CONNECT WITH US  

ಹೊರಳಿನ ಹೊಸ್ತಿನಲ್ಲಿ ಪಾಕ್‌ ಚುನಾವಣೆ, ಭಾರತಕ್ಕೂ ಕುತೂಹಲ

ಬಹು ನಿರೀಕ್ಷಿತ ಪಾಕಿಸ್ತಾನ ಸಂಸತ್‌ ಕೆಳಮನೆ ನ್ಯಾಷನಲ್‌ ಅಸೆಂಬ್ಲಿಗೆ ಬುಧವಾರ ಚುನಾವಣೆ ನಡೆಯಲಿದೆ. ಇದರ ಜತೆಗೆ ಪ್ರಾಂತೀಯ ಅಸೆಂಬ್ಲಿಗಳಿಗೆ ಕೂಡ ಭಾರತದ ನೆರೆಯ ರಾಷ್ಟ್ರದ ಪ್ರಜೆಗಳು ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿಯ ಚುನಾವಣೆ ವಿಶ್ವದ ಗಮನ ಸೆಳೆದಿದೆ. ಏಕೆಂದರೆ ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (ಪಿಎಂಎಲ್‌-ಎನ್‌) ಪಕ್ಷದ ನಾಯಕ ನವಾಜ್‌ ಷರೀಫ್, ಅವರ ಪುತ್ರಿ ಮರ್ಯಾಂ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ನಾಯಕ ಬಿಲಾವಲ್‌ ಭುಟ್ಟೋ ಹಾಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದರೂ, ಪ್ರಚಾರದ ವೇಳೆಯಲ್ಲಿ ಅವರು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಗಮನಸೆಳೆಯುವಂಥ ಸದ್ದು-ಸುದ್ದಿಯೇನೂ ಮಾಡಲಿಲ್ಲ.

ಪಾಕಿಸ್ತಾನಕ್ಕೆ ಮೊದಲ ಬಾರಿಗೆ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟಿದ್ದ ಇಮ್ರಾನ್‌ ಖಾನ್‌ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ ಪಕ್ಷ ಸ್ಥಾಪಿಸಿ ಪ್ರಬಲ ಪೈಪೋಟಿಗೆ ಇಳಿದಿದ್ದಾರೆ. 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿಯೇ ಅವರ ಪಕ್ಷ ನವಾಜ್‌ ಷರೀಫ್ರ ಪಿಎಂಎಲ್‌-ಎನ್‌ಗೆ ಪ್ರಬಲ ಪೈಪೋಟಿ ನೀಡಿತ್ತು. ಜತೆಗೆ ಷರೀಫ್ ಭ್ರಷ್ಟಾಚಾರ ನಡೆಸಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿ ಅಲ್ಲಿನ ಸಂಸತ್‌ಗೆ ಮುತ್ತಿಗೆ ಹಾಕಲು ಮುಂದಾಗಿ, ಶಕ್ತಿ ಪ್ರದರ್ಶನ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುತ್ತಿದ್ದರೂ, ಭಾರತ ಹೆಚ್ಚು ಆಲೋಚನೆ ಮಾಡಬೇಕಾದ ವಿಚಾರವೇನೆಂದರೆ ಜಗತ್ತಿನ ರಾಷ್ಟ್ರಗಳ ಆಕ್ಷೇಪ-ವಿರೋಧಗಳ ಹೊರತಾಗಿಯೂ ಮುಂಬೈ ದಾಳಿ ರೂವಾರಿ, ಜಮಾತ್‌-ಉದ್‌-ದಾವಾ ಸಂಘಟನೆಯ ಹಫೀಜ್‌ ಸಯೀದ್‌ ಸ್ಪರ್ಧೆ ಮಾಡುತ್ತಿದ್ದಾನೆ. ಪಾಕಿಸ್ತಾನದ ಕೋರ್ಟ್‌, ಚುನಾವಣಾ ಆಯೋಗದ ನಿಷೇಧದ ಹೊರತಾಗಿಯೂ ಆತ ಸ್ಪರ್ಧಿಸುತ್ತಿದ್ದಾನೆ. ಜತೆಗೆ ಸಯೀದ್‌ನ ಪುತ್ರ, ಅಳಿಯ ಮತ್ತು ಇತರ ಬಂಧುಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 

ಹೀಗಾಗಿ, ಕಾನೂನು ವ್ಯವಸ್ಥೆ ಹೇಗಿದೆ ಮತ್ತು ಆತ ಗೆದ್ದರೆ ಏನಾಗಲಿದೆ ಎನ್ನುವುದನ್ನು ಊಹಿಸಲೂ ಕಷ್ಟ. ಏಕೆಂದರೆ ಸಂಸತ್‌ ಮತ್ತು ಪ್ರಾಂತೀಯ ಅಸೆಂಬ್ಲಿ ಚುನಾವಣೆಗಾಗಿ ಒಟ್ಟು 11,800 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 265 ಮಂದಿ ಸಯೀದ್‌ನ ಜಮಾತ್‌-ಉದ್‌-ದಾವಾ ಸಂಘಟನೆ ವತಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. 

