾಟಕಕಾರ, ಚಿಂತಕ, ಕಾದಂಬರಿಕಾರ, ಸಂಘಟಕರಾಗಿ ನಮ್ಮ ಮುಂದಿರುವ ಕಂಬಾರರಿಗೆ ಈ ಹೊಸ ಜವಾಬ್ದಾರಿಯು ಹಲವು ಸಾಧ್ಯತೆಗಳೊಂದಿಗೆ, ಹತ್ತಾರು ಸವಾಲುಗಳನ್ನೂ ಎದುರಿಗಿಟ್ಟಿದೆ.

ದ.ರಾ. ಬೇಂದ್ರೆಯವರ ನಂತರ ದೇಸಿ ರಚನೆಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಜಾನಪದ ಕ್ರಾಂತಿಯ ಕಹಳೆಯೂದಿದ ಕಂಬಾರ ರಂಥವರ ಅಗತ್ಯತೆ ಯಾವುದೇ ಪ್ರಾದೇಶಿಕ ಭಾಷೆಗೂ ಆಸ್ತಿ. ಹಿಂದಿ, ಇಂಗ್ಲಿಷ್‌ ಅಲ್ಲದೇ 22 ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಯನ್ನೇ ಮಂತ್ರ ಆಗಿರಿಸಿಕೊಂಡ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಈ ಆಯ್ಕೆಯಿಂದ ಒಂದು ಬಲ ಬಂದಿದೆ. ಕಲ್ಲುಬಂಡೆಯ ನಾಡಿನಲ್ಲಿ ಜ್ಞಾನದ ಸೆಲೆ ಚಿಮ್ಮಿಸಿ, ಹಂಪಿ ವಿವಿಯನ್ನು ತಲೆಯೆತ್ತುವಂತೆ ಮಾಡಿದ ಕಂಬಾರರ ಆರಂಭಿಕ ಹೆಜ್ಜೆಗಳಂಥ ಸವಾಲುಗಳೇ ಇಲ್ಲೂ ಇವೆ. ಈಗಿನ ಕೇಂದ್ರ ಸಾಹಿತ್ಯ ಅಕಾಡೆಮಿಯು 1954ರಲ್ಲಿ ನೆಹರೂ, ಎಸ್‌. ರಾಧಾಕೃಷ್ಣನ್‌ ಅವರ ಕಲ್ಪನೆಯ ಕೂಸು. ಆ ಆರಂಭಿಕ ಹಾದಿಯಲ್ಲಿ ಅಕಾಡೆಮಿಯ ಸದಸ್ಯರಾಗಿ ಡಿ.ವಿ. ಗುಂಡಪ್ಪನವರೂ ಇದ್ದಿದ್ದು, ಕನ್ನಡದ ಮೊದಲ ಗೌರವವೂ ಆಗಿತ್ತು. ಅಂದಿನಿಂದ ಸಂಶೋಧನೆ, ಗ್ರಂಥಾಲಯ, ವಿಚಾರ ಸಂಕಿರಣಗಳನ್ನೇ ಪ್ರಧಾನ ಕೆಲಸಗಳನ್ನಾಗಿಸಿಕೊಂಡು, ಭಾರತೀಯ ಭಾಷೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಕಾಡೆಮಿಗೆ ಸಾಂಪ್ರದಾಯಿಕ ಪೊರೆಯಿದೆ. ಈಗಿನ ಕೆಲಸಗಳ ಜತೆಗೆ ಹೊಸತನದ ಪೊರೆಯೊಂದರ ಅನಿವಾರ್ಯತೆ ಅಕಾಡೆಮಿಗಿದೆ. ಈಗಾಗಲೇ ಐದು ವರ್ಷಗಳಿಂದ ಅಕಾಡೆಮಿಯಲ್ಲಿ ಉಪಾಧ್ಯಕ್ಷರಾಗಿದ್ದ ಕಂಬಾರರ ಆಂತರ್ಯದಲ್ಲಿ ಹೊಸ ಆಲೋಚನೆಗಳು ರೂಪು ತಳೆದಿರಲೂಬಹುದು.

