CONNECT WITH US  

ಶಿಕ್ಷಣದ ಪಾವಿತ್ರ್ಯಕ್ಕೆ ಧಕ್ಕೆಯಾಗದಿರಲಿ

ಉನ್ನತ ಶಿಕ್ಷಣ ಆಯೋಗ ರಚನೆ

ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವನ್ನು (ಯುಜಿಸಿ) ರದ್ದುಗೊಳಿಸಿ ಅದರ ಬದಲಾಗಿ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸುವ ಕಾರ್ಯಕ್ಕೆ ಕೇಂದ್ರ ಕಳೆದ ವಾರ ಚಾಲನೆ ನೀಡಿದೆ. ನೂತನವಾಗಿ ಅಸ್ತಿತ್ವಕ್ಕೆ ತರಲುದ್ದೇಶಿಸಿರುವ ಉನ್ನತ ಶಿಕ್ಷಣ ಆಯೋಗ ಕಾಯಿದೆಯ ಕರಡನ್ನು ಸಿದ್ಧಪಡಿಸಿ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗವನ್ನು ರಚಿಸಿದ ಮಾದರಿಯಲ್ಲೇ ಇದೂ ಒಂದು ಮಹತ್ವದ ನಿರ್ಧಾರ. 1956ರಲ್ಲಿ ಯುಜಿಸಿಯನ್ನು ಪ್ರಾರಂಭಿಸಿದಾಗ ಇದ್ದ ಶಿಕ್ಷಣದ ಸ್ವರೂಪ ಈಗ ಭಾರೀ ಸ್ಥಿತ್ಯಂತರವನ್ನು ಕಂಡಿದೆ. ಇಂದಿನ ಪರಿಸ್ಥಿತಿಗೆ ತಕ್ಕಂತೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರುವುದು ಅಗತ್ಯವಿದೆ ಎಂದು ಈ ಬದಲಾವಣೆಯ ಹಿಂದಿನ ಉದ್ದೇಶವನ್ನು ಸರಕಾರ ಪ್ರತಿಪಾದಿಸುತ್ತಿದೆ.

ಯುಜಿಸಿಯನ್ನು ಪ್ರಾರಂಭಿಸಿದಾಗ ದೇಶದಲ್ಲಿ ಕಾಲೇಜುಗಳಿಗೆ ಇದ್ದ ಪ್ರವೇಶಾತಿ ಬರೀ 2.1 ಲಕ್ಷ. ಆಗ 20 ವಿವಿಗಳು ಮತ್ತು 500 ಕಾಲೇಜುಗಳು ಮಾತ್ರ ಇದ್ದವು. ಪ್ರಸ್ತುತ 726 ವಿವಿಗಳು ಮತ್ತು ಸುಮಾರು 38,000 ಕಾಲೇಜುಗಳು ಇವೆ. ಪ್ರತಿ ವರ್ಷ ಸರಾಸರಿ 2.8 ಕೋಟಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಸೇರ್ಪಡೆಯಾಗುತ್ತಾರೆ.ಉನ್ನತ ಶಿಕ್ಷಣದ ಗಾತ್ರ ಮತ್ತು ಸ್ವರೂಪ ಎರಡೂ ಬದಲಾಗಿರುವುದರಿಂದ ಓಬೀರಾಯನ ಕಾಲದ ವ್ಯವಸ್ಥೆಯೊಂದು ಅದನ್ನು ನಿಯಂತ್ರಿಸುವುದು ಪ್ರಾಯೋಗಿಕವಾಗಿ ಕಷ್ಟ. ಯುಜಿಸಿ ಹೆಸರಿಗೆ ತಕ್ಕ ಹಾಗೇ ವಿವಿಗಳ ಹಣಕಾಸು ವಿಚಾರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿತ್ತೇ ಹೊರತು ಶಿಕ್ಷಣ , ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಡೆಗಣಿಸಿತ್ತು ಎಂಬ ಆರೋಪ ಹಿಂದಿನಿಂದಲೇ ಇತ್ತು. ಹೀಗಾಗಿ 2009ರಲ್ಲೇ ಯುಜಿಸಿಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಅಥವಾ ಆಮೂಲಾಗ್ರವಾಗಿ ಬದಲಾಯಿಸುವ ಚರ್ಚೆ ಪ್ರಾರಂಭವಾಗಿತ್ತು. ಉನ್ನತ ಶಿಕ್ಷಣದಲ್ಲಿ ಕೆಂಪು ಪಟ್ಟಿಯ ಹಾವಳಿಯನ್ನು ತಪ್ಪಿಸುವ ಸಲುವಾಗಿ ಹೊಸ ನಿಯಂತ್ರಕ ವ್ಯವಸ್ಥೆಯೊಂದನ್ನು ರೂಪಿಸಬೇಕೆಂದು 2009ರಲ್ಲೇ ಪ್ರೊ| ಯಶ್‌ಪಾಲ್‌ ಸಮಿತಿ ಶಿಫಾರಸು ಮಾಡಿತ್ತು. ಅನಂತರ ರಚನೆಯಾದ ಟಿಎಸ್‌ಆರ್‌ ಸುಬ್ರಮಣಿಯನ್‌ ಸಮಿತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಾಗುವುದರ ಜತೆಗೆ ಯುಜಿಸಿ ಕಾಯಿದೆಯನ್ನೂ ರದ್ದುಪಡಿಸಬೇಕೆಂದು ಸಲಹೆ ಮಾಡಿತ್ತು.