ಒಂದು ವೇಳೆ ಅವರಲ್ಲಿ ಯಾರೇ ಗೆದ್ದರೂ, ಇದು ಭಾರತ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಲಿದೆ.

ಇನ್ನು, 2013ರ ಚುನಾವಣೆಗೆ ಹೋಲಿಕೆ ಮಾಡಿದರೆ ಸ್ಪರ್ಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆ ಸಮಯದಲ್ಲಿ 4,671 ಮಂದಿ ನ್ಯಾಷನಲ್‌ ಅಸೆಂಬ್ಲಿಗೆ, 10,958 ಮಂದಿ ಪ್ರಾಂತೀಯ ಅಸೆಂಬ್ಲಿಗಳ ಚುನಾವಣೆಯಲ್ಲಿ ಕಣದಲ್ಲಿದ್ದರು.

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಇಮ್ರಾನ್‌ ಖಾನ್‌ರ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ ಪಕ್ಷ ಗೆದ್ದು, ಅವರೇ ಪ್ರಧಾನಿಯಾಗಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದಕ್ಕೆ ಪೂರಕವಾಗಿ ಸಂದರ್ಶನವೊಂದರಲ್ಲಿ ತಾವೇ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗಬೇಕು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. 

ಇನ್ನು ನವಾಜ್‌ ಷರೀಫ್ ಮತ್ತು ಬಿಲಾವಲ್‌ ಭುಟ್ಟೋರ ಪಕ್ಷಗಳು ನಾಯಕರ ಕಾರಣಗಳಿಂದಾಗಿ ವರ್ಚಸ್ಸು ಕಳೆದುಕೊಂಡಿರುವುದರಿಂದ ಪಾಕಿಸ್ತಾನದ ಸೇನೆಯೇ ಇಮ್ರಾನ್‌ ಖಾನ್‌ರ ಪಕ್ಷಕ್ಕೆ ಬೆಂಬಲ ನೀಡುತ್ತಿದೆ. ಅವರೇ ಗೆದ್ದು ಬರಬೇಕು ಎಂಬ ಇರಾದೆಯೂ ಅದಕ್ಕಿದೆ ಎನ್ನುವುದು ಹಲವು ಮಾಧ್ಯಮಗಳ ವರದಿ. ಒಂದು ವೇಳೆ ಹಾಗೆಯೇ ಆಯಿತು ಎಂದಾದರೆ, ಭಾರತ ಮತ್ತು ಪಾಕಿಸ್ತಾನ ಸಂಬಂಧ ಹಳಿಗೆ ಬರುವುದು ಕನಸಾದೀತು. ಏಕೆಂದರೆ ಪಾಕ್‌ ಸೇನೆ ಯಾವತ್ತೂ ಶಾಂತಿ-ನೆಮ್ಮದಿ ಬಯಸುವುದಿಲ್ಲ, ಭಾರತ ದ್ವೇಷವೇ ಅದರ ಅಧಿಕೃತ ನಿಲುವಾಗಿಬಿಟ್ಟಿದೆ ಎನ್ನುವುದು ಹಿಂದಿನ ಹಲವು ಘಟನೆಗಳಿಂದ ಸಾಬೀತಾಗಿದೆ.

ಆ ರಾಷ್ಟ್ರ ಅಸ್ತಿತ್ವಕ್ಕೆ ಬಂದು 70 ವರ್ಷಗಳ ಸನಿಹಕ್ಕೆ ಬಂದರೂ, ಚುನಾಯಿತ ನಾಯಕ ಅವಧಿ ಪೂರ್ತಿಗೊಳಿಸಿಯೇ ಇಲ್ಲ. ಅಲ್ಲೇನಿದ್ದರೂ ಸೇನೆಯದ್ದೇ ನಿಯಂತ್ರಣ. ಈ ಬಾರಿಯ ಚುನಾವಣೆಗೂ ಬರೋಬ್ಬರಿ 4 ಲಕ್ಷ ಮಂದಿ ಸೈನಿಕರು ವಿವಿಧ ಹಂತಗಳಲ್ಲಿ ಭದ್ರತೆಗೆ ನಿಯೋಜಿತರಾಗಿದ್ದಾರೆ. 

ಹೀಗಾಗಿ, ಅಲ್ಲಿ ಯಾರು ಗೆದ್ದರೂ ಪ್ರಬಲ ಸೇನೆಯ ಆಣತಿಯಂತೆ ಆಡಳಿತ ನಡೆಸಬೇಕಾಗುತ್ತದೆ ಎಂಬ ಸೂಚನೆ ಈಗಾಗಲೇ ಸಿಗಲಾರಂಭಿಸಿದೆ. ಅದೇನೇ ಇರಲಿ,  ಭಾರತದ ಜತೆಗೆ ಸಂಬಂಧ ಸುಧಾರಿಸುವ ಸರ್ಕಾರ ಬರಲಿ ಎನ್ನುವುದು ಆಶಯ.


Trending videos

Back to Top