CONNECT WITH US  

ಪಕ್ಷಗಳಲ್ಲಿ ಸ್ಫೋಟಗೊಂಡಿದೆ ಭಿನ್ನಮತ ಗೊಂದಲ ಬೇಗ ನಿವಾರಿಸಿ 

ರಾಜ್ಯದ ರಾಜಕೀಯ ಸಂಪೂರ್ಣ ಗೊಂದಲಮಯವಾಗಿದೆ. ಚುನಾವಣೆ ಮುಗಿದು ಒಂದು ತಿಂಗಳಾಗುತ್ತಾ ಬಂದಿದ್ದರೂ ರಾಜ್ಯದಲ್ಲಿನ್ನೂ ಆಡಳಿತ ಯಂತ್ರ ಕಾರ್ಯಾರಂಭ ಮಾಡಿಲ್ಲ. ಸಮ್ಮಿಶ್ರ ಸರಕಾರ ರಚನೆಯ ಕಗ್ಗಂಟು ದಿನ ಕಳೆದಂತೆ ಇನ್ನಷ್ಟು ಬಿಗಿಯಾಗುತ್ತಿದ್ದು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಈಗ ತಲೆದೋರಿರುವ ಬಿಕ್ಕಟ್ಟಿನಿಂದ ಪಾರಾಗುವ ದಾರಿ ಕಾಣದೆ ಕತ್ತಲಲ್ಲಿ ತಡಕಾಡುತ್ತಿದ್ದಾರೆ. ತೃತೀಯ ಸ್ಥಾನಿಯಾದ ಪಕ್ಷವನ್ನು ದ್ವಿತೀಯ ಸ್ಥಾನಿಯಾದ ಪಕ್ಷ ಬೆಂಬಲಿಸಿ ಸರಕಾರ ರಚಿಸಲು ಮುಂದಾದಾಗಲೇ ಈ ರೀತಿಯ ಪರಿಸ್ಥಿತಿ ಉದ್ಭವಿಸಬಹುದು ಎಂಬ ಅಂದಾಜು ಇತ್ತು. ಅದೀಗ ನಿಜವಾಗಿದೆ. ಎರಡೂ ಪಕ್ಷಗಳಲ್ಲಿ ಸಾಕಷ್ಟು ಸಂಖ್ಯೆಯ ಸಚಿವ ಪದವಿ ಆಕಾಂಕ್ಷಿಗಳು ಇರುವುದರಿಂದ ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಗೆ ಅಸಮಾಧಾನ ಉಂಟಾಗುತ್ತಿದೆ. 

ಒಂದು ರೀತಿಯಲ್ಲಿ ಇದು ಕಾಂಗ್ರೆಸ್‌ ಸ್ವತಹ ಆಹ್ವಾನಿಸಿಕೊಂಡ ಗೊಂದಲ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಬೇಕೆಂಬ ಏಕೈಕ ಗುರಿಯಿಂದ ಅದು ಬರೀ 38 ಸ್ಥಾನಗಳಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟವನ್ನು ಧಾರೆಯೆರೆದು ನೀಡಿತು. ಆಗ ಬೇಷರತ್ತು ಬೆಂಬಲ ಘೋಷಿಸಿದ ಪಕ್ಷ ಅನಂತರ ಒಂದೊಂದೇ ಷರತ್ತುಗಳನ್ನು ಮುಂದಿಡತೊಡಗಿತು. ಸಾಕಷ್ಟು ಹೆಣಗಾಡಿದ ಬಳಿಕ ಹೇಗೋ ಸರಕಾರವೊಂದು ಅಸ್ತಿತ್ವಕ್ಕೆ ಬಂದು ಇನ್ನೇನು ಎಲ್ಲವೂ ಸರಿಯಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಭಿನ್ನಮತ ಘಟಸ್ಫೋಟವಾಗಿದೆ. ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಗದವರು ಬಂಡೆದಿದ್ದರೆ ಜೆಡಿಎಸ್‌ನಲ್ಲಿ ಸಮರ್ಪಕ ಖಾತೆ ಸಿಗಲಿಲ್ಲ ಎಂದು ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಸ್ವತಹ ಹೈಕಮಾಂಡ್‌ ಸೂಚಿಸಿದರೂ ಭಿನ್ನಮತ ಶಮನವಾಗುತ್ತಿಲ್ಲ.