ಈ ಪಟ್ಟ ಕನ್ನಡಕ್ಕೆ ಮುಕುಟ ನಿಜ. ಹಾಗಂತ ವಿಶೇಷ ಲಾಭದ ನಿರೀಕ್ಷೆ ಬೇಡ. ಅಧ್ಯಕ್ಷರ ಅಧಿಕಾರ ಸ್ವರೂಪವೇ ಹಾಗಿದೆ. ಯಾವುದೇ ಒಂದು ಭಾಷೆಯನ್ನು ಓಲೈಸದೇ, ಭಾರತದ ಎಲ್ಲ ಭಾಷೆಗಳ ಪ್ರಗತಿಗೆ ಒತ್ತು ನೀಡಬೇಕಿರುವುದರಿಂದ, ಕನ್ನಡವೂ ಇಲ್ಲಿ ಅಧ್ಯಕ್ಷರ ಹೆಗಲ ಮೇಲಿನ ಪುಟ್ಟ ಕೂಸು. ಕನ್ನಡದಂತೆಯೇ ಬೇರೆಲ್ಲ ಪ್ರಾದೇಶಿಕ ಭಾಷೆಗಳಿಗೂ ಇಂಗ್ಲಿಷ್‌ ಸಿಂಹಸ್ವಪ್ನ. ಆಂಗ್ಲ ಭಾಷೆಯ ಈ ಪ್ರಹಾರದ ವಿರುದ್ಧ ಕಂಬಾರರಿಗೆ ಮೊದಲಿಂದಲೂ ಇರುವ ಕಡುಕೋಪ, ಈಗ ಉತ್ತರ ರೂಪದಲ್ಲಿ ಪುಟಿಯಲೂಬಹುದು.

ಕತೆ, ಕಾದಂಬರಿ, ಕಾವ್ಯದ ಸೃಷ್ಟಿಗಳು ಮೊದಲು ಈ ನೆಲದಲ್ಲಿ ಹುಟ್ಟಿದ್ದೇ ನಲ್ಲ. ಕನ್ನಡ ಸಾಹಿತ್ಯವು ಇದನ್ನೆಲ್ಲ ಹೊರಗಿನಿಂದ ಕಲಿತರೂ, ಪ್ರಸ್ತುತ ಬೇರೆಲ್ಲ ಭಾಷೆಗಳಿಗಿಂತ ಉತ್ಕೃಷ್ಟ ರಚನೆಯನ್ನು ಜಗತ್ತಿಗೆ ಕೊಟ್ಟಿದೆ. ಕುವೆಂಪು, ಅನಂತಮೂರ್ತಿ, ಭೈರಪ್ಪನವರಂಥ ಪ್ರಮುಖ ಸಾಹಿತಿಗಳ ಸೃಷ್ಟಿಗಳು ಭಾರತದ ಇತರೆ ಭಾಷೆಗಳನ್ನೂ ತಲುಪುವ ಮಟ್ಟಿಗೆ ನಾವು ಬೆಳೆದಿರುವುದೂ ದಿಟವೇ. ಇದರ ಹೊರತಾಗಿಯೂ ಇಲ್ಲಿನ ಎಷ್ಟೋ ರಚನೆಗಳು ಬೇರೆಲ್ಲೂ ತಲುಪದೇ ಅವುಗಳ ಪ್ರಭೆ ಈ ನೆಲಕ್ಕಷ್ಟೇ ಸೀಮಿತವಾಗಿದೆ. ಅವುಗಳ ಅನುವಾದ ಕಾರ್ಯಕ್ಕೆ ಚುರುಕಿನ ಸ್ಪರ್ಶ ಸಿಗಬೇಕಿದೆ. ಹಾಗೆಯೇ ಇತರೆ ಭಾಷೆಗಳ ಮೌಲ್ಯಯುತ ಬರಹಗಳು ಕನ್ನಡವನ್ನು ಸೇರಬೇಕಿದೆ.