ಹಲವು ರಾಜ್ಯಗಳಿಗೆ ಖಾಸಗಿ ವಿವಿಗಳನ್ನು ಸ್ಥಾಪಿಸಲು ಕೆಲ ವರ್ಷಗಳ ಹಿಂದೆ ಅನುಮತಿ ನೀಡಲಾಗಿತ್ತು. ಆದರೆ ಈ ಪೈಕಿ ಬಹುತೇಕ ವಿವಿಗಳು ಉನ್ನತ ಶಿಕ್ಷಣಕ್ಕೆ ರೂಪಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವಲ್ಲಿ ವಿಫ‌ಲಗೊಂಡಿವೆ. ಈ ಸಮಸ್ಯೆಗಳತ್ತ ಗಮನಹರಿಸಬೇಕಾದ ಯುಜಿಸಿ ಇದರ ಬದಲು ಅನುದಾನಗಳ ಹಂಚುವಿಕೆಯತ್ತ ಮಾತ್ರ ಹೆಚ್ಚಿನ ಗಮನ ಹರಿಸುತ್ತಿದೆ. ಬದಲಾದ ಮಾರುಕಟ್ಟೆಗೆ ಕೌಶಲ್ಯಭರಿತ ಯುವಕರ ಅಗತ್ಯ ಬಹಳಷ್ಟಿದ್ದು, ಇಂಥಹ ಕುಶಲಕರ್ಮಿಗಳನ್ನು ಸೃಷ್ಟಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ ಎಂಬ ದೂರಿಗೆ  ಸರ್ಕಾರ ದ ಹೊಸ ವ್ಯವಸ್ಥೆ ಪರಿಹಾರ ಒದಗಿಸಲು ಶಕ್ತವಾಗಬೇಕು.

ಹೊಸ ಕಾನೂನಿನಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ನಿರ್ಧರಿಸುವ, ಕಳಪೆ ಗುಣಮಟ್ಟದ ಮತ್ತು ಬೋಗಸ್‌ ಸಂಸ್ಥೆಗಳನ್ನು ಮುಚ್ಚುವ ಮತ್ತು ದಂಡ ವಿಧಿಸುವ ಅಧಿಕಾರವನ್ನು ನೀಡಿರುವುದು ಸ್ವಾಗತಾರ್ಹ. ಪ್ರಸ್ತುತ ಯುಜಿಸಿಗೆ ಇಂತಹ ಸಂಸ್ಥೆಗಳ ಹೆಸರನ್ನು ತನ್ನ ವೆಬ್‌ಸೈಟಿನಲ್ಲಿ ಕಪ್ಪುಪಟ್ಟಿಗೆ ಸೇರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಅಧಿಕಾರ ಮಾತ್ರ ಇದೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಅಂತೆಯೇ ಹೊಸ ವ್ಯವಸ್ಥೆಯಲ್ಲಿ ಪದವಿಗಳನ್ನು ನೀಡಲು ಮತ್ತು ಪಠ್ಯಗಳನ್ನು ರೂಪಿಸಲು ಉನ್ನತ ಶಿಕ್ಷಣ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಎಲ್ಲ ಸಂಸ್ಥೆಗಳು ಮಾನ್ಯತೆ ಹೊಂದಿರುವುದು ಕಡ್ಡಾಯವಾಗಲಿದೆ. ಇಂಥ ಕೆಲವು  ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯಾದಾವು.

ಆದರೆ ಇಷ್ಟರ ತನಕ ಯುಜಿಸಿ ಕೈಯಲ್ಲಿದ್ದ ಅನುದಾನ ಹಂಚಿಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವ್ಯಾಪ್ತಿಗೆ ಹೋಗಲಿದೆ. ಇದು ತುಸು ಕಳವಳಕಾರಿಯಾದ ಅಂಶ. ಇದ ರರ್ಥ, ಸರಕಾರದ ನೇರ ಹಸ್ತಕ್ಷೇಪಕ್ಕೆ ಆಸ್ಪದ ಮಾಡಿಕೊಟ್ಟಂತೆ.ಇಷ್ಟರ ತನಕ ಉನ್ನತ ಶಿಕ್ಷಣದ ಹಣಕಾಸಿನ ವಿಚಾರದಲ್ಲಿ ಸರಕಾರದ ನೇರಹಸ್ತಕ್ಷೇಪಕ್ಕೆ ಅವಕಾಶ ಇರಲಿಲ್ಲ. ಇದೀಗ ಹೊಸ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳಲು ಅವಕಾಶವಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾದಂತೆ ಎಚ್ಚರಿಕೆ ವಹಿಸುವ ಹೊಣೆ ಸರಕಾರದ್ದು. ಯಾವುದೇ ಕಾರಣಕ್ಕೂ ಶಿಕ್ಷಣದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಬೇಕು.


Trending videos

Back to Top