ಮುಖ್ಯವಾಗಿ ಸಚಿವ ಪದವಿ ವಂಚಿತರಾಗಿರುವ ಎಂ. ಬಿ. ಪಾಟೀಲ್‌ ಅವರು ಸಿಟ್ಟಿನಿಂದ ಕುದಿಯುತ್ತಿದ್ದು, ಮುಖ್ಯಮಂತ್ರಿಯೇ ಬಂದರೂ ಅವರ ಆಕ್ರೋಶ ತಣಿದಿಲ್ಲ. ಕಾಂಗ್ರೆಸ್‌ ಈಗ ಒಡೆದ ಮನೆಯಾಗಿದೆ. ಪರಮೇಶ್ವರ್‌ ಮತ್ತು ಸಿದ್ದರಾಮಯ್ಯ ಬಣದ ಜತೆಗೆ ಇನ್ನೂ ಕೆಲವು ಬಣಗಳು ಹುಟ್ಟಿಕೊಂಡು ಪಕ್ಷವೀಗ ಈ ಬಣಗಳನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದೆ ಒದ್ದಾಡುತ್ತಿದೆ. ಸ್ಥಾನಮಾನ ಸಿಗದ ನಾಯಕರ ಬೆಂಬಲಿಗರು ನಡೆಸುತ್ತಿರುವ ಬಹಿರಂಗ ಪ್ರತಿಭಟನೆಗಳಿಂದ ಕಾನೂನು ಸಮಸ್ಯೆಯೂ ತಲೆದೋರುತ್ತಿದ್ದು, ಇದನ್ನೆಲ್ಲ ನಿಭಾಯಿಸಬೇಕಾಗಿದ್ದ ಸರಕಾರ ಇನ್ನೂ ಈ ಗೋಜಲಿನಿಂದ ಹೊರ ಬರುವ ಪ್ರಯತ್ನವನ್ನು ಮಾಡದಿರುವುದು ಸರಿಯಾದ ನಡೆಯಲ್ಲ. ಜೆಡಿಎಸ್‌ನ ಜಿ.ಟಿ. ದೇವೆಗೌಡ ಮತ್ತು ಪುಟ್ಟರಾಜು ತಮಗೆ ಸಿಕ್ಕಿರುವ ಖಾತೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಬರೀ ಎಂಟನೇ ತರಗತಿಯಾಗಿರುವ ಜಿ.ಟಿ.ಗೆ ಉನ್ನತ ಶಿಕ್ಷಣ ಖಾತೆ ನೀಡಿರುವ ಕ್ರಮವೂ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದೇ ವಿಪಕ್ಷಗಳು ಅಂದು ಪ್ರಧಾನಿ ಮೋದಿ ಮತ್ತು ಸಚಿವೆ ಸ್ಮತಿ ಇರಾನಿಯವರ ವಿದ್ಯಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದವು ಎನ್ನುವುದನ್ನು ನೆನಪಿಸಿಕೊಳ್ಳಬೇಕು. 

ಸ್ಥಾನಮಾನ ಸಿಗದವರು ಬಂಡೇಳುವ ಸಾಧ್ಯತೆಯಿದೆ ಎಂಬ ಸೂಚನೆ ಆರಂಭದಲ್ಲೇ ಇತ್ತು. ಇದರ ಹೊರತಾಗಿಯೂ ಎರಡೂ ಪಕ್ಷಗಳು ಇದನ್ನು ಶಮನಗೊಳಿಸಲು ಸಮರ್ಪಕವಾಗಿ ತಂತ್ರವನ್ನು ರೂಪಿಸಿಕೊಂಡಿರಲಿಲ್ಲ. ಕನಿಷ್ಠ ಅತೃಪ್ತರನ್ನು ಸಮಾಧಾನಿಸುವ ಸಲುವಾಗಿಯೇ ಸರಕಾರ ರಚಿಸುವಾಗ ಮಾಡಿದಂತೆ ನಾಯಕರದೊಂದು ತಂಡವನ್ನು ರಚಿಸಬಹುದಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಈಗ ಭಿನ್ನಮತ ಶಮನ ಕಸರತ್ತು ಮಾಡುತ್ತಿದೆ. 