ಯೋಗ್ಯ ಹಿರಿಯ ಸಾಹಿತಿಗಳಿಗೆ ಅಕಾಡೆಮಿಯ ಫೆಲೋಶಿಪ್‌ ನೀಡುವ ಅಧಿಕಾರವೂ ಅಧ್ಯಕ್ಷರಿಗಿರುತ್ತದೆ. ವಿ.ಕೃ. ಗೋಕಾಕ್‌ ಅಧ್ಯಕ್ಷರಾಗಿದ್ದಾಗ ಕುವೆಂಪು, ದ.ರಾ. ಬೇಂದ್ರೆ ಅವರಿಗೆ ಈ ಗೌರವ ಲಭಿಸಿತ್ತು. ಮೂರು ವರ್ಷದ ಹಿಂದೆ ಎಸ್‌.ಎಲ್‌. ಭೈರಪ್ಪನವರೂ ಇದಕ್ಕೆ ಪಾತ್ರರಾದಂತೆ, ದಶಕಗಳಿಂದ ಭಾಷೆಯ ಸಂಶೋಧನೆ, ಸಾಹಿತ್ಯದ ನೆಲೆಗಟ್ಟನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿರುವ ನಾಡಿನ ಹಿರಿಯ ಸಾಹಿತಿಗಳತ್ತ ಅಕಾಡೆಮಿ ಫೆಲೋ ದೃಷ್ಟಿ ಬೀರಬೇಕಿದೆ.

ಹಾ.ಮಾ.ನಾ ಹೇಳುವಂತೆ, "ಬಹುಮಾನ ಬೇಕಿಲ್ಲ ಎನ್ನುವವರೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಕಾಯುತ್ತಾರೆ'. ಅಕಾಡೆಮಿ ಪ್ರಶಸ್ತಿ ಲಭಿಸಿದಾಗ ಹಾಗೆ ಸಂಭ್ರಮಿಸುವ ಕಾಲ ಹಿಂದಿತ್ತು. ಆ ಒಗ್ಗಟ್ಟಿನ ಸಂಭ್ರಮ ಕಣ್ಮರೆ ಆಯಿತೆಲ್ಲಿ ಎನ್ನುವ ವೇದನೆಯೊಂದು ನಮ್ಮನ್ನು ತಬ್ಬಿರುವುದು ದುರಂತ. ಈ ಒಗಟನ್ನು ಬಿಡಿಸುವುದೂ ತುರ್ತು ಸವಾಲು.

ದೇಶದ ಅತಿದೊಡ್ಡ ಬೌದ್ಧಿಕ ಸಂಸ್ಥೆಯನ್ನು ಮುನ್ನಡೆಸುವ ಈ ಕಾರ್ಯದಲ್ಲಿ ಕಂಬಾರರಿಗೆ ಬಲತುಂಬಲು, ಸಂಚಾಲಕರಾಗಿ ಸಿದ್ಧಲಿಂಗಯ್ಯ, ಸರಜೂ ಕಾಟ್ಕರ್‌, ಬಾಳಸಾಹೇಬ ಲೋಕಾಪುರ ಇರುವುದು ಅಭಿನಂದನಾರ್ಹ. ಆಯ್ಕೆ, ಪ್ರಶಸ್ತಿ ಮುಂತಾದ ವಿಚಾರದಲ್ಲಿ ಆಪ್ತರ ಆಚೆಗೂ ಯೋಗ್ಯ ಕತೃìಗಳತ್ತ ಕಣ್ಣು ನೆಡುವ ಹೊಣೆಯೂ ಅಧ್ಯಕ್ಷರ ಮೇಲಿದೆ. ಒಟ್ಟಿನಲ್ಲಿ ಈ ಸುವರ್ಣ ಕ್ಷಣ, ಕನ್ನಡದ ಪ್ರಭೆಯನ್ನು ಹೆಚ್ಚಿಸುವಂತಾಗಲಿ.

Trending videos

Back to Top