CONNECT WITH US  

ಜನ ಬಯಸಿದ್ದು ಬದಲಾವಣೆ

ರಾಜ್ಯದಲ್ಲೂ ಮಂಕಾಯಿತು ಕಾಂಗ್ರೆಸ್‌ ಪಕ್ಷ

ಕರ್ನಾಟಕ ವಿಧಾನಸಭೆ ಚುನಾವಣೆ -2018ರ ಫ‌ಲಿತಾಂಶ ಹೊರಬಿದ್ದಿದೆ.ಮತಗಟ್ಟೆ ಸಮೀಕ್ಷೆ ಮತ್ತು ನಾನಾ ವಾಹಿನಿಗಳಲ್ಲಿ ಸತತವಾಗಿ ಪ್ರಸಾರವಾದ ಅಂಶಗಳಿಗೆ ವಿರುದ್ಧವಾಗಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಸಹಜವಾಗಿ ಪ್ರಭುತ್ವ ವಿರೋಧಿ ಅಲೆಗಳು ಪ್ರಬಲವಾಗಿ ಇದ್ದುದರಿಂದ ಕಾಂಗ್ರೆಸ್‌ ಪಕ್ಷ ಹೀನಾಯ ಪರಿಸ್ಥಿತಿಗೆ ತಲುಪಿತು. ಕಾಂಗ್ರೆಸ್ಸಿನ ಘಟಾನುಘಟಿ ಮಂತ್ರಿಗಳು ಸೋತು ಹೋದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ
ಒಂದು ಕ್ಷೇತ್ರದಲ್ಲಿ ಸೋತರೆಂದರೆ, ಜನ ಎಷ್ಟರ ಮಟ್ಟಿಗೆ ರೋಸಿ ಹೋಗಿದ್ದರು ಎಂಬುದನ್ನು ಅರ್ಥೈಸಿಕೊಳ್ಳಬಹುದು.

ಬಿಜೆಪಿ ನಾಯಕರು ನಿರೀಕ್ಷಿಸಿದಂತೆ ಸ್ಪಷ್ಟ ಬಹುಮತದ ಲೆಕ್ಕಾಚಾರ ತಲೆಕೆಳಗಾಯಿತು. ಆದ್ದರಿಂದ ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಕಾರ್ಯತಂತ್ರ ರೂಪಿಸುವ ತೀವ್ರ ಒತ್ತಡಕ್ಕೆ ಸಿಲುಕಿದೆ. ಆರೋಪ ಪ್ರತ್ಯಾರೋಪಗಳು, ಏಕವಚನ ಪ್ರಯೋಗಗಳೊಂದಿಗೆ ಚುನಾವಣಾ ಪ್ರಚಾರ ನಡೆಸಿದ್ದು ಇವರೇನಾ ಎಂದು ಅಚ್ಚರಿಯಾಗುವಂತೆ ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾಗಿವೆ. ಕಾಂಗ್ರೆಸ್‌ ಪಕ್ಷ ಶರಣಾಗತಿಯಾಗಿ ಜೆಡಿಎಸ್‌ಗೆ ಬೇಷರತ್‌ ಆಗಿ ಬೆಂಬಲ ಸೂಚಿಸಿದೆ. ಆದರೆ, ಜನರ ತೀರ್ಪು ಇದಲ್ಲ.

ಕಳೆದ ಒಂದು ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯಿಂದ ಜನ ಸಿಟ್ಟಾಗಿದ್ದರು. ಮುಖ್ಯವಾಗಿ ಲಿಂಗಾಯಿತರನ್ನು ಇಬ್ಭಾಗಿಸುವ ತಂತ್ರವನ್ನು ಹೆಣೆದದ್ದೇ ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಯಿತು. ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದವರನ್ನು ಇಬ್ಭಾಗಿಸುವುದೆಂದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಣಕಿದಂತೆ.

ಅದೇ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿರುವುದು. ಇದಕ್ಕೆ ಮತದಾರರು ಸ್ಪಷ್ಟ ಉತ್ತರ ನೀಡಿದ್ದಾರೆ. ಬಹುತೇಕ ಉತ್ತರ ಕರ್ನಾಟಕ,ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಿಂಗಾಯಿತರು ಕಾಂಗ್ರೆಸ್ಸಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಭಿನ್ನವಾಗಿ ಕರಾವಳಿ ಭಾಗದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಸಂಭವಿಸಿದ ಘಟನೆಗಳಿಂದ ಮತದಾರರು ರೋಸಿ ಹೋದರೇ ಎಂಬ ಪ್ರಶ್ನೆ ಫ‌ಲಿತಾಂಶದಿಂದ ಉದ್ಭವಿಸಿದೆ.