ರಾಜ್ಯದಲ್ಲಿ ಒಂದು ವರ್ಷದ ಹಿಂದೆಯೇ ಚುನಾವಣಾ ಕಾವು ಕಾಣಿಸಿಕೊಂಡಿತ್ತು. ಅನಂತರ ನಡೆದದ್ದೆಲ್ಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕಾರ್ಯಕ್ರಮಗಳೇ. ಆಡಳಿತ ಯಂತ್ರವೂ ಸಂಪೂರ್ಣವಾಗಿ ಚುನಾವಣೆಯಲ್ಲಿ ತೊಡಗಿಕೊಂಡಿತ್ತು. ಚುನಾವಣೆ ಘೋಷಣೆಯಾದ ಮೇಲಂತೂ ಸರಕಾರಿ ಕೆಲಸಗಳೆಲ್ಲ ನನೆಗುದಿಗೆ ಬಿದ್ದಿವೆ. ಚುನಾವಣೆ ಮುಗಿದು ಹೊಸ ಸರಕಾರ ರಚನೆಯಾದ ಬಳಿಕ ಜಡವಾಗಿರುವ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸುವ ಕೆಲಸ ಮೊದಲು ಆಗಬೇಕಿತ್ತು. ಆದರೆ ಅತಂತ್ರ ಸ್ಥಿತಿಯಿಂದಾಗಿ ಆಡಳಿತದಲ್ಲಿ ಸ್ಥಿರತೆಯೇ ಇಲ್ಲದಂತಾಗಿದೆ. ಇದರಿಂದ ಜನರಿಗೆ ಆಗಿರುವ ಸಮಸ್ಯೆಗಳು ಒಂದೆರಡಲ್ಲ. ಆದರೆ ಗೆದ್ದು ಬಂದಿರುವವರು ಇದ್ಯಾವುದರ ಪರಿವೆ ಇಲ್ಲದಂತೆ ಕಿತ್ತಾಡುವುದರಲ್ಲಿ ಮಗ್ನರಾಗಿದ್ದಾರೆ. 

ಸ್ವತಹ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಸರಕಾರದಲ್ಲಿರುವ ಪ್ರಮುಖರೆಲ್ಲ ಬಂಡಾಯ ಶಮನದಲ್ಲಿ ನಿರತರಾದರೆ ಆಡಳಿತ ನಡೆಸುವವವರು ಯಾರು? ಆರಂಭದಲ್ಲೇ ಅಧಿಕಾರಕ್ಕಾಗಿ ಈ ರೀತಿ ಕಿತ್ತಾಡುವುದರಿಂದ ಯಾವ ರೀತಿಯ ಆಡಳಿತವನ್ನು ನಿರೀಕ್ಷಿಸಬಹುದು ಎಂಬೆಲ್ಲ ಪ್ರಶ್ನೆಗಳು ಜನರಲ್ಲಿ ಸುಳಿದಾಡುತ್ತಿವೆ. ಭಿನ್ನಮತ ಶಮನವನ್ನು ಪಕ್ಷದ ಉಸಾಬರಿಗೆ ಬಿಟ್ಟು ಆಡಳಿದತ್ತ ಗಮನ ನೀಡಬೇಕಾದುದು ಸದ್ಯದ ಅಗತ್ಯ. ಸರಕಾರ ಈ ನಿಟ್ಟಿನಲ್ಲಿ ಮುಂದಡಿಯಿಡಲಿ. ಅಂತೆಯೇ ವಿಪಕ್ಷವೂ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡದೆ ಜವಾಬ್ದಾರಿಯುತವಾಗಿ ವರ್ತಿಸಬೇಕು.

Trending videos

Back to Top