ಒಂದಂತೂ ಸ್ಪಷ್ಟ. ಮತದಾನದ ಪ್ರಮಾಣ ದಾಖಲೆಯಾದಾಗಲೇ ಒಂದು ಮುನ್ಸೂಚನೆ ಹೊರಹೊಮ್ಮಿತ್ತು.
ರಾಜಕಾರಣಿಗಳ ಮೂರ್ಖತನ,ಜನರನ್ನು ತಾವು ಹೇಳಿದಂತೆ ಆಡಿಸುವ ಮನೋಭಾವ, ಸ್ವಜನ ಪಕ್ಷಪಾತ,
ಭ್ರಷ್ಟಾಚಾರ ಮುಂತಾದ ವಿಷಯಗಳು ಬಂದಾಗ, ಜನ ಸಿಟ್ಟಾಗಿ ಸೂಕ್ತ ಸಮಯಕ್ಕೆ ಕಾಯುತ್ತಾರೆ. ಅಂತಹ ಸಮಯವೇ ಚುನಾವಣೆ.ಅದಕ್ಕಾಗಿಯೇ ಕಾದು ಕುಳಿತಂತೆ ಮತದಾರರು ಕಾಂಗ್ರೆಸ್‌ ಪಕ್ಷವನ್ನು ದೂರ ಮಾಡಿದ್ದಾರೆ. ಈ ವಿಷಯಗಳ ಕೆಲವು ಅಂಶಗಳಿಂದಾಗಿ ಸಿಟ್ಟಾಗಿದ್ದ ಜನ ಕಳೆದ ಬಾರಿ ಬಿಜೆಪಿಯನ್ನು ದೂರ ಮಾಡಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, ಹಳೇ ಮೈಸೂರು ಭಾಗದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿ ಜೆಡಿಎಸ್‌ಗೆ ಬೆಂಬಲಿಸಿದ್ದರಿಂದ ಈ ಅಯೋಮಯ ಫ‌ಲಿತಾಂಶ ಬರಲು ಕಾರಣವಾಯಿತು.

ಇತ್ತೀಚೆಗೆ ದೇಶದ ನಾನಾ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಪತನಗೊಂಡಿತ್ತು. ಅದೇ ಪಟ್ಟಿಗೆ ಕರ್ನಾಟಕವೂ ಸೇರಿದ್ದರೂ, ಇನ್ನೊಂದು ಮಾರ್ಗದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್‌ ಸತತ ಯತ್ನ ನಡೆಸಿದೆ. ದುರಂತಕ್ಕೆ ಸೂಕ್ತ ಉದಾಹರಣೆಯೇ ಕಾಂಗ್ರೆಸ್‌ ಪಕ್ಷ. ನಿಜ, ಸಿದ್ದರಾಮಯ್ಯ ಸರ್ಕಾರ ಅನೇಕ ಜನಪರ ಯೋಜನೆಗಳಲ್ಲಿ ಜಾರಿಗೆ ತಂದಿತ್ತು. ಬಡವರಿಗೆ ಊಟ, ಅಕ್ಕಿ ನೀಡುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತ್ತು. ಆದರೆ, ಅಧಿಕಾರ ಇದೆ ಎಂಬ ಹುಂಬತನದಲ್ಲಿ ಇಟ್ಟ ಕೆಲವು ಹೆಜ್ಜೆಗಳು ಅಪಾಯಕಾರಿ ಎಂಬುದನ್ನು ಅರಿಯಲು ಅದರ ನಾಯಕರು ವಿಫ‌ಲರಾದರು. ಸಮಾಜದ ಗಣ್ಯರನೇಕರು ಇದು ಸರಿಯಲ್ಲ ಎಂದು ಹೇಳಿದರೂ ಅದನ್ನು ಕೇಳುವ ವ್ಯವಧಾನ ಅವರಿಗೆ ಇರಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ಪ್ರಧಾನಿ ಸಹಿತ ಬಿಜೆಪಿಯ ರಾಷ್ಟ್ರ ಮಟ್ಟದ ಪ್ರಮುಖರು ಕರ್ನಾಟಕದ ಮತದಾರರಿಗೆ ಮನದಟ್ಟು ಮಾಡಲು ಯಶಸ್ವಿಯಾದರು. ಸದ್ಯದ ಮಟ್ಟಿಗೆ ಕಾರ್ಯತಂತ್ರ ರೂಪಿಸುವುದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಪಕ್ಷ ಹಿಂದೆ ಬಿದ್ದಿದೆ. ಈಗ ಜೆಡಿಎಸ್‌ ಸರ್ಕಾರ ರಚನೆ ಮಾಡುವುದರಲ್ಲೂ ಕಾಂಗ್ರೆಸ್‌ಗೆ ಅವಕಾಶ ಸಿಗದಂತೆ ಬಿಜೆಪಿ ಕಾರ್ಯತಂತ್ರ ರೂಪಿಸಲಿದೆ. ಹೆಚ್ಚು ಸ್ಥಾನ ಪಡೆದ ಬಿಜೆಪಿಗೆ ಸರ್ಕಾರ ರಚನೆಯ ಅವಕಾಶ ಸಿಕ್ಕರೆ ಕಾಂಗ್ರೆಸ್‌ ಕಾರ್ಯತಂತ್ರ ಮತ್ತೆ ವಿಫ‌ಲವಾಗಬಹುದು.ಈ ಫ‌ಲಿತಾಂಶವಂತೂ ಅನೇಕ ರಾಜಕೀಯ ಕಾಮೆಂಟರಿಗಳನ್ನು ತಲೆಕೆಳಗಾಗಿಸಿದೆ.

Trending videos

Back to Top